ಮಹಾರಾಷ್ಟ್ರ ಸಿಎಂ ಸ್ಥಾನಕ್ಕೆ ಬಿಜೆಪಿಯಲ್ಲೇ ಆಕಾಂಕ್ಷಿಗಳ ಪಟ್ಟಿ ಬೆಳೆದಿದೆ. ದೇವೇಂದ್ರ ಫಡ್ನವೀಸ್ ಜೊತೆಗೆ ನಾಲ್ವರು ನಾಯಕರ ಹೆಸರುಗಳು ಮುಖ್ಯಮಂತ್ರಿ ಸ್ಥಾನದ ರೇಸ್‌ನಲ್ಲಿವೆ.
ಮುಂಬೈ (ಮಹಾರಾಷ್ಟ್ರ): ಮಹಾರಾಷ್ಟ್ರದ 'ಮಹಾಯುತಿ' ಮೈತ್ರಿಯ ಸಿಎಂ ಆಯ್ಕೆ ವಿಚಾರ ಇನ್ನೂ ಬಗೆಹರಿದಿಲ್ಲ. ಶಿವಸೇನೆಯ ಏಕನಾಥ್ ಶಿಂಧೆ, ಎನ್ಸಿಪಿಯ ಶರದ್ ಪವಾರ್ ಸಿಎಂ ರೇಸ್ನಿಂದ ಹೆಚ್ಚೂ ಕಡಿಮೆ ಹಿಂದೆ ಸರಿದಿದ್ದಾರೆ. ಬಿಜೆಪಿಯ ದೇವೇಂದ್ರ ಫಡ್ನವೀಸ್ ಅವರು ನೂತನ ಸಿಎಂ ಆಗಲಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ.
ಆದರೆ, ಇದೀಗ ಬಿಜೆಪಿ ಪಕ್ಷದಲ್ಲೇ ಇನ್ನಿತರ ನಾಯಕರು ಸಿಎಂ ಸ್ಥಾನದ ರೇಸ್ಗೆ ಇಳಿದಿದ್ದು, ಅಚ್ಚರಿಯ ಆಯ್ಕೆಯಲ್ಲಿ ದೇವೇಂದ್ರ ಫಡ್ನವೀಸ್ ಬದಲಿಗೆ ಬೇರೊಬ್ಬ ನಾಯಕ ರಾಜ್ಯದ ಸಿಎಂ ಆಗುವ ಸಾಧ್ಯತೆಗಳೂ ಇವೆ ಎಂದು ರಾಜಕೀಯ ತಜ್ಞರ ವಿಶ್ಲೇಷಣೆಯಾಗಿದೆ.
ಸಿಎಂ ಸ್ಥಾನಕ್ಕೆ ದೇವೇಂದ್ರ ಫಡ್ನವೀಸ್ ಅವರೇ ಅಂತಿಮವಾಗಲಿದ್ದಾರೆ ಎಂದು ಬಿಜೆಪಿಯ ಹಲವು ಶಾಸಕರು ಹೇಳುತ್ತಿದ್ದರೂ, ಹೈಕಮಾಂಡ್ ತೀರ್ಮಾನ ಇನ್ನೂ ಹೊರಬಿದ್ದಿಲ್ಲ. ರಾಜಸ್ಥಾನ ಮತ್ತು ಮಧ್ಯಪ್ರದೇಶ ಮಾದರಿಯಲ್ಲಿ ಸಿಎಂ ಆಯ್ಕೆ ನಡೆದರೂ ಅಚ್ಚರಿಯೇನಿಲ್ಲ.
ಸಿಎಂ ರೇಸ್ಗೆ ಬಂದ 'ಐವರು': ಸಿಎಂ ಸ್ಥಾನಕ್ಕೆ ಬಿಜೆಪಿಯ ಇತರ ನಾಯಕರ ಹೆಸರೂ ಚಾಲ್ತಿಗೆ ಬಂದಿವೆ. ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹಾಗೂ ಮರಾಠ ಸಮುದಾಯದ ನಾಯಕ ವಿನೋದ್ ತಾವ್ಡೆ ಅವರು ಮುನ್ನೆಲೆಗೆ ಬಂದಿದ್ದಾರೆ. ತಾವ್ಡೆ ಅವರು ಮರಾಠ ಸಮುದಾಯಕ್ಕೆ ಸೇರಿದ ಕಾರಣ, ರಾಜ್ಯದ ಪ್ರಸ್ತುತ ಪರಿಸ್ಥಿತಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ನಿಕಟತೆ ಹಿನ್ನೆಲೆಯಲ್ಲಿ ಅವರು ಸಿಎಂ ಆಗುವ ಸಾಧ್ಯತೆಯೂ ಇದೆ.
ಹಂಗಾಮಿ ಮುಖ್ಯಮಂತ್ರಿ ಏಕನಾಥ್ ಶಿಂದೆ, ದೇವೇಂದ್ರ ಫಡ್ನವೀಸ್ ಮತ್ತು ಅಜಿತ್ ಪವಾರ್ ಅವರು ಗುರುವಾರ ದೆಹಲಿಯಲ್ಲಿ ಮುಖ್ಯಮಂತ್ರಿ ಹುದ್ದೆ ಕುರಿತು ಬಿಜೆಪಿ ನಾಯಕರೊಂದಿಗೆ ಚರ್ಚಿಸುವ ಮೊದಲು, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಬುಧವಾರ ರಾತ್ರಿ ವಿನೋದ್ ತಾವ್ಡೆ ಅವರನ್ನು ದಿಢೀರ್ ಆಗಿ ದೆಹಲಿಗೆ ಕರೆಸಿ ಮಾತುಕತೆ ನಡೆಸಿದ್ದಾರೆ. ಇದು ರಾಜಕೀಯ ವಲಯದಲ್ಲಿ ಸಂಚಲನ ಉಂಟು ಮಾಡಿದೆ.
ವಿನೋದ ತಾವ್ಡೆ ಜತೆಗೆ ಪಕ್ಷದ ಮಾಜಿ ರಾಜ್ಯಾಧ್ಯಕ್ಷ ಚಂದ್ರಕಾಂತ್ ಪಾಟೀಲ, ಹಾಲಿ ರಾಜ್ಯಾಧ್ಯಕ್ಷ ಚಂದ್ರಶೇಖರ್ ಬಾವನಕುಳೆ, ಸುಧೀರ್ ಮುಂಗಂಟಿವಾರ್, ಪಂಕಜಾ ಮುಂಡೆ ಅವರ ಹೆಸರುಗಳೂ ಮುಖ್ಯಮಂತ್ರಿ ಹುದ್ದೆಗೆ ಕೇಳಿ ಬರುತ್ತಿವೆ.
ಫಡ್ನವೀಸ್ ಪರ ಶೇ.70 ರಷ್ಟು ಶಾಸಕರು: ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಕಳಪೆ ಸಾಧನೆ ಮಾಡಿದ ಬಳಿಕ, ದೇವೇಂದ್ರ ಫಡ್ನವೀಸ್ ಅವರು ಪಕ್ಷವನ್ನು ಮತ್ತೆ ಗೆಲುವಿನ ಹಳಿಗೆ ತಂದಿದ್ದಾರೆ. ಹೀಗಾಗಿ ಅವರನ್ನು ಸಿಎಂ ರೇಸ್ನಿಂದ ಕೈಬಿಡುವುದು ಅಷ್ಟು ಸುಲಭವಲ್ಲ. ಪಕ್ಷದ ಶೇಕಡಾ 70 ರಷ್ಟು ಶಾಸಕರು ಮಾಜಿ ಸಿಎಂ ಪರವಾಗಿ ಇದ್ದಾರೆ.
ಮಧ್ಯಪ್ರದೇಶ, ರಾಜಸ್ಥಾನ ಝಲಕ್: ಮಧ್ಯಪ್ರದೇಶದ ಮತ್ತು ರಾಜಸ್ಥಾನ ವಿಧಾನಸಭೆ ಚುನಾವಣೆಯಲ್ಲಿ ಗೆಲುವು ಸಾಧಿಸಿದ ಬಳಿಕ ಬಿಜೆಪಿ ಹೈಕಮಾಂಡ್ ಅಚ್ಚರಿಯ ಸಿಎಂ ಅಭ್ಯರ್ಥಿಯನ್ನು ಘೋಷಿಸಿತ್ತು. ಮಧ್ಯಪ್ರದೇಶದಲ್ಲಿ ಮಾಜಿ ಸಿಎಂ ಶಿವರಾಜ್ ಸಿಂಗ್ ಚೌಹಾಣ್ ಅವರ ನೇತೃತ್ವದಲ್ಲಿ ಅಭೂತಪೂರ್ವ ಗೆಲುವು ಸಾಧಿಸಿದರೂ, ಒಬಿಸಿ ನಾಯಕ ಮೋಹನ್ ಯಾದವ್ ಅವರನ್ನು ಸಿಎಂ ಆಗಿ ಮಾಡಲಾಯಿತು. ಇತ್ತ, ರಾಜಸ್ಥಾನದಲ್ಲಿ ಮಾಜಿ ಸಿಎಂ ವಸುಂಧರಾ ರಾಜೇ ಹೆಸರು ಚಾಲ್ತಿಯಲ್ಲಿದ್ದರೂ, ಭಜನಲಾಲ್ ಶರ್ಮಾ ಅವರು ಮುಖ್ಯಮಂತ್ರಿಯಾಗಿ ನೇಮಕವಾಗಿ ಎಲ್ಲರ ಹುಬ್ಬೇರಿಸಿದ್ದರು.
Post a Comment