ವಾಷಿಂಗ್ಟನ್: ಅಮೆರಿಕದ ಅಧ್ಯಕ್ಷೀಯ ಚುನಾವಣೆಗೆ ಮಂಗಳವಾರ (ನ.5) ಮತದಾನ ನಡೆಯಲಿದೆ. ಕಣದಲ್ಲಿ ಐವರು ಅಭ್ಯರ್ಥಿಗಳಿದ್ದರೂ ಹಾಲಿ ಉಪಾಧ್ಯಕ್ಷೆ ಮತ್ತು ಡೆಮಾಕ್ರಟಿಕ್ ಪಕ್ಷದ ಕಮಲಾ ಹ್ಯಾರಿಸ್ ಮತ್ತು ಮಾಜಿ ಅಧ್ಯಕ್ಷ, ರಿಪಬ್ಲಿಕನ್ ಪಕ್ಷದ ಡೊನಾಲ್ಡ್ ಟ್ರಂಪ್ ನಡುವೆ ಜಿದ್ದಾಜಿದ್ದಿನ ಸ್ಪರ್ಧೆ ಏರ್ಪಟ್ಟಿದೆ.
ಅಮೆರಿಕದ ಜನಗಣತಿ ಬ್ಯೂರೊ ಪ್ರಕಾರ, 15.5 ಕೋಟಿ ಅಮೆರಿಕನ್ನರು ಮತದಾನ ಮಾಡಲು ಅರ್ಹರಾಗಿದ್ದಾರೆ. ನವೆಂಬರ್ 2ರವರೆಗೆ 7.5 ಕೋಟಿಗೂ ಹೆಚ್ಚು ಮಂದಿ ಆನ್‌ಲೈನ್ (ಮೇಲ್-ಇನ್ ವೋಟಿಂಗ್) ಮೂಲಕ ತಮ್ಮ ಹಕ್ಕು ಚಲಾಯಿಸಿದ್ದಾರೆ ಎಂದು ಫ್ಲಾರಿಡಾ ವಿ.ವಿ ನೀಡಿರುವ ಅಂಕಿ ಅಂಶಗಳು ಹೇಳಿವೆ.
ಚುನಾವಣಾ ಪೂರ್ವ ಸಮೀಕ್ಷೆಗಳು ಟ್ರಂಪ್ ಮತ್ತು ಕಮಲಾ ಹ್ಯಾರಿಸ್ ನಡುವೆ ಸಮಬಲದ ಹೋರಾಟ ನಡೆಯಲಿದೆ ಎಂದು ಭವಿಷ್ಯ ನುಡಿದಿವೆ. ಕೆಲವು ಸಮೀಕ್ಷೆಗಳಲ್ಲಿ ಟ್ರಂಪ್ ಕೊಂಚ ಮುನ್ನಡೆ ಅನುಭವಿಸಿದ್ದರೆ, ಇನ್ನೂ ಕೆಲವು ಸಮೀಕ್ಷೆಗಳ ಪ್ರಕಾರ ಕಮಲಾ ಮುಂದಿದ್ದಾರೆ.
'ನಿರ್ಣಾಯಕ ರಾಜ್ಯ'ಗಳು ಎಂದು ಕರೆಯಲಾಗುತ್ತಿರುವ ಏಳು ರಾಜ್ಯಗಳು (ಪೆನ್ಸಿಲ್ವೇನಿಯಾ, ಮಿಷಿಗನ್, ವಿಸ್ಕಾನ್‌ಸಿನ್, ನೆವಾಡ, ಅರಿಜೋನಾ, ಜಾರ್ಜಿಯಾ ಮತ್ತು ಉತ್ತರ ಕೆರೊಲಿನಾ) ಈ ಚುನಾವಣೆಯಲ್ಲಿ ನಿರ್ಣಾಯಕವಾಗಿದ್ದು, ಇಬ್ಬರೂ ಅಭ್ಯರ್ಥಿಗಳು ಈ ರಾಜ್ಯಗಳಲ್ಲಿ ಮತಯಾಚನೆ ಮಾಡುವುದರ ಮೂಲಕ ಕೊನೆ ಹಂತದಲ್ಲಿ ಮತದಾರರನ್ನು ಸೆಳೆಯುವ ಪ್ರಯತ್ನ ಮಾಡಿದ್ದಾರೆ.
ನ್ಯೂಯಾರ್ಕ್ ಟೈಮ್ಸ್/ಸಿಯಾನ ನಡೆಸಿರುವ ಅಂತಿಮ ಸಮೀಕ್ಷೆಯಲ್ಲಿ ಈ ರಾಜ್ಯಗಳ ಪೈಕಿ, ಅರಿಜೋನಾ ಬಿಟ್ಟು ಉಳಿದೆಡೆ ಕಮಲಾ ಹ್ಯಾರಿಸ್ ಅವರು ಅಲ್ಪ ಅಂತರದಿಂದ ಟ್ರಂಪ್ ಅವರಿಗಿಂತ ಮುಂದಿದ್ದಾರೆ.
ರಾಷ್ಟ್ರೀಯ ಮಟ್ಟದಲ್ಲಿ ನಡೆದ ಸಮೀಕ್ಷೆಯಲ್ಲಿ ಶೇ 46 ಮಂದಿ ಕಮಲಾ ಹ್ಯಾರಿಸ್ ಪರ ಒಲವು ತೋರಿದ್ದರೆ, ಶೇ 43ರಷ್ಟು ಮಂದಿ ಟ್ರಂಪ್ ಅಧ್ಯಕ್ಷರಾಗುವುದನ್ನು ಬಯಸಿದ್ದಾರೆ.
Post a Comment