ಯಶಸ್ವಿಯಾಗಿ ಕಾರ್ಯಕ್ರಮ ಸಂಘಟಿಸಿದ ವಿವೇಕಾನಂದ ವಿದ್ಯಾಸಂಸ್ಥೆಗೆ ವ್ಯಾಪಕ ಮೆಚ್ಚುಗೆ
ದ.ಕ. ಜಿಲ್ಲಾ ಪಂಚಾಯತ್ ಶಾಲಾ ಶಿಕ್ಷಣ ಇಲಾಖೆ, ಸುಳ್ಯ ಕ್ಷೇತ್ರ ಶಿಕ್ಷಣಾಧಿಕಾರಿ ಯವರ ಕಛೇರಿ, ಕ್ಷೇತ್ರ ಸಂಪನ್ಮೂಲ ಸಮನ್ವಯಾಧಿಕಾರಿಯವರ ಕಛೇರಿ ವಿವೇಕಾನಂದ ವಿದ್ಯಾಸಂಸ್ಥೆಗಳು ವಿನೋಬನಗರ ಇದರ ಸಹಭಾಗಿತ್ವದಲ್ಲಿ ನಡೆದ ಸುಳ್ಯ ತಾಲೂಕು ಮಟ್ಟದ ಪ್ರತಿಭಾ ಕಾರಂಜಿ - 2024 -25ರ ಸಮಾರೋಪ ಸಮಾರಂಭವು ಜಾಲ್ಸೂರು ಗ್ರಾಮದ ವಿನೋಬನಗರದ ವಿವೇಕಾನಂದ ವಿದ್ಯಾಸಂಸ್ಥೆಯ ನಿವೇದಿತ ಕಲಾವೇದಿಕೆಯಲ್ಲಿ ನ.14ರಂದು ಅಪರಾಹ್ನ ನಡೆಯಿತು.
ಕಿರಿಯ ಪ್ರಾಥಮಿಕ ವಿಭಾಗ ಸಮಗ್ರ ಪ್ರಶಸ್ತಿ
2024 -25ರ ತಾಲೂಕು ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ಕಿರಿಯ ಪ್ರಾಥಮಿಕ ವಿಭಾಗದಲ್ಲಿ ಪ್ರಥಮ ಸಮಗ್ರ ಪ್ರಶಸ್ತಿಯನ್ನು ವಿನೋಬನಗರದ ವಿವೇಕಾನಂದ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ವಿನೋಬನಗರ , ದ್ವಿತೀಯ ಸಮಗ್ರ ಪ್ರಶಸ್ತಿಯನ್ನು ಸುಬ್ರಹ್ಮಣ್ಯದ ಕುಮಾರಸ್ವಾಮಿ ವಿದ್ಯಾಲಯ ಹಾಗೂ ತೃತೀಯ ಸಮಗ್ರ ಪ್ರಶಸ್ತಿಯನ್ನು ಕುಕ್ಕುಜಡ್ಕ ಸರಕಾರಿ ಹಿರಿಯ ಪ್ರಾಥಮಿಕ
ಶಾಲೆಯು ಪಡೆದುಕೊಂಡಿತು.
ಹಿರಿಯ ಪ್ರಾಥಮಿಕ ವಿಭಾಗ ಸಮಗ್ರ ಪ್ರಶಸ್ತಿ
ಹಿರಿಯ ಪ್ರಾಥಮಿಕ ವಿಭಾಗದಲ್ಲಿ ಪ್ರಥಮ ಸಮಗ್ರ ಪ್ರಶಸ್ತಿಯನ್ನು ಸುಳ್ಯದ ಸೈಂಟ್ ಜೋಸೆಫ್ ಆಂಗ್ಲ ಮಾದ್ಯಮ ಶಾಲೆ , ದ್ವಿತೀಯ ಸಮಗ್ರ ಪ್ರಶಸ್ತಿಯನ್ನು ಸುಳ್ಯದ ರೋಟರಿ ಆಂಗ್ಲ ಮಾಧ್ಯಮ ಶಾಲೆ ಹಾಗೂ ತೃತೀಯ ಸಮಗ್ರ ಪ್ರಶಸ್ತಿಯನ್ನು ಸುಬ್ರಹ್ಮಣ್ಯದ ಕುಮಾರಸ್ವಾಮಿ ಆಂಗ್ಲ ಮಾಧ್ಯಮ ಶಾಲೆಯು ಪಡೆದುಕೊಂಡಿತು.
ಪ್ರೌಢಶಾಲಾ ವಿಭಾಗ ಸಮಗ್ರ ಪ್ರಶಸ್ತಿ
ಪ್ರೌಢಶಾಲಾ ವಿಭಾಗದಲ್ಲಿ ಪ್ರಥಮ ಸಮಗ್ರ ಪ್ರಶಸ್ತಿಯನ್ನು ಚೊಕ್ಕಾಡಿಯ ಶ್ರೀ ಭಗವಾನ್ ಸತ್ಯಸಾಯಿ ವಿದ್ಯಾಕೇಂದ್ರ , ದ್ವಿತೀಯ ಸಮಗ್ರ ಪ್ರಶಸ್ತಿಯನ್ನು ಬೆಳ್ಳಾರೆಯ ಕೆ.ಪಿ.ಎಸ್. ಪ್ರೌಢಶಾಲೆ ಹಾಗೂ ತೃತೀಯ ಸಮಗ್ರ ಪ್ರಶಸ್ತಿಯನ್ನು ಸುಬ್ರಹ್ಮಣ್ಯದ ಕುಮಾರಸ್ವಾಮಿ ವಿದ್ಯಾಲಯ ಹಾಗೂ ಸುಳ್ಯದ ಸರ್ಕಾರಿ ಪದವಿಪೂರ್ವ ಕಾಲೇಜು ಜಂಟಿಯಾಗಿ ಪಡೆದುಕೊಂಡಿತು.
ಮುಂದಿನ ಬಾರಿ 2025 -26ರ ಪ್ರತಿಭಾ ಕಾರಂಜಿಯ ವಿಳ್ಯವನ್ನು ಬೆಳ್ಳಾರೆ ಕೆ.ಪಿ.ಎಸ್. ಶಾಲಾ ಮುಖ್ಯೋಪಾಧ್ಯಾಯರಿಗೆ ಈ ಸಂದರ್ಭದಲ್ಲಿ ಹಸ್ತಾಂತರಿಸಲಾಯಿತು.
ವಿವೇಕಾನಂದ ವಿದ್ಯಾಸಂಸ್ಥೆಯ ಆಡಳಿತ ಮಂಡಳಿಯ ಅಧ್ಯಕ್ಷ ನ. ಸೀತಾರಾಮ ಅವರು ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಶ್ರೀಮತಿ ಶೀತಲ್ ಯು. ಕೆ., ವಿವೇಕಾನಂದ ವಿದ್ಯಾಸಂಸ್ಥೆಯ ಸಂಚಾಲಕ ಡಾ. ಗೋಪಾಲಕೃಷ್ಣ ಭಟ್ ಕಾಟೂರು, ವಿದ್ಯಾಸಂಸ್ಥೆಯ ಕೋಶಾಧಿಕಾರಿ ಸುಧಾಕರ ಕಾಮತ್, ತಾಲೂಕು ಪ್ರೌಢಶಾಲಾ ಮುಖ್ಯೋಪಾಧ್ಯಾಯರ ಸಂಘದ ಅಧ್ಯಕ್ಷ ಪ್ರಕಾಶ್ ಮೂಡಿತ್ತಾಯ, ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷೆ ಶ್ರೀಮತಿ ಧನಲಕ್ಷ್ಮಿ ಕುದ್ಪಾಜೆ, ವಿದ್ಯಾಸಂಸ್ಥೆಯ ಆಡಳಿತಾಧಿಕಾರಿ ಎನ್. ಗೋಪಾಲರಾವ್, ವಿದ್ಯಾಸಂಸ್ಥೆಯ ಉಪಾಧ್ಯಕ್ಷ ಹೇಮಂತ್ ಕಾಮತ್, ಆಡಳಿತ ಮಂಡಳಿಯ ಸದಸ್ಯರುಗಳಾದ ಪುರುಷೋತ್ತಮ ಕಿರ್ಲಾಯ, ಶಿವಪ್ರಸಾದ್ ಉಗ್ರಾಣಿಮನೆ, ಹೇಮಂತ್ ಮಠ, ಪ್ರೌಢಶಾಲಾ ಎಸ್.ಡಿ.ಎಂ.ಸಿ. ಅಧ್ಯಕ್ಷ ಅಶೋಕ ಅಡ್ಕಾರು, ಎಸ್.ಡಿ.ಎಂ.ಸಿ. ಉಪಾಧ್ಯಕ್ಷ ರವಿರಾಜ್ ಗಬ್ಬಲಡ್ಕ, ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯ ಜಯಪ್ರಸಾದ್ ಕಾರಿಂಜ, ಪ್ರೌಢಶಾಲಾ ಮುಖ್ಯೋಪಾಧ್ಯಾಯ ಗಿರೀಶ್ ಕುಮಾರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ನ.14ರಂದು ಬೆಳಿಗ್ಗೆಯಿಂದ ವಿವಿಧ ಸ್ಪರ್ಧಾ ಕಾರ್ಯಕ್ರಮಗಳು ನಡೆದವು. 1ರಿಂದ 4ನೇ ತರಗತಿ ವಿದ್ಯಾರ್ಥಿಗಳಿಗೆ ಅಭಿನಯಗೀತೆ, ಕಥೆ ಹೇಳುವುದು, ಸಂಸ್ಕೃತ ಧಾರ್ಮಿಕ ಪಠಣ, ಇಂಗ್ಲೀಷ್ ಕಂಠಪಾಠ, ಆಶುಭಾಷಣ, ದೇಶಭಕ್ತಿಗೀತೆ, ಭಕ್ತಿಗೀತೆ, 5ರಿಂದ 7 ನೇ ತರಗತಿ ವಿದ್ಯಾರ್ಥಿಗಳಿಗೆ ಕಥೆ ಹೇಳುವುದು, ಕವನ/ಪದ್ಯ ವಾಚನ, ಆಶುಭಾಷಣ, ಅಭಿನಯಗೀತೆ, ಸಂಸ್ಕೃತ ಧಾರ್ಮಿಕ ಪಠಣ, ಸಂಸ್ಕೃತ ಕಂಠಪಾಠ, ಇಂಗ್ಲಿಷ್ ಕಂಠಪಾಠ, ಹಿಂದಿ ಕಂಠಪಾಠ, ಭಕ್ತಿಗೀತೆ, ದೇಶಭಕ್ತಿಗೀತೆ ಹಾಗೂ 8ರಿಂದ 10ನೇ ತರಗತಿ ವಿದ್ಯಾರ್ಥಿಗಳಿಗೆ ಕವ್ವಾಲಿ, ಜಾನಪದಗೀತೆ, ನೃತ್ಯ, ಕವನ/ಪದ್ಯ ವಾಚನ, ಸಂಸ್ಕೃತ ಧಾರ್ಮಿಕ ಪಠಣ, ಸಂಸ್ಕೃತ ಭಾಷಣ, ಇಂಗ್ಲಿಷ್ ಭಾಷಣ, ಹಿಂದಿ ಭಾಷಣ ಸ್ಪರ್ಧೆಗಳು ನಡೆದವು.
ಕ್ಷೇತ್ರ ಸಂಪನ್ಮೂಲ ವ್ಯಕ್ತಿ ಹಾಗೂ ತಾಲೂಕು ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಯ ನೋಡೆಲ್ ಅಧಿಕಾರಿ ಸುಬ್ರಹ್ಮಣ್ಯ ಅವರು ಪ್ರಶಸ್ತಿ ವಿಜೇತ ಮಕ್ಕಳ ಪಟ್ಟಿ ವಾಚಿಸಿದರು.
ವಿವೇಕಾನಂದ ವಿದ್ಯಾಸಂಸ್ಥೆಯ ಎಲ್ಲಾ ಅದ್ಯಾಪಕ ವೃಂದಕ್ಕೆ ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಯಿತು. ಜೊತೆಗೆ ಸ್ಪರ್ಧಾ ನಿರ್ಣಾಯಕರುಗಳಾಗಿ ಸಹಕರಿಸಿದ ವಿವಿಧ ಶಾಲೆಯ ಮುಖ್ಯೋಪಾಧ್ಯಾಯರುಗಳಿಗೆ ಅಧ್ಯಾಪಕರಿಗೆ, ಸಹಕರಿಸಿದ ಸಮೂಹ ಸಂಪನ್ಮೂಲ ವ್ಯಕ್ತಿಗಳಿಗೆ, ಪ್ರಶಸ್ತಿ ಪದಕ ನೀಡಿ ಸಹಕರಿಸಿದ ದಾನಿಗಳಿಗೆ ಪ್ರಶಸ್ತಿ ಪತ್ರ ಹಾಗೂ ಸ್ಮರಣಿಕೆ ನೀಡಿ ಗೌರವಿಸಲಾಯಿತು.
ತಾಲೂಕು ಮಟ್ಟದ ಪ್ರತಿಭಾ ಕಾರಂಜಿಯನ್ನು ವಿವೇಕಾನಂದ ವಿದ್ಯಾಸಂಸ್ಥೆಯಲ್ಲಿ ಅತ್ಯಂತ ಅಚ್ಚುಕಟ್ಟಾಗಿ ಸಂಘಟಿಸಿದ ವಿವೇಕಾನಂದ ವಿದ್ಯಾಸಂಸ್ಥೆಯನ್ನು ಗೌರವಿಸಲಾಯಿತು. ಜೊತೆಗೆ ಪ್ರತಿಭಾ ಕಾರಂಜಿ ನೋಡೆಲ್ ಅಧಿಕಾರಿಯಾಗಿ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಿರ್ವಹಿಸಿದ ಸುಬ್ರಹ್ಮಣ್ಯ ಅವರನ್ನು ವಿವೇಕಾನಂದ ವಿದ್ಯಾಸಂಸ್ಥೆಯ ವತಿಯಿಂದ ಗೌರವಿಸಲಾಯಿತು.
ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯ ಜಯಪ್ರಸಾದ್ ಕಾರಿಂಜ ಅವರು ಸಮಗ್ರ ಪ್ರಶಸ್ತಿಯ ವಿಜೇತರ ಪಟ್ಟಿ ವಾಚಿಸಿ, ವಂದಿಸಿದರು.
Post a Comment