ಬೆಂಗಳೂರು: ರಾಜ್ಯದಲ್ಲಿ ಇಂದು ಕನ್ನಡ ರಾಜ್ಯೋತ್ಸವ ಆಚರಿಸಲಾಗುತ್ತಿದೆ.
ಈ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ, ಮುಖ್ಯಮಂತ್ರಿ ಸಿದ್ದರಾಮಯ್ಯ, ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಹಾಗೂ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ಅನೇಕರು ಕರ್ನಾಟಕದ ಜನತೆಗೆ ಶುಭ ಹಾರೈಸಿದ್ದಾರೆ.
'ಕನ್ನಡ ರಾಜ್ಯೋತ್ಸವವು ಅತ್ಯಂತ ವಿಶೇಷವಾದ ಸಂದರ್ಭವಾಗಿದ್ದು, ಇದು ಕರ್ನಾಟಕದ ಅನುಕರಣೀಯ ಸಂಸ್ಕೃತಿ ಮತ್ತು ಸಂಪ್ರದಾಯಗಳನ್ನು ಗುರುತಿಸುತ್ತದೆ. ರಾಜ್ಯವು ಮಹಾನ್ ವ್ಯಕ್ತಿಗಳನ್ನು ಪಡೆದಿದ್ದು, ಅವರು ಎಲ್ಲಾ ಕ್ಷೇತ್ರಗಳಲ್ಲಿ ಅಭಿವೃದ್ಧಿ ಮತ್ತು ನಾವೀನ್ಯತೆಗೆ ಶಕ್ತಿ ತುಂಬುತ್ತಿದ್ದಾರೆ. ಕರ್ನಾಟಕದ ಜನರು ಸದಾ ಸಂತೋಷ ಮತ್ತು ಯಶಸ್ಸಿನಿಂದ ಕೂಡಿರಲಿ' ಎಂದು ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.
'ಕನ್ನಡ ಕನ್ನಡಿಗರ ಹೃದಯ ಭಾಷೆಯಷ್ಟೇ ಅಲ್ಲ, ಜ್ಞಾನ - ವಿಜ್ಞಾನ - ತಂತ್ರಜ್ಞಾನದ ಭಾಷೆಯಾಗಿಯೂ ಜಾಗತಿಕ ಹೆಮ್ಮೆಯಾಗಬೇಕು ಎನ್ನುವ ಸಂಕಲ್ಪ ನಮ್ಮದು.
ಸಿರಿಗನ್ನಡಂ ಗೆಲ್ಲೆ, ಸಿರಿಗನ್ನಡಂ ಬಾಳೆ ಎನ್ನುವ ದೀಕ್ಷೆಯು ಸಿರಿಗನ್ನಡವು ಜಗದೋದ್ಧಾರಕ್ಕೆ ಎನ್ನುವ ಹಂಬಲದ ಮೂಲಕ ಮತ್ತಷ್ಟು ಮಗದಷ್ಟು ಕಸುವು ಪಡೆದು, ವಿಶ್ವ ವ್ಯಾಪಿಯಾಗಲಿ' ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾರೈಸಿದ್ದಾರೆ.
'ಕನ್ನಡಕ್ಕಾಗಿ ಕೈ ಎತ್ತು, ನಿನ್ನ ಕೈ ಕಲ್ಪವೃಕ್ಷವಾಗುತ್ತದೆ. ಕನ್ನಡಕ್ಕಾಗಿ ಕೊರಳೆತ್ತು. ಅಲ್ಲಿ ಪಾಂಚಜನ್ಯ ಮೂಡುತ್ತದೆ. ಕನ್ನಡಕ್ಕಾಗಿ ಕಿರುಬೆರಳೆತ್ತಿದರೂ ಸಾಕು ಅದು ಗೋವರ್ಧನಗಿರಿಧಾರಿಯಾಗುತ್ತದೆ. - ರಾಷ್ಟ್ರಕವಿ ಕುವೆಂಪು.
ನಾಡಿನ ಸಮಸ್ತ ಜನತೆಗೆ ಕರ್ನಾಟಕ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು ಎಂದು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.
ಕನ್ನಡ ನಾಡು, ನುಡಿ, ಸಂಸ್ಕೃತಿ, ಇತಿಹಾಸ, ಪರಂಪರೆಗಳು ಸದಾ ಬೆಳಗಲಿ, ಸಮೃದ್ಧ ಕನ್ನಡ ನಾಡು ನಿರ್ಮಾಣವಾಗಲಿ.
ನಾಡಿನ ಸಮಸ್ತ ಜನತೆಗೆ ಕನ್ನಡ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು' ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.
Post a Comment