ಬೆಂಗಳೂರು: ಇತ್ತೀಚೆಗೆ ರಾಜಧಾನಿಯ ಪ್ರತಿಷ್ಠಿತ ಜಿಟಿ ಮಾಲ್‌ನಲ್ಲಿ ಅನ್ನದಾತನಿಗೆ ಅವಮಾನ ಮಾಡಲಾಗಿತ್ತು. ಪಂಚೆ ಹಾಕಿ ಬಂದಿದ್ದ ರೈತನಿಗೆ ಮಾಲ್‌ನಲ್ಲಿ ಪ್ರವೇಶ ನೀಡಿರಲಿಲ್ಲ, ಮಾಲ್ ವಿರುದ್ಧ ಸಾಮಾಜಿಕ ಮಾಧ್ಯಮದಲ್ಲಿ ಭಾರೀ ಆಂದೋಲನವೇ ನಡೆದಿತ್ತು. ಇದೀಗ ಮತ್ತೆ ಅಂತಹದ್ದೇ ಘಟನೆಯೊಂದು ಬೆಂಗಳೂರಿನ ಮಾಲ್‌ವೊಂದರಲ್ಲಿ ಮರುಕಳಿಸಿದೆ.
ಹೌದು, ಫುಡ್ ಡೆಲಿವರಿ ಬಾಯ್‌ನನ್ನು ಲಿಫ್ಟ್ ಒಳಗಡೆ ಬಿಡದೆ ಮಂತ್ರಿ ಮಾಲ್ ಸಿಬ್ಬಂದಿ ಅವಮಾನಿಸಿದ್ದಾನೆ.
ವ್ಯಾಪಕ ಆಕ್ರೋಶ ವ್ಯಕ್ತ
ಪಂಚೆ ತೊಟ್ಟ ರೈತನಿಗೆ ಮಾಲ್ ಒಳಗಡೆ ಬಿಡದ ಪ್ರಕರಣ ಮಾಸುವ ಮುನ್ನವೇ ಮತ್ತೊಂದು ಘಟನೆ ನಡೆದಿದೆ. ಇದೀಗ ಮಂತ್ರಿ ಮಾಲ್ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ. ಅಂದು ಪಂಚೆ ತೊಟ್ಟು ಬಂದ ರೈತನಿಗೆ, ಇಂದು ಡೆಲಿವರಿ ಹುಡುಗರಿಗೆ ಅಪಮಾನ ಎಂದು ಜನ ಕೆಂಡಕಾರುತ್ತಿದ್ದಾರೆ.
ನಿಮ್ಮ ಮಾಲ್‌ನ ಘನತೆ ಹಾಳಾಗುತ್ತದೆಯೇ?
ಡೆಲಿವರಿ ಹುಡುಗರು ಲಿಫ್ಟ್ ಒಳಗೆ ಬಂದ್ರೆ ನಿಮ್ಮ ಮಾಲ್‌ನ ಘನತೆ ಹಾಳಾಗುತ್ತದೆಯೇ ಎಂದು ಮಂತ್ರಿಮಾಲ್ ವಿರುದ್ದ ನೆಟ್ಟಿಗರು ಅಭಿಯಾನ ಶುರು ಮಾಡಿದ್ದಾರೆ. ಈ ಹಿಂದೆ ಮಾಲ್ ಸಿಬ್ಬಂದಿ ರೈತನಿಗೆ ಅವಮಾನ ಮಾಡಿದ ವಿಚಾರ ವಿಧಾನಸೌಧದಲ್ಲೂ ಸದ್ದು ಮಾಡಿತ್ತು. ಆ ಮಾಲ್ ವಿರುದ್ಧ ಕ್ರಮ ಕೂಡ ತೆಗೆದುಕೊಳ್ಳಲಾಗಿತ್ತು. ಆದರೂ ಮಾಲ್‌ಗಳು ಎಚ್ಚೆತ್ತುಕೊಳ್ಳದೇ ತಮ್ಮ ದುರಹಂಕಾರವನ್ನು ಮುಂದುವರೆಸಿದ್ದಾರೆ.
ಸದನದಲ್ಲೂ ಸದ್ದು ಮಾಡಿತ್ತು ಪಂಚೆ ವಿಚಾರ
ಸಿನಿಮಾ ನೋಡಲು ಮಗನೊಂದಿಗೆ ಬಂದಿದ್ದ ರೈತರೊಬ್ಬರಿಗೆ ಮಾಲ್‌ನ ಸೆಕ್ಯುರಿಟಿ ಗಾರ್ಡ್ ಪ್ರವೇಶ ನಿರಾಕರಣೆ ಮಾಡಿ ಅಪಮಾನ ಮಾಡಿದ್ದರು. ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ನಂತರ ಈ ಸುದ್ದಿ ಸದನದಲ್ಲೂ ಸದ್ದು ಮಾಡಿತ್ತು. ಸ್ಪೀಕರ್ ಯು.ಟಿ ಖಾದರ್ ಅವರು ಸದನದಲ್ಲಿ ಪ್ರಸ್ತಾಪ ಮಾಡಿದ್ದರು. ಮಾಲ್ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕೆಂದು ಸೂಚಿಸಲಾಗಿತ್ತು. ಪಂಚೆ ಧರಿಸಿ ಬಂದ ರೈತನಿಗೆ ಒಳಗೆ ಪ್ರವೇಶಿಸಲು ಅನುಮತಿ ನಿಡದ ಜಿಟಿ ವರ್ಲ್ಡ್ ಮಾಲ್‌ಗೆ ತಕ್ಕಶಾಸ್ತಿಯಾಗಿತ್ತು. ಸರ್ಕಾರದ ಸೂಚನೆ ಮೇರೆ ಬಿಬಿಎಂಪಿ (BBMP) ಅಧಿಕಾರಿಗಳು 7 ದಿನಗಳ ಕಾಲ ಮಾಲ್ ಬಂದ್ ಮಾಡಿಸಿದ್ದರು.
ಜಿಟಿ ವರ್ಲ್ಡ್ ಮಾಲ್ ಬಂದ್
ಸರ್ಕಾರದ ಸೂಚನೆಯಂತೆ ಬಿಬಿಎಂಪಿ ಅಧಿಕಾರಿಗಳ ಗುರುವಾರ ಜಿಟಿ ವರ್ಲ್ಡ್ ಮಾಲ್‌ನ ಎಲ್ಲಾ ಗೇಟ್ ಗಳನ್ನೂ ಬಂದ್ ಮಾಡಿಸಿದ್ದರು. ತಾವೇ ಕ್ಲೋಸ್ ಮಾಡುವುದಾಗಿ ಹೇಳಿದ ಮಾಲ್ ಆಡಳಿತ ಮಂಡಳಿ ಒಪ್ಪಿಕೊಂಡಿತ್ತು.
ಮಾಲ್ ಓನರ್ ಕ್ಷಮೆಯಾಚನೆ
ಘಟನೆ ಬಗ್ಗೆ ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದ್ದ ಮಾಲ್ ಓನರ್ ಪ್ರಶಾಂತ್, ಆಗಬಾರದಂಥ ಘಟನೆ ಆಗಿ ಹೋಗಿದೆ. ನಮ್ಮ ಕಡೆಯಿಂದ ತಪ್ಪಾಗಿದೆ. ಫಕೀರಫ್ಪ ಅವರಿಗೆ ಅವಮಾನ ಆಗಿರುವುದಕ್ಕೆ ನಾನು ಮಾಲ್ ಓನರ್ ಆಗಿ ಅವರಿಗೆ ಕ್ಷಮೆ ಕೇಳುತ್ತೇನೆ. ಆ ಸೆಕ್ಯುರಿಟಿ ಗಾರ್ಡ್ ಹೊಸ ಸಿಬ್ಬಂದಿ. ಅವರನ್ನ ಅಮಾನತು ಮಾಡಿದ್ದೇವೆ. ತಪ್ಪು ಅವರೇ ಮಾಡಿದ್ದರೂ ಈ ಘಟನೆಗೆ ನಾನೇ ಹೊಣೆ, ಇನ್ಮುಂದೆ ಈ ರೀತಿ ಆಗದಿರುವಂತೆ ನೋಡಿಕೊಳ್ಳುತ್ತೇವೆ. ನಾವು ಫಕೀರಪ್ಪಗೆ ಫೋನ್ ಕಾಲ್ ಮೂಲಕ ಕ್ಷಮೆ ಕೂಡ ಕೇಳಿದ್ದೇವೆ ಎಂದಿದ್ದರು.
Post a Comment