ವಕ್ಫ್ ಬೋರ್ಡ್ ವಿವಾದದಿಂದಾಗಿ ಮುಸ್ಲಿಂ ಸಮುದಾಯದಲ್ಲಿ ಭೂ ದಾನದ ಪ್ರಮಾಣ ಕುಸಿದಿದೆ. ವಕ್ಫ್ ಕಾಯ್ದೆ ತಿದ್ದುಪಡಿಯಿಂದ ಆತಂಕ ಹೆಚ್ಚಾಗಿದೆ. ದಾನ ಮಾಡಿದ ಭೂಮಿ ಸರ್ಕಾರದ ವಶವಾಗುತ್ತದೆ ಎಂಬ ಭಯದಿಂದ ದಾನ ಮಾಡಲು ಜನ ಹಿಂದೇಟು ಹಾಕುತ್ತಿದ್ದಾರೆ. ಸರ್ಕಾರ ತನ್ನ ಉದ್ದೇಶಕ್ಕೆ ಅನುಗುಣವಾಗಿ ಭೂಮಿಯನ್ನು ಬಳಸುತ್ತದೆಯೇ ಎಂಬ ಅನುಮಾನ ಮೂಡಿದೆ.
ಉಡುಪಿ, ನವೆಂಬರ್ 06: ವಕ್ಫ್ ಬೋರ್ಡ್ (Waqf) ವಿವಾದ ತಣ್ಣಗಾಗುವ ಲಕ್ಷಣಗಳೇ ಕಾಣ್ತಿಲ್ಲ. ವಿಜಯಪುರದಲ್ಲಿ ಶುರುವಾದ ವಕ್ಫ್ ಕಿಚ್ಚು ರಾಜ್ಯಾದ್ಯಂತ ವ್ಯಾಪಿಸಿದೆ. ಈ ಮಧ್ಯೆ ವಕ್ಫ್ಗೆ ಬರುವ ಭೂ ದಾನದ ಪ್ರಮಾಣದಲ್ಲಿ ಇಳಿಕೆ ಆಗಿದೆ. ವಕ್ಫ್ಗೆ ಭೂಮಿಯನ್ನು ದಾನ ನೀಡುತ್ತಿದ್ದ ಮುಸ್ಲಿಮರು ವಿವಾದದ ಬಳಿಕ ದಾನ ನೀಡಲು ಹಿಂದೇಟು ಹಾಕುತ್ತಿದ್ದಾರೆ. ದಾನ ಮಾಡಿದ ಭೂಮಿಯನ್ನು ಸರ್ಕಾರ ಉದ್ದೇಶಿತ ಕಾರ್ಯಕ್ಕೆ ಬಳಸಲ್ಲ ಎಂದು ಮುಸ್ಲಿಂ ಬಾಂಧವ್ಯ ವೇದಿಕೆ ಆತಂಕ ವ್ಯಕ್ತಪಡಿಸಿದೆ.
ವಕ್ಫ್ ತಿದ್ದುಪಡಿಯನ್ನು ಕೈಬಿಡಬೇಕು: ಅನೀಸ್ ಪಾಷಾ
ಈ ಬಗ್ಗೆ ಮುಸ್ಲಿಂ ಬಾಂಧವ್ಯ ವೇದಿಕೆಯ ಅನೀಸ್ ಪಾಷಾ ಪ್ರತಿಕ್ರಿಯಿಸಿದ್ದು, ವಕ್ಫ್ ಕಾಯ್ದೆಗೆ ತಿದ್ದುಪಡಿ ಮಾಡುತ್ತಿರುವುದು ಮುಸ್ಲಿಂ ಸಮುದಾಯದಲ್ಲಿ ಆತಂಕಕ್ಕೆ ಕಾರಣವಾಗಿದೆ. ಮುಸಲ್ಮಾನರು ದಾನ ಮಾಡಿದ ಆಸ್ತಿ ಯಾವುದು ಕೂಡ ಅವರ ಹೆಸರಲ್ಲಿ ಇರಲ್ಲ. ದಾನ ಮಾಡಿದ ಭೂಮಿ ಸರ್ಕಾರದ ವಕ್ಫ್ ಬೋರ್ಡ್ ಹೆಸರಲ್ಲಿ ಇರುತ್ತೆ. ದಾನ ಮಾಡಿಬಿಟ್ಟರೆ ಈ ಆಸ್ತಿ ಸರ್ಕಾರಕ್ಕೆ ಹೋಗುತ್ತೆ ಅನ್ನುವ ಆತಂಕದಲ್ಲಿದ್ದಾರೆ. ದಾನ ಮಾಡಿದ ಉದ್ದೇಶಕ್ಕೆ ಬಳಕೆಯಾಗುತ್ತೋ, ಇಲ್ಲವೋ ಎನ್ನುವ ಆತಂಕ ಮುಸ್ಲಿಮರಲ್ಲಿದೆ. ಈ ಮನಸ್ಥಿತಿಯನ್ನು ಸರ್ಕಾರ ಹುಟ್ಟು ಹಾಕಿದೆ. ಹೀಗಾಗಿ 2024ರಲ್ಲಿ ಕೇಂದ್ರ ಸರ್ಕಾರ ಜಾರಿಗೆ ತರಲು ಉದ್ದೇಶಿಸಿರುವ ತಿದ್ದುಪಡಿಯನ್ನು ಕೈಬಿಡಬೇಕು ಎಂದು ಹೇಳಿದ್ದಾರೆ.
ವಾಕ್ಫ್ ಕಾಯ್ದೆ ಬಗ್ಗೆ ನಿರಂತರ ಅಪಪ್ರಚಾರ ನಡೆಯುತ್ತಿದೆ. ವಕ್ಫ್ ಆಸ್ತಿಯಲ್ಲಿ ಸರ್ಕಾರ ಕೊಟ್ಟಿರುವುದು ಬಹುತೇಕ ಸ್ಮಶಾನದ ಭೂಮಿ ಮಾತ್ರ. ಈ ಕಡೆ 95 ರಷ್ಟು ಆಸ್ತಿ, ಮುಸ್ಲಿಂ ಜನಸಾಮಾನ್ಯರು ತಮ್ಮ ದುಡಿಮೆಯಿಂದ ದಾನವಾಗಿ ಕೊಟ್ಟ ಆಸ್ತಿ. ಆಸ್ತಿ ದಾನ ಮಾಡಿದರೆ ಪೂರ್ವಜರಿಗೆ, ನಮಗೆ ದೇವರು ಒಳ್ಳೆಯದು ಮಾಡುತ್ತಾನೆ ಎಂಬ ಭಾವನೆ ಇದೆ. ನಮಾಜು, ಮದರಸ, ಶಿಕ್ಷಣ, ಇಸ್ಲಾಂ ಧರ್ಮದ ಕಾರ್ಯಕ್ರಮಗಳಿಗೆ ಭೂದಾನ ಮಾಡುತ್ತಾರೆ. ಅಪಪ್ರಚಾರ ನಡೆಯುತ್ತಿರುವುದು ತಪ್ಪು ಎಂದಿದ್ದಾರೆ.
ವಾಕ್ಫ್ ಆಸ್ತಿಗಳ ವಿವಾದಗಳ ನ್ಯಾಯ ತೀರ್ಮಾನಕ್ಕೆ ಟ್ರಿಬ್ಯುನಲ್ ಇದೆ. ಮಕ್ಕಳ ಅತ್ಯಾಚಾರ ನಡೆದಾಗ ಪೋಕ್ಸೋ ಕೋರ್ಟ್ ಬರುತ್ತೆ. ಅಟ್ರಾಸಿಟಿ ಕೇಸ್ಗಳಿಗೆ ಕೋರ್ಟ್ ಇರುತ್ತೆ. ಉದ್ಯೋಗಿಗಳ ಕೇಸ್ ನಿರ್ವಹಣೆಗೆ ಪ್ರತ್ಯೇಕ ಟ್ರಿಬ್ಯುನಲ್ ಇದೆ. ಅದೇ ರೀತಿ ಅರ್ಜಿಗಳ ತ್ವರಿತ ವಿಲೇವಾರಿಗೆ ವಕ್ಫ್ ಟ್ರಿಬ್ಯುನಲ್ ಇದೆ. ಜಿಲ್ಲಾ ನ್ಯಾಯಾಧೀಶರಾಗಿ ಕೆಲಸ ಮಾಡಿದವರೇ ಇಲ್ಲಿ ಜಡ್ಜ್ಳಾಗಿರುತ್ತಾರೆ. ಯಾವುದೇ ಮುಸ್ಲಿಂ ನ್ಯಾಯಾಧೀಶ ಅಂತ ನೇಮಕ ಮಾಡಲ್ಲ. ಬೇರೆ ಸಮುದಾಯದ ನ್ಯಾಯಾಧೀಶರೇ ಹೆಚ್ಚಾಗಿ ಇರುತ್ತಾರೆ. ಸರ್ಕಾರದಿಂದ ನಿಯುಕ್ತಿಗೊಂಡ ಸಿಬ್ಬಂದಿಗಳೇ ಇರುತ್ತಾರೆ, ಆದರೆ ಈ ಬಗ್ಗೆ ಜನರಲ್ಲಿ ತಪ್ಪು ತಿಳುವಳಿಕೆ ಇದೆ ಎಂದು ಹೇಳಿದ್ದಾರೆ.
Post a Comment