ರಾಮನಗರ: ತೀವ್ರ ಜಿದ್ದಾಜಿದ್ದಿನಿಂದ ಕೂಡಿದ್ದ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ನವೆಂಬರ್ 13ರಂದು ಮುಗಿದಿದ್ದು, ಅಭ್ಯರ್ಥಿಗಳ ಹಣೆಬರಹ ಮತಯಂತ್ರ ಸೇರಿದೆ. ಇನ್ನೂ ಚುನಾವಣೆ ಮುಗಿದ ಒಂದೇ ದಿನಕ್ಕೆ ಚನ್ನಪಟ್ಟಣ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಸಿಪಿ ಯೋಗೇಶ್ವರ್ (CP Yogeshwar) ತಮ್ಮಗೆ ಹಿನ್ನಡೆ ಉಂಟಾಗುವ ಅಂಶಗಳ ಬಗ್ಗೆ ಮಾತನಾಡಿದ್ದು, ನವೆಂಬರ್ 23ರಂದು ಪ್ರಕಟವಾಗುವ ಫಲಿತಾಂಶಕ್ಕೂ ಮುನ್ನ ಸೋಲುವ ಸುಳಿವು ನೀಡಿದ್ರಾ ಎಂಬ ಅನುಮಾನ ಮೂಡಲು ಶುರುವಾಗಿದೆ.
ಉಪಚುನಾವಣೆಗೆ ಸಂಬಂಧಿಸಿದಂತೆ ಚನ್ನಪಟ್ಟಣದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಯೋಗೇಶ್ವರ್ (CP Yogeshwar), ಫಲಿತಾಂಶ ಈಗೋ ಆಗೋ ಆಗಿರಬಹುದು. ಒಂದು ವೇಳೆ ನಾನು ಸೋತರೇ ಪಕ್ಷಾಂತರ ಮಾಡಿದ್ದು ಒಂದು ಪ್ರಮುಖ ಕಾರಣವಾಗಬಹುದು ಎಂದು ಹೇಳಿದ್ದಾರೆ.
ಯಾರೇ ಗೆದ್ರೂ ಕೂದಲೆಳೆಯ ಅಂತರದಲ್ಲಿ ಫಲಿತಾಂಶ ಬರಬಹುದು. ಬಿಜೆಪಿ-ಜೆಡಿಎಸ್ (BJP-JDS) ಕೆಲಸ ಚನ್ನಪಟ್ಟಣದಲ್ಲಿ ಬಹಳಷ್ಟು ವರ್ಕೌಟ್ ಆಗಿದೆ. ಕಾಂಗ್ರೆಸ್ ಕಾರ್ಯಕರ್ತರು, ಮುಖಂಡರಿಗೆ ಕೃತಜ್ಞತೆ ಅರ್ಪಿಸುತ್ತೇನೆ. ಸಿಎಂ, ಡಿಸಿಎಂ, ಸಚಿವರು, ಡಿ.ಕೆ.ಸುರೇಶ್‌ಗೆ ಧನ್ಯವಾದ ಹೇಳುತ್ತೇನೆ. ಮೊಮ್ಮಗ ಗೆಲ್ಲಲೇಬೇಕೆಂದು ದೇವೇಗೌಡರು ಹೋರಾಡಿದ್ದಾರೆ.
ಚನ್ನಪಟ್ಟಣ (Channapattana) ಕ್ಷೇತ್ರದಲ್ಲಿ ಸಮಬಲದ ಹೋರಾಟ ಅಂತಾ ಅನ್ಸುತ್ತೆ. ಕೆಲವರ ಮಾತುಗಳು ಜನರ ಭಾವನೆಗೆ ಘಾಸಿ ಆಗಿದೆ ಅನ್ನಿಸುತ್ತೆ. ಸಚಿವ ಜಮೀರ್ ಮಾತಿನಿಂದ ಮುಸ್ಲಿಮರಿಂದ ಸ್ವಲ್ಪ ಮತ ಬಂದ್ರೂ. ನನಗೆ ಬರಬೇಕಿದ್ದ ಒಕ್ಕಲಿಗ ಮತಗಳು (Votes) ಬಂದಿಲ್ಲ ಅನ್ನಿಸುತ್ತೆ.
ಚನ್ನಪಟ್ಟಣ ಉಪ ಚುನಾವಣೆ ಸಂಬಂಧನ ಹೇಳುವುದಾದರೆ, ಕಡಿಮೆ ಸಮಯದಲ್ಲಿ ನಾನು ಪಕ್ಷ ಸಂಘಟನೆ ಮಾಡಿದ್ದೇನೆ. ನನ್ನ ರಾಜಕೀಯ ಜೀವನ ಒಂಥರಾ ಐಪಿಎಲ್ (IPL) ಮ್ಯಾಚ್ ರೀತಿ ಆಗಿದೆ. ಒಂದೊಂದು ಸೀಸನ್‌ನಲ್ಲಿ ಒಂದೊಂದು ಟೀಮ್‌ನಲ್ಲಿ ಆಟ ಆಡುವಂತಾಗಿದೆ. ದೇವೇಗೌಡರು ಒಂದು ದೈತ್ಯ ಶಕ್ತಿ. ದೇವೇಗೌಡರಿಗೆ, ಕುಮಾರಸ್ವಾಮಿಗೆ ಬೈದರೆ ಸಹಿಸದ ಸಮುದಾಯ ಇದೆ. ಜನ ದೇವೇಗೌಡರು, ಕುಮಾರಸ್ವಾಮಿರನ್ನ ಮಾತ್ರ ಸಮುದಾಯದ ನಾಯಕ ಅಂತ ಗುರುತಿಸುತ್ತಾರೆ. ನಮ್ಮನ್ನ ಸಮುದಾಯದ ಲೀಡರ್ (Leader)ಅಂತ ಯಾವಾಗ ಸ್ವೀಕಾರ ಮಾಡ್ತಾರೋ ಗೊತ್ತಿಲ್ಲ.
ನನ್ನ ಪ್ರಕಾರ ಚನ್ನಪಟ್ಟಣದಲ್ಲಿ ಬಿಜೆಪಿ-ಜೆಡಿಎಸ್‌ನವರು ಚೆನ್ನಾಗಿ ಕೆಲಸ ಮಾಡಿದ್ದಾರೆ. ನಾವೇ ಇಲ್ಲಿ ಬಿಜೆಪಿಯನ್ನು ಕಟ್ಟಿದ್ದೇವೆ. ಇದುವರೆಗೂ ತೆಗೆದುಕೊಂಡಿರುವ ಗರಿಷ್ಠ ಮತಗಳು 75 ಸಾವಿರ. ಈ ಚುನಾವಣೆ ಗೆಲ್ಲಬೇಕಾದರೆ 1 ಲಕ್ಷ ಮತ ತೆಗೆದುಕೊಳ್ಳಬೇಕು. ಸೋತಿದ್ದೇನೆ ಅಂತಾ ಅಲ್ಲ, ಇಲ್ಲಿ ಸಮಬಲದ ಹೋರಾಟ ಇದೆ. ಒಕ್ಕಲಿಗ ಮತ ಕ್ರೋಢೀಕರಣ ಆಗಿದ್ದರೆ ಫಲಿತಾಂಶ ಮೇಲೆ ಪರಿಣಾಮ ಬೀರಲಿದೆ. ಚನ್ನಪಟ್ಟಣದಲ್ಲಿ ನಿಖಿಲ್ ಕುಮಾರಸ್ವಾಮಿ ಆರ್ಭಟ ಜೋರಾಗಿತ್ತು. ಅವರ ಸಮುದಾಯದ ಜನರು ಕ್ಷೇತ್ರದಲ್ಲಿದ್ದು ಕೆಲಸ ಮಾಡಿದರು. ಡಿ.ಕೆ.ಸುರೇಶ್, ಡಿ.ಕೆ.ಶಿವಕುಮಾರ್, ನಾನು ಒಕ್ಕಲಿಗನಾಗಿದ್ರೂ ನಮ್ಮ ಜನ ಇನ್ನೂ ಅವರಿಗೆ ಅಂಟಿಕೊಂಡು ಕೂತಿದ್ದಾರೆ.
ಚುನಾವಣೆ ಸೋತರೆ ನಾನು ಪಕ್ಷಾಂತರ ಮಾಡಿದ್ದು ಜನ ಒಪ್ಪಲಿಲ್ಲ. ಪಕ್ಷಗಳನ್ನು ಆಗಾಗ ಬದಲಾವಣೆ ಮಾಡಿದ್ದಕ್ಕೆ ತಿರಸ್ಕಾರ ಮಾಡಿದ್ದಾರೆ ಎಂದುಕೊಳ್ಳಬಹುದು. ಜತೆಗೆ ಕಾಂಗ್ರೆಸ್‌ನ ವರ್ಚಸ್ಸು ಏನೂ ಇಲ್ಲ ಅಂದುಕೊಳ್ಳಬಹುದು. ಜಮೀರ್ ಮಾತನ್ನು ವಯಕ್ತಿಕವಾಗಿ ಖಂಡಿಸುತ್ತೇನೆ. ಸಮುದಾಯಕ್ಕೆ ಹಾನಿಯಾಗಿದೆ. ಜೆಡಿಎಸ್‌ನವರು ನನಗೆ ಮತ ಹಾಕಬೇಕು ಎಂದು ಇದ್ದರು. ಆದರೆ, ಜಮೀರ್ ಅವರ ಹೇಳಿಕೆಯಿಂದ ಒಟ್ಟಾಗಿ ಮತ್ತೆ ಜೆಡಿಎಸ್‌ಗೆ ಮತ ಹಾಕಿದ್ದಾರೆ. ನನಗೆ ಹಿನ್ನಡೆಯಾಗಿದೆ ಎಂದು ಚನ್ನಪಟ್ಟಣ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಸಿಪಿ ಯೋಗೇಶ್ವರ್ (CP Yogeshwar) ಅಸಮಾಧಾನ ಹೊರಹಾಕುವ ಮೂಲಕ ಪರೋಕ್ಷವಾಗಿ ಸೋಲಿನ ಸುಳಿವು ನೀಡಿದ್ದಾರೆ.
Post a Comment