ತುರ್ತು ಸ್ಪಂದನೆ ಕೋರಿ ಸಂಸದ ಕ್ಯಾ. ಚೌಟ ಅವರಿಂದ ಕೇಂದ್ರ ಕೃಷಿ ಹಾಗೂ ಕೈಗಾರಿಕಾ ಸಚಿವರಿಗೆ ಪ್ರತ್ಯೇಕ ಪತ್ರ
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅಡಿಕೆ ಬೆಳೆಗಾರರು ಎಲೆ ಚುಕ್ಕಿ ರೋಗ ಬಾಧೆಯಿಂದ ತೀವ್ರವಾಗಿ ತತ್ತರಿಸಿ ಹೋಗಿದ್ದು, ಕೇಂದ್ರ ಸರ್ಕಾರ ಈ ಕೂಡಲೇ ರೋಗ ನಿಯಂತ್ರಣಕ್ಕೆ ಅಗತ್ಯ ಕ್ರಮ ಕೈಗೊಳ್ಳುವಂತೆ ದಕ್ಷಿಣ ಕನ್ನಡ ಸಂಸದ ಕ್ಯಾ. ಬ್ರಿಜೇಶ್ ಚೌಟ ಅವರು ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಅವರಿಗೆ ಮನವಿ ಮಾಡಿದ್ದಾರೆ.
ದ.ಕ. ಜಿಲ್ಲೆಯಲ್ಲಿ ಅಡಿಕೆ ಬೆಳೆಗೆ ಎಲೆ ಚುಕ್ಕಿ ರೋಗ ಬಾಧಿಸಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ಕ್ಯಾ. ಚೌಟ ಅವರು, ತುರ್ತು ಸ್ಪಂದನೆ ಕೋರಿ ಕೇಂದ್ರ ಸರ್ಕಾರಕ್ಕೆ ಸುದೀರ್ಘ ಪತ್ರ ಬರೆದಿದ್ದಾರೆ. ಜತೆಗೆ, ದಕ್ಷಿಣ ಕನ್ನಡದಲ್ಲಿ ಕಾಫಿ ಬೆಳೆಗೆ ಪೂರಕ ವಾತವಾರಣವಿದ್ದು, ಕಾಫಿ ಬೆಳೆಯನ್ನು ಸಾಂಪ್ರದಾಯಿಕ ಬೆಳೆಯಾಗಿ ಪ್ರೋತ್ಸಾಹಿಸುವುದಕ್ಕೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿಯೂ ಕಾಫಿ ಬೋರ್ಡ್ ಮೂಲಕ ಅಗತ್ಯ ಕ್ರಮ ಕೈಗೊಳ್ಳುವಂತೆ ಕೋರಿ ಕ್ಯಾ. ಚೌಟ ಅವರು ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕೆಗಳ ಸಚಿವ ಪಿಯುಷ್ ಗೊಯೆಲ್ ಅವರಿಗೂ ಪ್ರತ್ಯೇಕ ಪತ್ರ ಬರೆದಿದ್ದಾರೆ.
ಈ ಬಾರಿ ದಕ್ಷಿಣ ಕನ್ನಡದಲ್ಲಿ ಅಡಿಕೆ ಬೆಳೆಗೆ ಎಲೆ ಚುಕ್ಕಿ ರೋಗ ವ್ಯಾಪಕವಾಗಿ ಕಾಡುತ್ತಿದ್ದು, ಅಡಿಕೆ ಬೆಳೆಯನ್ನೇ ನಂಬಿರುವ ಲಕ್ಷಾಂತರ ಕೃಷಿಕರು ಆರ್ಥಿಕವಾಗಿ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಈ ರೋಗಬಾಧೆಯಿಂದ ಅಡಿಕೆ ಬೆಳೆಗಾರರನ್ನು ರಕ್ಷಿಸಬೇಕಾದರೆ ಕೇಂದ್ರ ಸರ್ಕಾರ ಕೂಡಲೇ ಎಲೆ ಚುಕ್ಕಿ ರೋಗವನ್ನು ಗಂಭೀರವಾಗಿ ಪರಿಗಣಿಸಿ ಈ ರೋಗ ಮತ್ತಿತರ. ಅಲ್ಲದೆ ಈ ರೋಗದ ಬಗ್ಗೆ ರೈತರಿಗೆ, ಕೃಷಿ ವಿಸ್ತರಣಾ ವಲಯದವರಿಗೆ ಸೂಕ್ತ ತರಬೇತಿ, ಮಾರ್ಗದರ್ಶನ ನೀಡಬೇಕು. ಆ ಮೂಲಕ ಎಲೆ ಚುಕ್ಕೆ ರೋಗವನ್ನು ಪರಿಣಾಮಕಾರಿಯಾಗಿ ತಡೆಯಲು ಕೀಟ ನಾಶಕ ಸಿಂಪಡಣೆ, ಜಾಗೃತಿ ಮತ್ತು ಇತರೆ ಕಾರ್ಯ-ಯೋಜನೆ ಕಾರ್ಯರೂಪಕ್ಕೆ ತರಬೇಕು. ಇದರಿಂದ ನಮ್ಮ ಕರಾವಳಿ ಭಾಗದ ಅಡಿಕೆ ಕೃಷಿಕರು ಹಾಗೂ ಅಡಿಕೆ ಉದ್ಯಮವನ್ನು ಎಲೆ ಚುಕ್ಕಿ ರೋಗಬಾಧೆ ಸಮಸ್ಯೆಯಿಂದ ಪಾರು ಮಾಡಬಹುದು ಎಂದು ಸಂಸದರು ಸಲಹೆ ನೀಡಿದ್ದಾರೆ.
ದಕ್ಷಿಣ ಕನ್ನಡದಲ್ಲಿಯು ಕಾಫಿ ಬೆಳೆಗೆ ಉತ್ತೇಜನ ದೊರಕಲಿ
ಜಿಲ್ಲೆಯಲ್ಲಿ ಅಡಿಕೆ ಪ್ರಮುಖ ವಾಣಿಜ್ಯ ಬೆಳೆಯಾಗಿದ್ದು ಇತ್ತೀಚಿನ ವರ್ಷಗಳಲ್ಲಿ ಹವಮಾನ ವೈಪರೀತ್ಯ, ತೀವ್ರ ರೋಗ ಬಾಧೆ, ಮಿತಿಮೀರಿದ ಕೀಟನಾಶಕ ಸಿಂಪಡನೆ ಮತ್ತಿತ್ತರ ಸಮಸ್ಯೆಗಳಿಂದಾಗಿ ಮಣ್ಣಿನ ಫಲವತ್ತತೆ ಕಡಿಮೆಯಾಗಿ ಇಳುವರಿ ಕುಂಠಿತಗೊಂಡು ಬೆಳೆಗಾರರನ್ನು ಚಿಂತೆಗೀಡು ಮಾಡುತ್ತಿದೆ. ಹೀಗಿರುವಾಗ ದ.ಕ.ದಲ್ಲಿ ಅಡಿಕೆಗೆ ಪರ್ಯಾಯ ವಾಣಿಜ್ಯ ಬೆಳೆಯಾಗಿ ಕಾಫಿಯನ್ನು ಬೆಳೆಯುವುದಕ್ಕೆ ಪೂರಕ ಹವಾಗುಣ ಇದೆ. ಚಿಕ್ಕಮಗಳೂರು, ಕೊಡಗು ಸೇರಿ ಮಲೆನಾಡಿನಂತೆ ದ.ಕ ದಲ್ಲಿಯೂ ಕಾಫಿಯನ್ನು ಸಾಂಪ್ರದಾಯಿಕ ಬೆಳೆಯಾಗಿ ಬೆಳೆಯುವುದಕ್ಕೆ ಪೂರಕ ಪರಿಸರ ವ್ಯವಸ್ಥೆ ಇದೆ. ಈ ಹಿನ್ನೆಲೆಯಲ್ಲಿ ಈ ಭಾಗದಲ್ಲಿ ಕಾಫಿ ಮಂಡಳಿಯ ಮೂಲಕ ಕಾಫಿ ಬೆಳೆಗಾರರಿಗೆ ತಾಂತ್ರಿಕ ನೆರವು, ತರಬೇತಿ ಹಾಗೂ ಮಾರುಕಟ್ಟೆ ಲಭ್ಯತೆಗೆ ಬೇಕಾಗುವ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಹೇಳಿದ್ದಾರೆ.
ಕೊಡಗು ಮತ್ತಿತ್ತರ ಜಿಲ್ಲೆಗಳಲ್ಲಿ ಕಾಫಿ ಬೋರ್ಡ್ ಮತ್ತು ಸೆಂಟ್ರಲ್ ಕಾಫಿ ಬೆಳೆ ಸಂಶೋಧನಾ ಸಂಸ್ಥೆಯಿಂದ ಯಾವೆಲ್ಲಾ ರೀತಿಯ ಬೆಂಬಲ, ಸೌಲಭ್ಯ, ತಾಂತ್ರಿಕ ನೆರವು ಲಭಿಸುತ್ತಿದೆಯೋ ಅವುಗಳನ್ನು ದ. ಕ.ದ ಹಾಲಿ ಕಾಫಿ ಬೆಳೆಗಾರರಿಗೂ ಲಭಿಸುವಂತೆ ಮಾಡಬೇಕು. ಜತೆಗೆ ಸುಳ್ಯ, ಪುತ್ತೂರು, ಬೆಳ್ತಂಗಡಿ ತಾಲೂಕಿನಲ್ಲಿ ರೈತರಿಗೆ ಕಾಫಿಯನ್ನು ಬೆಳೆಯುವುದಕ್ಕೆ ಹಾಗೂ ಕಾಫಿ ಉದ್ಯಮವನ್ನು ಬೆಂಬಲಿಸುವುದಕ್ಕೆ ಪೂರಕ ಕ್ರಮ ಕೈಗೊಳ್ಳಬೇಕು ಎಂದು ಸಚಿವ ಪಿಯೂಷ್ ಗೋಯಲ್‌ಗೆ ಬರೆದಿರುವ ಪತ್ರದಲ್ಲಿ ಕ್ಯಾ. ಚೌಟ ಅವರು ಕೋರಿದ್ದಾರೆ.
Post a Comment