ಮುಸ್ಲಿಂ ಮಹಿಳಾ ಮತದಾರರ ಬುರ್ಖಾ ತೆಗೆಯುವುದನ್ನು ನಿರ್ಬಂಧಿಸಬೇಕೆಂದು ಎಸ್ಪಿ ಮುಖಂಡ ಒತ್ತಾಯಿಸಿದ್ದಾರೆ.
ನವದೆಹಲಿ: ಮುಸ್ಲಿಂ ಮಹಿಳಾ ಮತದಾರರ ವಿಷಯದಲ್ಲಿ ಉತ್ತರ ಪ್ರದೇಶ ಸಮಾಜವಾದಿ ಪಕ್ಷ (ಎಸ್ಪಿ)ದ ಮುಖ್ಯಸ್ಥ ಶ್ಯಾಮ್ ಲಾಲ್ ಚುನಾವಣಾ ಆಯೋಗಕ್ಕೆ ಬರೆದಿರುವ ಪತ್ರವು ತೀವ್ರ ರಾಜಕೀಯ ಸಂಚಲನಕ್ಕೆ ಕಾರಣವಾಗಿದೆ.
ಪತ್ರದ ಬಗ್ಗೆ ತೀಕ್ಷ್ಣ ಪ್ರತಿಕ್ರಿಯೆ ನೀಡಿರುವ ಬಿಜೆಪಿ, ನವೆಂಬರ್ 20 ರಂದು ನಡೆಯಲಿರುವ ರಾಜ್ಯ ವಿಧಾನಸಭಾ ಉಪಚುನಾವಣೆಗೆ ಮುಂಚಿತವಾಗಿ ಸಮಾಜವಾದಿ ಪಕ್ಷವು ಅಂತಿಮ ಗಂಟೆಗಳಲ್ಲಿ ಚುನಾವಣಾ ವಾತಾವರಣವನ್ನು ಕೋಮುವಾದಿಗೊಳಿಸುತ್ತಿದೆ ಮತ್ತು ಹಾಳುಮಾಡುತ್ತಿದೆ ಎಂದು ಆರೋಪಿಸಿದೆ. ಬಿಜೆಪಿ ಇದನ್ನು ಅಲ್ಪಸಂಖ್ಯಾತ ಸಮುದಾಯವನ್ನು ಧ್ರುವೀಕರಿಸುವ ಹೊಸ ಪ್ರಯತ್ನ ಎಂದು ಹೇಳಿದೆ. ಇನ್ನು ಈ ವಿಷಯದಲ್ಲಿ ಜಾಣ ನಡೆ ಅನುಸರಿಸರುವ ಆರ್ಜೆಡಿ, ಈ ವಿಷಯವನ್ನು ಪ್ರಧಾನಿ ಮೋದಿ ತೀರ್ಮಾನಿಸಲಿ ಎಂದಿದೆ.
ಎಸ್ಪಿ ಯುಪಿ ಮುಖ್ಯಸ್ಥ ಶ್ಯಾಮ್ ಲಾಲ್ ಪಾಲ್ ಮಂಗಳವಾರ ಮುಖ್ಯ ಚುನಾವಣಾ ಅಧಿಕಾರಿಗೆ (ಸಿಇಒ) ಬರೆದ ಪತ್ರದಲ್ಲಿ, ಮತದಾನದ ಸಮಯದಲ್ಲಿ ಗುರುತಿನ ಪರಿಶೀಲನೆಗಾಗಿ ಮುಸ್ಲಿಂ ಮಹಿಳೆಯರ ಬುರ್ಖಾವನ್ನು ತೆಗೆಯದಂತೆ ಚುನಾವಣಾ ಆಯೋಗವು ತನ್ನ ಅಧಿಕಾರಿಗಳು ಮತ್ತು ಪೊಲೀಸ್ ಸಿಬ್ಬಂದಿಗೆ ನಿರ್ದೇಶನಗಳನ್ನು ನೀಡಬೇಕು ಎಂದು ಒತ್ತಾಯಿಸಿದ್ದಾರೆ. ಸದ್ಯ ಈ ಪತ್ರದ ವಿಚಾರ ಭಾರಿ ವಾದ-ವಿವಾದಕ್ಕೆ ಕಾರಣವಾಗಿದೆ.
ಈ ಬಗ್ಗೆ ಮಾತನಾಡಿದ ಬಿಜೆಪಿಯ ಮುಖ್ತಾರ್ ಅಬ್ಬಾಸ್ ನಖ್ವಿ, ಇದು ಸಮುದಾಯವನ್ನು ಧಾರ್ಮಿಕ ಆಧಾರದ ಮೇಲೆ ವಿಭಜಿಸುವ ಕ್ರಮವಾಗಿದೆ ಎಂದು ಹೇಳಿದರು. ಏತನ್ಮಧ್ಯೆ, ಆರ್ಜೆಡಿ ಸಂಸದ ಮನೋಜ್ ಝಾ ವಿವಾದಾತ್ಮಕ ಪತ್ರದ ಬಗ್ಗೆ ನೇರ ಪ್ರತಿಕ್ರಿಯೆ ನೀಡದೆ, ಈ ವಿಷಯದಲ್ಲಿ ನಿರ್ಧಾರ ಕೈಗೊಳ್ಳುವುದು ಪ್ರಧಾನ ಮಂತ್ರಿಗಳ ಕರ್ತವ್ಯವಾಗಿದೆ ಎಂದಿದ್ದಾರೆ.
ಚುನಾವಣಾ ಆಯೋಗಕ್ಕೆ ಬರೆದಿರುವ ಪತ್ರದಲ್ಲಿ ಮತದಾರರ ಗುರುತಿನ ಚೀಟಿಗಳನ್ನು ಪರಿಶೀಲಿಸುವ ಅಧಿಕಾರ ಮತಗಟ್ಟೆ ಅಧಿಕಾರಿಗಳಿಗೆ ಮಾತ್ರ ಇದೆ ಎಂದು ಒತ್ತಿಹೇಳಿರುವ ಲಾಲ್, ಮುಸ್ಲಿಂ ಮಹಿಳೆಯರ ಬುರ್ಖಾ ತೆಗೆದು ಗುರುತು ದೃಢೀಕರಿಸದಂತೆ ಚುನಾವಣಾಧಿಕಾರಿಗಳು, ಜಿಲ್ಲಾ ಮ್ಯಾಜಿಸ್ಟ್ರೇಟ್ ಗಳು ಮತ್ತು ಕಾನೂನು ಜಾರಿ ಅಧಿಕಾರಿಗಳಿಗೆ ನಿರ್ದೇಶನ ನೀಡಬೇಕು ಎಂದು ಒತ್ತಾಯಿಸಿದ್ದಾರೆ.
2024 ರ ಲೋಕಸಭಾ ಚುನಾವಣೆಯಲ್ಲಿ ನಡೆದಿದೆ ಎನ್ನಲಾದ ಘಟನೆಯೊಂದನ್ನು ಶ್ಯಾಮ್ ಲಾಲ್ ತಮ್ಮ ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ಮುಸ್ಲಿಂ ಮಹಿಳಾ ಮತದಾರರು ವಿಶೇಷವಾಗಿ ಎಸ್ಪಿಯನ್ನು ಬೆಂಬಲಿಸುವವರು ತಮ್ಮ ಬುರ್ಖಾಗಳನ್ನು ತೆರೆಯುವಂತೆ ಪೊಲೀಸ್ ಅಧಿಕಾರಿಗಳು ಒತ್ತಾಯಿಸಿದ್ದರು ಎಂದು ಅವರು ಆರೋಪಿಸಿದ್ದಾರೆ. ಈ ಘಟನೆಯಿಂದ ಮತದಾರರಲ್ಲಿ ಭಯ ಉಂಟಾಗಿದ್ದು, ಅನೇಕರು ಮತದಾನದಿಂದ ದೂರ ಉಳಿಯುವಂತಾಗಿದೆ. ಇದು ಮತದಾನದ ಮೇಲೆ ಪರಿಣಾಮ ಬೀರುತ್ತದೆ ಎಂದು ಪಾಲ್ ಹೇಳಿದ್ದಾರೆ.
Post a Comment