ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಹೆಬ್ರಿ ಕಬ್ಬಿನಾಲೆಯ ಸೋಮವಾರ ರಾತ್ರಿ ಎಎನ್‌ಎಫ್ ಹಾಗೂ ನಕ್ಸಲರ ನಡುವೆ ಗುಂಡಿನ ಚಕಮಕಿ ನಡೆದಿದ್ದು ನಕ್ಸಲ್ ಮುಖಂಡ ವಿಕ್ರಂ ಗೌಡ ಹತನಾಗಿದ್ದಾನೆ.
ಮಂಗಳೂರು, ನ.19: ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಹೆಬ್ರಿ ಕಬ್ಬಿನಾಲೆಯ ಸೋಮವಾರ ರಾತ್ರಿ ಎಎನ್‌ಎಫ್ ಹಾಗೂ ನಕ್ಸಲರ ನಡುವೆ ಗುಂಡಿನ ಚಕಮಕಿ ನಡೆದಿದ್ದು ನಕ್ಸಲ್ ಮುಖಂಡ ವಿಕ್ರಂ ಗೌಡ ಹತನಾಗಿದ್ದಾನೆ.
ಕಬ್ಬಿನಾಲೆ ಗ್ರಾಮದ ಸೀತಂಬೈಲು ಎಂಬಲ್ಲಿ ಸೋಮವಾರ ರಾತ್ರಿ ನಕ್ಸಲ್ ಕೂಂಬಿಂಗ್ ಕಾರ್ಯಾಚರಣೆ ನಡೆದಿತ್ತು. ಈ ವೇಳೆ, ಗುಂಡಿನ ಕಾಳಗದಲ್ಲಿ ನಕ್ಸಲ್ ಮುಖಂಡ ವಿಕ್ರಂ ಗೌಡ ಎಂಟರ್ ಆಗಿದೆ ಎಂದು ತಿಳಿದುಬಂದಿದೆ. ಇತ್ತೀಚೆಗೆ ಚಿಕ್ಕಮಗಳೂರು ಜಿಲ್ಲೆಯ ಜಯಪುರ ಪೊಲೀಸ್ ಠಾಣಾ ವ್ಯಾಪ್ತಿಯ ಒಂಟಿ ಮನೆಗೆ ನಕ್ಸಲರು ಭೇಟಿ ನೀಡಿದ ಬಗ್ಗೆ ವರದಿಯಾಗಿತ್ತು. ಕೊಪ್ಪ ತಾಲೂಕಿನ ಯಡಗುಂದ ಗ್ರಾಮಕ್ಕೂ ನಕ್ಸಲರು ಭೇಟಿ ನೀಡಿ, ಅರಣ್ಯ ಒತ್ತುವರಿ ಮತ್ತು ಕಸ್ತೂರಿ ರಂಗನ್ ವರದಿ ಜಾರಿ ವಿಚಾರದಲ್ಲಿ ಚರ್ಚಿಸಿದ್ದಾರೆ ಎನ್ನಲಾಗಿದೆ.
ಈ ಹಿನ್ನೆಲೆಯಲ್ಲಿ ನಕ್ಸಲ್ ವಿರೋಧಿ ಕೂಂಬಿಂಗ್ ಕಾರ್ಯ ಚುರುಕುಗೊಳಿಸಲಾಗಿತ್ತು. ನಿನ್ನೆ ರಾತ್ರಿ ಕಬ್ಬಿನಾಲೆ ಗ್ರಾಮಕ್ಕೆ ದಿನಸಿ ಸಾಮಗ್ರಿ ಪಡೆಯಲು ಐವರಿದ್ದ ನಕ್ಸಲರು ಎಂಟ್ರಿ ಕೊಟ್ಟಿದ್ದರು ಎನ್ನಲಾಗಿದೆ. ಇದೇ ವೇಳೆ, ಗುಂಡಿನ ಚಕಮಕಿ ನಡೆದಿದ್ದು ವಿಕ್ರಂ ಗೌಡ ಬಲಿಯಾಗಿದ್ದರೆ ಇತರ ನಾಲ್ವರು ಪರಾರಿಯಾಗಿದ್ದಾರೆ.
ಕಳೆದ ಸೆಪ್ಟೆಂಬರ್ ತಿಂಗಳಲ್ಲಿ ನಕ್ಸಲ್ ಮುಖಂಡ ವಿಕ್ರಂ ಗೌಡ ಮತ್ತು ಆತನ ಜೊತೆಗಿದ್ದ ಆರು ಮಂದಿ ಪೊಲೀಸರಿಗೆ ಶರಣಾಗಿ ಸಮಾಜದ ಮುಖ್ಯ ವಾಹಿನಿಗೆ ಬರಲಿದ್ದಾರೆಂಬ ವದಂತಿ ಹರಡಿತ್ತು. ಕೇಂದ್ರ ಸರ್ಕಾರದ ಸೂಚನೆಯಂತೆ ಕೇರಳ, ಛತ್ತೀಸ್ತಡ, ಆಂಧ್ರದಲ್ಲಿ ನಕ್ಸಲ್ ವಿರೋಧಿ ಕಾರ್ಯಾಚರಣೆ ತೀವ್ರಗೊಂಡಿದ್ದು ಮತ್ತು ಕಾಡಿನಂಚಿನ ಗ್ರಾಮಗಳಲ್ಲೂ ಬೆಂಬಲ ಸಿಗದೇ ಇದ್ದುದು ಇವರಿಗೆ ಅಳಿವು ಉಳಿವಿನ ಪ್ರಶ್ನೆಯಾಗಿತ್ತು. ಇತ್ತೀಚೆಗೆ ಇದು, ಅದಕ್ಕೂ ಮೊದಲು ಸುಬ್ರಹ್ಮಣ್ಯ ಬಳಿಯ ಕೂಜಿಮಲೆ ಬಳಿ ನಕ್ಸಲರು ಕಾಣಿಸಿಕೊಂಡಿದ್ದರು. ಆದರೆ ಎಎನ್‌ಎಫ್ ಕೂಂಬಿಂಗ್ ನಡೆಸಿದರೂ ಅವರ ಕಣ್ಣಿಗೆ ಬಿದ್ದಿರಲಿಲ್ಲ.
ವಿಕ್ರಂ ಗೌಡ ಕಳೆದ 10 ವರ್ಷಗಳಲ್ಲಿ ಪಶ್ಚಿಮ ಘಟ್ಟದ ನಕ್ಸಲರಿಗೆ ಮುಖಂಡನಾಗಿದ್ದ. 2012 ರಲ್ಲಿ ಕರ್ನಾಟಕ ಭಾಗದಲ್ಲಿ ನಕ್ಸಲ್ ಕಾರ್ಯಾಚರಣೆ ತೀವ್ರಗೊಂಡ ಬಳಿಕ ಕೇರಳದತ್ತ ಪರಾರಿಯಾಗಿದ್ದರು. ಕಳೆದ ವರ್ಷ ವಯನಾಡು ಸೇರಿದಂತೆ ಕೇರಳದಲ್ಲಿ ನಕ್ಸಲರ ವಿರುದ್ಧ ಕಾರ್ಯಾಚರಣೆ ಚುರುಕುಗೊಳಿಸಲಾಗಿತ್ತು. ಆನಂತರ, ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯ ಪಶ್ಚಿಮ ಘಟ್ಟಗಳ ವ್ಯಾಪ್ತಿಯಲ್ಲಿ ನಕ್ಸಲರು ಕಾಣಿಸಿದ್ದರು.
Post a Comment