ನವದೆಹಲಿ: ಅಮೆರಿಕದ ಅಧ್ಯಕ್ಷರಾಗಿ ಡೊನಾಲ್ಡ್ ಟ್ರಂಪ್
'ಅಮೆರಿಕ ಫಸ್ಟ್ ನೀತಿ'ಯನ್ನು ಅನುಸರಿಸಲು ನಿರ್ಧರಿಸಿದರೆ ಭಾರತದ ಆಟೋಮೊಬೈಲ್, ಜವಳಿ ಮತ್ತು ಫಾರ್ವಸೂಟಿಕಲ್ಸ್ ವಲಯಗಳು ಹೆಚ್ಚಿನ ತೆರಿಗೆ ಹೊರೆ ಅನುಭವಿಸಬೇಕಾಗಬಹುದು ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಎಚ್1ಬಿ ವೀಸಾ ನಿಯಮಗಳನ್ನೂ ಟ್ರಂಪ್ ಬಿಗಿಗೊಳಿಸುವ ಸಾಧ್ಯತೆ ಇದ್ದು, ಅದರಿಂದಾಗಿ ಭಾರತೀಯ ಮಾಹಿತಿ ತಂತ್ರಜ್ಞಾನ ಉದ್ಯಮಗಳ ವೆಚ್ಚ ಮತ್ತು ಬೆಳವಣಿಗೆ ಮೇಲೆ ಪರಿಣಾಮವಾಗಲಿದೆ. ಭಾರತದ ಐಟಿ ರಪ್ತಿನ ಶೇ. 80ರಷ್ಟು ಆದಾಯ ಅಮೆರಿಕದಿಂದಲೇ ಬರುತ್ತದೆ. ವೀಸಾ ನಿಯಮ ಬದಲಾದರೆ ಇದರ ಮೇಲೆ ದುಷ್ಪರಿಣಾಮ ಆಗುತ್ತದೆ. ಭಾರತ ಮಾತ್ರವಲ್ಲದೆ, ಚೀನಾ ಸೇರಿದಂತೆ ಇತರ ರಾಷ್ಟ್ರಗಳ ಮೇಲೂ ಟ್ರಂಪ್ ತೆರಿಗೆ ಹೊರೆ ಹೆಚ್ಚಿಸಬಹುದು ಎನ್ನುತ್ತಾರೆ ಜಾಗತಿಕ ವ್ಯಾಪಾರ ಸಂಶೋಧನಾ ಸಂಸ್ಥೆ (ಜಿಟಿಆರ್‌ಐ) ಸಂಸ್ಥಾಪಕ ಅಜಯ್ ಶ್ರೀವಾಸ್ತವ.
ಟ್ರಂಪ್ ಈ ಹಿಂದೆ ಭಾರತವನ್ನು 'ತೆರಿಗೆ ದುರುಪಯೋಗ ಮಾಡುವ ದೇಶ' ಎಂದು ಬಣ್ಣಿಸಿದ್ದರು. 2020ರಲ್ಲಿ 'ತೆರಿಗೆ ರಾಜ' ಎಂದೂ ಮೂದಲಿಸಿದ್ದರು. ಹೀಗಾಗಿ ಟ್ರಂಪ್ 2ನೇ ಅವಧಿಯು ಭಾರತದ ವ್ಯಾಪಾರ ಆಶಯಗಳಿಗೆ ಕಠಿಣ ಹಾದಿ ಎನಿಸಬಹುದು. ಹೆಚ್ಚು ತೆರಿಗೆ ವಿಧಿಸಿದರೆ ಭಾರತೀಯ ಉತ್ಪನ್ನಗಳು ಅಮೆರಿಕ ಮಾರುಕಟ್ಟೆಯಲ್ಲಿ ಸ್ಪರ್ಧಾತ್ಮಕ ದರ ಸವಾಲು ಎದುರಿಸುವಲ್ಲಿ ಸೋಲಬಹುದು. ಪರಿಣಾಮವಾಗಿ ಆ ವಲಯಗಳ ಆದಾಯ ಖೋತಾ ಆಗುತ್ತದೆ ಎಂದು ಶ್ರೀವಾಸ್ತವ ವಿಶ್ಲೇಷಿಸಿದ್ದಾರೆ.
ವರವೂ ಆಗಬಹುದು
ಚೀನಾ ವಿಷಯದಲ್ಲಿ ಟ್ರಂಪ್ ಹೆಚ್ಚು ಕಠಿಣ ನಿಲುವು ತಳೆದರೆ ಅದು ಭಾರತದ ರಫ್ತುದಾರರ ಪಾಲಿಗೆ ವರವಾಗಿಯೂ ಪರಿಣಮಿಸಬಹುದು ಎಂಬ ಅಭಿಪ್ರಾಯವೂ ಕೆಲವು ತಜ್ಞರಿಂದ ಕೇಳಿಬಂದಿದೆ. ಅಮೆರಿಕ ಮತ್ತು ಭಾರತದ ಮಧ್ಯೆ ದ್ವಿಪಕ್ಷೀಯ ವ್ಯಾಪಾರ 2022-23ರಲ್ಲಿ 129.4 ಶತಕೋಟಿ ಡಾಲರ್‌ನಷ್ಟಿದ್ದುದು 2023-24ರಲ್ಲಿ 120 ಶತಕೋಟಿ ಡಾಲರ್‌ಗೆ ಇಳಿದಿತ್ತು.
'ಮಗಾ' ಎಫೆಕ್ಟ್ ಏನು?
ಮೇಕ್ ಅಮೆರಿಕ ಗ್ರೇಟ್ ಅಗೇನ್ (ಮಗಾ) ಎಂಬುದು ಟ್ರಂಪ್ ಅವರ ಇನ್ನೊಂದು ಘೋಷಣೆ. ಅದನ್ನು ಅನುಸರಿಸಲು ಮುಂದಿನ ದಿನಗಳಲ್ಲಿ ಅವರು ನಿರ್ಧರಿಸಿದರೆ, ಭಾರತವೂ ಸೇರಿದಂತೆ ಎಲ್ಲ ದೇಶಗಳ ಮೇಲೆ ಅಮೆರಿಕ ವಿಧಿಸುವ ತೆರಿಗೆಯ ದರ ಹೆಚ್ಚಾಗಲಿದೆ. ಆ ಪೈಕಿ ಎಲೆಕ್ಟ್ರಾನಿಕ್ಸ್ ಉದ್ಯಮ ಹೆಚ್ಚು ಪರಿಣಾಮ ಎದುರಿಸಬೇಕಾಗುತ್ತದೆ ಎನ್ನುತ್ತಾರೆ ಅಂತಾರಾಷ್ಟ್ರೀಯ ವ್ಯಾಪಾರ ತಜ್ಞ ಬಿಸ್ವಜಿತ್ ಧಾರ್.
ಸಮತೋಲನ ಸಾಧ್ಯ
ಟ್ರಂಪ್ ಹೆಚ್ಚು ಸಮತೋಲಿತ ವ್ಯಾಪಾರಕ್ಕೆ ಒತ್ತು ನೀಡಬಹುದು. ಆದರೆ ತೆರಿಗೆ ದರ ನಿರ್ಧರಿಸುವ ವಿಷಯದಲ್ಲಿ ತಗಾದೆ ಶುರುವಾಗುವ ಸಾಧ್ಯತೆ ಹೆಚ್ಚು. ತಮ್ಮ ದೇಶದ ಜನರ ಹಿತಾಸಕ್ತಿ ಕಾಪಾಡಲು ಟ್ರಂಪ್ ಆದ್ಯತೆ ನೀಡುವುದು ಸಹಜ. ಇದರಿಂದಾಗಿ ವಲಸೆ ನೀತಿ ಬಿಗಿಯಾಗಲಿದೆ ಎನ್ನುತ್ತಾರೆ ಭಾರತೀಯ ರಫ್ತು ಸಂಘಟನೆಗಳ ಒಕ್ಕೂಟದ ಮಹಾನಿರ್ದೇಶಕ ಅಜಯ್ ಸಹಾಯ್
.
Post a Comment