ಸಂವಿಧಾನ ದಿನ ಕಾರ್ಯಕ್ರಮದಲ್ಲಿ ರಾಷ್ಟ್ರಪತಿಗೆ ರಾಹುಲ್ ಗಾಂಧಿ ಅವರು ಅಗೌರ ತೋರಿದ್ದಾರೆ ಎಂದು ಆರೋಪಿಸಿ ಬಿಜೆಪಿಯು ವಿಡಿಯೋವನ್ನು ಹಂಚಿಕೊಂಡು ಟೀಕಿಸಿದೆ.
ನವದೆಹಲಿ: ಸಂವಿಧಾನ ಅಂಗೀಕರಿಸಿದ 75ನೇ ವರ್ಷದ ನಿಮಿತ್ತ ಸಂಸತ್ತಿನಲ್ಲಿ ಮಂಗಳವಾರ ನಡೆದ ಕಾರ್ಯಕ್ರಮದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಅವರು ಅಗೌರವ ತೋರಿದ್ದಾರೆ ಎಂದು ಬಿಜೆಪಿ ಆರೋಪಿಸಿದೆ.
ಸಂಸತ್ತಿನಲ್ಲಿ ಜರುಗಿದ ಸಂವಿಧಾನ ದಿನದ ಕಾರ್ಯಕ್ರಮದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಗೌರವಿಸಲಿಲ್ಲ ಎಂದು ಆರೋಪಿಸಿ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರನ್ನು ಬಿಜೆಪಿ ತರಾಟೆಗೆ ತೆಗೆದುಕೊಂಡಿದೆ.
ಈ ಘಟನೆಯ ಎರಡು ವಿಡಿಯೊ ತುಣುಕುಗಳನ್ನು ತನ್ನ ಅಧಿಕೃತ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿರುವ ಬಿಜೆಪಿ, "ರಾಹುಲ್ ಗಾಂಧಿಗೆ ಎಷ್ಟು ಅಹಂಕಾರವಿದೆ. ಅವರು ರಾಷ್ಟ್ರಪತಿಗಳಿಗೆ ಕನಿಷ್ಠ ಸೌಜನ್ಯಕ್ಕೂ ನಮಸ್ಕಾರ ಕೂಡ ಮಾಡಿಲ್ಲ. ಕಾರಣ ಮುರ್ಮು ಅವರು ಆದಿವಾಸಿ ಸಮುದಾಯದಿಂದ ಬಂದವರು, ಮಹಿಳೆ ಎಂಬುದು. ಇದು ಕಾಂಗ್ರೆಸ್ ಕುಡಿ ರಾಹುಲ್ ಅವರ ಕನಿಷ್ಠ ಮಟ್ಟದ ಮನಸ್ಥಿತಿ" ಎಂದು ಆಕ್ರೋಶ ಹೊರಹಾಕಿದೆ.
ವಿಡಿಯೋದಲ್ಲಿ ಏನಿದೆ?: ಬಿಜೆಪಿಯು ಹಂಚಿಕೊಂಡಿರುವ ವಿಡಿಯೋದಲ್ಲಿ ಕಾಣುವಂತೆ, ಕಾರ್ಯಕ್ರಮದ ಆರಂಭದಲ್ಲಿ ಸ್ಮರಣಿಕೆಯನ್ನು ನೀಡಿದ ಬಳಿಕ ರಾಷ್ಟ್ರಪತಿ, ಉಪರಾಷ್ಟ್ರಪತಿ, ಪ್ರಧಾನಿ ಸೇರಿ ಎಲ್ಲರೂ ನಿಂತಿದ್ದಾಗ, ರಾಹುಲ್ ಗಾಂಧಿ ಕುರ್ಚಿಯ ಮೇಲೆ ಒಬ್ಬರೇ ಆಸೀನರಾಗುತ್ತಾರೆ. ಇದನ್ನು ಕಂಡ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ರಾಹುಲ್ರನ್ನು ಎಬ್ಬಿಸಲು ಮುಂದಾಗುವಂತೆ ಕಂಡುಬಂದಾಗ ರಾಹುಲ್ ಗಾಂಧಿ ಎದ್ದು ನಿಲ್ಲುತ್ತಾರೆ.
ಬಳಿಕ ಇನ್ನೊಂದು ವಿಡಿಯೋ ತುಣುಕಿನಲ್ಲಿ, ಉಪ ರಾಷ್ಟ್ರಪತಿ ಜಗದೀಪ್ ಧನಕರ್, ಪ್ರಧಾನಿ ನರೇಂದ್ರ ಮೋದಿ ಮತ್ತು ಮಲ್ಲಿಕಾರ್ಜುನ್ ಖರ್ಗೆ ಅವರು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ನಮಸ್ಕರಿಸಿ ಶುಭಾಶಯ ಕೋರುತ್ತಿರುವುದು ಕಂಡು ಬಂದಿದೆ. ಆದರೆ, ರಾಹುಲ್ ಗಾಂಧಿ ಯಾರೊಂದಿಗೂ ಶುಭಾಶಯ ಹಂಚಿಕೊಳ್ಳದೇ, ವೇದಿಕೆಯಿಂದ ಎದ್ದು ಹೋಗಿ ಸ್ವಲ್ಪ ದೂರದಲ್ಲಿ ನಿಲ್ಲುತ್ತಾರೆ. ಅಲ್ಲಿದ್ದ ಯಾರಿಗೂ ಶುಭಾಶಯ ಕೋರದೆ ಇರುವುದನ್ನು ವಿಡಿಯೋ ತೋರಿಸುತ್ತದೆ.
ವಿಡಿಯೋದ ಹಿನ್ನೆಲೆ ಧ್ವನಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ರಾಹುಲ್ ಗಾಂಧಿಯ ನಡೆಯನ್ನು ಟೀಕಿಸುತ್ತಿರುವುದು ಕೇಳಿಸುತ್ತದೆ. "ಕಾಂಗ್ರೆಸ್ ಎಂದಿಗೂ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಗೌರವಿಸಿಲ್ಲ. ರಾಷ್ಟ್ರಪತಿ ನಿಂತಿದ್ದರೂ, ಕಾಂಗ್ರೆಸ್ನ ಯುವರಾಜ ಸೀಟಿನಲ್ಲಿ ಕುಳಿತುಕೊಂಡರು. ಬಳಿಕ ಗೌರವಕ್ಕೆ ನಮಸ್ಕಾರವನ್ನೂ ಮಾಡಲಿಲ್ಲ. ಇದು ರಾಷ್ಟ್ರಪತಿಗಳಿಗೆ ಮಾಡಿದ ಅವಮಾನ" ಎಂದು ಜರಿಯಲಾಗಿದೆ.
Post a Comment