ಒಕ್ಕಲಿಗರ ಸಂಘದಲ್ಲಿ ಗುಂಪುಗಾರಿಕೆ, ಪದಾಧಿಕಾರಿಗಳ ಬದಲಾವಣೆ ಸರಿಯಲ್ಲ: ಹೆಚ್.ಡಿ.ಕುಮಾರಸ್ವಾಮಿ

 ಎಲ್ಲರೂ ನಮ್ಮಂತೆಯೇ ಬದುಕಬೇಕು ಎಂಬ ಹೃದಯ ವೈಶಾಲ್ಯತೆ ಇರುವ ಸಮಾಜ ನಮ್ಮದು. ಆದರೆ, ನಾವೇ ಮಾಡಿಕೊಳ್ಳುತ್ತಿರುವ ತಪ್ಪುಗಳಿಂದ, ಎಲ್ಲೋ ಅಲ್ಪಸಂಖ್ಯಾತರಾಗುತ್ತಿದ್ದೇವೆ ಎನ್ನುವ ಆತಂಕ ಉಂಟಾಗಿದೆ ಎಂದು ಕೇಂದ್ರ ಸಚಿವ ಹೆಚ್.ಡಿ‌.ಕುಮಾರಸ್ವಾಮಿ ಕಳವಳ ವ್ಯಕ್ತಪಡಿಸಿದರು.



ಬೆಂಗಳೂರು: ''ಸಮಾಜದ ಶ್ರೇಯೋಭಿವೃದ್ಧಿಗಾಗಿ ಉದಾತ್ತ ಚಿಂತನೆಗಳಿಂದ ಜನ್ಮತಾಳಿರುವ ರಾಜ್ಯ ಒಕ್ಕಲಿಗರ ಸಂಘ ಇವತ್ತು ಗುಂಪುಗಾರಿಕೆಯಿಂದ ಸೊರಗುತ್ತಿದೆ'' ಎಂದು ಕೇಂದ್ರದ ಬೃಹತ್ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವ ಹೆಚ್.ಡಿ‌ ಕುಮಾರಸ್ವಾಮಿ ಅವರು ಬೇಸರ ವ್ಯಕ್ತಪಡಿಸಿದ್ದಾರೆ.


ಕೆಂಪೇಗೌಡ ವೈದ್ಯಕೀಯ ಮಹಾವಿದ್ಯಾಲಯಕ್ಕೆ ಕೇಂದ್ರ ವೈದ್ಯಕೀಯ ಮಂಡಳಿಯಿಂದ ಹೆಚ್ಚುವರಿಯಾಗಿ 100 ಯುಜಿ ಹಾಗೂ 68 ಪಿಜಿ ಸೀಟುಗಳ ಮಂಜೂರಾಗಲು ಸಹಕರಿಸಿದ ಗಣ್ಯರ ಅಭಿನಂದನಾ ಸಮಾರಂಭದಲ್ಲಿ ಇಂದು ಅಭಿನಂದನೆ ಸ್ವೀಕರಿಸಿ ಮಾತನಾಡಿದ ಅವರು, ''ಒಕ್ಕಲಿಗರ ಸಂಘ ಪ್ರತಿದಿನ ಗುಂಪುಗಾರಿಕೆ ಮೂಲಕ ಹೊರಗಡೆ ಸಂಘದ ಬಗ್ಗೆ ಜನ ಲಘುವಾಗಿ ಮಾತನಾಡುವ ಪರಿಸ್ಥಿತಿ ಸೃಷ್ಟಿಯಾಗಿದೆ. ಮೂರು ತಿಂಗಳು, ಆರು ತಿಂಗಳಿಗೆ ಒಮ್ಮೆ ಪದಾಧಿಕಾರಿಗಳನ್ನು ಬದಲಾವಣೆ ಮಾಡಿಕೊಂಡು ಗುಂಪುಗಾರಿಕೆ ನಡೆಸಿದರೆ ಸಂಘದ ಗತಿ ಏನು? ಒಕ್ಕಲಿಗ ಸಮಾಜದ ಮಕ್ಕಳ ಭವಿಷ್ಯದ ಪ್ರಶ್ನೆ ಏನು?'' ಎಂದು ಪ್ರಶ್ನಿಸಿದರು.



''ಹಿಂದೆ ನಮ್ಮ ಒಕ್ಕಲು ಸಮಾಜದ ಪೂರ್ವಿಕರು ಸಂಘ ಕಟ್ಟಲು ಪಟ್ಟ ಶ್ರಮ ಏನು ಎಂಬುದನ್ನು ಈಗಿನ ಆಡಳಿತ ಮಂಡಳಿಯಲ್ಲಿರುವ 35 ಜನ ನಿರ್ದೇಶಕರು ಅರ್ಥ ಮಾಡಿಕೊಳ್ಳಬೇಕು. ಬೆಂದ ಮನೆಯಲ್ಲಿ ಗಳ ಇರಿಯುವಂತಹ ಜನರು ಕೂಡ ಸಂಘದಲ್ಲಿ ಸೇರಿಕೊಂಡಿದ್ದಾರೆ. ಸಂಘಕ್ಕೆ, ಒಕ್ಕಲಿಗ ಸಮಾಜಕ್ಕೆ ಕಿಂಚಿತ್ತು ಒಳ್ಳೆಯದು ಮಾಡಬೇಕು ಎಂಬ ಹಂಬಲ ಹೊಂದಿರುವ ಕೆಲವರು ಕೂಡ ಈ ಸಂಘದಲ್ಲಿ ಇದ್ದಾರೆ. ಆದರೆ, ಸಂಘಕ್ಕೆ ಬಂದರೆ ಸಮಾಜಕ್ಕೆ ಒಳ್ಳೆಯದು ಮಾಡುವ ಬದಲು ಒಂದಷ್ಟು ಸಂಪಾದನೆ ಮಾಡಿಕೊಂಡು ಹೋಗೋಣ ಎಂದು ಸ್ವಾರ್ಥಿಗಳಾಗಿ ಆಲೋಚನೆ ಮಾಡುವ ವ್ಯಕ್ತಿಗಳಿಂದ ಸಮಾಜಕ್ಕೆ ಏನು ಉಪಯೋಗ'' ಎಂದು ಬೇಸರ ವ್ಯಕ್ತಪಡಿಸಿದರು.

''ಅಪ್ರಾಮಾಣಿಕತೆ, ಅದಕ್ಷತೆ, ಸ್ವಾರ್ಥದಿಂದ ನಮ್ಮ ಸಮಾಜದ ಪ್ರತಿಷ್ಠೆಗೆ ಧಕ್ಕೆ ಆಗುತ್ತಿದೆ. ನಮ್ಮ ಸಮಾಜದಿಂದಲೇ ಬೆಳೆದು ದೊಡ್ಡವರಾದವರು ನಮ್ಮ ಸಮಾಜಕ್ಕೆ ಕಂಟಕರಾಗಿದ್ದಾರೆ. ಅಂತಹ ಪರಿಸ್ಥಿತಿಗೆ ನಾವೇ ಕಾರಣರಾಗುತ್ತಿದ್ದೇವೆ'' ಎಂದ ಕೇಂದ್ರ ಸಚಿವರು, ''ಬೆಂಗಳೂರು ನಗರದ ಹೃದಯ ಭಾಗದಲ್ಲಿ ಇಂತಹ ಪ್ರತಿಷ್ಠಿತ ಕಿಮ್ಸ್ ಆಸ್ಪತ್ರೆ ಇದೆ, ರಾಜ್ಯದಲ್ಲಿಯೇ ಅತ್ಯಂತ ಉತ್ತಮ ಆಸ್ಪತ್ರೆ ಆಗಬೇಕಿತ್ತು. ಅಭಿವೃದ್ಧಿ ಆಗಿದೆ, ಆದರೆ ಅದು ಏನೇನಕ್ಕೂ ಸಾಲದು, ಗುಣಮಟ್ಟವೂ ಸಾಲದು. ಇಡೀ ರಾಜ್ಯದಲ್ಲಿಯೇ ನಂಬರ್ ಒನ್ ಆಸ್ಪತ್ರೆ ಆಗಬೇಕಿತ್ತು. ಆಗಲಿಲ್ಲ ಯಾಕೆ ಎಂಬುದನ್ನು ನಿರ್ದೇಶಕರು ಆತ್ಮಾವಲೋಕನ ಮಾಡಿಕೊಳ್ಳಬೇಕು'' ಎಂದರು.



''ಕೆ.ಹೆಚ್.ರಾಮಯ್ಯ ಅವರಂಥ ಮಹಾನುಭಾವರು ಸಂಘಕ್ಕೆ ಬುನಾದಿ ಹಾಕಿದರು. ಅನೇಕ ಮಹಾಪುರುಷರು ಸಂಘ ಬೆಳೆಸುತ್ತಾ ಹೋದರು. ಮರೀಗೌಡರು, ಗುತ್ತಲಗೌಡರು ಸಂಘಕ್ಕೆ ಸಂಬಂಧಿಸಿದ ಕೆಲಸಗಳನ್ನು ಮಾಡಿಸಿಕೊಳ್ಳಲು ಕಂಕುಳಲ್ಲಿ ಫೈಲ್​ಗಳನ್ನು ಹಿಡಿದುಕೊಂಡು ಅಲೆಯುತ್ತಿದ್ದ ದಿನಗಳನ್ನು ನಾನು ನೋಡಿದ್ದೇನೆ. ಅವರಿಬ್ಬರೂ ನಮ್ಮ ತಂದೆಯವರ ಬಳಿಗೆ ಬಂದು ಸಂಘದ ಬಗ್ಗೆ ಚರ್ಚೆ ಮಾಡುತ್ತಿದ್ದನ್ನು ನಾನು ಕಂಡಿದ್ದೇನೆ. ಅಂತಹ ಮಹನೀಯರ ತ್ಯಾಗ, ಬದ್ಧತೆಯ ಬಗ್ಗೆ ಈಗಿನ ಎಲ್ಲಾ ನಿರ್ದೇಶಕರು ಆತ್ಮಾವಲೋಕನ ಮಾಡಿಕೊಳ್ಳಬೇಕು, ನಿಮ್ಮನ್ನು ನೀವು ಪ್ರಶ್ನೆ ಮಾಡಿಕೊಳ್ಳಿ. ಸಂಘದ ಬಗ್ಗೆ ಜನ ಏನು ಮಾತನಾಡಿಕೊಳ್ಳುತ್ತಿದ್ದಾರೆ ಎಂಬುದು ನಿಮಗೆ ಅರ್ಥ ಆಗುತ್ತದೆ'' ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸಂಘದ ಪದಾಧಿಕಾರಿಗಳ ಬದಲಾವಣೆ ಸರಿಯಲ್ಲ: ''ಮೂರು ತಿಂಗಳು, ಆರು ತಿಂಗಳಿಗೊಮ್ಮೆ ಸಂಘದ ಪದಾಧಿಕಾರಿಗಳ ಬದಲಾವಣೆ ಸರಿ ಅಲ್ಲ, ದೇಶ ವಿದೇಶಕ್ಕೆ ಕರೆದುಕೊಂಡು ಹೋಗಿ ಗುಂಪುಗಾರಿಕೆ ಮಾಡಬೇಡಿ. ಇದೆಲ್ಲಾ ಯಾವ ಪುರುಷಾರ್ಥಕ್ಕೆ? ನೀವು ಸಮಾಜಕ್ಕೆ ಏನು ಕೊಡುಗೆ ಕೊಡುತ್ತೀರಿ? ನಿಮ್ಮನ್ನು ನಂಬಿ ಮತ ಹಾಕಿ ಕಳಿಸಿದ ಜನರ ಬಗ್ಗೆ ಆಲೋಚನೆ ಮಾಡಿದ್ದೀರಾ?'' ಎಂದು ಗುಡುಗಿದ ಕೇಂದ್ರ ಸಚಿವರು, ''ಕಿಮ್ಸ್ ನಂತಹ ಸಂಸ್ಥೆ ಕಟ್ಟುವುದು ಕಷ್ಟ, ಕೆಡವುವದು ಸುಲಭ. ಇದಕ್ಕೆ ಪೂರಕವಾಗಿ ಮತ್ತೆ ಒಕ್ಕಲಿಗರ ಸಂಘದಲ್ಲಿ ಪದಾಧಿಕಾರಿಗಳ ಬದಲಾವಣೆ ನಾಟಕ ನಡೆಯುತ್ತಿದೆ, ಅದಕ್ಕೆ ತರಾತುರಿಯಲ್ಲಿ ಈ ಕಾರ್ಯಕ್ರಮ ಮಾಡುತ್ತಿದ್ದೀರಿ'' ಎಂದು ನಿರ್ದೇಶಕರ ನಡವಳಿಕೆಯ ಬಗ್ಗೆ ಬೇಸರ ವ್ಯಕ್ತಪಡಿಸಿದರು.



''ಹೆಚ್ಚುವರಿ ಸೀಟು ಕೊಡಿಸಿದ್ದೇವೆ ಎಂದು ನನಗೆ ಅಭಿನಂದನೆ ಬೇಕಿಲ್ಲ, ನನ್ನ ಕರ್ತವ್ಯ ನಾನು ಮಾಡಿದ್ದೇನೆ, ಜೆಪಿ ನಡ್ದಾ ಅವರ ಸಹಕಾರದಿಂದ ಇದು ಸಾಧ್ಯವಾಗಿದೆ. ಅನೇಕರ ಒತ್ತಾಸೆ ಇದರಲ್ಲಿ ಅಡಗಿದೆ. ಹೀಗಿದ್ದರೂ ಈ ಸಂಘದ ಕಾರ್ಯಕ್ರಮಕ್ಕೆ ಬರಲು ನನಗೆ ಮನಸ್ಸಿರಲಿಲ್ಲ, ಸಮಾಜಕ್ಕಾಗಿ ಬಂದಿದ್ದೇನೆ, ಸಮಾಜದ ಮಕ್ಕಳಿಗಾಗಿ ಬಂದಿದ್ದೇನೆ'' ಎಂದು ಹೇಳಿದರು.

ಗುಂಪುಗಾರಿಕೆ ಬಿಡಿ, ಕುಟುಂಬದ ರೀತಿ ಕೆಲಸ ಮಾಡಿ: ''ಬೇರೆ ಸಮಾಜಗಳ ಸಂಘಗಳು ಹೇಗೆ ಕೆಲಸ ಮಾಡುತ್ತಿವೆ ಎಂಬುದನ್ನು ನೋಡಿ, 35 ನಿರ್ದೇಶಕರು ಇದ್ದೀರಿ, ನಿಸ್ವಾರ್ಥವಾಗಿ ಕೆಲಸ ಮಾಡಿ. ನೀವು ಸರಿಯಾಗಿ ಕೆಲಸ ಮಾಡಿದ್ದಿದ್ದರೆ ಸಂಘ ನಂಬರ್ ಒನ್ ಆಗುತ್ತಿತ್ತು. ಆದರೆ, ಇಲ್ಲಿ ಏನೇನು ನಡೆಯುತ್ತಿದೆ ಎನ್ನುವುದು ನನಗೆ ಗೊತ್ತಿದೆ. ಮೊದಲು ಗುಂಪುಗಾರಿಕೆ ಬಿಡಿ, ಒಂದು ಕುಟುಂಬದ ರೀತಿಯಲ್ಲಿ ಕೆಲಸ ಮಾಡಿ'' ಎಂದು ಕಿವಿಮಾತು ಹೇಳಿದರು.


ಸಂಶೋಧನೆಗೆ ಹೆಚ್ಚು ಒತ್ತು ಕೊಡಿ: ಕಿಮ್ಸ್ ಆಸ್ಪತ್ರೆಯಲ್ಲಿ ಒಳ್ಳೆಯ ತಜ್ಞ ವೈದ್ಯರು ಇದ್ದೀರಿ. ವೈದ್ಯ ಸೇವೆಯ ಜತೆಗೆ ಸಂಶೋಧನೆ ಮತ್ತು ಅಭಿವೃದ್ದಿ ಕಡೆ ಹೆಚ್ಚು ಗಮನ ಹರಿಸಬೇಕು. ಕಳೆದ ಬಾರಿ ನಾನು ಸಿಎಂ ಆಗಿದ್ದಾಗ ಬೋನ್ ಮ್ಯಾರೋ ಟ್ರಾನ್ಸ್ ಪ್ಲಾಂಟ್ ಗೆ ಹೆಚ್ಚು ಒತ್ತು ನೀಡಿದ್ದೆ. ಕಿದ್ವಾಯಿ ಆಸ್ಪತ್ರೆಗೆ ಅನುದಾನ ಕೊಟ್ಟು ಬಡವರಿಗೆ ಚಿಕಿತ್ಸೆ ಕೊಡಿಸುವ ನಿಟ್ಟಿನಲ್ಲಿ ಪ್ರಯತ್ನ ಮಾಡಿದೆ. ಆದರೆ ಅಲ್ಲಿ ನಿತ್ಯವೂ ಸಣ್ಣಪುಟ್ಟ ಔಷಧಿಗಳನ್ನು ಹೊರಗೆ ಬರೆದುಕೊಡುತ್ತಿದ್ದಾರೆ ಎನ್ನುವ ಮಾಹಿತಿ ನನಗೆ ಬಂದಿದೆ. ಇದು ನನಗೆ ಬಹಳ ನೋವುಂಟು ಮಾಡಿದೆ. ಈ ಬಗ್ಗೆ ವೈದ್ಯ ಶಿಕ್ಷಣ ಸಚಿವ ಡಾ. ಶರಣ ಪ್ರಕಾಶ್ ಪಾಟೀಲ್ ಅವರ ಗಮನಕ್ಕೂ ತಂದಿದ್ದೇನೆ'' ಎಂದು ಹೇಳಿದರು.

''ಬೆಂಗಳೂರು ವೈದ್ಯ ಕಾಲೇಜು ಹಾಗೂ ಸರ್ಕಾರಿ ಆಸ್ಪತ್ರೆಗಳಲ್ಲಿ ಚಿಕಿತ್ಸೆಗೆ 20% ಹೆಚ್ಚು ಶುಲ್ಕ ವಿಧಿಸಲಾಗುತ್ತಿದೆ. ಸರಕಾರಿ ಆಸ್ಪತ್ರೆಗಳ ಚಿಕಿತ್ಸೆ ದುಬಾರಿ ಆಗುತ್ತಿದೆ. ಇದು ನಿಜಕ್ಕೂ ನೋವಿನ ಸಂಗತಿ, ಬಡ ಜನರಿಗೆ ಚಿಕಿತ್ಸೆ ಪಡೆಯಲು ಎಲ್ಲಿ ಸಾಧ್ಯ ಆಗುತ್ತದೆ'' ಎಂದರು.


ಸಮಾರಂಭದಲ್ಲಿ ಸ್ಫಟಿಕಪುರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷರಾದ ಶ್ರೀ ನಂಜಾವಧೂತ ಮಹಾಸ್ವಾಮೀಜಿ ಅವರು, ಆದಿಚುಂಚನಗಿರಿ ಮಹಾಸಂಸ್ಥಾನದ ವಿಜಯನಗರ ಶಾಖಾ ಮಠದ ಶ್ರೀ ಸೌಮ್ಯನಾಥ ಸ್ವಾಮೀಜಿ ಅವರು ಆಶೀರ್ವಚನ ನೀಡಿದರು. ಪ್ರತಿಪಕ್ಷ ನಾಯಕ ಆರ್.ಅಶೋಕ್, ಒಕ್ಕಲಿಗರ ಸಂಘದ ಅಧ್ಯಕ್ಷ ಸಿ.ಎನ್.ಬಾಲಕೃಷ್ಣ ಮತ್ತಿತರ ಗಣ್ಯರು ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಸಂಘದ ವತಿಯಿಂದ ಕೇಂದ್ರ ಸಚಿವ ಕುಮಾರಸ್ವಾ


Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget