ಬಿಪಿಎಲ್‌ ಪಡಿತರ ಚೀಟಿದಾರರಿಗೆ ಎಪಿಎಲ್‌ ಬರಸಿಡಿಲು



ರಾಜ್ಯದಲ್ಲಿರುವ ಕೆಲವು ಬಿಪಿಎಲ್‌ ಕಾರ್ಡ್ ದಾರರಿಗೆ ಸದ್ದಿಲ್ಲದೆ “ಎಪಿಎಲ್‌ ಚೀಟಿಯ ಬರಸಿಡಿಲು ಎರಗಿದೆ. ಸರಕಾರದ ಮಾನದಂಡಗಳಿಗೆ ಒಳಪಡದ 

ಕೆಲವು ಬಿಪಿಎಲ್‌ ಕಾರ್ಡ್‌ದಾರರು ಈಗ ಎಪಿಎಲ್‌ ಆಗಿ ಪರಿವರ್ತನೆಗೊಳ್ಳುತ್ತಿದ್ದಾರೆ.

ಆದಾಯ ತೆರಿಗೆ ಪಾವತಿ ಸಹಿತ ಹಲವು ಮಾನದಂಡಗಳಡಿ ಕಾರ್ಯಾಚರಣೆ ನಡೆಸಿದ ಆಹಾರ, ನಾಗರಿಕ ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯು ಈ ಹಿಂದೆಯೇ ಸುಮಾರು 12 ಲಕ್ಷ ಅನರ್ಹ ಬಿಪಿಎಲ್‌ ಕಾರ್ಡ್‌ಗಳನ್ನು ಪತ್ತೆ ಮಾಡಿದೆ. ಆ ಪೈಕಿ ಕೆಲವರನ್ನು ಎಪಿಎಲ್‌ ಕಾರ್ಡ್‌ದಾರರಾಗಿ ಪರಿವರ್ತಿಸುವ ಕೆಲಸ ನಡೆದಿದೆ. ಬಿಪಿಎಲ್ ಕಾರ್ಡ್ ನವರು ಎಂದಿನಂತೆ ಪಡಿತರಕ್ಕಾಗಿ ನ್ಯಾಯಬೆಲೆ ಅಂಗಡಿಗಳಲ್ಲಿ ಬಯೋಮೆಟ್ರಿಕ್‌ ಮೇಲೆ ಬೆರಳಿಟ್ಟಾಗ ಎಪಿಎಲ್‌ ಗುಮ್ಮ ಕಾಣುತ್ತಿದೆ. 

ಈ ಹಿಂದೆ ಅನರ್ಹ ಬಿಪಿಎಲ್‌ ಕಾರ್ಡ್‌ ಹೊಂದಿರುವುದು ತಪಾಸಣೆಯಿಂದ ಗೊತ್ತಾದಾಗ ಅಂತಹ ಗ್ರಾಹಕರಿಗೆ ನೋಟಿಸ್‌ ನೀಡಿ ಅನಂತರ ಅಮಾನತಿನಲ್ಲಿ ಇಡಲಾಗುತ್ತಿತ್ತು. ಆದರೆ ಈ ಬಾರಿ ಅಂತಹ ಕಸರತ್ತಿನ ಬದಲು ನೇರವಾಗಿ ಬಿಪಿಎಲ್‌ನಿಂದ ಎಪಿಎಲ್‌ ಕಾರ್ಡ್‌ದಾರರ ಪಟ್ಟಿಗೆ ಸೇರ್ಪಡೆಗೊಳಿಸಲಾಗುತ್ತಿದೆ. ಹಲವು ಜಿಲ್ಲೆಗಳಲ್ಲಿ ಈಗಾಗಲೇ ಎರಡು- ಮೂರು ಸಾವಿರ ಗ್ರಾಹಕರನ್ನು ಹೀಗೆ ವರ್ಗಾಯಿಸಲಾಗಿದೆ ಎಂದು ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.


*ಮೂರು ಲಕ್ಷ ಕಾರ್ಡ್‌ಗಳಿಗೆ ಕತ್ತರಿ.*

ಆಗಸ್ಟ್‌ ಅಂತ್ಯಕ್ಕೆ 10.84 ಲಕ್ಷ ಅಂತ್ಯೋದಯ ಸೇರಿ ರಾಜ್ಯದಲ್ಲಿ 1.27 ಕೋಟಿ ಬಿಪಿಎಲ್‌ ಕಾರ್ಡ್‌ದಾರರಿದ್ದರು. ಎರಡು ತಿಂಗಳುಗಳಲ್ಲಿ 1.24 ಲಕ್ಷಕ್ಕೆ ಇಳಿಕೆಯಾಗಿದೆ. ಅಂದರೆ ಹೆಚ್ಚು ಕಡಿಮೆ ಮೂರು ಲಕ್ಷ ಕಾರ್ಡ್‌ಗಳಿಗೆ ಕತ್ತರಿ ಹಾಕಲಾಗಿದ್ದು, ಆ ಪೈಕಿ ಸಾವಿರಾರು ಕಾರ್ಡ್‌ದಾರರು ಎಪಿಎಲ್‌ ಆಗಿ ಪರಿವರ್ತನೆಗೊಂಡಿದ್ದಾರೆ.

ಸಾಮಾನ್ಯವಾಗಿ ಬಿಪಿಎಲ್‌ ಕಾರ್ಡ್‌ದಾರ ಪ್ರತೀ ಕುಟುಂಬದ ಪ್ರತೀ ಸದಸ್ಯರಿಗೆ ತಲಾ ಮಾಸಿಕ 5 ಕೆ.ಜಿ. ಅಕ್ಕಿ (ಅಂತ್ಯೋದಯ ಕಾರ್ಡ್‌ದಾರ ಕುಟುಂಬಕ್ಕೆ 35 ಕೆ.ಜಿ. ಅಕ್ಕಿ) ನೀಡಲಾಗುತ್ತದೆ. ಅವರೆಲ್ಲರಿಗೆ ಸರಕಾರವು ಕೆ.ಜಿ.ಗೆ 3 ರೂ. ಪಾವತಿಸಿ ಪಡಿತರ ಹಂಚಿಕೆ ಮಾಡುತ್ತದೆ. ಜತೆಗೆ “ಅನ್ನಭಾಗ್ಯ’ ಯೋಜನೆ ಅಡಿ 5 ಕೆ.ಜಿ. ಅಕ್ಕಿ ಬದಲಿಗೆ ತಲಾ 170 ರೂ. ನಗದು ನೀಡುತ್ತಿದೆ.

ಸರಾಸರಿ ನಾಲ್ವರು ಸದಸ್ಯರಂತೆ ಲೆಕ್ಕ ಹಾಕಿದರೂ 680 ರೂ. ಆಗುತ್ತದೆ. ಇಲಾಖೆಯು ಅನರ್ಹರನ್ನು ಎಪಿಎಲ್‌ಗೆ ಪರಿವರ್ತಿಸುವುದರಿಂದ ಆ ಮೊತ್ತದ ಜತೆಗೆ ಪಡಿತರವೂ ಉಳಿಯಲಿದೆ. ಆದರೆ ಇದು ಪೂರ್ತಿಯಾಗಿ ಉಳಿತಾಯ ಆಗಿದೆ ಎನ್ನಲಾಗದು. ಯಾಕೆಂದರೆ ಸ್ವತಃ ಇಲಾಖೆಯು “ಇ ಶ್ರಮ್‌’ ಅಡಿ ನೋಂದಾಯಿಸಿಕೊಂಡ 1.30 ಲಕ್ಷ ಕಾರ್ಮಿಕರನ್ನು ಹುಡುಕಿ ಬಿಪಿಎಲ್‌ ಕಾರ್ಡ್‌ ನೀಡುತ್ತಿದೆ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

"ಅನರ್ಹ ಬಿಪಿಎಲ್‌ ಕಾರ್ಡ್‌ದಾರರೆಲ್ಲರನ್ನೂ ಏಕಕಾಲದಲ್ಲಿ ಹೀಗೆ ಎಪಿಎಲ್‌ಗೆ ಪರಿವರ್ತಿಸುವುದಿಲ್ಲ. ಹಲವು ಪ್ರಕ್ರಿಯೆಗಳನ್ನು ಅನುಸರಿಸಿ, ಖಾತ್ರಿಪಡಿಸಿಕೊಂಡ ಅನಂತರ ಈ ಕ್ರಮ ಕೈಗೊಳ್ಳಲಾಗುತ್ತಿದೆ. ಇನ್ನು ಈ ಹಿಂದೆಯೇ ಸುಮಾರು 1.25 ಲಕ್ಷ ಆದಾಯ ತೆರಿಗೆ ಪಾವತಿದಾರರನ್ನು ಪತ್ತೆ ಮಾಡಲಾಗಿತ್ತು. ಅವರನ್ನಂತೂ ಅನಾಯಾಸವಾಗಿ ಎಪಿಎಲ್‌ ಕಾರ್ಡ್‌ದಾರರನ್ನಾಗಿ ಮಾಡಲಾಗುವುದು. ಅನರ್ಹ ಬಿಪಿಎಲ್‌ ಕಾರ್ಡ್‌ ಗಳನ್ನು ಕೂಲಂಕಷವಾಗಿ ಪರಿಶೀಲಿಸಿ, ಅಗತ್ಯಬಿದ್ದರೆ ಎಪಿಎಲ್‌ ಆಗಿ ಮಾಡುವಂತೆ ಸೂಚಿಸಲಾಗಿದೆ. ಇನ್ನೂ ನಿಖರ ಅಂಕಿಸಂಖ್ಯೆಗಳು ಸಿಕ್ಕಿಲ್ಲ. ಪಾನ್‌ ಕಾರ್ಡ್‌ ಹೊಂದಿದವರೆಲ್ಲರೂ ಆದಾಯ ತೆರಿಗೆ ಪಾವತಿದಾರರು ಎಂಬ ನಿರ್ಧಾರಕ್ಕೂ ಬರಬಾರದು. ಈ ಬಗ್ಗೆಯೂ ಸಮಗ್ರ ಪರಿಶೀಲನೆಯ ಅನಂತರ ನಿರ್ಣಯಕ್ಕೆ ಬರಬೇಕು ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಕೆ.ಎಚ್‌. ಮುನಿಯಪ್ಪ, ಅವರು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ ಎನ್ನಲಾಗಿದೆ.

Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget