ಲಕ್ನೋ: ಉತ್ತರಪ್ರದೇಶದಲ್ಲಿ ಉಪಚುನಾವಣೆ ವೇಳೆ ಅವ್ಯವಹಾರ ನಡೆದಿದೆ ಎಂದು ಆರೋಪಿಸಿರುವ ಬಿಎಸ್ಪಿ ವರಿಷ್ಠೆ ಮಾಯಾವತಿ ‘ನಕಲಿ ಮತದಾನ’ ತಡೆಯಲು ಚುನಾವಣಾ ಆಯೋಗ ಪರಿಣಾಮಕಾರಿ ಕ್ರಮಗಳನ್ನು ಕೈಗೊಳ್ಳುವವರೆಗೆ ಭವಿಷ್ಯದಲ್ಲಿ ತಮ್ಮ ಪಕ್ಷ ಉಪಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ಹೇಳಿದ್ದಾರೆ.
ಲಕ್ನೋದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಮಾಯಾವತಿ, ನಕಲಿ ಮತದಾನ ಸಂಪೂರ್ಣವಾಗಿ ನಿಲ್ಲಿಸಲು ಚುನಾವಣಾ ಆಯೋಗ ಕ್ರಮಕೈಗೊಳ್ಳುವವರೆಗೆ ಬಿಎಸ್ಪಿ ಉಪಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ. ಮತದಾನದ ವೇಳೆ ಯಂತ್ರೋಪಕರಣಗಳ ದುರ್ಬಳಕೆ ಮಾಡಲಾಗಿದೆ. ಬಿಎಸ್ಪಿಯನ್ನು ದುರ್ಬಲಗೊಳಿಸಲು ಷಡ್ಯಂತ್ರ ರೂಪಿಸಲಾಗುತ್ತಿದ್ದು, ಈ ಬಗ್ಗೆ ಎಲ್ಲಾ ಪಕ್ಷಗಳು ಕೆಲಸ ಮಾಡುತ್ತಿವೆ ಎಂದು ಹೇಳಿದ್ದಾರೆ.
ಇದೇ ವೇಳೆ ಆಝಾದ್ ಸಮಾಜ ಪಕ್ಷದ ಸಂಸ್ಥಾಪಕ ಮತ್ತು ಲೋಕಸಭಾ ಸಂಸದ ಚಂದ್ರಶೇಖರ್ ವಿರುದ್ಧ ವಾಗ್ದಾಳಿ ನಡೆಸಿದ ಮಾಯಾವತಿ, ಚುನಾವಣೆಯಲ್ಲಿ ಸಣ್ಣ ಪಕ್ಷಗಳನ್ನು ಬೆಂಬಲಿಸದಂತೆ ದಲಿತ ಸಮುದಾಯಕ್ಕೆ ಆಗ್ರಹಿಸಿದ್ದಾರೆ. ಈ ಪಕ್ಷಗಳು ಇತರ ಪಕ್ಷಗಳ ಅಣತಿಯಂತೆ ಕಾರ್ಯನಿರ್ವಹಿಸುತ್ತಿದೆ ಎಂದು ವಾಗ್ಧಾಳಿ ನಡೆಸಿದ್ದಾರೆ. ಉತ್ತರಪ್ರದೇಶ ವಿಧಾನಸಭಾ ಉಪಚುನಾವಣೆಯಲ್ಲಿ ಎಲ್ಲಾ ಒಂಬತ್ತು ಸ್ಥಾನಗಳಲ್ಲಿ ಸ್ಪರ್ಧಿಸಿದ್ದ ಬಿಎಸ್ಪಿ ಯಾವುದೇ ಸ್ಥಾನವನ್ನು ಗೆದ್ದುಕೊಂಡಿಲ್ಲ ಮಾತ್ರವಲ್ಲ ಏಳು ಸ್ಥಾನಗಳಲ್ಲಿ ಠೇವಣಿಯನ್ನು ಕಳೆದುಕೊಂಡಿದೆ.
Post a Comment