ವಯನಾಡು: ವಯನಾಡು ಲೋಕಸಭಾ ಉಪಚುನಾವಣೆ ಹಿನ್ನೆಲೆ ಭೂಕುಸಿತ ಪೀಡಿತ ಪ್ರದೇಶದಲ್ಲಿ ಸ್ಥಾಪಿಸಿದ್ದ ಮತಗಟ್ಟೆ ಭಾವುಕ ದೃಶ್ಯಗಳಿಗೆ ಸಾಕ್ಷಿಯಾಗಿದೆ.
ವಯನಾಡು ದುರಂತದ ನಂತರ ಭೂಕುಸಿತದಿಂದ ಬದುಕುಳಿದವರು ಬುಧವಾರ ತಮ್ಮ ನೆರೆಹೊರೆಯವರು ಮತ್ತು ಆತ್ಮೀಯರೊಂದಿಗೆ ಮತಗಟ್ಟೆಯಲ್ಲಿ ಮತ್ತೆ ಸೇರಿದಾಗ ಭಾವನಾತ್ಮಕ ಸನ್ನಿವೇಶ ನಿರ್ಮಾಣವಾಗಿತ್ತು. ಮತದಾನಕ್ಕೆ ಬಂದವರು ಒಬ್ಬರನ್ನೊಬ್ಬರು ತಬ್ಬಿಕೊಂಡು ಭೂಕುಸಿತದ ಮೊದಲು ತಾವು ಹೇಗೆ ಬದುಕುತ್ತಿದ್ದೆವು ಎಂಬುವುದನ್ನು ನೆನಪಿಸಿಕೊಂಡು ಭಾವುಕರಾಗಿದ್ದಾರೆ.
ಭೂಕುಸಿತಕ್ಕೆ ಒಳಗಾದ ಮತದಾರರನ್ನು ಮತಗಟ್ಟೆಗಳಿಗೆ ಕರೆದೊಯ್ಯಲು ವ್ಯವಸ್ಥೆ ಮಾಡಲಾಗಿತ್ತು. ಭೂಕುಸಿತದಿಂದ ಸಂಪೂರ್ಣ ನಾಶವಾಗಿರುವ ಪುಂಚಿರಿಮಟ್ಟಂ, ಚೂರಲ್ಮಲಾ ಮತ್ತು ಮುಂಡಕ್ಕೆ ಗ್ರಾಮಗಳ ನಿವಾಸಿಗಳು ಧರ್ಮ ಭೇದವಿಲ್ಲದೆ ಪ್ರತಿ ಹಬ್ಬವನ್ನು ಒಟ್ಟಾಗಿ ಹೇಗೆ ಆಚರಿಸುತ್ತಿದ್ದರು ಎಂದು ಹೇಳಿಕೊಂಡು ವೃದ್ಧರೊಬ್ಬರು ಬಸ್ ನಲ್ಲಿ ಕಣ್ಣೀರಿಟ್ಟಿದ್ದಾರೆ. ಈ ವೇಳೆ ಅವರ ಸ್ನೇಹಿತರು ಅಳಬೇಡಿ, ಎಲ್ಲವೂ ಸರಿಯಾಗುತ್ತದೆ ಎಂದು ಅಪ್ಪಿಕೊಂಡು ಸಂತೈಸಿದ್ದಾರೆ.
ಭೂಕುಸಿತದಲ್ಲಿ ಬದುಕುಳಿದವರು ಎಲ್ಲೆಲ್ಲೋ ವಾಸಿಸುತ್ತಿದ್ದಾರೆ. ನಾವು ಕೆಲವು ಸಮಯಗಳ ನಂತರ ಅವರನ್ನು ನೋಡಿದಾಗ, ನಾವು ಮೊದಲು ಕೇಳುವುದು ನೀವು ಎಲ್ಲಿ ವಾಸಿಸುತ್ತಿದ್ದೀರಿ ಎಂದಾಗಿದೆ. ನೀವು ಹೇಗಿದ್ದೀರಿ ಎಂದು ಅಲ್ಲ ಎಂದು ಮತಗಟ್ಟೆಗೆ ಬಂದಿದ್ದ ಮಹಿಳೆಯೋರ್ವರು ಮಾಧ್ಯಮಗಳಿಗೆ ತಿಳಿಸಿದ್ದಾರೆ.
ವಯನಾಡು ಭೂಕುಸಿತದಲ್ಲಿ 200ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದಾರೆ. ಮನೆಯನ್ನು ಕಳೆದುಕೊಂಡು ನಿರಾಶ್ರಿತರಾದ ಜನರು ಜಿಲ್ಲೆಯ ನಾನಾ ಭಾಗಗಳಲ್ಲಿ ವಾಸಿಸುತ್ತಿದ್ದಾರೆ.
Post a Comment