ಪ್ರಯಾಣಿಕರಿಗೆ ಟಿಕೆಟ್‌ ಅಗತ್ಯವಿಲ್ಲದ ಭಾರತದ ಏಕೈಕ ಉಚಿತ ರೈಲು ಪ್ರಯಾಣದ ಬಗ್ಗೆ ಗೊತ್ತಾ?

 


ಪ್ರತಿದಿನ ರೈಲ್ವೆ ಇಲಾಖೆ ಅಧಿಕಾರಿಗಳು ಟಿಕೆಟ್‌ ಇಲ್ಲದೇ ಪ್ರಯಾಣಿಸುವ ನೂರಾರು ಪ್ರಯಾಣಿಕರಿಂದ ದಂಡ ವಸೂಲಿ ಮಾಡುತ್ತಾರೆ. ಹಾಗೇ‌ ಭಾರತದಲ್ಲಿ ಟಿಕೆಟ್‌ ಇಲ್ಲದೇ ಪ್ರಯಾಣಿಸುವುದನ್ನು ಕಲ್ಪಿಸಿಕೊಳ್ಳಲು ಸಾಧ್ಯವಿಲ್ಲ. ಆದರೆ ನಿಮಗೆ ಅಚ್ಚರಿಯಾಗುವ ವಿಷಯ ಇದು…ಯಾಕೆಂದರೆ ಪ್ರಯಾಣಿಕರು ಉಚಿತವಾಗಿ ಪ್ರಯಾಣಿಸುವ ದೇಶದ ಏಕೈಕ ರೈಲು ನಿಲ್ದಾಣ ಯಾವುದು ಗೊತ್ತಾ?


ಹೌದು ಭಾಕ್ರಾ-ನಂಗಲ್‌ ರೈಲು ಪ್ರಯಾಣ ನಿಮ್ಮೆಲ್ಲಾ ನಿರೀಕ್ಷೆಗಳನ್ನು ತಲೆಕೆಳಗಾಗಿಸುತ್ತೇ..ಯಾಕೆ ಗೊತ್ತಾ..ಈ ರೈಲು ಕಳೆದ 75 ವರ್ಷಗಳಿಂದ ಪ್ರಯಾಣಿಕರಿಗೆ ಯಾವುದೇ ಶುಲ್ಕ(ಟಿಕೆಟ್)‌ ವಿಧಿಸದೇ ಕಾರ್ಯನಿರ್ವಹಿಸುತ್ತಿದೆ. ಇದು ದೇಶದ ಇತಿಹಾಸದ ಅನನ್ಯ ಮತ್ತು ವೈಶಿಷ್ಟ್ಯದ ಭಾಗವಾಗಿದೆ.

ರೈಲು ಆರಂಭದ ಇತಿಹಾಸ…

ಭಾಕ್ರಾ-ನಂಗಲ್‌ ರೈಲನ್ನು ಮೊದಲ ಬಾರಿಗೆ 1948ರಲ್ಲಿ ಪ್ರಾರಂಭಿಸಲಾಗಿತ್ತು. ಆರಂಭದಲ್ಲಿ ಈ ರೈಲು ಭಾಕ್ರಾ-ನಂಗಲ್‌ ಅಣೆಕಟ್ಟು ನಿರ್ಮಿಸುವ ಕೂಲಿ ಕಾರ್ಮಿಕರನ್ನು ಕರೆದೊಯ್ಯಲು ಹಾಗೂ ನಿರ್ಮಾಣ ಕಾರ್ಯದ ವಸ್ತುಗಳನ್ನು ಕೊಂಡೊಯ್ಯಲು ಬಳಸಲಾಗುತ್ತಿತ್ತು. ಹೀಗೆ ವರ್ಷಗಳು ಉರುಳಿದಂತೆ ಈ ರೈಲು ಸ್ಥಳೀಯರು ಮತ್ತು ಪ್ರವಾಸಿಗರು ಪ್ರಯಾಣಿಸುವ ರೈಲಾಗಿ ಪರಿವರ್ತನೆಗೊಂಡಿತ್ತು. ಈ ರೈಲು ಪ್ರಾರಂಭದಲ್ಲಿ ಸ್ಟೀಮ್‌ (ಉಗಿಬಂಡೆ) ಎಂಜಿನ್‌ ಹೊಂದಿತ್ತು. ಆದರೆ 1953ರಲ್ಲಿ ಅಮೆರಿಕದಿಂದ ಆಮದು ಮಾಡಿಕೊಂಡಿದ್ದ ಡೀಸೆಲ್‌ ಎಂಜಿನ್‌ ಅನ್ನು ಅಳವಡಿಸಲಾಗಿತ್ತು. ಆಧುನಿಕ ಅಪ್‌ ಗ್ರೇಡ್‌ ಗಳ ಹೊರತಾಗಿಯೂ ಈ ರೈಲು ಮರದ ಕೋಚ್‌ ಗಳನ್ನು ಹೊಂದಿರುವ ವಸಾಹತುಶಾಹಿಯ ಚಾರ್ಮ್‌ ಹೊಂದಿತ್ತು.

ಈ ರೈಲು ಪಂಜಾಬ್‌ ನ ನಂಗಲ್‌ ಮತ್ತು ಹಿಮಾಚಲ ಪ್ರದೇಶದ ಭಾಕ್ರಾ ನಡುವಿನ 13 ಕಿಲೋ ಮೀಟರ್‌ ಮಾರ್ಗವನ್ನು ಕ್ರಮಿಸಲಿದೆ. ಭಾಕ್ರಾ ರೈಲು ಸಟ್ಲೇಜ್‌ ನದಿ ಮತ್ತು ಶಿವಾಲಿಕ್‌ ಬೆಟ್ಟಗಳ ಪ್ರಶಾಂತವಾದ ಪ್ರಕೃತಿ ಸೌಂದರ್ಯದ ನಡುವೆ ಹಾದು ಹೋಗುತ್ತದೆ. ಈ ರೈಲು ಪ್ರಯಾಣದಲ್ಲಿ ಆರು ನಿಲ್ದಾಣಗಳು ಹಾಗೂ 3 ಸುರಂಗಗಳು ಸಿಗುತ್ತದೆ. ಜೊತೆಗೆ ಪ್ರಯಾಣದಲ್ಲಿ ಅಬ್ಬಾ ಎನಿಸುವಂತಹ ಪ್ರಕೃತಿ ನೋಟ ಹಾಗೂ ಅವಿಸ್ಮರಣೀಯವಾದ ಅನುಭವ ಪಡೆಯಬಹುದಾಗಿದೆ….

ಟಿಕೆಟ್‌ ರಹಿತ ಪ್ರಯಾಣದ ಪರಂಪರೆ…

ಭಾರತೀಯ ರೈಲ್ವೆಯಿಂದ ನಿರ್ವಹಿಸಲ್ಪಡುವ ಇತರ ರೈಲುಗಳಿಗಿಂತ ಭಿನ್ನವಾಗಿ ಈ ವಿಶಿಷ್ಟ ಸೇವೆಯನ್ನು ಭಾಕ್ರಾ ಬಿಯಾಸ್‌ ನಿರ್ವಹಣಾ ಮಂಡಳಿ (BBMB) ನಿರ್ವಹಿಸುತ್ತಿದೆ. 75 ವರ್ಷಗಳ ನಂತರವೂ ಪ್ರಯಾಣಿಕರಿಗೆ ಶುಲ್ಕ ವಿಧಿಸದೇ ಉಚಿತ ಪ್ರಯಾಣದ ಅವಕಾಶ ಕಲ್ಪಿಸಿ ಕೊಡುವ ನಿರ್ಧಾರದ ಪರಂಪರೆಯನ್ನು ಬಿಬಿಎಂಬಿ ಮುಂದುವರಿಸಿದೆ. ಭಾಕ್ರಾ ಟು ನಂಗಲ್‌ ಪ್ರಯಾಣದಲ್ಲಿ ಪ್ರತಿ ಗಂಟೆಗೆ 18-20 ಲೀಟರ್‌ ಗಳಷ್ಟು ಡೀಸೆಲ್‌ ಅಗತ್ಯವಿದೆ. ಆದರೂ ಬಿಬಿಎಂಬಿ, ಭಾರತದ ಸ್ವಾತಂತ್ರ್ಯ ನಂತರದ ಕೈಗಾರಿಕಾ ಸಾಧನೆಯ ರೈಲು ಪರಂಪರೆಯ ಗೌರವಾರ್ಥವಾಗಿ ಉಚಿತ ಪ್ರಯಾಣದ ನಿರ್ಧಾರವನ್ನು ಆಯ್ಕೆ ಮಾಡಿದೆಯಂತೆ!

ಪ್ರತಿದಿನ ರೈಲಿನಲ್ಲಿ 800ಕ್ಕೂ ಅಧಿಕ ಮಂದಿ ಪ್ರಯಾಣಿಸುತ್ತಾರೆ. ಸ್ಥಳೀಯರಿಗೆ ಇದೊಂದು ಅನುಕೂಲಕರವಾದ ಉಚಿತ ಪ್ರಯಾಣದ ಮಾರ್ಗವಾಗಿದ್ದು, ಪ್ರವಾಸಿಗರಿಗೆ ಅದ್ಭುತವಾದ ಅನುಭವ ನೀಡುವ ಪ್ರಕೃತಿ ಸೌಂದರ್ಯ ತಾಣವಾಗಿದೆ. ಯಾಕೆಂದರೆ ದೇಶದ ಅತೀ ಎತ್ತರವಾದ ಭಾಕ್ರಾ-ನಂಗಲ್‌ ಅಣೆಕಟ್ಟು ನಿರ್ಮಾಣದ ಅದ್ಭುತ ಎಂಜಿನಿಯರಿಂಗ್‌ ಕಾರ್ಯಕ್ಕೆ ಸಾಕ್ಷಿಯಾಗಲಿದ್ದೀರಿ…

ಭಾಕ್ರಾ ನಂಗಲ್‌ ರೈಲು ಕೇವಲ ಉಚಿತ ಪ್ರಯಾಣ ಮಾತ್ರವಲ್ಲ ಇದು ಭಾರತದ ಪ್ರಗತಿಯ, ಅಭಿವೃದ್ಧಿಯ ಸಂಕೇತವಾಗಿದೆ. ನೀವೊಬ್ಬರು ಇತಿಹಾಸದ ಆಸಕ್ತರಾಗಿದ್ದರೆ ಅಥವಾ ಪ್ರಕೃತಿ ಪ್ರೇಮಿಯಾಗಿದ್ದರೆ ನಿಮಗೆ ಈ ರೈಲು ಪ್ರಯಾಣ ಮರೆಯಲಾರದ ಅನುಭವ ನೀಡಲಿದೆ. ಹಾಗಾದರೆ ಇನ್ನೇಕೆ ತಡ…ಜೀವನದಲ್ಲಿ ಒಮ್ಮೆಯಾದರೂ ಈ ಉಚಿತ ರೈಲಿನಲ್ಲಿ ಪ್ರಯಾಣಿಸುವ ಕನಸು ನನಸು ಮಾಡಿಕೊಳ್ಳಿ….

Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget