ಬೆಂಗಳೂರು: “ಕಾಂಗ್ರೆಸ್ ಪಕ್ಷಕ್ಕೆ ತ್ಯಾಗದ ಇತಿಹಾಸವೇ ಇದೆ.
ಸೋನಿಯಾ ಗಾಂಧಿ ಅವರು ಪ್ರಧಾನಿಯಾಗುವ ಅವಕಾಶವನ್ನು ಎರಡು ಬಾರಿ ನಿರಾಕರಿಸಿದರು. ಸಮಯ ಬಂದಾಗ ನಮ್ಮ ಸರ್ಕಾರದ ಸಚಿವರೂ ತಮ್ಮ ಸ್ಥಾನದ ತ್ಯಾಗಕ್ಕೆ ಸಿದ್ಧರಿರಬೇಕು' ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದರು.
ಕೆಪಿಸಿಸಿ ಕಚೇರಿಯಲ್ಲಿ ನಡೆದ ಭಾರತದ ಸಂವಿಧಾನ ಅಂಗೀಕಾರ ದಿನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಗ್ರಾಮ ಪಂಚಾಯಿತಿ ಅಧ್ಯಕ್ಷರನ್ನೇ ಅಧಿಕಾರದಿಂದ ಕೆಳಗೆ ಇಳಿಸಲು ಹರಸಾಹಸ ಮಾಡಬೇಕಿದೆ. ಮಹಾತ್ಮ ಗಾಂಧಿ, ಸೋನಿಯಾ, ರಾಹುಲ್ ಅವರಂತೆ ಎಲ್ಲರೂ ಯೋಚಿಸಬೇಕು. ಆಗಮಾತ್ರ ಪಕ್ಷಕ್ಕೆ ಬಲತುಂಬಲು ಸಾಧ್ಯ ಎಂದರು.
ಕಾರ್ಯಕ್ರಮದ ನಂತರ 'ಸಚಿವರ ತ್ಯಾಗ'ದ ಮಾತು ಹಾಗೂ ದೆಹಲಿ ಭೇಟಿ ಕುರಿತು ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, “ಸಚಿವರು ತಕ್ಷಣಕ್ಕೆ ತಮ್ಮ ಸ್ಥಾನ ಬಿಡಬೇಕು ಎಂದು ಹೇಳಿಲ್ಲ. ತ್ಯಾಗಕ್ಕೆ ಸಿದ್ಧವಿರಬೇಕು ಎಂದು ಕಿವಿಮಾತು ಹೇಳಿರುವೆ. ಅದಕ್ಕೆ ಇನ್ನೂ ಸಮಯಾವಕಾಶವಿದೆ' ಎಂದು ತಿಳಿಸಿದರು.
'ಸಚಿವ ಸಂಪುಟ ಪುನರಚನೆ ವಿಚಾರ ಗೊತ್ತಿಲ್ಲ. ಗೊತ್ತಾದಾಗ ಮಾತನಾಡುತ್ತೇನೆ. ಈ ಕುರಿತು ಹೆಚ್ಚಿನ ಮಾಹಿತಿಗೆ ಮುಖ್ಯಮಂತ್ರಿ ಹಾಗೂ ಎಐಸಿಸಿ ಪ್ರಧಾನ ಕಾರ್ಯದರ್ಶಿಗಳನ್ನೇ ಕೇಳಿ' ಎಂದರು.
'ಮಹದಾಯಿ ವಿಷಯ ಚರ್ಚಿಸಲು ಕೇಂದ್ರ ಸಚಿವರ ಭೇಟಿಗಾಗಿ ದೆಹಲಿ ಪ್ರವಾಸಕ್ಕೆ ತೆರಳುತ್ತಿರುವೆ. ಬೆಳಗಾವಿ ಕಾಂಗ್ರೆಸ್ ಅಧಿವೇಶನದ ಶತಮಾನೋತ್ಸವ ಕಾರ್ಯಕ್ರಮದ ರೂಪುರೇಷೆ ಕುರಿತು ಪಕ್ಷದ ಹೈಕಮಾಂಡ್ ಜತೆ ಚರ್ಚೆ ನಡೆಸುವೆ. ಹಾಗೆಯೇ, ಹೇಮಂತ್ ಸೊರೇನ್ ಅವರ ಪ್ರಮಾಣ ವಚನ ಕಾರ್ಯಕ್ರಮದಲ್ಲಿ ಭಾಗವಹಿಸುವೆ. ದೆಹಲಿ ಭೇಟಿಗೆ ಬೇರೆ ಅರ್ಥ ಕಲ್ಪಿಸುವ ಅಗತ್ಯವಿಲ್ಲ' ಎಂದು ಪ್ರತಿಕ್ರಿಯಿಸಿದರು.
'ಕೊಟ್ಟ ಮಾತಿನಂತೆ ಕೇಂದ್ರ ಸಚಿವ ಪ್ರಲಾದ ಜೋಶಿ ಅವರು ಮಹದಾಯಿಗೆ, ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ. ದೇವೇಗೌಡ ಅವರು ಮೇಕೆದಾಟು ಯೋಜನೆಗೆ ಕೇಂದ್ರದ ಅನುಮತಿ ಕೊಡಿಸಬೇಕು. ರಾಜ್ಯದ ಒಳಿತಾಗಿ ಅವರ ಸಹಕಾರ ಬಳಸಿಕೊಳ್ಳಲು ಸಿದ್ಧ' ಎಂದರು.
Post a Comment