ಮಂಗಳೂರು: ಕಬಕ-ಪುತ್ತೂರು ರೈಲು ನಿಲ್ದಾಣದಲ್ಲಿ ಪ್ಲಾಟ್‌ಫಾರ್ಮ್ ಶೆಲ್ಟರ್(ತಂಗುದಾಣ) ಸೇರಿದಂತೆ ಅಗತ್ಯ ಮೂಲಸೌಕರ್ಯ ಅಭಿವೃದ್ದಿಪಡಿಸುವಂತೆ ದಕ್ಷಿಣ ಕನ್ನಡ ಸಂಸದ ಕ್ಯಾ. ಬ್ರಿಜೇಶ್ ಚೌಟ ಅವರು ರೈಲ್ವೆ ಇಲಾಖೆಗೆ ಮನವಿ ಮಾಡಿದ್ದಾರೆ.
ಎರಡು ದಿನಗಳ ಹಿಂದೆ ಮಂಗಳೂರಿನಲ್ಲಿ ನಡೆದಿದ್ದ ರೈಲ್ವೆ ಅಭಿವೃದ್ಧಿ ಪ್ರಗತಿ ಪರಿಶೀಲನಾ ಸಭೆಯಲ್ಲಿಯೂ ಕಬಕ-ಪುತ್ತೂರು ರೈಲು ನಿಲ್ದಾಣದ ಪ್ಲಾಟ್‌ಫಾರ್ಮ್ ಶೆಲ್ಟರ್ ವಿಸ್ತರಿಸುವ ವಿಚಾರವನ್ನು ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತಂದಿದ್ದ ಸಂಸದ ಕ್ಯಾ. ಚೌಟ ಅವರು, ಇದೀಗ ಈ ಸಮಸ್ಯೆಗೆ ಆದ್ಯತೆ ಮೇರೆಗೆ ತುರ್ತಾಗಿ ಸ್ಪಂದಿಸುವಂತೆ ಕೋರಿ ನೈಋತ್ಯ ರೈಲ್ವೆ ವಲಯದ ಜನರಲ್ ಮ್ಯಾನೇಜರ್‌ಗೆ ಪತ್ರ ಬರೆದಿದ್ದಾರೆ.
ಕಬಕ-ಪುತ್ತೂರು ಸ್ಟೇಷನಲ್‌ನಲ್ಲಿ ಪ್ರಯಾಣಿಕರಿಗೆ ರೈಲಿಗಾಗಿ ಕಾದು ನಿಲ್ಲುವುದಕ್ಕೆ ವ್ಯವಸ್ಥಿತವಾದ ಶೆಲ್ಟರ್ ಕೊರತೆಯಿದೆ. ಇದರಿಂದ ಮಳೆ-ಗಾಳಿ ಅಥವಾ ಬಿಸಿಲಿನ ಸಂದರ್ಭದಲ್ಲಿ ಪ್ರಯಾಣಿಕರಿಗೆ ತುಂಬಾ ತೊಂದರೆಯಾಗುತ್ತಿದೆ. ಈಗಿರುವ ಶೆಲ್ಟರ್ ಬಹಳ ಚಿಕ್ಕದಾಗಿರುವ ಕಾರಣ ರೈಲು ಬಂದು ನಿಂತಾಗ ಹತ್ತಿ-ಇಳಿಯುವುದಕ್ಕೆ ತುಂಬಾ ಸಮಸ್ಯೆಯಾಗುತ್ತಿದೆ. ಹೀಗಾಗಿ, ರೈಲು ನಿಲುಗಡೆ ಕೊಟ್ಟಾಗ ಎಲ್ಲ ಬೋಗಿಗಳಿಗೂ ಹತ್ತಿ-ಇಳಿಯುವುದಕ್ಕೆ ಅನುಕೂಲವಾಗುವಂತೆ ಮೇಲ್ಛಾವಣಿ ಒದಗಿಸಬೇಕು. ಹೀಗಾಗಿ, ಈಗಿರುವ ಶೆಲ್ಟರ್‌ನ್ನು ಪ್ಲಾಟ್‌ಫಾರ್ಮ್ ಉದ್ದಕ್ಕೂ ವಿಸ್ತರಿಸಬೇಕೆಂದು ಕ್ಯಾ. ಚೌಟ ಅವರು ಪತ್ರದಲ್ಲಿ ಕೋರಿದ್ದಾರೆ.
ಅಲ್ಲದೆ, ಕಬಕ ಪುತ್ತೂರು ರೈಲು ನಿಲ್ದಾಣದಲ್ಲಿ ಮೂಲಸೌಕರ್ಯವನ್ನು ಅಭಿವೃದ್ದಿಪಡಿಸುವುದರಿಂದ ಈ ನಿಲ್ದಾಣ ಅವಲಂಬಿಸಿರುವ ಪ್ರಯಾಣಿಕರಿಗೂ ಸಾಕಷ್ಟು ಅನುಕೂಲವಾಗಲಿದೆ. ಈ ಸ್ಟೇಷನ್‌ನ್ನು ಮತ್ತಷ್ಟು ಅಭಿವೃದ್ಧಿಪಡಿಸಿದರೆ ಹೆಚ್ಚಿನ ಪ್ರಯಾಣಿಕರನ್ನು ಆಕರ್ಷಿಸುವುದಕ್ಕೆ ಸಾಧ್ಯವಾಗುತ್ತದೆ. ಜತೆಗೆ ಸ್ಥಳೀಯವಾಗಿ ಈ ಪ್ರದೇಶದ ಸಮಗ್ರ ಅಭಿವೃದ್ಧಿಗೂ ಸಹಕಾರಿಯಾಗುತ್ತದೆ. ಹೀಗಾಗಿ, ಇದನ್ನು ಆದ್ಯತೆ ಮೇರೆಗೆ ಅನುಷ್ಠಾನಗೊಳಿಸಬೇಕೆಂದು ಎಂದು ಕ್ಯಾ. ಚೌಟ ಅವರು ಸಲಹೆ ನೀಡಿದ್ದಾರೆ.
Post a Comment