ಜಾರ್ಖಂಡ್‌ನಲ್ಲಿ ಬಿಜೆಪಿಗೆ ಆಘಾತ; ಗೆಲುವಿನತ್ತ ಜೆಎಂಎಂ, ಕಾಂಗ್ರೆಸ್‌; ಮಹಾರಾಷ್ಟ್ರದಲ್ಲಿ ಎನ್‌ಡಿಎ ಮುನ್ನಡೆ

 


ಜಾರ್ಖಂಡ್ ಮತ್ತು ಮಹಾರಾಷ್ಟ್ರ ವಿಧಾನಸಭಾ ಚುನಾವಣೆ ಮತ ಎಣಿಕೆ ಭರದಿಂದ ಸಾಗುತ್ತಿದ್ದು ಮಧ್ಯಾಹ್ನದ ವೇಳೆಗೆ ಫಲಿತಾಂಶದ ಸ್ಪಷ್ಟ ಚಿತ್ರಣ ಸಿಗಲಿದೆ. ಮತ ಎಣಿಕೆ ಆರಂಭದಲ್ಲಿ ಜಾರ್ಖಂಡ್‌ನಲ್ಲಿ ಎನ್‌ಡಿಎ ಮುನ್ನಡೆ ಸಾಧಿಸಿತ್ತು, ಆದರೆ 10.30 ಗಂಟೆ ಬಳಿಕ ಅಚ್ಚರಿ ಎನ್ನುವಂತೆ ಇಂಡಿಯಾ ಒಕ್ಕೂಟ ಮುನ್ನಡೆ ಪಡೆದುಕೊಂಡಿದ್ದು, ಬಿಜೆಪಿಗೆ ಆಘಾತ ಎದುರಾಗಿದೆ. ಮತ್ತೊಂದು ಕಡೆ ಮಹಾರಾಷ್ಟ್ರದಲ್ಲಿ ಎನ್‌ಡಿಎ ಭರ್ಜರಿ ಗೆಲುವಿನತ್ತ ದಾಪುಗಾಲು ಹಾಕುತ್ತಿದೆ.

ಬೆಳಗ್ಗೆ 8 ಗಂಟೆಗೆ ಮತ ಎಣಿಕೆ ಆರಂಭವಾಗುತ್ತಿದ್ದ ಜಾರ್ಖಂಡ್‌ನಲ್ಲಿ ಬಿಜೆಪಿ ಆರಂಭಿಕ ಮುನ್ನಡೆ ಪಡೆದುಕೊಂಡಿತು. ಮುಖ್ಯಮಂತ್ರಿ ಹೇಮಂತ್ ಸೊರೆನ್ ಅವರ ಜೆಎಂಎಂ ಮತ್ತೆ ಅಧಿಕಾರಕ್ಕೆ ಬರುವ ವಿಶ್ವಾಸ ವ್ಯಕ್ತಪಡಿಸಿತ್ತು. ಬೆಳಗ್ಗೆ 10.30ರ ಬಳಿಕ ಜಾರ್ಖಂಡ್‌ನ 81 ಸ್ಥಾನಗಳ ಪೈಕಿ ಇಂಡಿಯಾ ಒಕ್ಕೂಟ 52 ಕ್ಷೇತ್ರಗಳಲ್ಲಿ ಮುನ್ನಡೆ ಪಡೆದುಕೊಂಡಿದ್ದು ಎನ್‌ಡಿಎ 27 ಕ್ಷೇತ್ರಗಳಲ್ಲಿ ಮಾತ್ರ ಮುನ್ನಡೆ ಕಾಯ್ದುಕೊಂಡಿದೆ.

ಸರಳ ಬಹುಮತಕ್ಕೆ 41 ಸ್ಥಾನಗಳಲ್ಲಿ ಗೆಲುವು ಸಾಧಿಸಬೇಕಿದ್ದು, ಕಾಂಗ್ರೆಸ್, ಜೆಎಂಎಂ ಮತ್ತೆ ಅಧಿಕಾರಕ್ಕೆ ಬರುವ ವಿಶ್ವಾಸದಲ್ಲಿದೆ. ಬಹುತೇಕ ಚುನಾವಣೋತ್ತರ ಫಲಿತಾಂಶಗಳು ಎನ್‌ಡಿಎ ಸರ್ಕಾರದ ಪರವಾಗಿದ್ದವು, ಆದರೆ ಈಗಿನ ಟ್ರೆಂಡ್ ನೋಡಿದರೆ ಮತ್ತೊಮ್ಮೆ ಸಮೀಕ್ಷೆಗಳ ಲೆಕ್ಕಾಚಾರ ಉಲ್ಟಾ ಆಗುವ ಸಾಧ್ಯತೆ ಹೆಚ್ಚಾಗಿದೆ.

ಎರಡು ಹಂತದಲ್ಲಿ ಮತದಾನ

ಜಾರ್ಖಂಡ್‌ನಲ್ಲಿ ಎರಡು ಹಂತದಲ್ಲಿ ಮತದಾನ ನಡೆದಿತ್ತು, ಮೊದಲ ಹಂತದಲ್ಲಿ 43 ಕ್ಷೇತ್ರಗಳಲ್ಲಿ ಮತ್ತು ಎರಡನೇ ಹಂತದಲ್ಲಿ 38 ಕ್ಷೇತ್ರಗಳಲ್ಲಿ ಮತದಾನ ನಡೆದಿತ್ತು. ಇಂಡಿಯಾ ಮತ್ತು ಎನ್‌ಡಿಎ ನಾಯಕರು ಭರ್ಜರಿ ಪ್ರಚಾರ ನಡೆಸಿದ್ದರು, ಎನ್‌ಡಿಎ ಅಭ್ಯರ್ಥಿಗಳ ಪರವಾಗಿ ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ, ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸೇರಿದಂತೆ ಹಲವು ರಾಷ್ಟ್ರೀಯ ನಾಯಕರು ಪ್ರಚಾರ ನಡೆಸಿದ್ದರು.

ಇಂಡಿಯಾ ಒಕ್ಕೂಟದ ಪರವಾಗಿ ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆ, ಹೇಮಂತ್ ಸೊರೇನ್ ಪ್ರಚಾರ ಮಾಡಿದ್ದರು. ಬಿಜೆಪಿ ವಿಭಜಕ ರಾಜಕೀಯ ಮಾಡುತ್ತಿದೆ, ಧರ್ಮಗಳ ನಡುವೆ ಕಂದಕ ಸೃಷ್ಟಿಸಲು ಪ್ರಯತ್ನಿಸುತ್ತಿದೆ ಎಂದು ಜೆಎಂಎಂ ಆರೋಪಿಸಿತ್ತು. ಮತ್ತೊಂದೆಡೆ ಹೇಮಂತ್ ಸೊರೇನ್ ಸರ್ಕಾರ ಮತಗಳಿಗಾಗಿ ಬಾಂಗ್ಲಾದೇಶಿ ಮುಸ್ಲಿಮರನ್ನು ಓಲೈಕೆ ಮಾಡುತ್ತಿದೆ ಎಂದು ಆರೋಪಿಸಿತ್ತು.

ಮಹಾರಾಷ್ಟ್ರದಲ್ಲಿ ಎನ್‌ಡಿಎ ಮುನ್ನಡೆ

ಜಾರ್ಖಂಡ್‌ನಲ್ಲಿ ಎನ್‌ಡಿಎ ಹಿನ್ನಡೆ ಅನುಭವಿಸಿದರೆ, ಮಹಾರಾಷ್ಟ್ರದಲ್ಲಿ ಮಾತ್ರ ಎನ್‌ಡಿಎ ಭರ್ಜರಿ ಮುನ್ನಡೆ ಪಡೆದುಕೊಂಡಿದೆ. 288 ಸ್ಥಾನಗಳ ಪೈಕಿ ಎನ್‌ಡಿಎ 220 ಕ್ಷೇತ್ರಗಳಲ್ಲಿ ಮುನ್ನಡೆ ಪಡೆದುಕೊಂಡಿದ್ದು ಮತ್ತೆ ಸರ್ಕಾರ ರಚಿಸುವ ವಿಶ್ವಾಸದಲ್ಲಿದೆ.




Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget