ಕಾಶ್ಮೀರಕ್ಕೆ ಮತ್ತೆ ವಿಶೇಷ ಸ್ಥಾನ ಅಸಾಧ್ಯ: ಪ್ರಧಾನಿ ನರೇಂದ್ರ ಮೋದಿ

 


ಧುಳೆ (ಮಹಾರಾಷ್ಟ್ರ): 'ಸಂವಿಧಾನದ 370ನೇ ವಿಧಿಯಡಿ ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನವನ್ನು ಮತ್ತೆ ನೀಡಲು ಜಗತ್ತಿನ ಯಾವ ಶಕ್ತಿಗೂ ಸಾಧ್ಯವಿಲ್ಲ' ಎಂದು ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮಿತ್ ಶಾ ಶುಕ್ರವಾರ ಪ್ರತಿಪಾದಿಸಿದರು.

ವಿಶೇಷ ಸ್ಥಾನಮಾನವನ್ನು ಮತ್ತೆ ನೀಡುವಂತೆ ಆಗ್ರಹಿಸಿ ಈಚೆಗೆ ನಿರ್ಣಯ ಅಂಗೀಕರಿಸಿದ್ದು, ಜಮ್ಮು ಮತ್ತು ಕಾಶ್ಮೀರ ವಿಧಾನಸಭೆಯಲ್ಲಿ ಕೋಲಾಹಲಕ್ಕೆ ಕಾರಣವಾಗಿತ್ತು. ಈ ಬೆಳವಣಿಗೆಯ ಬೆನ್ನಲ್ಲೇ ಪ್ರಧಾನಿ ಹಾಗೂ ಗೃಹ ಸಚಿವರು ಈ ಹೇಳಿಕೆ ನೀಡಿದ್ದಾರೆ.

ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯ ಪ್ರಚಾರ ಸಭೆಯಲ್ಲಿ ಮೋದಿ-ಶಾ ನೀಡಿರುವ ಹೇಳಿಕೆಯು ವಿರೋಧ ಪಕ್ಷಗಳ ಮಹಾ ವಿಕಾಸ ಅಘಾಡಿ (ಎಂವಿಎ) ಮೈತ್ರಿಕೂಟವನ್ನು ಇಕ್ಕಟ್ಟಿಗೆ ಸಿಲುಕಿಸಿದೆ. ಎಂವಿಎ ಭಾಗವಾಗಿರುವ ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನಾ (ಯುಬಿಟಿ), ವಿಶೇಷ ಸ್ಥಾನಮಾನ ರದ್ದುಗೊಳಿಸುವ ಕೇಂದ್ರ ಸರ್ಕಾರದ ನಿರ್ಧಾರವನ್ನು ಬೆಂಬಲಿಸಿತ್ತು.

'ವಿಶೇಷ ಸ್ಥಾನಮಾನ ಮರುಸ್ಥಾಪಿಸಲು ಯಾರಿಗೂ ಸಾಧ್ಯವಿಲ್ಲ. ಜಮ್ಮು ಮತ್ತು ಕಾಶ್ಮೀರ ಒಳಗೊಂಡಂತೆ ಭಾರತದೆಲ್ಲೆಡೆ ಅಂಬೇಡ್ಕ‌ರ್ ಅವರ ಸಂವಿಧಾನವನ್ನು ಮಾತ್ರ ಅನುಸರಿಸಲಾಗುತ್ತದೆ ಎಂಬ ಭರವಸೆಯನ್ನು ನಿಮಗೆ ನೀಡುತ್ತಿದ್ದೇನೆ' ಎಂದು ಮಹಾರಾಷ್ಟ್ರದ ಧುಳೆ ಜಿಲ್ಲೆಯಲ್ಲಿ ಚುನಾವಣಾ ಪ್ರಚಾರ ಸಭೆಯನ್ನುದ್ದೇಶಿಸಿ ಮೋದಿ ಹೇಳಿದರು.


'ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನವನ್ನು ಮತ್ತೆ ನೀಡುವಂತೆ ಆಗ್ರಹಿಸಿ ಅಲ್ಲಿನ ವಿಧಾನಸಭೆಯಲ್ಲಿ ನಿರ್ಣಯವನ್ನು ಹೇಗೆ ಮಂಡಿಸಲಾಗಿದೆ ಹಾಗೂ ಅದನ್ನು ವಿರೋಧಿಸಿದ ಬಿಜೆಪಿ ಶಾಸಕರನ್ನು ಯಾವ ರೀತಿ ಸದನದಿಂದ ಹೊರಹಾಕಲಾಯಿತು ಎಂಬುದನ್ನು ನೀವು ಟಿ.ವಿಯಲ್ಲಿ ನೋಡಿದ್ದೀರಿ. ಅಲ್ಲಿ ನಡೆದ ಬೆಳವಣಿಗೆಯನ್ನು ದೇಶದ ಮತ್ತು ಮಹಾರಾಷ್ಟ್ರದ ಜನರು ಅರ್ಥಮಾಡಿಕೊಳ್ಳಬೇಕು' ಎಂದರು.

ಕಾಂಗ್ರೆಸ್‌ ಮತ್ತು ಅದರ ಮಿತ್ರಪಕ್ಷಗಳು 'ಪಾಕಿಸ್ತಾನದ ಕಾರ್ಯಸೂಚಿ'ಯನ್ನು ಪ್ರೋತ್ಸಾಹಿಸಬಾರದು ಮತ್ತು ಪ್ರತ್ಯೇಕತಾವಾದಿಗಳ ಭಾಷೆಯಲ್ಲಿ ಮಾತನಾಡಬಾರದು. ಜನರ ಆಶೀರ್ವಾದ ಇರುವವರೆಗೂ ಕಾಂಗ್ರೆಸ್‌ನ ಈ ಕಾರ್ಯಸೂಚಿ ಯಶಸ್ವಿಯಾಗದು ಎಂದು ನುಡಿದರು.


ಸಾಂಗ್ಲಿಯಲ್ಲಿ ಪ್ರಚಾರ ಸಭೆಯಲ್ಲಿ ಪಾಲ್ಗೊಂಡ ಶಾ, 'ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ಎಂದಿಗೂ ಪುನಃಸ್ಥಾಪಿಸುವುದಿಲ್ಲ' ಎಂದು ಪುನರುಚ್ಚರಿಸಿದರು.




'ಛತ್ರಪತಿ ಶಿವಾಜಿ ಮಹಾರಾಜರ ನಾಡಿನಿಂದ ನಾನು ರಾಹುಲ್ ಗಾಂಧಿ ಅವರಿಗೆ ಈ ಮಾತು ಹೇಳುತ್ತಿದ್ದೇನೆ. ವಿಶೇಷ ಸ್ಥಾನಮಾನ ಮರುಸ್ಥಾಪಿಸಲು ನಿಮಗೆ ಸಾಧ್ಯವಿಲ್ಲ. ದೇಶದ ಪ್ರತಿಯೊಂದು ಮಗುವೂ ಕಾಶ್ಮೀರಕ್ಕಾಗಿ ಹೋರಾಡಲು ಸಿದ್ಧವಾಗಿದೆ' ಎಂದರು.

ಪ್ರಚಾರ ಸಭೆಯಲ್ಲಿ ಪ್ರಧಾನಿ ಹೇಳಿದ್ದು...

* ಜಾತಿ ಮತ್ತು ಸಮುದಾಯಗಳನ್ನು ವಿಭಜಿಸುವ ಅಪಾಯಕಾರಿ ಕೆಲಸವನ್ನು ಕಾಂಗ್ರೆಸ್ ಮಾಡುತ್ತಿದೆ. ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ಮತ್ತು ಇತರೆ ಹಿಂದುಳಿದ ವರ್ಗದವರು ಒಗ್ಗಟ್ಟಿನಿಂದ ಇದ್ದರೆ ಕಾಂಗ್ರೆಸ್‌ನ ಆಟ ನಡೆಯದು

* ಕಾಂಗ್ರೆಸ್ ಈಗ 'ಪರಾವಲಂಬಿ'ಯಾಗಿ ಮಾರ್ಪಟ್ಟಿದೆ. ಮಹಾರಾಷ್ಟ್ರ ಉತ್ತರ ಪ್ರದೇಶ ಬಿಹಾರ ಮತ್ತು ಜಾರ್ಖಂಡ್ ಒಳಗೊಂಡಂತೆ ಬಹುತೇಕ ರಾಜ್ಯಗಳಲ್ಲಿ ಇತರ ಪಕ್ಷಗಳ ಬೆಂಬಲವಿದ್ದರೆ ಮಾತ್ರ ಚುನಾವಣೆ ಎದುರಿಸುವ ಪರಿಸ್ಥಿತಿ ಕಾಂಗ್ರೆಸ್‌ಗೆ ಒದಗಿ ಬಂದಿದೆ.

* ಎಂವಿಎ ಮೈತ್ರಿಕೂಟವು ಚಕ್ರಗಳು ಬ್ರೇಕ್ ಇಲ್ಲದ ವಾಹನ. ಅದರ ಚಾಲಕನ ಸೀಟಿನಲ್ಲಿ ಕೂರಲು ಪರಸ್ಪರ ಕಚ್ಚಾಟ ನಡೆಯುತ್ತಿದೆ

Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget