ದುಷ್ಕರ್ಮಿಗಳ ವಿರುದ್ಧ ತಕ್ಷಣ ಕ್ರಮಕ್ಕೆ ಒತ್ತಾಯಿಸಿ ಕೇರಳ ಸಿಎಂಗೆ ಪತ್ರ ಬರೆದ ದ.ಕ. ಸಂಸದರು
ಮಂಗಳೂರು: ಕಾಸರಗೋಡಿನ ಎಡನೀರು ಮಠದ ಶ್ರೀ ಸಚ್ಚಿದಾನಂದ ಭಾರತಿ ತೀರ್ಥ ಸ್ವಾಮೀಜಿ ಕಾರಿನ ಮೇಲೆ ದುಷ್ಕರ್ಮಿಗಳು ದಾಳಿ ನಡೆಸಿರುವುದನ್ನು ಖಂಡಿಸಿರುವ ದಕ್ಷಿಣ ಕನ್ನಡ ಸಂಸದ ಕ್ಯಾ. ಬ್ರಿಜೇಶ್ ಚೌಟ, ತಪ್ಪಿತಸ್ಥರ ವಿರುದ್ದ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ಕೋರಿ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರಿಗೆ ಪತ್ರ ಬರೆದಿದ್ದಾರೆ.
ಎಡನೀರು ಮಠದ ಶ್ರೀಗಳು ಪ್ರಯಾಣಿಸುತ್ತಿದ್ದ ಕಾರಿನ ಮೇಲೆ ಭಾನುವಾರ ದುಷ್ಕರ್ಮಿಗಳು ದಾಳಿ ನಡೆಸಿರುವ ಬಗ್ಗೆ ಆತಂಕ ವ್ಯಕ್ತಪಡಿಸಿರುವ ಸಂಸದರು, " ಹಿಂದೂ ಸಮಾಜದ ಮಾರ್ಗದರ್ಶಕರು ಹಾಗೂ ಆಧ್ಯಾತ್ಮಿಕ ಗುರುಗಳಾದ ಎಡನೀರು ಶ್ರೀಗಳ ಮೇಲೆ ಹಲ್ಲೆ ನಡೆಸಿರುವ ಘಟನೆಯು ಈ ಪ್ರದೇಶದ ಕಾನೂನು ಸುವ್ಯವಸ್ಥೆ ಹದಗೆಟ್ಟಿರುವುದಕ್ಕೆ ಸ್ಪಷ್ಟ ನಿದರ್ಶನವಾಗಿದೆ. ಕಾನೂನಿನ ಭಯವಿಲ್ಲದೆ ನಡುರಸ್ತೆಯಲ್ಲಿಯೇ ಅತ್ಯಂತ ಗೌರವಯುತ ಸ್ಥಾನದಲ್ಲಿರುವ ಸ್ವಾಮೀಜಿ ಕಾರನ್ನು ತಡೆದು ನಿಲ್ಲಿಸಿ ರೌಡಿಸಂ ತೋರಿಸಿ ಸಮಾಜದಲ್ಲಿ ಭೀತಿ ಸೃಷ್ಟಿಸುವ ಇಂತಹ ಪುಂಡರನ್ನು ತಕ್ಷಣ ಮಟ್ಟಹಾಕಬೇಕು" ಎಂದು ಅವರು ಪತ್ರದಲ್ಲಿ ಮನವಿ ಮಾಡಿದ್ದಾರೆ.
"ಕಾಸರಗೋಡಿನ ಗಡಿಯನ್ನು ಹಂಚಿಕೊಳ್ಳುವ ಮಂಗಳೂರಿನ (ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರ) ಸಂಸದನಾಗಿ ಮತ್ತು ಸ್ವಾಮೀಜಿಯವರ ಮೇಲೆ ಅತೀವ ಗೌರವ ಹೊಂದಿರುವ ವ್ಯಕ್ತಿಯಾಗಿ, ಈ ಕೃತ್ಯದಲ್ಲಿ ಶಾಮೀಲಾದವರ ವಿರುದ್ಧ ತಕ್ಷಣ ಕಠಿಣ ಕಾನೂನು ಕ್ರಮ ಕೈಗೊಳ್ಳಲು ಗೃಹ ಇಲಾಖೆಗೆ ಸೂಕ್ತ ನಿರ್ದೇಶನ ನೀಡಬೇಕೆಂದು" ಸಿಎಂ ಪಿಣರಾಯಿ ವಿಜಯನ್‌ಗೆ ಒತ್ತಾಯಿಸಿದ್ದಾರೆ.
ಸ್ವಾಮೀಜಿಗೆ ಹೀಗಾದರೆ ಸಾಮಾನ್ಯ ಹಿಂದುಗಳ ಪಾಡೇನು?
ಶಾಂತಿ ಸುವ್ಯವಸ್ಥೆಗೆ ಧಕ್ಕೆ ತರುವ ಈ ರೀತಿಯ ಕೃತ್ಯಗಳನ್ನು ಮಾಡುವವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವುದು ಅತ್ಯಗತ್ಯ. ಪೂಜ್ಯರಾದ ಸ್ವಾಮೀಜಿಯವರಿಗೆ ಸುರಕ್ಷತೆ ಇಲ್ಲ ಅಂದ ಮೇಲೆ, ಸಾಮಾನ್ಯ ಹಿಂದುವಿನ ಸ್ಥಿತಿ ಏನಾಗಬಹುದು? ಹೀಗಾಗಿ ಈ ಘಟನೆಯನ್ನು ಕೇರಳ ಸರ್ಕಾರ ಗಂಭೀರವಾಗಿ ಪರಿಗಣಿಸಿ ದಾಳಿ ನಡೆಸಿದ ದುಷ್ಕರ್ಮಿಗಳು ಮತ್ತು ಅವರ ಹಿಂದಿರುವ ದುಷ್ಟ ಶಕ್ತಿಗಳ ಬಗ್ಗೆಯೂ ತನಿಖೆಯಾಗಬೇಕು. ಈ ಕೃತ್ಯದಿಂದ ಧಾರ್ಮಿಕ ಸಹಿಷ್ಣುತೆ ಮತ್ತು ಸಾಮರಸ್ಯದ ಭಾವನೆಗಳಿಗೆ ಧಕ್ಕೆಯಾಗಿರುವುದು ಮಾತ್ರವಲ್ಲದೇ ಸಮಾಜದ ಶಾಂತಿ-ಸಹಬಾಳ್ವೆ ಕದಡಲು ಯತ್ನಿಸುವ ಸಮಾಜಘಾತುಕರಿಗೂ ಇದು ಪಾಠವಾಗಬೇಕು ಎಂಬ ಕಾರಣದಿಂದ ಆರೋಪಿಗಳ ವಿರುದ್ಧ ಕಠಿಣ ಕ್ರಮಕ್ಕೆ ಒತ್ತಾಯಿಸಿ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ಗೆ ಪತ್ರ ಬರೆದಿರುವುದಾಗಿ ಕ್ಯಾ. ಚೌಟ ಇದೇ ಸಂದರ್ಭದಲ್ಲಿ ಹೇಳಿದ್ದಾರೆ.
Post a Comment