ಸಮೀಕ್ಷೆಗಳ ಸಮೀಕ್ಷೆ ಪ್ರಕಾರ 'ಮಹಾಯುತಿ'ಗೆ ಭರ್ಜರಿ ಜಯ, ಎಂವಿಎ ಧೂಳೀಪಟ!

 


ಬಹುನಿರೀಕ್ಷಿತ ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯ ಮತದಾನ ಮುಗಿದಿದ್ದು, ಚುನಾವಣೋತ್ತರ ಸಮೀಕ್ಷೆಗಳು ಒಂದೊಂದಾಗಿ ಹೊರಬೀಳಲು ಆರಂಭಿಸಿವೆ. ಹೆಚ್ಚಿನ ಸಮೀಕ್ಷೆಗಳು ರಾಜ್ಯದಲ್ಲಿ ಬಿಜೆಪಿ ನೇತೃತ್ವದ 'ಮಹಾಯುತಿ' ಮೈತ್ರಿಕೂಟ ಅಧಿಕಾರಕ್ಕೆ ಬರಲಿದೆ ಎಂದು ಹೇಳಿವೆ.

288 ಸದಸ್ಯ ಬಲದ ಮಹಾರಾಷ್ಟ್ರ ವಿಧಾನಸಭೆಗೆ ನವೆಂಬರ್‌ 20ರಂದು ಬುಧವಾರ ಒಂದೇ ಹಂತದಲ್ಲಿ ಮತದಾನ ನಡೆದಿದ್ದು, ರಾಜ್ಯದ 9.70 ಕೋಟಿ ಮತದಾರರು 4,136 ಅಭ್ಯರ್ಥಿಗಳ ಭವಿಷ್ಯ ಬರೆದಿದ್ದಾರೆ.

ಈ ಚುನಾವಣೆಯಲ್ಲಿ ಬಿಜೆಪಿ 148, ಕಾಂಗ್ರೆಸ್‌ 103, ಶಿವಸೇನೆ (ಉದ್ಧವ್‌ ಬಣ) 89, ಶಿವಸೇನೆ (ಶಿಂಧೆ ಬಣ) 80, ಎನ್‌ಸಿಪಿ (ಶರದ್ಚಂದ್ರ ಪವಾರ್‌ ಬಣ) 87, ಎನ್‌ಸಿಪಿ (ಅಜಿತ್‌ ಪವಾರ್‌ ಬಣ) 53 ಕ್ಷೇತ್ರಗಳಲ್ಲಿ ಸ್ಪರ್ಧಿಸಿವೆ.



[ * ಮಹಾಯುತಿ - ಬಿಜೆಪಿ + ಶಿವಸೇನೆ (ಶಿಂಧೆ ಬಣ) + ಎನ್‌ಸಿಪಿ (ಅಜಿತ್‌ ಪವಾರ್‌ ಬಣ), ** ಮಹಾವಿಕಾಸ್‌ ಅಘಾಡಿ - ಕಾಂಗ್ರೆಸ್‌ + ಶಿವಸೇನೆ (ಉದ್ಧವ್‌ ಬಣ) + ಎನ್‌ಸಿಪಿ (ಶರದ್ಚಂದ್ರ ಪವಾರ್‌ ಬಣ)]


ಮಹಾಯುತಿ- ಮಹಾವಿಕಾಸ್‌ ಅಘಾಡಿ ನಡುವೆ ಫೈಟ್‌


ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಮಹಾಯುತಿ ಹಾಗೂ ಕಾಂಗ್ರೆಸ್‌ ನೇತೃತ್ವದ ಮಹಾವಿಕಾಸ್‌ ಅಘಾಡಿ ನಡುವೆ ನೇರ ಹಣಾಹಣಿ ಇದೆ. ಆದರೆ, ಸಣ್ಣಪುಟ್ಟ ಪಕ್ಷಗಳನ್ನೂ ಉಪೇಕ್ಷಿಸುವಂತಿಲ್ಲ. ಇವೂ ನಿರ್ಣಾಯಕ ಪಾತ್ರವಹಿಸುವ ನಿರೀಕ್ಷೆಯಿದೆ.

ಪ್ರಾದೇಶಿಕ ಪಕ್ಷಗಳು ಹಾಗೂ ಕಣದಲ್ಲಿರುವ ವಿವಿಧ ಪಕ್ಷಗಳ ಬಂಡಾಯ ಅಭ್ಯರ್ಥಿಗಳ ಸೇರಿ 2,086 ಪಕ್ಷೇತರರು ಮತ ವಿಭಜನೆಗೆ ದಾರಿ ಮಾಡಿಕೊಡುವ ಸಾಧ್ಯತೆ ಇದೆ. ಮ್ಯಾಜಿಕ್‌ ಸಂಖ್ಯೆ 145ನ್ನು ದಾಟುವ ಉಭಯ ಮೈತ್ರಿಕೂಟಗಳ ಹೋರಾಟಕ್ಕೆ ಸ್ಥಳೀಯ ಪಕ್ಷಗಳು, ಪಕ್ಷೇತರ ಅಭ್ಯರ್ಥಿಗಳು ಅಡ್ಡಗಾಲಾಗುವ ಸಂಭವವಿದೆ.

ಕಣದಲ್ಲಿರುವ ಪ್ರಮುಖ ಅಭ್ಯರ್ಥಿಗಳು


ಮುಖ್ಯಮಂತ್ರಿ ಏಕನಾಥ್‌ ಶಿಂಧೆ (ಕೊಪ್ರಿ-ಪಚ್ಚಕ್ಕಾಡಿ), ಡಿಸಿಎಂ ದೇವೇಂದ್ರ ಫಡ್ನವಿಸ್‌ (ನಾಗಪುರ ನೈರುತ್ಯ), ಡಿಸಿಎಂ ಅಜಿತ್‌ ಪವಾರ್‌ (ಬಾರಾಮತಿ), ಮಿಲಿಂದ್‌ ದಿಯೋರಾ (ವರ್ಲಿ), ಆದಿತ್ಯ ಠಾಕ್ರೆ (ವರ್ಲಿ), ಚಂದ್ರಶೇಖರ್‌ ಬಾವಾಂಕುಲೆ (ಕಾಮ್ತಿ), ನವಾಬ್‌ ಮಲಿಕ್‌ (ಮಂಖುರ್ದ್‌ ಶಿವಾಜಿನಗರ), ಪೃಥ್ವಿರಾಜ್‌ ಚೌಹಾಣ್‌ (ಕರದ್‌ ದಕ್ಷಿಣ), ಛಗನ್‌ ಭುಜಬಲ್‌ (ಯೆವ್ಲಾ)

ಚುನಾವಣೆಯಲ್ಲಿ ಗ್ಯಾರಂಟಿಗಳ ಅಬ್ಬರ


ಮಹಾರಾಷ್ಟ್ರ ಚುನಾವಣೆಯಲ್ಲಿ ಎಲ್ಲಾ ರಾಜಕೀಯ ಪಕ್ಷಗಳೂ ಭರಪೂರ ಉಚಿತ ಹಾಗೂ ಗ್ಯಾರಂಟಿ ಯೋಜನೆ ಘೋಷಣೆ ಮಾಡಿದ್ದವು. ಮಹಿಳೆಯರಿಗೆ ಮಾಸಿಕ ಆರ್ಥಿಕ ನೆರವು, ನಿರುದ್ಯೋಗಿ ಯುವಕರಿಗೆ ಭತ್ಯೆ, ರೈತರ ಸಾಲ ಮನ್ನಾ, ಜಾತಿಗಣತಿ ವಿಷಯ ಸೇರಿದಂತೆ 25ಕ್ಕೂ ಹೆಚ್ಚು ಭರವಸೆಗಳ ಮಹಾಪೂರವನ್ನೇ ಜನರ ಮುಂದೆ ಹರಿಸಿವೆ. ಮತದಾರರ ಪ್ರಭುಗಳು ಯಾರ ಗ್ಯಾರಂಟಿಗೆ ಮತ ನೀಡುತ್ತಾರೆ ಎನ್ನುವ ಕುತೂಹಲಕ್ಕೆ ನವೆಂಬರ್‌ 23ರಂದು ಶನಿವಾರ ಉತ್ತರ ಸಿಗಲಿದೆ. ಅಂದು ಮಹಾರಾಷ್ಟ್ರ ಹಾಗೂ ಜಾರ್ಖಂಡ್‌ ವಿಧಾನಸಭೆ ಚುನಾವಣೆಗಳ ಮತ ಎಣಿಕೆ ನಡೆಯಲಿದೆ.

ಕಳೆದ ಚುನಾವಣೆಯಲ್ಲಿ ಏನಾಗಿತ್ತು?


2019ರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಹಾಗೂ ಶಿವಸೇನೆ ಒಟ್ಟಾಗಿ ಚುನಾವಣೆ ಎದುರಿಸಿದ್ದವು. ಇದರಲ್ಲಿ ಬಿಜೆಪಿ 105 ಸ್ಥಾನಗಳಲ್ಲಿ ಗೆಲುವು ಸಾಧಿಸಿದರೆ, ಶಿವಸೇನೆ 56ರಲ್ಲಿ ಜಯಭೇರಿ ಬಾರಿಸಿತ್ತು. ಎನ್‌ಸಿಪಿ 54 ಹಾಗೂ ಕಾಂಗ್ರೆಸ್‌ 44ರಲ್ಲಿ ಜಯ ಗಳಿಸಿದರೆ, ಎಐಎಂಐಎಂ2 ಹಾಗೂ ಎಂಎನ್‌ಎಸ್‌1ರಲ್ಲಿ ಜಯಭೇರಿ ಬಾರಿಸಿದ್ದವು.


ಫಲಿತಾಂಶದ ಬಳಿಕ ಸಿಎಂ ಹುದ್ದೆಗೆ ಬೇಡಿಕೆ ಇಟ್ಟು ಬಿಜೆಪಿ ತೆಕ್ಕೆಯಿಂದ ಹೊರಬಂದಿದ್ದ ಶಿವಸೇನೆ ಕಾಂಗ್ರೆಸ್‌ ಹಾಗೂ ಎನ್‌ಸಿಪಿ ಜೊತೆ ಸೇರಿ ಸರಕಾರ ರಚಿಸಿತ್ತು. ಉದ್ಧವ್‌ ಠಾಕ್ರೆ ಸಿಎಂ ಆದರು. ಬಳಿಕ ರಾಜ್ಯ ರಾಜಕಾರಣದಲ್ಲಿ ಭಾರೀ ಬದಲಾವಣೆಗಳು ನಡೆದು ಏಕನಾಥ್‌ ಶಿಂಧೆ ಬಣ ಶಿವಸೇನೆಯಿಂದ ಹೊರಬಂದು ಬಿಜೆಪಿ ಜೊತೆ ಕೈ ಜೋಡಿಸಿದರೆ, ಅಜಿತ್‌ ಪವಾರ್‌ ಬಣವೂ ಎನ್‌ಸಿಪಿಯಿಂದ ಹೊರಬಂದಿತ್ತು. ಹೀಗೆ ಏಕನಾಥ್‌ ಶಿಂಧೆ ಮುಖ್ಯಮಂತ್ರಿ ಆಗಿದ್ದರು.

Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget