ತಿರುವನಂತಪುರ: ಭಯಾನಕ ಭೂಕುಸಿತದಿಂದ ತತ್ತರಿಸಿರುವ
ವಯನಾಡ್ ಜಿಲ್ಲೆಯ ಚೂರಲ್ ಮಲ ಹಾಗೂ ಮುಂಡಕೈಗೆ ಹಣಕಾಸಿನ ನೆರವು ನೀಡುವಲ್ಲಿ ವಿಳಂಬ ಧೋರಣೆ ಅನುಸರಿಸುತ್ತಿರುವ ಕೇಂದ್ರದ ಎನ್‌ಡಿಎ ಸರ್ಕಾರದ ವಿರುದ್ಧ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ತಮ್ಮ ಸಂಪುಟದ ಸಹೋದ್ಯೋಗಿಗಳು ಹಾಗೂ ಕೇರಳದ ಸಂಸದರ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ಅವರು, ರಾಜ್ಯಕ್ಕೆ ನೆರವು ವಿಳಂಬ ಮಾಡುತ್ತಿರುವ ಕೇಂದ್ರದ ವಿರುದ್ದ ಸಂಸತ್ತಿನಲ್ಲಿ ಧ್ವನಿ ಎತ್ತುವಂತೆ ಸಂಸದರನ್ನು ವಿನಂತಿಸಿದ್ದಾರೆ.
ಪದೇ ಪದೇ ಮನವಿ ಸಲ್ಲಿಸಿ ಅಗತ್ಯ ಬೇಡಿಕೆಗಳನ್ನು ಸಲ್ಲಿಸಿದ್ದರೂ, ಕೇಂದ್ರ ಸರ್ಕಾರ ಈ ದುರಂತವನ್ನು ತೀವ್ರ ಸ್ವರೂಪದ ವಿಪತ್ತು ಎಂದು ಇನ್ನೂ ಘೋಷಿಸಿಲ್ಲ. ಹೀಗಾಗಿ ರಾಜ್ಯವು ಅಂತರರಾಷ್ಟ್ರೀಯ ನೆರವು, ಮತ್ತು ಕೇಂದ್ರದ ವಿಪತ್ತು ಪರಿಹಾರ ಪಡೆಯಲು ಸಾಧ್ಯವಾಗುತ್ತಿಲ್ಲ ಎಂದು ಹೇಳಿದ್ದಾರೆ.
ವಯನಾಡ್ ದುರಂತವನ್ನು ತೀವ್ರ ಸ್ವರೂಪದ ವಿಪತ್ತು ಎಂದು ಘೋಷಿಸಿದರೆ, ವಿಪತ್ತಿಗೆ ಒಳಗಾದವರ ಸಾಲವನ್ನು ಮನ್ನಾ ಮಾಡಲು ಬ್ಯಾಂಕ್‌ಗಳಿಗೆ ಕಾನೂನು ಆಧಾರವನ್ನು ಒದಗಿಸಿದಂತಾಗುತ್ತದೆ ಎಂದು ವಿಜಯನ್ ಹೇಳಿದ್ದಾರೆ.
ದುರಂತ ಸಂಭವಿಸಿದ 100 ದಿನಗಳೊಳಗೆ ಕೇರಳ ಸರ್ಕಾರ ತನ್ನ ಬೇಡಿಕೆಯನ್ನು ಸಲ್ಲಿಸಿದೆ. ಆದರೆ ರಾಜ್ಯಕ್ಕೆ ಯಾವುದೇ ನೆರವು ಸಿಕ್ಕಿಲ್ಲ ಎಂದು ಹೇಳಿದ್ದಾರೆ. ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ತಂಡದ ಭೇಟಿಯ ನಂತರವೂ ಕೇರಳಕ್ಕೆ ಯಾವುದೇ ನೆರವು ಸಿಕ್ಕಿಲ್ಲ. ಕೇಂದ್ರವು ಹಲವು ರಾಜ್ಯಗಳಿಗೆ ಮನವಿ ಮಾಡದೆಯೇ ಆರ್ಥಿಕ ನೆರವು ನೀಡಿದೆ. ಕೇರಳಕ್ಕೆ ವಿಶೇಷ ಆರ್ಥಿಕ ಸಹಾಯವಾಗಿ ಒಂದು ಪೈಸೆಯೂ ಸಿಕ್ಕಿಲ್ಲ ಎಂದಿದ್ದಾರೆ.
Post a Comment