ಚಾಲಿ ಅಡಿಕೆ ಮಾರುಕಟ್ಟೆಯಲ್ಲಿ ಡಬ್ಬಲ್‌ ಚೋಲ್‌ ಧಾರಣೆ ತೇಜಿ



 ಡಬ್ಬಲ್‌ ಚೋಲ್ ಧಾರಣೆ 500 ರೂ. ಗಡಿ ದಾಟಿ ಮುನ್ನುಗ್ಗಿದೆ. ಜೊತೆಗೆ ಸಿಂಗೇಲ್ ಚೋಲ್ ಧಾರಣೆಯೂ ಏರಿಕೆ ಕಂಡಿದೆ. ಆದರೆ ಉಪ ಬೆಳೆಗಳಾದ ಕಾಳು ಮೆಣಸು, ರಬ್ಬ‌ರ್, ಕೊಕ್ಕೊ ಧಾರಣೆಯಲ್ಲಿ ಏರಿಕೆಯ ಲಕ್ಷಣ ಕಂಡು ಬಂದಿಲ್ಲ. ಹಳೆ ಅಡಿಕೆಗೆ ಮಾರುಕಟ್ಟೆಯಲ್ಲಿ ಬೇಡಿಕೆ ಸೃಷ್ಟಿಯಾಗಿದ್ದು, ಧಾರಣೆ ಇನ್ನಷ್ಟು ಏರುವ ಸಾಧ್ಯತೆಗಳ ಬಗ್ಗೆ ಮಾರುಕಟ್ಟೆ ಮೂಲಗಳು ಸುಳಿವು ನೀಡಿವೆ. ಹೀಗಾಗಿ ಹೊರ ಮಾರು ಕಟ್ಟೆ ಮತ್ತು ಸಹಕಾರ ಸಂಸ್ಥೆ ಗಳ ನಡುವೆ ಧಾರಣೆ ಏರಿಕೆಯ ಪೈಪೋಟಿ ಉಂಟಾಗುವ ನಿರೀಕ್ಷೆ ಬೆಳೆಗಾರರದ್ದು.

ಕ್ಯಾಂಪ್ಕೋಗೆ ಹೋಲಿಸಿದರೆ ಹೊರ ಮಾರುಕಟ್ಟೆಯಲ್ಲಿ ಡಬ್ಬಲ್ ಚೋಲ್, ಸಿಂಗಲ್ ಚೋಲ್ ಧಾರಣೆ ಹೆಚ್ಚಿತ್ತು. ಸೆ. 11ರಂದು ಕ್ಯಾಂಪೋ ಮಾರುಕಟ್ಟೆ ಯಲ್ಲಿ ಸಿಂಗಲ್ ಚೋಲ್ ಕೆ.ಜಿ.ಗೆ 420 ರೂ. ಇದ್ದರೆ, ಡಬ್ಬಲ್ ಚೋಲ್ 500 ರೂ. ಇತ್ತು. ಹೊರ ಮಾರುಕಟ್ಟೆಯಲ್ಲಿ ಸಿಂಗಲ್ ಚೋಲ್ 425 ರೂ. ಇದ್ದರೆ, ಡಬ್ಬಲ್ ಚೋಲ್ 505 ರೂ. ತನಕ ಇತ್ತು. ಹೊಸ ಅಡಿಕೆ ಧಾರಣೆ 330 ರೂ.ಗಳಿಂದ 340 ರೂ. ತನಕ ಕಂಡುಬಂದಿದೆ.

ಕೆಲವು ತಿಂಗಳುಗಳ ಹಿಂದೆ ಹಸಿ ಕೊಕ್ಕೊ ಧಾರಣೆ ಕೆ.ಜಿ.ಗೆ 300 ರೂ. ಗಡಿ ದಾಟಿತ್ತು. ಆದರೆ ಪ್ರಸ್ತುತ 90 100 ರೂ. ಆಸುಪಾಸಿನಲ್ಲಿದೆ. 1,000 ರೂ. ತಲುಪಿದ್ದ ಒಣ ಕೊಕ್ಕೊ ಧಾರಣೆ 550 ರೂ. ನಲ್ಲಿದೆ. ಕಾಳುಮೆಣಸು ಧಾರಣೆಯು 615 ರೂ. ಇದ್ದು, ಕಳೆದ ಆರು ತಿಂಗಳಿನಿಂದ ಸ್ಥಿರವಾಗಿದೆ. ರಬ್ಬರ್ ಧಾರಣೆ ಕೂಡ ನಿರೀಕ್ಷಿತ ಮಟ್ಟದಲ್ಲಿ ಕಂಡುಬಂದಿಲ್ಲ. ತೆಂಗಿನಕಾಯಿಗೆ ಬೇಡಿಕೆ ಇದ್ದರೂ ದರ ನಿಗದಿಯಲ್ಲಿ ತಾರತಮ್ಯ ನೀತಿ ಕಂಡುಬಂದಿದೆ. ಹೀಗಾಗಿ ಈಗ ಬೆಳೆಗಾರರ ಪಾಲಿಗೆ ಅಡಿಕೆ ಮಾತ್ರ ಒಂದಷ್ಟು ಭರವಸೆ ಮೂಡಿಸಿದೆ.

ಕಳೆದ ವರ್ಷದ ಫಸಲು ನಷ್ಟದ ಜತೆ ಈ ಬಾರಿಯೂ ನಿರೀಕ್ಷಿತ ಫಸಲು ಇಲ್ಲದ ಕಾರಣ ಚಾಲಿ ಅಡಿಕೆಯ ಕೊರತೆ ಉಂಟಾಗಿದೆ. ಅಡಿಕೆ ಆಧಾರಿತ ಉತ್ಪನ್ನಗಳನ್ನು ತಯಾರಿಸುವ ರಾಜ್ಯಗಳಿಂದ ಚಾಲಿ ಅಡಿಕೆಗೆ ಹೆಚ್ಚು ಬೇಡಿಕೆ ಕಂಡು ಬಂದಿದ್ದು, ನಿರೀಕ್ಷೆಗೆ ತಕ್ಕಂತೆ ಪೂರೈಕೆಗೆ ಇಲ್ಲಿ ಅಡಿಕೆ ಸಿಗುತ್ತಿಲ್ಲ.

ಹೀಗಾಗಿ ಕೆಲವೆಡೆ ಖುದ್ದಾಗಿ ವ್ಯಾಪಾರಿಗಳು ಬೆಳೆಗಾರರಿಗೆ ಕರೆ ಮಾಡಿ ಅಡಿಕೆ ನೀಡುವಂತೆ ವಿನಂತಿಸುತ್ತಿರುವ ಮಾಹಿತಿ ಇದೆ. ಧಾರಣೆ ಇನ್ನಷ್ಟು ಏರಿಕೆಯಾಗುವ ನಿರೀಕ್ಷೆಯಲ್ಲಿರುವ ಬೆಳೆಗಾರರು ಏಕಾಏಕಿ ಅಡಿಕೆ ಮಾರಾಟ ಮಾಡುವ ಬದಲು ಕಾದು ನೋಡುವ ತಂತ್ರ ಅನುಸರಿಸಿದ್ದು, ಇದರಿಂದ ಮಾರುಕಟ್ಟೆಯಲ್ಲಿ ಮತ್ತಷ್ಟು ಕೊರತೆ ಉಂಟಾಗಲಿದೆ.














Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget