ಮಂಗಳೂರು: ಮಹಾರಾಷ್ಟ್ರದಲ್ಲಿ ಬಿಜೆಪಿ ನೇತೃತ್ವದ ಮಹಾಯುತಿ ಮೈತ್ರಿ ಕೂಟದ ಅಭೂತಪೂರ್ವ ಗೆಲುವು ಪ್ರಧಾನಮಂತ್ರಿ ನರೇಂದ್ರ ಮೋದಿಯವರ ದೂರದೃಷ್ಟಿಯ ಕಾರ್ಯ-ಯೋಜನೆಗಳ ಮೇಲೆ ಜನರ ನಂಬಿಕೆ ಮತ್ತು ವಿಶ್ವಾಸವನ್ನು ಪ್ರತಿಬಿಂಬಿಸುತ್ತದೆ. ಹೀಗಿರುವಾಗ, ಈ ಐತಿಹಾಸಿಕ ಗೆಲುವು ವಿಕಸಿತ ಭಾರತದ ಗೆಲುವು ಮತ್ತು ಹಿಂದುತ್ವದ ವಿಜಯ ಎಂದು ದಕ್ಷಿಣ ಕನ್ನಡ ಸಂಸದ ಕ್ಯಾ. ಬ್ರಿಜೇಶ್ ಚೌಟ ಬಣ್ಣಿಸಿದ್ದಾರೆ.
ಮಹಾರಾಷ್ಟ್ರದ ಜನರು ಕಾಂಗ್ರೆಸ್ ನೇತೃತ್ವದ ಮಹಾ ವಿಕಾಸ್ ಅಘಾಡಿಯನ್ನು ಸೋಲಿಸುವ ಮೂಲಕ ತುಷ್ಟೀಕರಣ ರಾಜಕಾರಣ ಹಾಗೂ ಕುಟುಂಬ ರಾಜಕಾರಣಕ್ಕೆ ತಕ್ಕ ಪಾಠ ಕಲಿಸಿದ್ದಾರೆ. ಮಾತ್ರವಲ್ಲದೇ ಕಾಶ್ಮೀರದಲ್ಲಿ 370ನೇ ವಿಧಿಯನ್ನು ಮರುಸ್ಥಾಪಿಸಲು ಉದ್ದೇಶಿಸಿದವರ ಹಾಗೂ ಸಂವಿಧಾನದ ನಕಲಿ ಹಿತೈಷಿಗಳ ಅಂಗಡಿಗೆ ಬೀಗ ಹಾಕಿದ್ದಾರೆ. ದೇಶದಲ್ಲಿ ಕಾಂಗ್ರೆಸ್ ಪಕ್ಷವು ಇದೀಗ ಮುಳುಗುವ ಹಡಗಾಗಿದ್ದು, ಜೊತೆಗಿರುವ ಮಿತ್ರಪಕ್ಷಗಳನ್ನೂ ಮುಳುಗಿಸುತ್ತಿವೆ ಎಂದು ವ್ಯಂಗ್ಯವಾಡಿದ್ದಾರೆ.
ಮಹಾರಾಷ್ಟ್ರದಲ್ಲಿ ಮಹಾಯುತಿ ಗೆಲ್ಲುವ ಮೂಲಕ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ವಿಕಸಿತ ಭಾರತದ ಸಂಕಲ್ಪ-ಪರಿಕಲ್ಪನೆಯನ್ನು ಮತ್ತಷ್ಟು ಗಟ್ಟಿಗೊಳಿಸಿದೆ. ಸಮಾಜವನ್ನು ಒಡೆದು ಆಳುವ ನೀತಿಯನ್ನು 'ಮಹಾ' ಜನತೆ ಸಾರಸಗಟಾಗಿ ತಿರಸ್ಕರಿಸಿದ್ದು, ಈ ಚುನಾವಣಾ ಫಲಿತಾಂಶವು ಪ್ರಧಾನ ಮಂತ್ರಿಯವರ 'ಏಕ್ ಹೈ ತೋ ಸೇಫ್ ಹೈ' ಎಂಬ ಮೂಲ ಮಂತ್ರದಂತೆ ಏಕತ್ವದ ಸಂದೇಶವನ್ನು ಸಾರಿದೆ ಮತ್ತು ಜಾತಿಗಳ ಮದ್ಯೆ ಸಮಾಜವನ್ನು ಒಡೆಯುವ ಕಾಂಗ್ರೆಸ್ ನ ಪ್ರಯತ್ನವನ್ನು ಸೋಲಿಸಿದೆ ಎಂದು ಕ್ಯಾ. ಚೌಟ ಅಭಿಪ್ರಾಯಪಟ್ಟಿದ್ದಾರೆ.
ಗೆಲುವಿಗೆ ಶ್ರಮಿಸಿದ ತುಳುವ-ಕನ್ನಡಿಗರಿಗೆ ಧನ್ಯವಾದ
ಹಿಂದುತ್ವ ಮತ್ತು ಮೋದಿಯನ್ನು ಬೆಂಬಲಿಸಿದ ಮುಂಬೈ, ಪುಣೆ ಸೇರಿದಂತೆ ಮಹಾರಾಷ್ಟ್ರದ ಇತರ ಭಾಗಗಳ ಎಲ್ಲಾ ತುಳುವ ಕನ್ನಡಿಗರಿಗೂ ನಾನು ಈ ಸಂದರ್ಭದಲ್ಲಿ ಧನ್ಯವಾದ ಹೇಳುತ್ತೇನೆ. ಚುನಾವಣೆ ಸಂದರ್ಭ ಪಕ್ಷ ನೀಡಿದ್ದ ಜವಾಬ್ದಾರಿಯಂತೆ ಪುಣೆಯಲ್ಲಿ ಪ್ರಚಾರ ಮಾಡುವ ಅವಕಾಶ ನನಗೂ ಲಭಿಸಿತ್ತು. ಹೀಗಾಗಿ, ಮಹಾರಾಷ್ಟ್ರದಲ್ಲಿ ಈ ಗೆಲುವಿನ ಹಿಂದೆ ಹಗಲಿರುಳು ಕೆಲಸ ಮಾಡಿದ್ದ ನಮ್ಮ ಎಲ್ಲ ಬಿಜೆಪಿ ಕಾರ್ಯಕರ್ತರು ಹಾಗೂ ಹಿತೈಷಿಗಳಿಗೆ ಮತ್ತೊಮ್ಮೆ ಧನ್ಯವಾದ ಸಲ್ಲಿಸುತ್ತೇನೆ ಎಂದು ಕ್ಯಾ. ಚೌಟ ಹೇಳಿದ್ದಾರೆ.
Post a Comment