ಹೈದರಾಬಾದ್: ಅಮೆರಿಕದಲ್ಲಿ ಅದಾನಿ ವಿರುದ್ಧ ಲಂಚಕ್ಕೆ ಸಂಬಂಧಿಸಿದ ದೋಷಾರೋಪಣೆ ಹಿನ್ನೆಲೆ ಅದಾನಿ ಗ್ರೂಪ್ ಗೆ ಸಂಬಂಧಿಸಿದ ವಿದ್ಯುತ್ ಸರಬರಾಜು ಒಪ್ಪಂದವನ್ನು ರದ್ದುಗೊಳಿಸಲು ಸಾಧ್ಯವೇ ಎಂಬುದನ್ನು ಪರಿಶೀಲಿಸಲಾಗುವುದು ಎಂದು ಆಂಧ್ರದ ಉನ್ನತ ಅಧಿಕಾರಿಯೊಬ್ಬರು ತಿಳಿಸಿರುವ ಬಗ್ಗೆ Reuters ವರದಿ ಮಾಡಿದೆ.
2021 ಮತ್ತು 2022ರ ನಡುವೆ ಒಡಿಶಾ, ತಮಿಳುನಾಡು, ಛತ್ತೀಸ್ ಗಢ, ಆಂಧ್ರಪ್ರದೇಶ ಮತ್ತು ಜಮ್ಮು ಮತ್ತು ಕಾಶ್ಮೀರದಲ್ಲಿ ಸೌರ ವಿದ್ಯುತ್ ಸರಬರಾಜು ಒಪ್ಪಂದಗಳನ್ನು ಪಡೆಯಲು ಹೆಸರಿಸದ ಭಾರತೀಯ ಸರ್ಕಾರಿ ಅಧಿಕಾರಿಗಳಿಗೆ 265 ಮಿಲಿಯನ್ ಲಂಚ ನೀಡಲು ಅದಾನಿ ಸಮೂಹ ಒಪ್ಪಿಕೊಂಡಿದೆ ಎಂದು ಅಮೆರಿಕದ ಅಧಿಕಾರಿಗಳು ಗೌತಮ್ ಅದಾನಿ ಮತ್ತು ಇತರ ಏಳು ಮಂದಿ ಆರೋಪಿಗಳ ವಿರುದ್ಧ ಅಮೆರಿಕದಲ್ಲಿ ದೋಷಾರೋಪಣೆ ಮಾಡಿದ್ದರು.ಇದರಲ್ಲಿ ಹೆಚ್ಚಿನ ಲಂಚವನ್ನು ಅಂದರೆ 228 ಮಿಲಿಯನ್ ಆಂಧ್ರಪ್ರದೇಶದ ರಾಜ್ಯ ವಿದ್ಯುತ್ ವಿತರಣಾ ಕಂಪನಿಗೆ ಸಂಬಂಧಿಸಿದ ಒಪ್ಪಂದಕ್ಕೆ ಪಾವತಿಸಲಾಗಿದೆ ಎಂದು US ದೋಷಾರೋಪಣೆಯಲ್ಲಿ ತಿಳಿಸಲಾಗಿದೆ. ಆದರೆ ಈ ಆರೋಪವನ್ನು ಅದಾನಿ ಸಮೂಹ ನಿರಾಧಾರ ಎಂದು ತಳ್ಳಿ ಹಾಕಿತ್ತು.
ಆಂಧ್ರಪ್ರದೇಶ ಸರ್ಕಾರವು ಅದಾನಿ ಸಮೂಹಕ್ಕೆ ಸಂಬಂಧಿಸಿದ ಹಿಂದಿನ ಆಡಳಿತದ ಅವಧಿಯಲ್ಲಿನ ಎಲ್ಲಾ ಒಪ್ಪಂದಗಳ ದಾಖಲೆಗಳನ್ನು ಪರಿಶೀಲಿಸುತ್ತಿದೆ, ಮುಂದೆ ಏನು ಮಾಡಬಹುದು ಎಂಬುದನ್ನು ನಾವು ಪರಿಶೀಲಿಸುತ್ತೇವೆ. ಒಪ್ಪಂದವನ್ನು ರದ್ದುಗೊಳಿಸುವ ಸಾಧ್ಯತೆಗಳ ಬಗ್ಗೆಯೂ ಪರಿಶೀಲಿಸಲಾಗುವುದು ಎಂದು ಹಣಕಾಸು ಸಚಿವ ಪಯ್ಯಾವುಲಾ ಕೇಶವ್ ಮಾಧ್ಯಮಗಳಿಗೆ ತಿಳಿಸಿದ್ದಾರೆ. ಆದರೆ ಈ ಬಗ್ಗೆ ಅದಾನಿ ಸಮೂಹದ ವಕ್ತಾರರು ಯಾವುದೇ ಪ್ರತಿಕ್ರಿಯೆಯನ್ನು ನೀಡಿಲ್ಲ.
Post a Comment