December 2024

 


ಮಂಗಳೂರು: ಮನೆಯ ಮೇಲಾವಣೆಯಲ್ಲಿ ಸೋಲಾರ್ ಸಿಸ್ಟಂ ಅಳವಡಿಸಿದರೆ ಕೇಂದ್ರ ಸರ್ಕಾರದಿಂದ ಗ್ರಾಹಕರಿಗೆ ಸಬ್ಸಿಡಿ ದೊರೆಯುತ್ತದೆ. ಈ ಬಗ್ಗೆ ಸಾರ್ವಜನಿಕರಲ್ಲಿ ಹೆಚ್ಚಿನ ಅರಿವು ಮೂಡಿಸಬೇಕು ಎಂದು ಸಂಸದ 'ಕ್ಯಾ.ಬ್ರಿಜೇಶ್ ಚೌಟ ಹೇಳಿದರು.


ಪ್ರಧಾನಮಂತ್ರಿ ಸೂರ್ಯಘ‌ರ್ ಯೋಜನೆ ಕಾರ್ಯಾಗಾರದ ಸಿದ್ಧತೆ. ಕುರಿತು ಮಂಗಳವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.


ಈ ಯೋಜನೆಯಡಿ 1 ಕಿಲೋ ವ್ಯಾಟ್‌ಗೆ 30 ಸಾವಿರ ರೂ., 2 ಕಿಲೋ ವ್ಯಾಟ್‌ಗೆ 60 ಸಾವಿರ ರೂ., 3 ಕಿಲೋ ವ್ಯಾಟ್ ಮೇಲ್ಪಟ್ಟ ಸೋಲಾರ್‌ಗಳಿಗೆ 78 ಸಾವಿರ ರೂ.ವರೆಗೆ ಸಬ್ಸಿಡಿ ದೊರೆಯಲಿದೆ ಎಂದರು.


ಮೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಜಯಕುಮಾ‌ರ್ ಮಾತನಾಡಿ, ದ.ಕ. ಜಿಲ್ಲೆಯಲ್ಲಿ ಈಗಾಗಲೇ 675 ಜನರು ಸೋಲಾ‌ರ್ ಯೋಜನೆ ಅಳವಡಿಸಿಕೊಂಡಿದ್ದಾರೆ. ಪ್ರಧಾನಮಂತ್ರಿ ಸೂರ್ಯ ಘರ್ ಯೋಜನೆಯಡಿ ಸೋಲಾರ್ ಉಪಕರಣಗಳ ಮಾರಾಟಕ್ಕೆ 270 ಡೀಲರ್‌ಗಳನ್ನು ಗುರುತಿಸಲಾಗಿದೆ. ಸಾರ್ವಜನಿಕರು ಅರ್ಜಿ ನೋಂದಾಯಿಸಲು ಆನ್‌ಲೈನ್ ಪೋರ್ಟಲ್  www.pmsuryaghar.gov.in ಗೆ ಭೇಟಿ ನೀಡಬಹುದು ಎಂದರು. ಜಿಲ್ಲಾಧಿಕಾರಿ ಮುಲೈ ಮುಗಿಲನ್ ಎಂ.ಪಿ. ಮಾತನಾಡಿ, ಸೋಲಾರ್ ಉಪಕರಣಗಳ ಖರೀದಿಗೆ ಬ್ಯಾಂಕ್ ಸಾಲ ನೀಡಲು ಬ್ಯಾಂಕ್‌ಗಳೊಂದಿಗೆ ಚರ್ಚಿಸಲಾಗುವುದು ಎಂದರು.


ಶಾಸಕರಾದ ಡಾ.ವೈ.ಭರತ್ ಶೆಟ್ಟಿ, ವೇದವ್ಯಾಸ್ ಕಾಮತ್, ಜಿಪಂ ಸಿಐಒ ಡಾ.ಆನಂದ್ ಕೆ., ಮಂಗಳೂರು ಮಹಾನಗರ ಪಾಲಿಕೆ ಆಯುಕ್ತ ಸಿ.ಎಲ್.ಆನಂದ್, ಲೀಡ್ ಬ್ಯಾಂಕ್ ಮ್ಯಾನೇಜರ್ ಕವಿತಾ ಆಯ್ಕೆ.


ಸಮರ್ಪಕ ಸಿದ್ದತೆಗೆ ನಿರ್ದೇಶನ


ಸೋಲಾ‌ರ್ ಯೋಜನೆಯಿಂದ ಉತ್ಪತ್ತಿಯಾಗುವ ವಿದ್ಯುತ್ ಮನೆ ಬಳಕೆಗೆ ಉಪಯೋಗಿಸಬಹುದು. ಹೆಚ್ಚುವರಿ ವಿದ್ಯುತ್‌ ಅನ್ನು ಮೆಸ್ಕಾಂಗೆ ಮಾರಬಹುದು. ಜ.2ರಂದು ಕೇಂದ್ರ ನವೀಕರಿಸಬಹುದಾದ ಇಂಧನಗಳ ಸಚಿವ ಪಲ್ಲಾದ ಜೋಶಿ ಮಂಗಳೂರಿಗೆ ಆಗಮಿಸಲಿದ್ದಾರೆ. ಪ್ರಧಾನಮಂತ್ರಿ ಸೂರ್ಯ ಘ‌ರ್ ಯೋಜನೆಯ ಕಾರ್ಯಾಗಾರ ಉದ್ಘಾಟಿಸಿ ಯೋಜನೆಯ ಅನುಷ್ಠಾನದ ಪ್ರಗತಿ ಕುರಿತು ಮಾಹಿತಿ ಪಡೆಯಲಿದ್ದಾರೆ. ಈ ಕಾರ್ಯಕ್ರಮಕ್ಕೆ ಬೇಕಾದ ಎಲ್ಲ ಸಿದ್ಧತೆ ಕೈಗೊಳ್ಳುವಂತೆ ಸಂಸದ ಕ್ಯಾ.ಬ್ರಿಜೇಶ್ ಚೌಟ ಜಿಲ್ಲಾಡಳಿತಕ್ಕೆ ಸೂಚಿಸಿದರು.

 


ಬೆಂಗಳೂರು: ಹೊಸ ವರ್ಷಾರಂಭವಾಗಿದ್ದರೂ, ಶೈಕ್ಷಣಿಕ ವರ್ಷಾರಂಭಕ್ಕೆ ಇನ್ನೂ ಕೆಲ ತಿಂಗಳಿದೆ. ಆದರೆ, ಖಾಸಗಿ ಶಾಲೆಗಳಲ್ಲಿ 2025-26ನೇ ಸಾಲಿಗೆ ಪ್ರವೇಶಾತಿ ಈಗಾಗಲೇ ಆರಂಭವಾಗಿದೆ.


ಇಷ್ಟು ದಿನಗಳವರೆಗೆ ಒಂದನೇ ತರಗತಿ ದಾಖಲಾಗಲು ಮಗುವಿಗೆ ಕನಿಷ್ಠ 5 ವರ್ಷ 5 ತಿಂಗಳು ವಯಸ್ಸಾಗಿರಬೇಕಾಗಿತ್ತು. ಆದರೆ, 2025-26ನೇ ಸಾಲಿಗೆ ಒಂದನೇ ತರಗತಿಗೆ ಮಗುವನ್ನು ದಾಖಲು ಮಾಡಬೇಕಾದಲ್ಲಿ ಕನಿಷ್ಠ 6 ವರ್ಷ ವಯಸ್ಸಾಗಿರಬೇಕು. ಕೇಂದ್ರ ಸರ್ಕಾರ ಕೆಲ ವರ್ಷಗಳ ಹಿಂದೆಯೇ ಈ ನಿಯಮ ಜಾರಿಗೊಳಿಸಿದ್ದರೂ, ರಾಜ್ಯ ಸರ್ಕಾರ ಮುಂದೂಡುತ್ತಲೇ ಬಂದಿತ್ತು. 2025-26ನೇ ಸಾಲಿನಿಂದ ಜಾರಿಗೊಳಿಸುವುದಾಗಿ ಎರಡು ವರ್ಷಗಳ ಹಿಂದೆ ತಿಳಿಸಿತ್ತು.


ಅದರಂತೆ, ಕಳೆದ ವರ್ಷ ಎಲ್‌ಕೆಜಿ ಪ್ರವೇಶ ಬಯಸುವ ಮಕ್ಕಳಿಗೆ 4 ವರ್ಷವಾಗಿರಬೇಕು ಎಂದು ಅಧಿಸೂಚನೆ ಹೊರಡಿಸಿತ್ತು. ಅಂದರೆ ಈ ವರ್ಷ ಒಂದನೇ ತರಗತಿ ತಲುಪುವ ಹೊತ್ತಿಗೆ ಆ ಮಕ್ಕಳಿಗೂ ಆರು ವರ್ಷ ವಯಸ್ಸಾಗಿರಬೇಕು ಎಂಬುದು ಉದ್ದೇಶವಾಗಿತ್ತು. ಈ ಶೈಕ್ಷಣಿಕ ವರ್ಷದಿಂದ 6 ವರ್ಷ ಕಡ್ಡಾಯ ಆದೇಶವನ್ನು ಶಿಕ್ಷಣ. ಇಲಾಖೆ ಇನ್ನಷ್ಟೇ ಹೊರಡಿಸಬೇಕಾಗಿದ್ದರೂ, ಅದಕ್ಕಾಗಿ ಭೂಮಿಕೆಯನ್ನು ಈಗಾಗಲೇ ಶಿಕ್ಷಣ ಇಲಾಖೆ ಸಜ್ಜುಗೊಳಿಸಿದೆ.

 ರಾಜ್ಯ ಸರ್ಕಾರ ಹಲವು ಐಎಎಸ್​, ಐಪಿಎಸ್ ಹಾಗೂ ಐಎಫ್​​ಎಸ್​ ಅಧಿಕಾರಿಗಳಿಗೆ ವೇತನ ಶ್ರೇಣಿಯೊಂದಿಗೆ ಪದೋನ್ನತಿ ನೀಡಿದೆ.



ಬೆಂಗಳೂರು: ಹಲವು ಐಎಎಸ್ ಹಾಗೂ ಐಪಿಎಸ್, ಐಎಫ್ಎಸ್ ಅಧಿಕಾರಿಗಳಿಗೆ ವೇತನ ಶ್ರೇಣಿಯೊಂದಿಗೆ ಪದೋನ್ನತಿ, ಮುಂಬಡ್ತಿ ನೀಡುವ ಮೂಲಕ ರಾಜ್ಯ ಸರ್ಕಾರ ನ್ಯೂ ಇಯರ್ ಗಿಫ್ಟ್ ನೀಡಿದೆ. 67 ಐಎಎಸ್ ಅಧಿಕಾರಿಗಳಿಗೆ ವೇತನ ಶ್ರೇಣಿಯೊಂದಿಗೆ ಪದೋನ್ನತಿ ನೀಡಿ ಆದೇಶ ಹೊರಡಿಸಲಾಗಿದೆ.‌ ಜನವರಿ 1ರಿಂದ ವೇತನ ಶ್ರೇಣಿ ಪದೋನ್ನತಿ ಅನ್ವಯವಾಗುತ್ತದೆ.


62 ಐಪಿಎಸ್ ಅಧಿಕಾರಿಗಳಿಗೆ ವೇತನ ಶ್ರೇಣಿಯೊಂದಿಗೆ ಪದೋನ್ನತಿ ನೀಡಲಾಗಿದ್ದರೆ, 3 ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಲಾಗಿದೆ. ಕೆಲವರಿಗೆ ಹೆಚ್ಚುವರಿ ಹೊಣೆಗಾರಿಕೆ ನೀಡಲಾಗಿದೆ.

21 ಐಎಫ್​ಎಸ್ ಅಧಿಕಾರಿಗಳಿಗೆ ವೇತನ ಶ್ರೇಣಿಯೊಂದಿಗೆ ಪದೋನ್ನತಿ ನೀಡಲಾಗಿದ್ದು, ಇಬ್ಬರು ಅಧಿಕಾರಿಗಳನ್ನು ವರ್ಗಾವಣೆ ಮಾಡಲಾಗಿದೆ.


ಐಜಿಪಿ ವಿಕಾಶ್ ಕುಮಾರ್ ವಿಕಾಶ್ (ಬೆಂಗಳೂರು ಪಶ್ಚಿಮ ವಲಯದ ಹೆಚ್ಚುವರಿ ಪೊಲೀಸ್ ಆಯುಕ್ತ)

ರಮನ್ ಗುಪ್ತಾ (ಗುಪ್ತಚರ ವಿಭಾಗ, ಬೆಂಗಳೂರು)

ಐಜಿಪಿಯಾಗಿ ಮುಂಬಡ್ತಿ:

ಚೇತನ್ ಸಿಂಗ್ ರಾಥೋಡ್ (ಐಜಿಪಿ, ಬೆಳಗಾವಿ ವಲಯ)

ಅಮಿತ್ ಸಿಂಗ್ (ಐಜಿಪಿ, ಮಂಗಳೂರು ವಲಯ)

ಎನ್.ಶಶಿಕುಮಾರ್ (ಹು-ಧಾ. ಪೊಲೀಸ್ ಆಯುಕ್ತ)

ವೈ.ಎಸ್.ರವಿಕುಮಾರ್ (ಗುಪ್ತಚರ ವಿಭಾಗದ ಭದ್ರತೆ)

ಸಿ.ವಂಶಿಕೃಷ್ಣ (ಡಿಐಜಿ, ನೇಮಕಾತಿ ವಿಭಾಗ).


ಎಸ್​ಪಿಯಿಂದ ಡಿಐಜಿ

ಕಾರ್ತಿಕ್ ರೆಡ್ಡಿ (ಆಡಳಿತ ವಿಭಾಗ, ಪೊಲೀಸ್ ಪ್ರಧಾನ ಕಚೇರಿ)

ಕುಲದೀಪ್ ಕುಮಾರ್ ಆರ್ ಜೈನ್ (ಜಂಟಿ ಪೊಲೀಸ್ ಆಯುಕ್ತ, ಆಡಳಿತ ವಿಭಾಗ, ಬೆಂಗಳೂರು)

ಕೆ.ಸಂತೋಷ್ ಬಾಬು (ಗುಪ್ತಚರ ವಿಭಾಗ)

ಇಶಾ ಪಂತ್ (ಗುಪ್ತಚರ ವಿಭಾಗ)

ಜಿ.ಸಂಗೀತಾ (ಅರಣ್ಯ ಘಟಕ, ಸಿಐಡಿ)

ಸೀಮಾ ಲಾಟ್ಕರ್ (ಮೈಸೂರು ನಗರ ಪೊಲೀಸ್ ಆಯುಕ್ತರು)

ರೇಣುಕಾ ಸುಕುಮಾರ್ (ನಾಗರಿಕ ಹಕ್ಕು ಮತ್ತು ಜಾರಿ ನಿರ್ದೇಶನಾಲಯ ಬೆಂಗಳೂರು)

ಡಾ.ಭೀಮಾಶಂಕರ್ ಎಸ್ ಗುಳೇದ್ (ಎಸ್.ಪಿ ಬೆಳಗಾವಿ)

ರಾಹುಲ್ ಕುಮಾರ್ ಶಹಪುರ್‌ವಾಡ್ (ಎಸ್​ಪಿ, ಎನ್‌ಐಎ)

ಧಮೇಂದ್ರ ಕುಮಾರ್ ಮೀನಾ (ರಾಷ್ಟ್ರೀಯ ತಾಂತ್ರಿಕ ಸಂಶೋಧನಾ ಸಂಸ್ಥೆ)

ಹೆಚ್.ಡಿ.ಆನಂದ್ ಕುಮಾರ್ (ಎಸ್​ಪಿ, ನಾಗರಿಕ ಹಕ್ಕು ಮತ್ತು ಜಾರಿ ನಿರ್ದೇಶನಾಲಯ ಬೆಂಗಳೂರು)

ಕಲಾಕೃಷ್ಣಮೂರ್ತಿ (ಅಸಿಸ್ಟೆಂಟ್ ಇನ್ಸ್ಪೆಕ್ಟರ್ ಜನರಲ್ ಆಫ್ ಪೊಲೀಸ್, ಪ್ರಧಾನ ಕಚೇರಿ ಬೆಂಗಳೂರು)

ಶ್ರೀನಿವಾಸ್ ಗೌಡ (ಡಿಸಿಪಿ, ಸಿಸಿಬಿ ಬೆಂಗಳೂರು)

ಸೈದುಲು ಅಡಾವತ್ (ಡಿಸಿಪಿ, ಉತ್ತರವಿಭಾಗ, ಬೆಂಗಳೂರು)

ಡಾ.ಸೌಮ್ಯಲತಾ ಎಸ್.ಕೆ (ಎಸ್.ಪಿ ರೈಲ್ವೆ)

 


ತಿರುವನಂತಪುರ: 'ದೇವಸ್ಥಾನದೊಳಗೆ ಪ್ರವೇಶ ಪಡೆಯುವ ಮೊದಲು ಪುರುಷರು ಮೇಲಂಗಿ ಕಳಚಬೇಕು ಎಂಬ ಪರಿಪಾಟವನ್ನು ಕೈಬಿಡಬೇಕು' ಎಂದು ಸಾಮಾಜಿಕ ಸುಧಾರಕ ಶ್ರೀ ನಾರಾಯಣ ಗುರು ಅವರು ಸ್ಥಾಪಿಸಿದ ಶಿವಗಿರಿ ಮಠದ ಮುಖ್ಯಸ್ಥ ಸ್ವಾಮಿ ಸಚ್ಚಿದಾನಂದ ಅವರು ಕರೆ ನೀಡಿದರು.

ಮಂಗಳವಾರದ ನಡೆದ ಮಠದ ವಾರ್ಷಿಕ ತೀರ್ಥಯಾತ್ರೆಯ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು. ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಮುಖ್ಯಮಂತ್ರಿ ಪಿಣರಾಯ್ ವಿಜಯನ್ ಅವರು ಕೂಡ ಸ್ವಾಮಿ ಸಚ್ಚಿದಾನಂದ ಅವರ ಮಾತನ್ನು ಬೆಂಬಲಿಸಿದರು.


'ಪುರುಷರು ಜನಿವಾರ ಹಾಕಿದ್ದಾರೆಯೇ ಇಲ್ಲವೇ ಎನ್ನುವುದನ್ನು ಪರೀಕ್ಷಿಸಲು ಮೇಲಂಗಿ ತೆಗೆಯಲು ಹೇಳಲಾಗುತ್ತಿತ್ತು. ಹೀಗೆ ಮಾಡುವುದು ಸಾಮಾಜಿಕ ಪಿಡುಗು. ಇದನ್ನು ಕೊನೆಗೊಳಿಸಲೇಬೇಕು. ನಾರಾಯಣ ಗುರುಗಳೂ ಈ ಪರಿಪಾಠದ ವಿರುದ್ಧ ಇದ್ದರು. ಆದರೂ 'ಶ್ರೀ ನಾರಾಯಾಣ ಧರ್ಮ ಪರಿಪಾಲನಾ ಯೋಗಂ'ನಂಥ ಸಂಸ್ಥೆಗಳಲ್ಲಿ ಈ ಪರಿಪಾಠವನ್ನು ಮುಂದುವರಿಸಲಾಗುತ್ತಿದೆ. ಈ ಬಗ್ಗೆ ಆ ಸಂಸ್ಥೆಯವರು ಮರುಪರಿಶೀಲಿಸಬೇಕು' ಎಂದರು.

 


ಇಂಫಾಲ್: ರಾಜ್ಯದಲ್ಲಿ 250ಕ್ಕೂ ಹೆಚ್ಚು ಜನರ ಸಾವಿಗೆ ಕಾರಣವಾದ ಜನಾಂಗೀಯ ಸಂಘರ್ಷಕ್ಕೆ ಸಂಬಂಧಿಸಿದಂತೆ ಮಣಿಪುರ ಮುಖ್ಯಮಂತ್ರಿ ಎನ್. ಬಿರೇನ್ ಸಿಂಗ್ ಅವರು ಮಂಗಳವಾರ ರಾಜ್ಯದ ಜನರ ಕ್ಷಮೆಯಾಚಿಸಿದ್ದಾರೆ.

ಈ ಘಟನೆ ಸಾವಿರಾರು ಜನರನ್ನು ನಿರಾಶ್ರಿತರನ್ನಾಗಿ ಮಾಡಿದ್ದು, ರಾಜ್ಯದ ಜನತೆ ಹಿಂದಿನ ತಪ್ಪುಗಳನ್ನು ಮರೆತು ಕ್ಷಮಿಸಿ, ಶಾಂತಿಯುತವಾಗಿ ಎಲ್ಲರೂ ಒಟ್ಟಾಗಿ ಬದುಕಬೇಕು ಎಂದು ಎಲ್ಲಾ ಸಮುದಾಯಗಳಿಗೆ ಮನವಿ ಮಾಡಿದ್ದಾರೆ.


ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಬಿರೇನ್ ಸಿಂಗ್, 'ರಾಜ್ಯದಲ್ಲಿ ನಡೆದಿರುವ ಘಟನೆಗಳಿಗೆ ನಾನು ಕ್ಷಮೆಯಾಚಿಸುತ್ತೇನೆ. ಈ ಸಂಘರ್ಷದಲ್ಲಿ ಹಲವು ಜನರು ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡರೆ, ಅನೇಕರು ತಮ್ಮ ಮನೆಯನ್ನು ತೊರೆಯಬೇಕಾಯಿತು. ಇದಕ್ಕಾಗಿ ನಾನು ವಿಷಾದಿಸುತ್ತೇನೆ. ಈ ನಡುವೆ ಕಳೆದ ಮೂರ್ನಾಲ್ಕು ತಿಂಗಳಿಂದ ರಾಜ್ಯದಲ್ಲಿ ಶಾಂತಿ ಮರಳುತ್ತಿದ್ದು, ಮುಂಬರುವ ವರ್ಷದಲ್ಲಿ ಸಹಜ ಸ್ಥಿತಿಗೆ ಮರಳುವ ಭರವಸೆಯನ್ನು ನೀಡಿದೆ' ಎಂದು ಹೇಳಿದ್ದಾರೆ.


'ಏನು ನಡೆದಿಯೋ ಅದು ನಡೆದಾಗಿದೆ... ನಮ್ಮ ಹಿಂದಿನ ತಪ್ಪುಗಳನ್ನು ಮರೆತು ಕ್ಷಮಿಸಬೇಕು. ಶಾಂತಿ ಮತ್ತು ಸಮೃದ್ಧ ಮಣಿಪುರದಲ್ಲಿ ಒಟ್ಟಿಗೆ ವಾಸಿಸುವ ಮೂಲಕ ಜೀವನವನ್ನು ಹೊಸದಾಗಿ ಪ್ರಾರಂಭಿಸಬೇಕು ಎಂದು ನಾನು ಎಲ್ಲಾ ಸಮುದಾಯಗಳಿಗೆ ಮನವಿ ಮಾಡುತ್ತೇನೆ' ಎಂದಿದ್ದಾರೆ.

ಮುಂದುವರಿದು, 'ಸಂಘರ್ಷ ಪ್ರಾರಂಭವಾದ ದಿನಗಳಲ್ಲಿ ಹೋಲಿಸಿದರೆ ಕಳೆದ 20 ತಿಂಗಳಿನಲ್ಲಿ ರಾಜ್ಯದಲ್ಲಿ ಗುಂಡಿನ ದಾಳಿ ಪ್ರಕರಣಗಳು ಇಳಿಮುಖ ಕಂಡಿವೆ. ಕಳೆದ ವರ್ಷ(2023) ಮೇ ತಿಂಗಳಿನಿಂದ ಅಕ್ಟೋಬರ್‌ವರೆಗೆ 408 ಗುಂಡಿನ ದಾಳಿ ಪ್ರಕರಣಗಳು ವರದಿಯಾದರೆ, ಅದೇ ವರ್ಷ ನವೆಂಬರ್‌ನಿಂದ ಏಪ್ರಿಲ್‌ವರೆಗೆ 345 ಪ್ರಕರಣಗಳು ವರದಿಯಾಗಿದ್ದವು. ಈ ವರ್ಷ ಮೇ ತಿಂಗಳಿಂದ ಇಲ್ಲಿಯವರೆಗೆ 112 ಪ್ರಕರಣಗಳು ದಾಖಲಾಗಿವೆ' ಎಂದು ಹೇಳಿದ್ದಾರೆ.


'ಇದೇ ಅವಧಿಯಲ್ಲಿ ಉಗ್ರರು ಲೂಟಿ ಮಾಡಿದ್ದ ಶಸ್ತ್ರಾಸ್ತ್ರಗಳಲ್ಲಿ 3,112 ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಂಡಿದ್ದು, 2,511 ಮದ್ದುಗುಂಡುಗಳನ್ನು ವಶಕ್ಕೆ ಪಡೆಯಲಾಗಿದೆ' ಎಂದು ಮಾಹಿತಿ ನೀಡಿದ್ದಾರೆ


'ಈವರೆಗೆ 625 ಜನರನ್ನು ಬಂಧಿಸಲಾಗಿದೆ ಮತ್ತು 12,047 ಎಫ್‌ಐಆರ್‌ಗಳನ್ನು ದಾಖಲಿಸಲಾಗಿದೆ' ಎಂದೂ ತಿಳಿಸಿದ್ದಾರೆ.

 ► ಮಠದ ದಿವಾನ, ಸಿಬ್ಬಂದಿ, ಪೊಲೀಸ್ ಕಾನ್ಸ್‌ಸ್ಟೇಬಲ್‌ಗೆ ಹಲ್ಲೆ: 8 ಮಂದಿ ಬಂಧನ



ಉಡುಪಿ, ಡಿ.31: ಉಡುಪಿ ಶ್ರೀಕೃಷ್ಣ ಮಠಕ್ಕೆ ದೇವರ ದರ್ಶನಕ್ಕೆ ಬಂದ ಅಯ್ಯಪ್ಪ ಮಾಲಧಾರಿಗಳು ದಾಂಧಲೆ ನಡೆಸಿ, ಮಠದ ಸಿಬ್ಬಂದಿ, ದಿವಾನರಿಗೆ ಹಾಗೂ ಕರ್ತವ್ಯ ನಿರ್ವಹಿಸುತ್ತಿದ್ದ ಪೊಲೀಸ್ ಸಿಬ್ಬಂದಿಗೆ ಹಲ್ಲೆ ನಡೆಸಿರುವ ಘಟನೆ ಡಿ.29ರಂದು ರಾತ್ರಿ ವೇಳೆ ನಡೆದಿದ್ದು, ಈ ಸಂಬಂಧ ಎಂಟು ಮಂದಿ ಆರೋಪಿಗಳನ್ನು ಪೊಲೀಸರು ಬಂಧಿಸಿರುವ ಬಗ್ಗೆ ವರದಿಯಾಗಿದೆ.


ಬಂಧಿತರನ್ನು ಅಯ್ಯಪ್ಪಮಾಲಧಾರಿಗಳಾದ ಹೈದರಬಾದಿನ ಶಿವಕುಮಾರ, ವಿಶಾಲ್, ರಾಜು, ನವೀನ್‌ರಾಜ್, ರವಿಕಿರಣ್, ಭಾನು, ಉಮೆಂದರ್, ರವಿಕಾಂತ್ ಎಂದು ಗುರುತಿಸಲಾಗಿದೆ.

ಶ್ರೀಕೃಷ್ಣಮಠದ ಒಳಗೆ ಹಾಗೂ ಹೊರಗೆ ತೀವ್ರ ಜನಸಂದಣಿಯಿಂದ ನೂಕು ನುಗ್ಗಲು ಉಂಟಾಗಿದ್ದು, ಈ ವೇಳೆ ದೇವರ ದರ್ಶನಕ್ಕೆ ಬಂದಿದ್ದ ಸುಮಾರು 7-8 ಜನ ಅಯ್ಯಪ್ಪ ಮಾಲಾಧಾರಿಗಳು ದಾಂಧಲೆ ನಡೆಸಿದರೆನ್ನಲಾಗಿದೆ. ಅಲ್ಲದೆ ರಥಬೀದಿಯಲ್ಲಿ ನಡೆಯುವ ರಥೋತ್ಸವದ ದೇವರ ಉತ್ಸವ ಮೂರ್ತಿ ಪಲ್ಲಕ್ಕಿಯೊಂದಿಗೆ ಕೃಷ್ಣಮಠದ ಮುಂಭಾಗದಿಂದ ಒಳಭಾಗಕ್ಕೆ ಬರುವ ವೇಳೆ ದಾಂಧಲೆ ನಡೆಸಿದ ಅಯ್ಯಪ್ಪ ಮಾಲಾಧಾರಿಗಳು ಕೃಷ್ಣಮಠದ ಸಿಬ್ಬಂದಿ ಜಗದೀಶ ಎಂಬವರಿಗೆ ಕೈಯಿಂದ ಹಲ್ಲೆ ಮಾಡಿದರು.


ಆತನನ್ನು ಅವರೆಲ್ಲರೂ ಸೇರಿ ಮೇಲೆತ್ತಿಕೊಂಡು ಶ್ರೀಕೃಷ್ಣ ಮಠದ ಗರ್ಭ ಗುಡಿಯ ಒಳಗಡೆ ಬಂದಿದ್ದು, ಆಗ ಮಠದ ದಿವಾನ ನಾಗರಾಜ ಆಚಾರ್ಯ, ಅಯ್ಯಪ್ಪಮಾಲಾಧಾರಿಗಳನ್ನು ತಡೆಯಲು ಪ್ರಯತ್ನಿಸಿದರು. ಆಗ ಅವರೆಲ್ಲ ನಾಗರಾಜ ಆಚಾರ್ಯರ ಮೇಲೂ ಹಲ್ಲೆಗೆ ಮುಂದಾದರೆನ್ನಲಾಗಿದೆ. ಈ ಸಂದರ್ಭ ಕೃಷ್ಣಮಠದಲ್ಲಿ ಭದ್ರತಾ ಕರ್ತವ್ಯ ಹಾಗೂ ಪಿಆರ್‌ಓ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಉಡುಪಿ ಸಶಸ್ತ್ರ ಮೀಸಲು ಪೊಲೀಸ್ ಪಡೆಯ ಕಾನ್ಸಟೇಬಲ್ ರವೀಂದ್ರ ಗಲಾಟೆ ಮಾಡದಂತೆ ಅಯ್ಯಪ್ಪ ಮಾಲಧಾರಿಗಳನ್ನು ಸಮಾಧಾನ ಮಾಡಿ ತಡೆಯಲು ಹೋದರು.

ಈ ವೇಳೆ ಅಯ್ಯಪ್ಪ ಮಾಲಧಾರಿಗಳು ಪೊಲೀಸ್ ಸಿಬ್ಬಂದಿಗೆ ಕೈಯಿಂದ ಮುಖಕ್ಕೆ ಮೈಕೈಗೆ, ಕೆನ್ನೆಗೆ ಹಲ್ಲೆ ಮಾಡಿದರು. ಇದರಿಂದ ಅವರಿಗೆ ಗಾಯ ಉಂಟಾಗಿರುವುದಾಗಿ ದೂರಲಾಗಿದೆ. ಈ ಬಗ್ಗೆ ಕಾನ್ಸಟೇಬಲ್ ರವೀಂದ್ರ ನೀಡಿದಂತೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅದರಂತೆ ಪೊಲೀಸರು ಆರೋಪಿಗಳನ್ನು ಬಂಧಿಸಿ ಉಡುಪಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

 ಕಾರ್ಯಕ್ರಮದಿಂದ ದೂರ ಉಳಿದ ಬಿಜೆಪಿ ಪ್ರಮುಖರು






ಐವರ್ನಾಡು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಅಧ್ಯಕ್ಷರಾಗಿ ಮೂರನೇ ಬಾರಿಗೆ ಎಸ್.ಎನ್ ಮನ್ಮಥ ಉಪಾಧ್ಯಕ್ಷರಾಗಿ ಮಹೇಶ್ ಜಬಳೆ ಆಯ್ಕೆಗೊಂಡಿದ್ದಾರೆ.


 ಇಂದು ಐವರ್ನಾಡು ಸಹಕಾರಿ ಸಂಘ ಸಭಾಂಗಣದಲ್ಲಿ ನಡೆದ ಸದಸ್ಯರ ಸಭೆಯಲ್ಲಿ ಈ ಆಯ್ಕೆ ನಡೆದಿದ್ದು ಮೊನ್ನೆ ನಡೆದ ಚುನಾವಣೆಯಲ್ಲಿ ಮನ್ಮಥ ರ ಬಳಗ 12 ಸ್ಥಾನಗಳಲ್ಲಿ 11 ಸ್ಥಾನಗಳನ್ನು ಜಯಭೇರಿ ಗಳಿಸಿತ್ತು,ಕಾರ್ಯಕ್ರಮ ದಲ್ಲಿ ಸುಳ್ಯ ನಗರ ಪಂಚಾಯತ್ ಮಾಜಿ ಅಧ್ಯಕ್ಷ ಎನ್ .ಎ.ರಾಮಚಂದ್ರ ,ಸೊಸೈಟಿ ನೂತನ ನಿರ್ದೇಶಕರು ಉಪಸ್ಥಿತರಿದ್ದರು.ಬಿಜೆಪಿ ಮಂಡಲ ಸಮಿತಿ ಮತ್ತು ಮಹಾಶಕ್ತಿ ಕೇಂದ್ರದ ಪದಾಧಿಕಾರಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸದೆ ದೂರ ಉಳಿದಿದ್ದಾರೆ.

ತಾಲೂಕು ಕೃಷಿಕ ಸಮಾಜ ಅಧ್ಯಕ್ಷರಾಗಿ ಎ.ಟಿ.ಕುಸುಮಾಧರ

ಉಪಾಧ್ಯಕ್ಷರಾಗಿ ಕರುಣಾಕರ ಅಡ್ಡಂಗಾಯ

ಸುಳ್ಯ ಕೃಷಿಕ ಸಮಾಜದ ನೂತನ ಪದಾಧಿಕಾರಿಗಳ ಆಯ್ಕೆ ಇಂದು ನಡೆದಿದೆ. ಅಧ್ಯಕ್ಷತೆ, ಉಪಾಧ್ಯಕ್ಷತೆ, ಕಾರ್ಯದರ್ಶಿ, ಕೋಶಾಧಿಕಾರಿ ಹುದ್ದೆಗೆ ಒಂದೊಂದೇ ನಾಮಪತ್ರ ಸಲ್ಲಿಕೆಯಾಗಿದ್ದರಿಂದ ಅವಿರೋಧ ಆಯ್ಕೆ ನಡೆದಿದೆ. ಅಧ್ಯಕ್ಷರಾಗಿ ಎ.ಟಿ. ಕುಸುಮಾಧರ, ಉಪಾಧ್ಯಕ್ಷರಾಗಿ ಕರುಣಾಕರ ಎ.ಎಸ್., ಪ್ರ.ಕಾರ್ಯದರ್ಶಿಯಾಗಿ ಶ್ಯಾಮ್ ಪ್ರಸಾದ್, ಕೋಶಾಧಿಕಾರಿಯಾಗಿ ನವೀನ್ ಕೆ.ಬಿ., ಹಾಗೂ ಜಿಲ್ಲಾ ಪ್ರತಿನಿಧಿಯಾಗಿ ಚಂದ್ರ ಕೋಲ್ಟಾರ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.



ಈ ವೇಳೆ ಕೃಷಿಕ ಸಮಾಜದ ನಿರ್ದೇಶಕರಾದ ಕೆ.ಸುಧಾಕರ ಪ್ರಭು, ಹರಿಪ್ರಸಾದ್, ಎ.ಶರತ್ ಕುಮಾರ್, ಎಸ್.ಎನ್. ಮನ್ಮಥ, ಎ.ಉಮನಾಥ, ನಾರಾಯಣ ಗೌಡ, ರುಕ್ಷ್ಮಯ್ಯ ಗೌಡ, ಕುಮಾರಸ್ವಾಮಿ, ಅಣ್ಣಾಜೀ ಗೌಡ, ಕೆ.ಎಸ್.ಮಹೇಶ್ ಕುಮಾರ್ ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಗುರುಪ್ರಸಾದ್ ರವರು ಆಯ್ಕೆ ಪ್ರಕ್ರಿಯೆ ನಡೆಸಿಕೊಟ್ಟರು.

 


ಶ್ರೀ ನಳಿನ್ ಕುಮಾರ್ ಕಟೀಲ್ ಮಾರ್ಗದರ್ಶನ ಹಾಗೂ ಮಂಗಳೂರು ನಗರ ದಕ್ಷಿಣ ಶಾಸಕರಾದ ಶ್ರೀ ಡಿ.ವೇದವ್ಯಾಸ ಕಾಮತ್ ರವರ ನೇತೃತ್ವದ ಕುಡ್ಲ ಸಾಂಸ್ಕೃತಿಕ ಪ್ರತಿಷ್ಠಾನ ಹಾಗೂ ಜಿಲ್ಲಾಡಳಿತದ ಸಹಕಾರದೊಂದಿಗೆ ಬಹು ನಿರೀಕ್ಷಿತ ಮಂಗಳೂರು ಸ್ಟ್ರೀಟ್ ಫುಡ್ ಫಿಯೆಸ್ಟ ಸೀಸನ್-3 ಇದೇ 2025ರ ಜನವರಿ 18 ರಿಂದ 22 ರ ವರೆಗೆ ಐದು ದಿನಗಳ ಕಾಲ ನಡೆಯಲಿದೆ. ಜನವರಿ 18ರ ಸಂಜೆ ಜಿಲ್ಲೆಯ ಹಲವು ಗಣ್ಯ ಅತಿಥಿಗಳಿಂದ ಸೀಸನ್-3ಗೆ ಅಧಿಕೃತ ಚಾಲನೆ ದೊರೆಯಲಿದ್ದು ಕರಾವಳಿ ಉತ್ಸವ ಮೈದಾನದಿಂದ ನಾರಾಯಣ ಗುರು ವೃತ್ತ, ಮಣ್ಣಗುಡ್ಡ ಗುರ್ಜಿ ವೃತ್ತ, ಕೆನರಾ ಉರ್ವ” ದವರೆಗೆ ಪ್ರತಿ ನಿತ್ಯ ಸಂಜೆ 4ರಿಂದ ರಾತ್ರಿ 10 ರವರೆಗೆ ಈ "ಆಹಾರೋತ್ಸವ" ನಡೆಯಲಿದೆ. 


ಈ ಹಿಂದೆ ಜನವರಿ 15 ರಿಂದ 19 ರ ವರೆಗೆ ನಿಗದಿಯಾಗಿದ್ದ ಸ್ಟ್ರೀಟ್ ಫುಡ್ ಫಿಯೆಸ್ಟದ ದಿನಾಂಕದಲ್ಲಿ ಅಲ್ಪ ಬದಲಾವಣೆಯಾಗಿದ್ದು ಜನವರಿ 17ರ ಸಂಜೆ ಮಂಗಳೂರು ನಗರದಲ್ಲಿ ನಡೆಯುತ್ತಿರುವ ಕರಾವಳಿ ಉತ್ಸವಕ್ಕೆ ರಾಜ್ಯದ ಮುಖ್ಯಮಂತ್ರಿಗಳಾದ ಶ್ರೀ ಸಿದ್ದರಾಮಯ್ಯನವರು ಆಗಮಿಸುತ್ತಿರುವ ಹಿನ್ನಲೆಯಲ್ಲಿ ಭದ್ರತೆ ಹಾಗೂ ಇನ್ನಿತರ ಕಾರಣಗಳಿಗೆ ಜಿಲ್ಲಾಡಳಿತದ ಮನವಿಯ ಮೇರೆಗೆ ಸ್ಟ್ರೀಟ್ ಫುಡ್ ಫಿಯೆಸ್ಟದ ದಿನಾಂಕದಲ್ಲಿ ಬದಲಾವಣೆ ಮಾಡಲು ಕಾರ್ಯಕ್ರಮದ ಆಯೋಜಕರು ತೀರ್ಮಾನಿಸಿದ್ದಾರೆ. 



ಸ್ಟ್ರೀಟ್ ಫುಡ್ ಫಿಯೆಸ್ಟಾಗೆ ಎಲ್ಲಾ ತಯಾರಿಗಳು ಭರದಿಂದ ಸಾಗಿದ್ದು ಈಗಾಗಲೇ ಆನ್ ಲೈನ್ ಮೂಲಕ ನೂರಕ್ಕೂ ಅಧಿಕ ಸಂಖ್ಯೆಯ ಆಹಾರ ಮಳಿಗೆಗಳು ನೋಂದಾಯಿಕೊಂಡಿದ್ದು, ಕೆಲವೇ ಕೆಲವು ಮಳಿಗೆಗಳು ಮಾತ್ರ ಬಾಕಿ ಉಳಿದಿವೆ. ಆಸಕ್ತರು ಕೂಡಲೇ ಆನ್ ಲೈನ್ ಮೂಲಕವೇ ನೋಂದಾಯಿಸಿಕೊಳ್ಳುವಂತೆ ಮನವಿ.


ಕಳೆದ ಎರಡು ಆವೃತ್ತಿಗಳ ಮಂಗಳೂರಿನ ಸ್ಟ್ರೀಟ್ ಫುಡ್ ಫಿಯೆಸ್ಟ ಲಕ್ಷಾಂತರ ಜನರನ್ನು ಆಕರ್ಷಿಸಿ ಭಾರೀ ಜನಮನ್ನಣೆ ಪಡೆದು ಅತ್ಯಂತ ಯಶಸ್ವಿಯಾಗಿತ್ತು. ಅದರ ಮುಂದುವರಿದ ಭಾಗವಾಗಿ ಸೀಸನ್-3 ಗೆ ಕ್ಷಣಗಣನೆ ಆರಂಭವಾಗಿದ್ದು ಸಾರ್ವಜನಿಕ ವಲಯದಲ್ಲಿ ಅತ್ಯುತ್ತಮ ಸ್ಪಂದನೆ ಹಾಗೂ ನಿರೀಕ್ಷೆ ಗರಿಗೆದರಿದೆ. ಈ ಹಿಂದಿನಂತೆಯೇ ಗ್ರಾಹಕರಿಗೆ ತುಳುನಾಡಿನ ಸಾಂಪ್ರದಾಯಿಕ ಆಹಾರ ಶೈಲಿ ಮಾತ್ರವಲ್ಲದೇ, ವಿಶಿಷ್ಟವಾದ ಕರಾವಳಿ ಖಾದ್ಯ, ಉತ್ತರ ಕರ್ನಾಟಕ, ಗುಜರಾತಿ, ಆಂಧ್ರ, ಪಂಜಾಬಿ ಸೇರಿದಂತೆ ದಕ್ಷಿಣ ಭಾರತೀಯ, ಉತ್ತರ ಭಾರತೀಯ, ಸಸ್ಯಾಹಾರಿ, ಮಾಂಸಾಹಾರಿ, ಹೀಗೆ ಬಹು ಬೇಡಿಕೆಯ ವಿವಿಧ ಶೈಲಿಯ ಸಾಂಪ್ರದಾಯಿಕ ಆಹಾರ ಮಳಿಗೆಗಳು ಇರಲಿವೆ. ಅದರಲ್ಲೂ ಈ ಬಾರಿ ಸಾರ್ವಜನಿಕರ ಬೇಡಿಕೆಯ ಮೇರೆಗೆ ಸಸ್ಯಾಹಾರಿ ಮತ್ತು ಮಾಂಸಹಾರಿಗಳಿಗೆ ಪ್ರತ್ಯೇಕ ಕೌಂಟರ್ ಗಳ ವ್ಯವಸ್ಥೆಯನ್ನೂ ಮಾಡಲಾಗಿದೆ.


ಇನ್ನುಳಿದಂತೆ ಈ ಹಿಂದೆ ಇದ್ದಂತಹ ಹತ್ತು ಹಲವು ಮನರಂಜನಾ ಕಾರ್ಯಕ್ರಮಗಳು ಈ ಬಾರಿಯೂ ಸಹ ಇರಲಿದ್ದು ಮಕ್ಕಳ ಆಟದ ಜೋನ್ ಗೆ ವಿಶೇಷ ಪ್ರಾಧಾನ್ಯತೆ ನೀಡಲಾಗಿದ್ದು, ಐದೂ ದಿನಗಳಲ್ಲಿ ಏಕಕಾಲಕ್ಕೆ ಹಲವು ವೇದಿಕೆಗಳಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು, ಪ್ರತಿಭಾನ್ವಿತರಿಗಾಗಿ “ನಮ್ಮ ವೇದಿಕೆ- ನಿಮ್ಮ ಪ್ರತಿಭೆ”, ಸೆಲ್ಫಿ ಕೌಂಟರ್, ಹುಟ್ಟುಹಬ್ಬ ಮತ್ತು ವಿವಾಹ ವಾರ್ಷಿಕೋತ್ಸವವನ್ನು ಆಚರಿಸಲು ಅವಕಾಶ, ಹೀಗೆ ಹತ್ತು ಹಲವು ಮನರಂಜನಾ-ಸಾಂಸ್ಕೃತಿಕ ಕಾರ್ಯಕ್ರಮಗಳು ಇರಲಿವೆ. 


ಸಾರ್ವಜನಿಕರ ಸುರಕ್ಷತೆಗೆ ವಿಶೇಷ ಆದ್ಯತೆಯ ಜೊತೆಗೆ ಆಹಾರೋತ್ಸವ ನಡೆಯುವಲ್ಲಿ ಸ್ವಚ್ಛತೆಯ ಬಗ್ಗೆಯೂ ಹೆಚ್ಚಿನ ಕಾಳಜಿ ವಹಿಸಲಾಗಿದೆ. ಸಾರ್ವಜನಿಕರಿಗೆ ಯಾವುದೇ ರೀತಿಯ ತೊಂದರೆಯಾಗದಂತಿರಲು ಈ ಬಾರಿಯೂ ಕ್ರಮಬದ್ಧವಾದ ಪಾರ್ಕಿಂಗ್ ವ್ಯವಸ್ಥೆಯನ್ನು ಮಾಡಲಾಗಿದ್ದು ನಿಗದಿತ ಸ್ಥಳಗಳಲ್ಲದೇ, ರಸ್ತೆಯ ಬದಿಯಲ್ಲಿ ಎಲ್ಲಿಯೂ ವಾಹನ ಪಾರ್ಕಿಂಗ್ ಮಾಡದೇ ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸುವಂತೆ ಮನವಿ.


ಒಟ್ಟಾರೆಯಾಗಿ ಈ ಐದು ದಿನಗಳ ಸಂಭ್ರಮದ ವಾತಾವರಣದಲ್ಲಿ ಮಿಂದೇಳಲು ಕುಡ್ಲ ಸಾಂಸ್ಕೃತಿಕ ಪ್ರತಿಷ್ಠಾನವು ಸರ್ವರಿಗೂ ಆದರದ ಪ್ರೀತಿಯ ಸ್ವಾಗತವನ್ನು ಕೋರುತ್ತಿದೆ. ಪತ್ರಿಕಾಗೋಷ್ಟಿಯಲ್ಲಿ ಕುಡ್ಲ ಸಾಂಸ್ಕೃತಿಕ ಪ್ರತಿಷ್ಠಾನ ಗೌರವಾಧ್ಯಕ್ಷರಾದ ಶ್ರೀ ಗಿರಿಧರ್ ಶೆಟ್ಟಿ, ಅಧ್ಯಕ್ಷರಾದ ಶ್ರೀ ದಿವಾಕರ್ ಪಾಂಡೇಶ್ವರ್, ಪ್ರತಿಷ್ಠಾನದ ಪ್ರಮುಖರಾದ ಯತೀಶ್ ಬೈಕಂಪಾಡಿ, ಅಶ್ವಿತ್ ಕೊಟ್ಟಾರಿ, ಲಲಿತ್ ಮೆಂಡನ್, ಜಗದೀಶ್ ಕದ್ರಿ ಮೊದಲಾದವರು ಉಪಸ್ಥಿತರಿದ್ದರು.



   ಪಿಎಂ ಸೂರ್ಯ ಘರ್- ಮುಫ್ತ್ ಬಿಜಿಲಿ  ಯೋಜನೆಯ, "ಸೋಲರ್ ಕಾರ್ಯಗಾರ"ವು ಜ. 2 ರಂದು ಬೆಳಗ್ಗೆ 11.30ಕ್ಕೆ ಕಾವೂರಿನ ಸಹಕಾರಿ ಸೌದಾ ಸೊಸೈಟಿ ಹಾಲ್ ನಲ್ಲಿ ನಡೆಯಲಿದೆ. 

 ಈ ಕಾರ್ಯಕ್ರಮಕ್ಕೆ  ಭಾರತ ಸರಕಾರದ ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ನಾಗರಿಕ ವಿತರಣಾ ಮತ್ತು ನವೀಕರಿಸಬಹುದಾದ ಇಂಧನ ಸಚಿವರಾದ ಪ್ರಹ್ಲಾದ್ ಜೋಶಿ ಅವರು ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ.

  ಪ್ರಧಾನಮಂತ್ರಿಯವರಾದ ನರೇಂದ್ರ ಮೋದಿಯವರ ಮಹತ್ವಾಕಾಂಕ್ಷೆಯ ಯೋಜನೆಯ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಪಡೆಯುವ ಸಲುವಾಗಿ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಮಂಗಳೂರಿನ 'INERGEIA Solar Pvt. Ltd. ತಿಳಿಸಿದೆ.

 


ಲಖನೌ: ಪ್ರತಿ 12 ವರ್ಷಗಳಿಗೊಮ್ಮೆ ನಡೆಯುವ ಮಹಾ ಕುಂಭಮೇಳದಲ್ಲಿ ಭಾಗವಹಿಸಿ, ದೇವರ ದರ್ಶನ ಪಡೆಯುವಂತೆ ಉತ್ತರ ಪ್ರದೇಶ ಸರ್ಕಾರ ತಿಳಿಸಿದೆ.

ಈ ಸಂಬಂಧ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪೋಸ್ಟ್ ಹಂಚಿಕೊಂಡಿದ್ದು, ಮಹಾಕುಂಭ ಮೇಳದಲ್ಲಿ ಪಾಲ್ಗೊಂಡು ಬೃಹತ್‌ ಗಾತ್ರದಲ್ಲಿ ಕಂಚು ಸೇರಿದಂತೆ ಇತರೆ ಲೋಹಗಳಿಂದ ನಿರ್ಮಿಸಲಾಗಿರುವ ಶಿವನ 'ಡಮರು' ಮತ್ತು 'ತ್ರಿಶೂಲ'ವನ್ನು ಕಣ್ಣುಂಬಿಕೊಳ್ಳುವಂತೆ ಜನರನ್ನು ಕೋರಿದೆ.


ಜನಪದ ನಂಬಿಕೆಯ ಮಹಾನ್ ಹಬ್ಬವಾದ 'ಪ್ರಯಾಗ್ ರಾಜ್ ಮಹಾಕುಂಭ'ಕ್ಕೆ ಬರುವ ಭಕ್ತರಿಗೆ ಅನೇಕ ಪ್ರೇಕ್ಷಣೀಯ ಸ್ಥಳಗಳನ್ನು ಅಭಿವೃದ್ಧಿಪಡಿಸಲಾಗಿದೆ ಎಂದು ಮುಖ್ಯಮಂತ್ರಿ ಕಚೇರಿ ಪೋಸ್ಟ್‌ನಲ್ಲಿ ಹೇಳಿದೆ.

ಪ್ರತಿ 12 ವರ್ಷಗಳಿಗೊಮ್ಮೆ ನಡೆಯುವ ಮಹಾ ಕುಂಭ ಮೇಳವು ಜನವರಿ 13ರಿಂದ ಫೆಬ್ರುವರಿ 26ರವರೆಗೆ ನಡೆಯಲಿದೆ.


ಮಹಾಕುಂಭದಲ್ಲಿ ಸುಮಾರು 45 ಕೋಟಿ ಯಾತ್ರಿಕರು ಭಾಗವಹಿಸುವ ನಿರೀಕ್ಷೆ ಇದೆ.ಮಹಾಕುಂಭ ಮೇಳಕ್ಕೆ ಆಗಮಿಸುವ ಯಾತ್ರಿಕರ ಸುರಕ್ಷತೆಗಾಗಿ ಪ್ರಯಾಗರಾಜ್‌ನಾದ್ಯಂತ 50,000 ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗುವುದು ಎಂದು ಉತ್ತರ ಪ್ರದೇಶದ ಪೊಲೀಸ್ ಮಹಾನಿರ್ದೇಶಕ ಪ್ರಶಾಂತ್ ಕುಮಾರ್ ಹೇಳಿದ್ದಾರೆ.

ಪ್ರಯಾಗರಾಜ್‌ನಲ್ಲಿ ನಡೆಯುವ ಕುಂಭಮೇಳ ಹಾಗೂ ಮಹಾ ಕುಂಭಕ್ಕೆ ಕೋಟ್ಯಂತರ ಯಾತ್ರಿಕರು ಭೇಟಿ ನೀಡುವುದು ವಾಡಿಕೆ.


ಆದರೆ ಸುಧಾರಿತ ತಂತ್ರಜ್ಞಾನದ ಕೊರತೆಯಿಂದಾಗಿ, ಮೇಳಕ್ಕೆ ಭೇಟಿ ನೀಡುವ ಯಾತ್ರಿಕರ ಸಂಖ್ಯೆಯನ್ನು ಲೆಕ್ಕ ಹಾಕುವುದು ಈವರೆಗೆ ಸವಾಲಾಗಿತ್ತು. ಹಾಗಾಗಿ, ಈ ಬಾರಿ ಎ.ಐ ಆಧಾರಿತ 2,700 ಸಿ.ಸಿ.ಟಿ.ವಿ ಕ್ಯಾಮೆರಾ ಅಳವಡಿಸುತ್ತಿದ್ದು, ಯಾತ್ರಿಕರ ಸಂಖ್ಯೆಯನ್ನು ನಿಖರವಾಗಿ ತಿಳಿಯಲು ಸಾಧ್ಯವಾಗಲಿದೆ' ಎಂದಿದ್ದಾರೆ.


ಮಹಿಳೆಯರ ಭದ್ರತೆಯನ್ನು ಗಮನದಲ್ಲಿಟ್ಟುಕೊಂಡು ಮೂರು ಮಹಿಳಾ ಪೊಲೀಸ್ ಠಾಣೆಗಳು, 10 ಪಿಂಕ್ ಬೂತ್‌ಗಳು ಮತ್ತು ಮಹಿಳಾ ಪೊಲೀಸ್ ಪಡೆಯ ದೊಡ್ಡ ತುಕಡಿಯನ್ನು ನಿಯೋಜಿಸಲಾಗುವುದು ಎಂದಿದ್ದಾರೆ.

 ಮಾಜಿ ಪ್ರಧಾನಿ ಮನಮೋಹನ್​ ಸಿಂಗ್​ ಅವರಿಗೆ ಭಾರತ ರತ್ನ ನೀಡಲು ಆಗ್ರಹಿಸಿ ತೆಲಂಗಾಣ ವಿಧಾನಸಭೆ ನಿರ್ಣಯ ಅಂಗೀಕರಿಸಿದೆ.



ಹೈದರಾಬಾದ್ : ಒಂದೆಡೆ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರ ನಿಧನ ಬಳಿಕ ರಾಷ್ಟ್ರ ಮಟ್ಟದಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್​ ನಡುವೆ ರಾಜಕೀಯದ ಚರ್ಚೆ ಜೋರಾಗಿದೆ. ಸಿಂಗ್ ಅವರ ಸ್ಮಾರಕ ನಿರ್ಮಾಣಕ್ಕೆ ಕೇಂದ್ರ ಸರ್ಕಾರ ಒಪ್ಪಿಗೆ ನೀಡಿದೆ. ಆದರೆ, ಅಂತಿಮ ವಿಧಿವಿಧಾನ ಜರುಗಿದ ದೆಹಲಿಯ ನಿಗಮಬೋಧ್ ಘಾಟ್‌ನಲ್ಲೇ ಮೆಮೋರಿಯಲ್​ ನಿರ್ಮಾಣ ಮಾಡಬೇಕು ಎಂದು ಕಾಂಗ್ರೆಸ್​​ ಒತ್ತಾಯಿಸುತ್ತಿದೆ. ಈ ಮಧ್ಯೆ ತೆಲಂಗಾಣ ವಿಧಾನಸಭೆಯಲ್ಲಿ ಸೋಮವಾರ ಸಂತಾಪ ಸೂಚಿಸಲಾಯಿತು. ಆರ್ಥಿಕ ತಜ್ಞನಿಗೆ 'ಭಾರತ ರತ್ನ' ನೀಡಲು ಒತ್ತಾಯಿಸಿ ಕಾಂಗ್ರೆಸ್​ ಮಂಡಿಸಿದ ನಿಲುವಳಿಗೆ ಸರ್ವಪಕ್ಷಗಳು ಅವಿರೋಧವಾಗಿ ಒಪ್ಪಿಗೆ ಸೂಚಿಸಿವೆ.


ಸೋಮವಾರ ಬೆಳಗ್ಗೆ 10 ಗಂಟೆಗೆ ವಿಧಾನಸಭೆಯ ಸದನ ಆರಂಭದ ಬಳಿಕ ಮಾಜಿ ಪ್ರಧಾನಿಯ ನಿಧನಕ್ಕೆ ಸಂತಾಪ ಸೂಚಿಸಲು ಸ್ಪೀಕರ್ ಪ್ರಸಾದ್ ಕುಮಾರ್ ಅವರು ಹೇಳಿದರು. 2 ನಿಮಿಷಗಳ ಕಾಲ ಮೌನಾಚರಣೆ ಮಾಡಲಾಯಿತು.


ಅತ್ಯುನ್ನತ ಗೌರವಕ್ಕಾಗಿ ಒತ್ತಾಯ: ಬಳಿಕ ಮುಖ್ಯಮಂತ್ರಿ ರೇವಂತ್​ ರೆಡ್ಡಿ ಅವರು, ಮಾಜಿ ಪ್ರಧಾನಿಯ ಸಾಧನೆಗೆ ದೇಶದ ಅತ್ಯುನ್ನತ ಗೌರವವಾದ ಭಾರತ ರತ್ನವನ್ನು ನೀಡಬೇಕು ಎಂದು ಕೇಂದ್ರ ಸರ್ಕಾರವನ್ನು ಒತ್ತಾಯಿಸಲು ನಿಲುವಳಿ ಮಂಡಿಸಿದರು. ಈ ನಿರ್ಣಯಕ್ಕೆ ಎಲ್ಲ ವಿಪಕ್ಷಗಳೂ ಒಪ್ಪಿಗೆ ಸೂಚಿಸಿದ್ದರಿಂದ ಅವಿರೋಧವಾಗಿ ಅಂಗೀಕರಿಸಲಾಯಿತು.

ನಿಲುವಳಿ ಮಂಡಿಸಿ ಮಾತನಾಡಿದ ಸಿಎಂ ರೇವಂತ್ ರೆಡ್ಡಿ, ಮಾಜಿ ಪ್ರಧಾನಿಯವರ ನಿಧನ ದೇಶಕ್ಕೆ ತುಂಬಲಾರದ ನಷ್ಟ. ಮನಮೋಹನ್ ಸಿಂಗ್ ನೇತೃತ್ವದ ಯುಪಿಎ ಸರ್ಕಾರವು ಜಾರಿಗೆ ತಂದ ಉದ್ಯೋಗ ಖಾತ್ರಿ ಯೋಜನೆ (ಮನರೇಗಾ), ಮಾಹಿತಿ ಹಕ್ಕು, ಭೂ ಸ್ವಾಧೀನ ಕಾಯ್ದೆಗಳು ಮಹತ್ತರ ಮೈಲುಗಲ್ಲಾಗಿವೆ ಎಂದು ಬಣ್ಣಿಸಿದರು.

ಸಿಂಗ್​ ಅವರು ಪ್ರಧಾನಿಯಾಗಿದ್ದಾಗ ತೆಲಂಗಾಣಕ್ಕೆ ರಾಜ್ಯ ಸ್ಥಾನಮಾನ ನೀಡಿ, ಇಲ್ಲಿನ ಜನತೆಯ ಆಶೋತ್ತರಗಳನ್ನು ಈಡೇರಿಸಿದ ಮಹಾನ್ ನಾಯಕ. ಇದರ ಗೌರವಾರ್ಥವಾಗಿ ಹೈದರಾಬಾದ್‌ನಲ್ಲಿ ಅವರ ಪ್ರತಿಮೆ ಸ್ಥಾಪಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ ಎಂದು ಹೇಳಿದರು.


ವಿಪಕ್ಷ ಭಾರತ ರಾಷ್ಟ್ರ ಸಮಿತಿ (BRS) ಪರವಾಗಿ ಕಾರ್ಯಾಧ್ಯಕ್ಷ ಕೆ.ಟಿ. ರಾಮರಾವ್ ಅವರು ನಿರ್ಣಯವನ್ನು ಬೆಂಬಲಿಸಿದರು. ಸಿಂಗ್ ಅವರು "ಆಧುನಿಕ ಭಾರತದ ವಾಸ್ತುಶಿಲ್ಪಿ" ಎಂದು ಹೊಗಳಿದರು. ಜೊತೆಗೆ, ಮಾಜಿ ಪ್ರಧಾನಿ ಪಿ. ವಿ. ನರಸಿಂಹರಾವ್ ಅವರ ಸ್ಮಾರಕವನ್ನು ರಾಜಧಾನಿಯಲ್ಲಿ ಸ್ಥಾಪಿಸುವ ನಿರ್ಣಯವನ್ನೂ ವಿಧಾನಸಭೆಯು ಅಂಗೀಕರಿಸಬೇಕು ಎಂದು ಅವರು ಇದೇ ವೇಳೆ ಸರ್ಕಾರಕ್ಕೆ ಮನವಿ ಮಾಡಿದರು.


ಪ್ರತಿಪಕ್ಷದ ನಾಯಕ ಕೆ. ಚಂದ್ರಶೇಖರ್ ರಾವ್ ಅವರು ಕಲಾಪಕ್ಕೆ ಗೈರಾಗಿದ್ದರು. ಭಾರತದ ಆರ್ಥಿಕ ಸುಧಾರಣೆಗಳ ಶಿಲ್ಪಿ ಮನಮೋಹನ್ ಸಿಂಗ್ (92) ಅವರು ಡಿಸೆಂಬರ್ 26 ರಂದು ನವದೆಹಲಿಯ ಏಮ್ಸ್‌ನಲ್ಲಿ ನಿಧನರಾದರು.

 


 ಡಿ. 27ರಂದು ಮಡಿಕೇರಿ ತಾಲೂಕು ಕಟ್ಟೆ ಮಾಡುವಿನ ಶ್ರೀ ಮಹಾ ಮೃತ್ಯುಂಜಯ ದೇವಸ್ಥಾನದ ವಾರ್ಷಿಕೋತ್ಸವ ಸಂದರ್ಭದಲ್ಲಿ ಸಾಂಪ್ರದಾಯಿಕ ಉಡುಗೆ ಧರಿಸುವ ವಿಚಾರವಾಗಿ ನಡೆದ ಘಟನೆಯಿಂದ ಜಿಲ್ಲೆಯಲ್ಲಿ ಎರಡು ಜನಾಂಗಗಳ ಮಧ್ಯೆ ಕಂದಕ ಏರ್ಪಡುವ ಪರಿಸ್ಥಿತಿ ಎದುರಾಗಿರುವುದು ವಿಷಾದನೀಯ.

ವಾಟ್ಸಪ್ ಗಳಲ್ಲಿ ಬಂದಿರುವ ವಿಡಿಯೋದಲ್ಲಿ ಮಾತಾಡಿರುವವರು ಕೊಡಗು ಜಿಲ್ಲಾ ಬಿಜೆಪಿಯ ಉಪಾಧ್ಯಕ್ಷರಾಗಿರುವ ಕಾಂಗೀರ ಸತೀಶ್ ರವರು ಸರಿಯಷ್ಟೇ ಆದರೆ ಅಲ್ಲಿ ನೀಡಿರುವ ಹೇಳಿಕೆಗಳು ಅವರ ವೈಯಕ್ತಿಕ ಹೇಳಿಕೆಯಾಗಿದ್ದು ಇದಕ್ಕೂ ಪಕ್ಷಕ್ಕೂ ಯಾವುದೇ ಸಂಬಂಧ ಇರುವುದಿಲ್ಲ ಅಲ್ಲಿ ನಡೆದ ಘಟನೆಗೆ ದೇವಸ್ಥಾನದ ಆಡಳಿತ ಮಂಡಳಿಯವರು ಹಾಗೂ ಆ ಊರಿನ ಜನತೆ ವಾಸ್ತವಥೆಯನ್ನು ತಿಳಿಸಬೇಕು.         


 ಈ ವಾರ್ಷಿಕೋತ್ಸವವು ಬಿಜೆಪಿ ಪ್ರಾಯೋಜಿತ ಕಾರ್ಯಕ್ರಮವಾಗಿರುವುದಿಲ್ಲ ಆದುದರಿಂದ ಈ ಘಟನೆಗೂ ಬಿಜೆಪಿಗೂ ಯಾವುದೇ ಸಂಬಂಧ ಇರುವುದಿಲ್ಲ ಆದರೂ ಬಿಜೆಪಿ ಜಿಲ್ಲೆಯಲ್ಲಿ ಶಾಂತಿಭಂಗ ಆಗಬಾರದು ಎಂಬ ಉದ್ದೇಶದಿಂದ ಜನತೆಯಲ್ಲಿ ವಿನಂತಿಸುವುದೇನೆಂದರೆ ಯಾವುದೇ ದೇವಸ್ಥಾನ ಪೂಜಾ ಕಾರ್ಯ ಹಾಗೂ ಶುಭಕಾರ್ಯಗಳಿಗೆ ಯಾವುದೇ ಹಿಂದೂ ಜನಾಂಗದವರು ಅವರವರ ಸಾಂಪ್ರದಾಯಿಕ ಉಡುಪು ಧರಿಸಿ ಬರುವುದನ್ನು ತಡೆಯಬಾರದು  


     ಈ ರೀತಿ ದೇವಸ್ಥಾನ ಆಡಳಿತ ಮಂಡಳಿಯವರು ನಿಯಮ ಮಾಡಿದ್ದರೆ ಅದನ್ನು ಪುನರ್ ಪರಿಶೀಲಿಸಬೇಕು. ಎಲ್ಲಾ ಹಿಂದೂ ಜನಾಂಗದವರು ಅವರವರ ಸಾಂಪ್ರದಾಯಿಕ ಉಡುಗೆ ಹಾಕಿ ಬರಲು ಅವಕಾಶ ಕಲ್ಪಿಸುವ ಮೂಲಕ ಸಮಾಜದ ಸ್ವಾಸ್ಥ್ಯವನ್ನು ಕಾಪಾಡಬೇಕೆಂದು ವಿನಂತಿಸುತ್ತೇವೆ 



    ಕಾಂಗೀರ ಸತೀಶ್ ಅವರು ದೇವಸ್ಥಾನದ ನಿಯಮಗಳನ್ನು ಹೇಳಿದ್ದರೂ ಕೊಡವರ ಉಡುಪು ಕಳಚಿ ಬರಬೇಕೆಂದು ಹೇಳಿರುವ ಹೇಳಿಕೆಗೆ ಸಮಾಜದ ಸ್ವಾಸ್ಥ್ಯ ಕಾಪಾಡುವ ದೃಷ್ಟಿಯಿಂದ ವಿಷಾದ ವ್ಯಕ್ತಪಡಿಸ ಬೇಕೆಂದು ಜಿಲ್ಲಾ ಬಿಜೆಪಿ ಅವರಿಗೆ ಸೂಚಿಸಿದ್ದು ಆ ಕೆಲಸ ಮಾಡುವ ಮೂಲಕ ಸಮುದಾಯಗಳನ್ನು ಒಂದುಗೂಡಿಸುವ ಕಾರ್ಯ ಮಾಡಬೇಕೆಂದು ಬಿಜೆಪಿ ಬಯಸುತ್ತದೆ ಎಂದು ಜಿಲ್ಲಾ ಬಿಜೆಪಿ ಅಧ್ಯಕ್ಷ ರವಿ ಕಾಳಪ್ಪ ಹೇಳಿಕೆಯಲ್ಲಿ ತಿಳಿಸಿದ್ದಾರೆ.

 

ಲಿಂಕ್ ಓಪನ್ ಮಾಡಿದ್ರೆ ಕಥೆ ಅಷ್ಟೇ!



ಮಂಗಳೂರು: ಹೊಸ ವರ್ಷ ಆಚರಣೆ ನೆಪ ಬಳಸಿಕೊಂಡು ಸೈಬ‌ರ್ ಕ್ರಿಮಿನಲ್‌ ಗಳು ಸಾರ್ವಜನಿಕರ ಮೊಬೈಲ್‌ಗಳಿಗೆ ಅಪಾಯಕಾರಿ ಲಿಂಕ್, APK ಫೈಲ್ ಕಳುಹಿಸಿ ಸಾರ್ವಜನಿಕರ ಮೊಬೈಲ್ ಗಳನ್ನು ಹ್ಯಾಕ್ ಮಾಡುವ ಸಾಧ್ಯತೆ ಇದ್ದು, ಈ ಬಗ್ಗೆ ಎಚ್ಚರಿಕೆ ವಹಿಸುವಂತೆ


ಪೊಲೀಸರು ಎಚ್ಚರಿಕೆ ನೀಡಿದ್ದಾರೆ. 'ಶುಭಾಶಯ' ಬರಬಹುದು!

ಸಾರ್ವಜನಿಕರು ತಮ್ಮ ಮೊಬೈಲ್‌ಗೆ ಈ ರೀತಿಯ ಹೊಸ ವರ್ಷದ ಶುಭಾಶಯ ಕೋರುವ ಯಾವುದೇ ಹಾನಿಕಾರಕ ಲಿಂಕ್‌ಗಳು, APK ಫೈಲ್‌ಗಳನ್ನು ವಾಟ್ಸ್‌ಆ್ಯಪ್ ಸೇರಿದಂತೆ ಯಾವುದೇ ಸಾಮಾಜಿಕ ಜಾಲತಾಣದಿಂದ ಸ್ವೀಕರಿಸಿ ಕೊಂಡಲ್ಲಿ ಅದನ್ನು ತಕ್ಷಣ ಡಿಲೀಟ್ ಮಾಡಲು ಮಂಗಳೂರು ನಗರ ಸೆನ್ ಕ್ರೈಮ್ ಪೊಲೀಸರು ತಿಳಿಸಿದ್ದಾರೆ.

ಯಾವುದೇ ಕಾರಣಕ್ಕೂ ಇಂತಹಾ ಹಾನಿಕರ ಲಿಂಕ್ ಮತ್ತು APK ಫೈಲ್ ಗಳನ್ನು ಯಾರಿಗೂ ಶೇರ್ ಮಾಡದಿರಿ. ಹಾನಿಕಾರಕ ಲಿಂಕ್ ಮತ್ತು APK ಫೈಲ್ ವಾಟ್ಸ್ ಆ್ಯಪ್ ಗ್ರೂಪ್‌ ಗಳಿಗೆ ನಿಮ್ಮ ಪರಿಚಿತ ವಾಟ್ಸ್‌ಆ್ಯಪ್‌ನಿಂದ ಪೋಸ್ಟ್ ಮಾಡಿದಲ್ಲಿ ಆಯಾ ಗ್ರೂಪ್ ಅಡ್ಮಿನ್ ಗಳು ಅಂತಹ ಲಿಂಕ್, ಫೈಲ್ ಪರಿಶೀಲನೆ ಮಾಡಿ ಡಿಲೀಟ್ ಮಾಡುವಂತೆ ಕೂಡಾ ಪೊಲೀಸರು ತಿಳಿಸಿದ್ದಾರೆ.



ಏನು ಮಾಡುತ್ತಾರೆ? ಏನಾಗಬಹುದು?

2025ನೇ ಹೊಸ ವರ್ಷದ ಸಂದರ್ಭವನ್ನು ಬಳಸಿಕೊಂಡು ಸಾರ್ವಜನಿಕರ ಮೊಬೈಲ್ ಗಳಿಗೆ ಸೈಬ‌ರ್ ಕ್ರಿಮಿನಲ್‌ಳು ಹಾನಿಕಾರಕ ಲಿಂಕ್, ಅಪ್ಲಿಕೇಶನ್ ಗಳನ್ನು ಕಳುಹಿಸಿ ಬಳಿಕ ಅವರ ಮೊಬೈಲ್‌ಗಳನ್ನು ಹ್ಯಾಕ್ ಮಾಡುವ ಸಾಧ್ಯತೆ ಇರುತ್ತದೆ. ನಂತರ ಹ್ಯಾಕ್ ಮಾಡಿದ ಮೊಬೈಲಿನಿಂದ ಅವರ ವಾಟ್ಸ್ ಆ್ಯಪ್ ಸೇರಿದಂತೆ ಸಾಮಾಜಿಕ ಜಾಲತಾಣಗಳ ಮೂಲಕ ಹಾನಿಕಾರಕ ಲಿಂಕ್ ಮತ್ತು APK ಫೈಲ್‌ಗಳನ್ನು ದೊಡ್ಡಮಟ್ಟದಲ್ಲಿ ಶೇರ್ ಮಾಡುವ ಸಾಧ್ಯತೆ ಹೆಚ್ಚಾಗಿ ಇರುತ್ತದೆ ಎನ್ನುತ್ತಾರೆ ಪೊಲೀಸರು.




 


ಕೋಲ್ಕತ್ತ: ಪ್ರತಿಕೂಲ ಹವಾಮಾನದಿಂದ ಪ್ರಸಕ್ತ ಕ್ಯಾಲೆಂಡರ್ ವರ್ಷದಲ್ಲಿ ದೇಶದ ಚಹಾ ಉತ್ಪಾದನೆಯಲ್ಲಿ 10 ಕೋಟಿ ಕೆ.ಜಿಗೂ ಹೆಚ್ಚು ಕುಸಿತವಾಗಬಹುದು ಎಂದು ಅಂದಾಜು ಮಾಡಲಾಗಿದೆ ಎಂದು ಉದ್ಯಮವು ಸೋಮವಾರ ಹೇಳಿದೆ. ಉತ್ಪಾದನೆಯಲ್ಲಿನ ಇಳಿಕೆಯಿಂದಾಗಿ ಚಹಾ ಬೆಲೆ ಏರಿಕೆಯಾಗುವ ಸಾಧ್ಯತೆ ಇದೆ ಎಂದು ಹೇಳಿದೆ.

2023ರ ಜನವರಿ-ಅಕ್ಟೋಬರ್ ಅವಧಿಯಲ್ಲಿ 117.8 ಕೋಟಿ ಕೆ.ಜಿ ಚಹಾ ಉತ್ಪಾದನೆಯಾಗಿತ್ತು. ಆದರೆ, ಪ್ರಸಕ್ತ ವರ್ಷದ ಇದೇ ಅವಧಿಯಲ್ಲಿ 111.2 ಕೋಟಿ ಕೆ.ಜಿ ಉತ್ಪಾದನೆಯಾಗಿದ್ದು, 6.6 ಕೋಟಿ ಕೆ.ಜಿಯಷ್ಟು ಕಡಿಮೆಯಾಗಿದೆ. ಡಿಸೆಂಬ‌ರ್ ಅಂತ್ಯದ ವೇಳೆಗೆ 4.5 ಕೋಟಿ ಕೆ.ಜಿಯಿಂದ 5 ಕೋಟಿ ಕೆ.ಜಿಯಷ್ಟು ಉತ್ಪಾದನೆಯಲ್ಲಿ ಕಡಿಮೆಯಾಗುವ ನಿರೀಕ್ಷೆ ಇದೆ ಎಂದು ಭಾರತೀಯ ಚಹಾ ಮಂಡಳಿ (ಟಿಎಐ) ಅಧ್ಯಕ್ಷ ಹೇಮಂತ್ ಬಂಗೂ‌ರ್ ಹೇಳಿದ್ದಾರೆ.


ಕಳೆದ ವರ್ಷ 23.1 ಕೋಟಿ ಕೆ.ಜಿಯಷ್ಟು ಚಹಾ ರಫ್ತಾಗಿತ್ತು. ಅದು ಈ ಬಾರಿ 25 ಕೋಟಿ ಕೆ.ಜಿಗೆ ತಲುಪುವ ಅಂದಾಜಿದೆ ಎಂದು ಹೇಳಿದ್ದಾರೆ.



'ಜಾಗತಿಕ ಬಿಕ್ಕಟ್ಟಿನ ನಡುವೆಯೂ ದೇಶದ ಚಹಾ ರಫ್ತು ಆರೋಗ್ಯಕರವಾಗಿದೆ. ವ್ಯಾಪಾರಿಗಳು ಹೆಚ್ಚಿನ ಚಹಾ ರಫ್ತು ಮಾಡಲು ಮುಂದಾಗಿದ್ದರಿಂದ ಸಾಗಣೆ ಪ್ರಮಾಣ ಹೆಚ್ಚಳವಾಗಿದೆ' ಎಂದು ಭಾರತೀಯ ಚಹಾ ರಫ್ತುದಾರರ ಸಂಘದ ಅಧ್ಯಕ್ಷ ಅಂಶುಮಾನ್ ಕನೋರಿಯಾ ಹೇಳಿದ್ದಾರೆ.

ಇರಾಕ್‌ಗೆ ಚಹಾ ರಟ್ಟಿನಲ್ಲಿ ಏರಿಕೆಯಾಗಿದ್ದು, ರಪ್ತಿನ ಶೇ 20ರಷ್ಟಿದೆ. ಪ್ರಸಕ್ತ ಆರ್ಥಿಕ ವರ್ಷದಲ್ಲಿ ಪಶ್ಚಿಮ ಏಷ್ಯಾದ ದೇಶಗಳಿಗೆ 4ರಿಂದ 5 ಕೋಟಿ ಕೆ.ಜಿ ರಫ್ತು ಮಾಡುವ ನಿರೀಕ್ಷೆಯಲ್ಲಿ ವ್ಯಾಪಾರಿಗಳು ಇದ್ದಾರೆ ಎಂದು ಕನೋರಿಯಾ ಹೇಳಿದ್ದಾರೆ.


ಈ ವರ್ಷದಲ್ಲಿ ಅನೇಕ ಚಹಾ ಬೆಳೆಯುವ ಪ್ರದೇಶಗಳು 35ರಿಂದ 40 ಡಿಗ್ರಿ ಸೆಲ್ಸಿಯಸ್ ತಾಪಮಾನವನ್ನು ಕಂಡಿವೆ. ಮಳೆ ಪ್ರಮಾಣವೂ ಕಡಿಮೆಯಾಗಿದೆ. ಇದು ಸರಾಸರಿ ಶೇ 20ರಷ್ಟು ಚಹಾ ಉತ್ಪಾದನೆಯ ಮೇಲೆ ಪರಿಣಾಮ ಬೀರಿತು ಎಂದು ಟಿಆರ್‌ಎ ಕಾರ್ಯದರ್ಶಿ ಜಾಯ್‌ದೀಪ್ ಫೂಕನ್ ಸುದ್ದಿಸಂಸ್ಥೆ ಪಿಟಿಐಗೆ ತಿಳಿಸಿದ್ದಾರೆ.


ಚಹಾ ಉತ್ಪಾದನೆಯಲ್ಲಿ ಇಳಿಕೆಯಿಂದ ಮುಂಬರುವ ವರ್ಷದಲ್ಲಿ ಚಹಾ ಬೆಲೆ ಏರಿಕೆಯಾಗುವ ಸಾಧ್ಯತೆ ಇದೆ ಎಂದು ಕ್ರೆಡಿಟ್ ರೇಟಿಂಗ್ ಸಂಸ್ಥೆ ಐಸಿಆರ್‌ಎ ತಿಳಿಸಿದೆ.


ಕಾಡುಮನೆ ಟೀ ಎಸ್ಟೇಟ್‌ನಲ್ಲೂ ಕುಸಿತ

ಹಾಸನ: 2 ಸಾವಿರ ಎಕರೆ ಪ್ರದೇಶದಲ್ಲಿರುವ ಜಿಲ್ಲೆಯ ಸಕಲೇಶಪುರ ತಾಲ್ಲೂಕಿನಲ್ಲಿ ಏಕೈಕ ಕಾಡುಮನೆ ಟೀ ಎಸ್ಟೇಟ್‌ನಲ್ಲಿಯೂ ಹವಾಮಾನ ವೈಪರೀತ್ಯದಿಂದ ಚಹಾ ಬೆಳೆಯಲ್ಲಿ ಶೇ 25ರಷ್ಟು ಕುಂಠಿತವಾಗಿದೆ.


'ಏಪ್ರಿಲ್-ಮೇನಲ್ಲಿ ಮಳೆ ಬರಬೇಕಿತ್ತು. ಆದರೆ, ಮಳೆಯ ಕೊರತೆ ಎದುರಾಯಿತು. ಸೆಪ್ಟೆಂಬರ್-ಅಕ್ಟೋಬರ್‌ನಲ್ಲಿ ಮಳೆ ನಿಂತು, ಬಿಸಿಲು ಬೇಕಿತ್ತು. ಆದರೆ, ಈ ವೇಳೆ ನಿರಂತರ ಮಳೆ ಸುರಿಯಿತು. ಹಾಗಾಗಿ ಚಹಾ ಬೆಳೆಯ ಮೇಲೆ ಹವಾಮಾನ ಪರಿಣಾಮ ಬೀರಿದೆ' ಎಂದು ಕಾಡುಮನೆ ಟೀ ಎಸ್ಟೇಟ್‌ನ ಪ್ರಧಾನ ವ್ಯವಸ್ಥಾಪಕ ಕಾರ್ಯಪ್ಪ ತಿಳಿಸಿದರು.


ಈ ಬಾರಿ ಸುರಿದ ಧಾರಾಕಾರ ಮಳೆಯಿಂದ ಕಾಡುಮನೆ ಎಸ್ಟೇಟ್‌ನಲ್ಲಿ ಭೂಕುಸಿತ ಉಂಟಾಗಿತ್ತು. ಅಲ್ಲದೇ ನಿರಂತರ ಮಳೆ ಸುರಿದ ಪರಿಣಾಮ, ಚಹಾದ ಉತ್ಪಾದನೆಯ ಮೇಲೆ ಪರಿಣಾಮ ಬೀರಿದೆ.

 ಮಾಜಿ ಸಂಸದ ಪ್ರತಾಪ್‌ ಸಿಂಹ ಕಾಂಗ್ರೆಸ್‌ ಪಕ್ಷಕ್ಕೆ ಸೇರಲಿದ್ದಾರೆ ಎಂಬ ವದಂತಿಗಳು ಎಲ್ಲೆಡೆ ಹರಿದಾಡುತ್ತಿದ್ದು, ಈ ಬಗ್ಗೆ ಸ್ವತಃ ಅವರೇ ಸ್ಪಷ್ಟನೆ ನೀಡಿದ್ದಾರೆ.



ಮೈಸೂರು: ನಗರದ ರಸ್ತೆಯೊಂದಕ್ಕೆ ಸಿಎಂ ಸಿದ್ದರಾಮಯ್ಯ ಅವರ ಹೆಸರು ಇಡೋದ್ರಲ್ಲಿ ತಪ್ಪೇನಿದೆ? ಎಂದಿದ್ದ ಬಿಜೆಪಿ ಮಾಜಿ ಸಂಸದ ಪ್ರತಾಪ್‌ ಸಿಂಹ ಅವರು ಕಾಂಗ್ರೆಸ್‌ ಸೇರಲಿದ್ದಾರೆ ಎನ್ನುವ ಚರ್ಚೆಗಳು ಎಲ್ಲೆಡೆ ನಡೆಯುತ್ತಿವೆ. ಈ ಬಗ್ಗೆ ಪ್ರತಾಪ್‌ ಸಿಂಹ ಅವರೇ ಸ್ಪಷ್ಟನೆ ನೀಡಿದ್ದಾರೆ.


ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, "ನನಗೆ ಕಾಂಗ್ರೆಸ್ಸಿಗೆ ಹೋಗಬೇಕಾದ ಅನಿವಾರ್ಯತೆ ಇಲ್ಲ. ನಮ್ಮದು ಸೈದ್ಧಾಂತಿಕ ಬದ್ಧತೆ ಇರುವ ಪಕ್ಷ. ಕಾಂಗ್ರೆಸ್​​ಗೆ ಹೋಗಬೇಕು ಎಂದಿದ್ದರೆ ಚುನಾವಣೆ ಸಂದರ್ಭದಲ್ಲಿಯೇ ಹೋಗಬಹುದಿತ್ತಲ್ಲವೇ?. ಆ ಪಕ್ಷದಿಂದ ಯಾರ‍್ಯಾರು ಫೋನ್ ಮಾಡಿ ನನಗೆ ಟಿಕೆಟ್ ಆಫರ್ ಮಾಡಿದ್ದರು ಎಂದು ಅವರ ಬಳಿ ಕೇಳಿ ನೋಡಿ. ಹೋಗುವುದಿದ್ದರೆ ಆಗಲೇ ಹೋಗುತ್ತಿದ್ದೆ" ಎಂದು ಸ್ಪಷ್ಟನೆ ನೀಡಿದರು.



"ನಾನು ಬಕೆಟ್ ಹಿಡಿಯುತ್ತಿದ್ದೇನೆ ಎಂದು ಪಕ್ಷದ ಕೆಲವರು ಹೇಳುತ್ತಿದ್ದಾರೆ. ಅವರ ಮಾತು ಸಭ್ಯತೆ ಮೀರಬಾರದು. ವರುಣಾದಲ್ಲಿ ಸಿದ್ದರಾಮಯ್ಯ ವಿರುದ್ಧ ಕೆಲಸ ಮಾಡಿದವನು ನಾನು. ನನ್ನ ವಿರುದ್ಧ ಸಾಕಷ್ಟು ಕೇಸ್ ಹಾಕಿಸಿದರು. ನಾನು ಬದ್ಧತೆ ಇರುವ ವ್ಯಕ್ತಿ, ಕಾಂಗ್ರೆಸ್ ಸೇರುವ ಪ್ರಶ್ನೆಯೇ ಇಲ್ಲ" ಎಂದು ಹೇಳಿದರು.

ಪ್ರತಾಪ್ ಸಿಂಹ ಯೂಟರ್ನ್: ಮೈಸೂರಿಗೆ ಸಿದ್ದರಾಮಯ್ಯನವರ ಕೊಡುಗೆ ಬಹಳ ಇದೆ. ಅವರ ಹೆಸರನ್ನು ರಸ್ತೆಗೆ ಇಡುವ ವಿಚಾರದಲ್ಲಿ ಸಂಕುಚಿತ ಮನೋಭಾವನೆ ಬೇಡ. ಅವರ ಹೆಸರನ್ನು ರಸ್ತೆಗೆ ಇಡೋದ್ರಲ್ಲಿ ತಪ್ಪೇನಿದೆ? ಎಂದಿದ್ದ ಮಾಜಿ ಸಂಸದ ಪ್ರತಾಪ್‌ ಸಿಂಹ ಇದೀಗ ಯೂಟರ್ನ್ ಹೊಡೆದಿದ್ದಾರೆ.


"ದಾಖಲೆಗಳಲ್ಲಿ ಪ್ರಿನ್ಸೆಸ್ ರಸ್ತೆ ಎಂದು ಹೆಸರಿದ್ದರೆ ಬದಲಾವಣೆ ಮಾಡುವುದು ಬೇಡ. ಕೆಆರ್‌ಎಸ್ ರಸ್ತೆಗೆ ಪ್ರಿನ್ಸೆಸ್ ರಸ್ತೆ ಎಂದು ಮಹಾರಾಜರ ಕಾಲದಲ್ಲೇ ಹೆಸರಿತ್ತು ಎನ್ನುವುದಾದರೆ ದಯವಿಟ್ಟು ಬದಲಾವಣೆ ಮಾಡುವುದು ಬೇಡ. ಸ್ಥಳೀಯ ಶಾಸಕ ಹರೀಶ್ ಗೌಡರಿಗೆ ನಾನೇ ಈ ಬಗ್ಗೆ ಮನವಿ ಮಾಡುತ್ತೇನೆ. ಮಹಾರಾಣಿಯವರ ಹೆಸರಿದ್ದರೆ ಬದಲಾವಣೆ ಮಾಡುವುದು ಬೇಡ‌. ಹೆಸರಿಲ್ಲದೆ ಖಾಲಿ‌ ಇದೆ ಎನ್ನುವ ಕಾರಣಕ್ಕೆ ಸಿದ್ದರಾಮಯ್ಯ ಅವರ ಹೆಸರನ್ನು ಇಡಬಹುದು ಎಂದು ಹೇಳಿದ್ದೆ. ದಯವಿಟ್ಟು ನೋಟಿಫಿಕೇಷನ್ ವಾಪಸ್ ತೆಗೆದುಕೊಳ್ಳಿ. ತಕರಾರು ಸಲ್ಲಿಸುವವರ ದಾಖಲೆಯನ್ನು ಒದಗಿಸಿ. ಕಾಂಟ್ರವರ್ಸಿಯನ್ನು ಇಲ್ಲಿಗೆ ಮುಗಿಸೋಣ" ಎಂದಿದ್ದಾರೆ.



 


ಹೊಸ ವರ್ಷಾಚರಣೆಯ ಸಂಭ್ರಮಕ್ಕೆ ಬೆಂಗಳೂರು ಸಮೀಪದಲ್ಲಿರುವ ಪ್ರವಾಸಿ ತಾಣವಾದ ನಂದಿಬೆಟ್ಟಕ್ಕೆ ಪ್ರವಾಸಿಗರಿಗೆ ನಿರ್ಬಂಧ ಹೇರಲಾಗಿದೆ. ನಾಳೆ (ಡಿಸೆಂಬರ್ 31) ಸಂಜೆ 6ರಿಂದ ನಾಡಿದ್ದು (ಜನವರಿ 1) ಬೆಳಗ್ಗೆ 7ರವರೆಗೆ ನಿರ್ಬಂಧ ವಿಧಿಸಲಾಗಿದೆ ಎಂದು ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿ ಪಿ.ಎನ್. ರವೀಂದ್ರ ಆದೇಶ ಹೊರಡಿಸಿದ್ದಾರೆ. ಚಿಕ್ಕಬಳ್ಳಾಪುರದ ಬಳಿ ಇರುವ ನಂದಿ ಗಿರಿಧಾಮ ಬಂದ್ ಆಗಲಿದೆ. ಹಾಗೇ, ನಂದಿಬೆಟ್ಟದ ಮೇಲಿನ ಗೆಸ್ಟ್‌ಹೌಸ್ ಬುಕ್ಕಿಂಗ್ ಅನ್ನು ಸಹ ರದ್ದುಗೊಳಿಸಲಾಗಿದೆ.

ವಿಶ್ವವಿಖ್ಯಾತ ನಂದಿ ಗಿರಿಧಾಮದಲ್ಲಿ ನ್ಯೂಇಯರ್ ಸೆಲೆಬ್ರೇಷನ್‌ಗೆ ನಿರ್ಬಂಧ ಹೇರಲಾಗಿದೆ. ನಂದಿ ಬೆಟ್ಟದ ಸುತ್ತ 150ಕ್ಕೂ ಹೆಚ್ಚು ಪೊಲೀಸರನ್ನು ನಿಯೋಜಿಸುತ್ತೇವೆ ಎಂದು ಚಿಕ್ಕಬಳ್ಳಾಪುರ ಪೊಲೀಸ್‌ ವರಿಷ್ಠಾಧಿಕಾರಿ ಕುಶಾಲ್ ಚೌಕ್ಸಿ ಹೇಳಿಕೆ ನೀಡಿದ್ದಾರೆ. ಚಿಕ್ಕಬಳ್ಳಾಪುರ ಜಿಲ್ಲಾಡಳಿತ ನಂದಿಗಿರಿಧಾಮ ಪ್ರವೇಶಕ್ಕೆ ಪ್ರವಾಸಿಗರ ನಿಷೇಧ ಹೇರಿದೆ. ಹೊಸ ವರ್ಷದಂದು ರಾತ್ರಿ ಸಮಯದಲ್ಲಿ ಸಂಭ್ರಮಾಚರಣೆಗೆ ನಿರ್ಬಂಧ ವಿಧಿಸಿದೆ.



ಪೊಲೀಸ್ ಇಲಾಖೆಯಿಂದ ಹೋಟೆಲ್ ರೆಸಾರ್ಟ್ ಮಾಲೀಕರ ಜೊತೆ ಸಭೆ ಮಾಡಲಾಗಿದೆ. ಹೋಂ ಸ್ಟೇ ರೆಸಾರ್ಟ್‌ಗಳಲ್ಲಿ ನಿಗದಿತ ಜನ ಮಾತ್ರ ಇರಬೇಕು. ಹೆಚ್ಚು ಜನ ಸೇರಿಕೊಂಡು ಪಾರ್ಟಿ ಮಾಡುವಂತಿಲ್ಲ, ಡಿಜೆ ಬ್ಯಾನ್ ಮಾಡಲಾಗಿದೆ. ಧ್ವನಿವರ್ಧಕಗಳನ್ನು 10 ಗಂಟೆಯವರೆಗೂ ಮಾತ್ರ ಬಳಸಬೇಕು. ಬೈಕ್ మిలింగా ಹಾಗೂ ರ್ಯಾಷ್ ಡ್ರೈವಿಂಗ್ ಮಾಡುವವರ ಮೇಲೂ ಹದ್ದಿನ ಕಣ್ಣು ಇಡಲಾಗುವುದು. ಹೊಸ ವರ್ಷದಂದು ಟ್ರಾಫಿಕ್ ನಿಯಂತ್ರಣಕ್ಕೆ ಹೆಚ್ಚಿನ ಪೊಲೀಸರ ನಿಯೋಜನೆ ಮಾಡಲಾಗಿದೆ.


ಈ ಬಾರಿ ಬೆಂಗಳೂರಿನಲ್ಲಿ ಸುಮಾರು 10 ಲಕ್ಷ ಜನರು ಹೊಸ ವರ್ಷದ ಸಂಭ್ರಮಾಚರಣೆಯಲ್ಲಿ ಭಾಗವಹಿಸೋ ನಿರೀಕ್ಷೆ ಇದೆ. ಕಾವೇರಿ ನದಿ ತೀರ, ಚಿಕ್ಕಮಗಳೂರಿನ ಪ್ರವಾಸಿ ತಾಣಗಳಿಗೆ ಪ್ರವಾಸಿಗರ ಪ್ರವೇಶ ನಿರ್ಬಂಧಿಸಲಾಗಿದೆ. ಬೆಂಗಳೂರಿನಲ್ಲಿ ನಾಳೆ ರಾತ್ರಿ 1 ಗಂಟೆವರೆಗೂ ಪಬ್, ಬಾರ್ ಓಪನ್‌ಗೆ ಅವಕಾಶ ನೀಡಲಾಗಿದೆ.

ಮಂಡ್ಯದಲ್ಲಿ ಹೊಸ ವರ್ಷಾಚರಣೆ ಹಿನ್ನೆಲೆ ಕಾವೇರಿ ನದಿ ತೀರಕ್ಕೆ ನಿರ್ಬಂಧ ಹೇರಲಾಗಿದೆ. KRS ಹಿನ್ನೀರು, ಬಲಮುರಿ, ಎಡಮುರಿ, ಮುತ್ತತ್ತಿ ಸೇರಿದಂತೆ ನದಿ ತೀರದ ಸ್ಥಳಗಳಿಗೆ ನಾಳೆ ಬೆಳಗ್ಗೆ 6 ಗಂಟೆಯಿಂದ ಜನವರಿ 1ರ ರಾತ್ರಿ 8ರವರೆಗೆ ಜನರ ಪ್ರವೇಶ ನಿಷೇಧ ಹೇರಲಾಗಿದೆ. ಕಾವೇರಿ ತೀರದಲ್ಲಿ ಮೋಜು-ಮಸ್ತಿಗೆ ಹೋದ್ರೆ ಕ್ರಮ ಕೈಗೊಳ್ಳಲಾಗುವುದು ಎಂದು ಮಂಡ್ಯ ಎಸ್‌ಪಿ ಮಲ್ಲಿಕಾರ್ಜುನ ಬಾಲದಂಡಿ ಖಡಕ್ ಎಚ್ಚರಿಕೆ ನೀಡಿದ್ದಾರೆ.

ಹೊಸ ವರ್ಷಾಚರಣೆ ಹಿನ್ನೆಲೆಯಲ್ಲಿ ಚಿಕ್ಕಮಗಳೂರಿನ ಮುಳ್ಳಯ್ಯನಗಿರಿ ಸೇರಿದಂತೆ ಪ್ರಮುಖ ಪ್ರವಾಸಿತಾಣಗಳಿಗೆ ನಿರ್ಬಂಧ ಹೇರಲಾಗಿದೆ. ನಾಳೆ ಸಂಜೆ 6 ಗಂಟೆಯಿಂದ ಜ.1ರ ಬೆಳಗ್ಗೆ 6ರವರೆಗೆ ನಿರ್ಬಂಧ ಹೇರಿ ಎಸ್‌ಪಿ ಸೂಚನೆ ನೀಡಿದ್ದಾರೆ. ರೇವ್ ಪಾರ್ಟಿ, ಡ್ರಗ್ಸ್ ಪಾರ್ಟಿ ಮಾಡಬಾರದು, ರಾತ್ರಿ ವೇಳೆ ಸೌಂಡ್ ಸಿಸ್ಟಮ್ ಹಾಕುವಂತಿಲ್ಲ ಕುಡಿದು ವಾಹನ ಚಾಲನೆ ಮಾಡಿದರೆ ಕೇಸ್ ದಾಖಲಿಸಲಾಗುವುದು ಎಂದು ಎಚ್ಚರಿಕೆ ನೀಡಲಾಗಿದೆ.

 

ಕರ್ನಾಟಕ ಸರ್ಕಾರದ ಕೃಷಿ ಇಲಾಖೆ ವ್ಯಾಪ್ತಿ ಒಳಪಟ್ಟ ಸುಳ್ಯ ತಾಲೂಕು ಕೃಷಿ ಕೃಷಿಕ ಸಮಾಜ ದ 2025-26 ರಿಂದ 2029-30 ಸಾಲಿನ ಕೃಷಿಕ ಸಮಾಜದ ಕಾರ್ಯಕಾರಿ ಸಮಿತಿಗೆ ನಾಳೆ ಅಧ್ಯಕ್ಷರು,ಉಪಾಧ್ಯಕ್ಷರು,ಪ್ರಧಾನ ಕಾರ್ಯದರ್ಶಿ,ಖಜಾಂಜಿ,ಜಿಲ್ಲಾ ಪ್ರತಿನಿಧಿ ಗಳಿಗೆ ಚುನಾವಣೆ ನಡೆಯಲಿದೆ.



ಸುಳ್ಯ ತಾಲೂಕು ಕೃಷಿಕ ಸಮಾಜ ಹಾಗೂ ಸಹಾಯಕ ಕೃಷಿ ನಿರ್ದೇಶಕರು ಸುಳ್ಯ ತಾಲೂಕು ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆಸಿಕೊಡಲಿದ್ದಾರೆ

 


ನವದೆಹಲಿ: ದೆಹಲಿಯಲ್ಲಿ ಆಮ್ ಆದ್ಮ ಪಕ್ಷವು ಅಧಿಕಾರಕ್ಕೆ ಮರಳಿದರೆ ದೇವಾಲಯ ಮತ್ತು ಗುರುದ್ವಾರದ ಅರ್ಚಕರಿಗೆ ತಲಾ ₹18,000 ಭತ್ಯೆ ನೀಡುವುದಾಗಿ ಎಎಪಿ ವರಿಷ್ಠ ಮಾಜಿ ಮುಖ್ಯಮಂತ್ರಿ ಅರವಿಂದ ಕೇಜ್ರವಾಲ್ ಘೋಷಿಸಿದ್ದಾರೆ.

ಅದಕ್ಕಾಗಿ, 'ಪೂಜಾರಿ- ಗ್ರಂಥಿ ಸಮ್ಮಾನ್ ಯೋಜನೆ'ಯನ್ನು ಅವರು ಪ್ರಕಟಿಸಿದ್ದಾರೆ.


ಇದೇ ಫೆಬ್ರುವರಿಯಲ್ಲಿ ದೆಹಲಿ ವಿಧಾನಸಭೆಗೆ ಚುನಾವಣೆ ನಡೆಯುತ್ತಿದೆ. ಅಧಿಕಾರ ಉಳಿಸಿಕೊಳ್ಳುವ ಪಣತೊಟ್ಟಿರುವ ಎಎಪಿ ಹಲವು ಯೋಜನೆಗಳನ್ನು ಘೋಷಿಸುತ್ತಿದೆ.


'ಅರ್ಚಕರು ಮತ್ತು ಗ್ರಂಥಿಗಳು ನಮ್ಮ ಸಮಾಜದ ಪ್ರಮುಖ ಭಾಗವಾಗಿದ್ದಾರೆ., ಆದರೆ, ಅವರು ಸಾಮಾನ್ಯವಾಗಿ ನಿರ್ಲಕ್ಷಿಸಲ್ಪಟ್ಟ ವರ್ಗದಲ್ಲಿದ್ದಾರೆ. ದೇಶದಲ್ಲೇ ಮೊದಲ ಬಾರಿಗೆ, ನಾವು ಅವರನ್ನು ಬೆಂಬಲಿಸುವ ಯೋಜನೆಯನ್ನು ಪರಿಚಯಿಸುತ್ತಿದ್ದೇವೆ. ಅದರ ಅಡಿಯಲ್ಲಿ ಅವರು ಮಾಸಿಕ ₹18,000ಗಳನ್ನು ಪಡೆಯುತ್ತಾರೆ'ಯೋಜನೆಗೆ ನೋಂದಣಿ ನಾಳೆಯಿಂದ ಪ್ರಾರಂಭವಾಗಲಿದೆ ಎಂದು ಕೇಜ್ರವಾಲ್ ಹೇಳಿದ್ದಾರೆ.ಮಂಗಳವಾರ ಖುದ್ದು ಕನ್ನಾಟ್ ಪ್ಲೇಸ್‌ನಲ್ಲಿರುವ ಹನುಮಾನ್ ಮಂದಿರಕ್ಕೆ ಭೇಟಿ ನೀಡಿ ಅಲ್ಲಿನ ಅರ್ಚಕರ ನೋಂದಣಿ ಪ್ರಕ್ರಿಯೆಯ ಮೇಲ್ವಿಚಾರಣೆ ನಡೆಸುವುದಾಗಿ ಹೇಳಿದ್ದಾರೆ.



ಮಹಿಳಾ ಸಮ್ಮಾನ್ ಯೋಜನೆಗೆ ಎಎಪಿ ದೆಹಲಿ ಮಹಿಳೆಯರ ವೈಯಕ್ತಿಕ ಮಾಹಿತಿ ಸಂಗ್ರಹಿಸುತ್ತಿದೆ ಎಂಬ ಆರೋಪಗಳ ಬಗ್ಗೆ ತನಿಖೆಗೆ ಲೆಫ್ಟಿನೆಂಟ್ ಗವರ್ನರ್ ವಿ.ಕೆ. ಸಕ್ಷೇನಾ ಆದೇಶಿಸಿದ ಬೆನ್ನಲ್ಲೇ ಈ ಕೇಜ್ರವಾಲ್ ಈ ಘೋಷಣೆ ಮಾಡಿದ್ದಾರೆ.


 


ಮುಂಬೈ: ಬಿಜೆಪಿ ನಾಯಕ, ಮಹಾರಾಷ್ಟ್ರ ಬಂದರು ಹಾಗೂ ಮೀನುಗಾರಿಕಾ ಸಚಿವ ನಿತೇಶ್ ರಾಣೆ ಅವರು ಕೇರಳವನ್ನು 'ಮಿನಿ ಪಾಕಿಸ್ತಾನ' ಎಂದು ಕರೆದಿದ್ದಾರೆ. ಇದು ಈಗ ವ್ಯಾಪಕ ಟೀಕೆಗೆ ಗುರಿಯಾಗಿದೆ.

ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹಾಗೂ ಅವರ ಸಹೋದರಿ ಪ್ರಿಯಾಂಕಾ ಗಾಂಧಿ ಕೇರಳದ ವಯನಾಡ್ ಕ್ಷೇತ್ರದಿಂದ ಗೆಲುವು ಸಾಧಿಸಿದ್ದನ್ನು ಉಲ್ಲೇಖಿಸಿ ರಾಣೆ ಹೀಗೆ ಹೇಳಿದ್ದಾರೆ.



'ಕೇರಳ ಮಿನಿ ಪಾಕಿಸ್ತಾನ. ಅದಕ್ಕಾಗಿಯೇ ರಾಹುಲ್ ಗಾಂಧಿ ಹಾಗೂ ಅವರ ಸಹೋದರಿ ಅಲ್ಲಿಂದ ಗೆಲುವು ಸಾಧಿಸಿದ್ದಾರೆ. ಎಲ್ಲಾ ಭಯೋತ್ಪಾದಕರು ಅವರಿಗೆ ಮತ ಹಾಕುತ್ತಾರೆ. ನಾನು ಸತ್ಯವನ್ನೇ ಹೇಳುತ್ತಿದ್ದೇನೆ. ಇವರೆಲ್ಲಾ ಭಯೋತ್ಪಾದಕರ ನೆರವಿನಿಂದ ಸಂಸದರಾಗುತ್ತಿದ್ದಾರೆ' ಎಂದು ರಾಣೆ ಹೇಳಿದ್ದಾರೆ.

ಅಫಲ್ ಖಾನ್ ಎದುರು ಛತ್ರಪತಿ ಶಿವಾಜಿಯ ಐತಿಹಾಸಿಕ ಗೆಲುವಿನ ಸಂಭ್ರಮ ವರ್ಷಾಚರಣೆ ವೇಳೆ ರಾಣೆ ಈ ಮಾತುಗಳನ್ನು ಆಡಿದ್ದಾರೆ.

2019ರಲ್ಲಿ ಕೇರಳದ ವಯನಾಡ್ ಹಾಗೂ ಉತ್ತರ ಪ್ರದೇಶದ ಅಮೇಠಿಯಿಂದ ಸ್ಪರ್ಧೆ ಮಾಡಿದ್ದ ರಾಹುಲ್ ಗಾಂಧಿ, ವಯನಾಡ್‌ನಲ್ಲಿ ಗೆದ್ದಿದ್ದರು. 2024ರಲ್ಲೂ ರಾಹುಲ್ ವಯನಾಡ್‌ನಲ್ಲಿ ಗೆಲುವು ಸಾಧಿಸಿದ್ದರು. ರಾಯ್‌ಬರೇಲಿ ಕ್ಷೇತ್ರವನ್ನು ಉಳಿಸಿಕೊಂಡು ವಯನಾಡ್ ಲೋಕಸಭಾ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ನಂತರ ನಡೆದ ಉಪಚುನಾವಣೆಯಲ್ಲಿ ಪ್ರಿಯಾಂಕಾ ಗಾಂಧಿ ಗೆದ್ದಿದ್ದರು.

ಬಿಜೆಪಿ ನಾಯಕನ ಈ ಹೇಳಿಕೆಗೆ ಕಾಂಗ್ರೆಸ್ ತಿರುಗೇಟು ನೀಡಿದೆ.


'ಮುಂಬರುವ ಚುನಾವಣೆಗಳಲ್ಲಿ ಕೇರಳದಲ್ಲಿ ಪಕ್ಷ ಸ್ಪರ್ಧೆ ಮಾಡುತ್ತದೆಯೋ ಇಲ್ಲವೋ ಎಂದು ಬಿಜೆಪಿ ಅಧ್ಯಕ್ಷ ಜೆ.ಪಿ. ನಡ್ಡಾ ಅವರನ್ನು ಪ್ರಶ್ನಿಸಿ. ಇಂಥ ಅಸಂವಿಧಾನಿಕ ಹೇಳಿಕೆಗಳು ಬಿಜೆಪಿ ನಾಯಕರಿಂದ ಪದೇ ಪದೇ ಬರುತ್ತಿರುತ್ತದೆ' ಎಂದು ಕಾಂಗ್ರೆಸ್ ನಾಯಕ ಪವನ್‌ ಖೇರಾ ಎಕ್ಸ್‌ನಲ್ಲಿ ಕಿಡಿ ಕಾರಿದ್ದಾರೆ.


ಈ ಹೇಳಿಕೆ ಬಗ್ಗೆ ಗಮನಿಸಬೇಕು ಎಂದು ಎನ್‌ಸಿಸಿಪಿ (ಶರದ್ವಂದ ಪವಾ‌ರ್) ಮುಖ್ಯಮಂತ್ರಿ ದೇವೇಂದ್ರ ಫಢಣವೀಸ್ ಅವರನ್ನು ಆಗ್ರಹಿಸಿದೆ.

 


ಅಶೋಕ್ ಲೈಲ್ಯಾಂಡ್ ದೋಸ್ತ್ ಗೆ ಅನುಭವಸ್ಥ ಡ್ರೈವರ್ಸ್ & ಡೆಲಿವರಿ ಬಾಯ್ ಕೆಲಸಕ್ಕೆ ಯುವಕರು ಬೇಕಾಗಿದ್ದಾರೆ. ವೇತನವನ್ನು ಅಶೋಕ್ ಲೈಲ್ಯಾಂಡ್ ದೋಸ್ತ್ ಡ್ರೈವರ್ ಗೆ ಆರಂಭಿಕ ವೇತನ 18 ಸಾವಿರ ನೀಡಲಾಗುವುದು, ಹಾಗೇ ಒಂದು ತಿಂಗಳ ನಂತರ 19 ಸಾವಿರ, ನಂತರ ತಿಂಗಳಲ್ಲಿ ಪ್ರತೀ ವರ್ಷ ಒಂದು ಸಾವಿರ ಹೆಚ್ಚಳ ಮಾಡಲಾಗುತ್ತದೆ. ಜೊತೆಗೆ ಭತ್ಯೆ/ಬೇಟ ವ್ಯವಸ್ಥೆ ಇರುವುದಿಲ್ಲ.

 ————————————————— 


 ಹೆವಿ ಲೈಸೇನ್ಸ್ ಹೊಂದಿರುವ ಲಾರಿ(ಐಷರ್ 10x95ಲಾರಿ) ಡ್ರೈವರ್ ಕೆಲಸಕ್ಕೆ ಜನ ಬೇಕಾಗಿದ್ದಾರೆ. ಆರಂಭಿಕ ವೇತನ 20 ಸಾವಿರ ರೂಪಾಯಿ ವೇತನ. ಒಂದು ತಿಂಗಳ ನಂತರ 21 ಸಾವಿರ. ನಂತರ ಪ್ರತೀ ವರ್ಷ ಒಂದೂವರೆ ಸಾವಿರ ಹೆಚ್ಚಳ ಮಾಡಲಾಗುತ್ತದೆ.ಜೊತೆಗೆ ಭತ್ಯೆ/ ಬೇಟ ವ್ಯವಸ್ಥೆ ಇರುವುದಿಲ್ಲ.

 —————^^—————————— 

 ಡೆಲಿವರಿ ಬಾಯ್ ಕೆಲಸಕ್ಕೆ ಜನ ಬೇಕಾಗಿದೆ. ಆರಂಭಿಕ ವೇತನ 14 ಸಾವಿರ ಒಂದು ತಿಂಗಳ ನಂತರ 15 ಸಾವಿರ ಹಾಗೂ ಡೈಲಿ ಲೋಡಿಂಗ್ ಚಾರ್ಜ್ ನೀಡಲಾಗಿವುದು. ಪ್ರತೀ ದಿನ 200 ರಿಂದ 400 ರೂಪಾಯಿ ನೀಡಲಾಗುತ್ತದೆ. ನಂತರ ಪ್ರತೀ ವರ್ಷ ಒಂದು ಸಾವಿರ ಹೆಚ್ಚಳ.

 -------------_---------------------

ಮಡಿಕೇರಿಯಿಂದ ಮೈಸೂರಿಗೆ ಅಥವಾ ಮಡಿಕೇರಿಯಿಂದ ಮಂಗಳೂರಿಗೆ ಪ್ರತೀ ದಿನದ ಸಂಚಾರವಿರುತ್ತದೆ. ಭಾನುವಾರ ರಜೆ ಇರುತ್ತದೆ. ಕೆಲಸದ ವೇಳೆ ಆರೋಗ್ಯದ ಸಮಸ್ಯೆಗಳಾದರೆ ವೈದ್ಯಕೀಯ ವೆಚ್ಚ ನೀಡಲಾಗುತ್ತದೆ. ಉಳಿದುಕೊಳ್ಳಲು ವಸತಿ ವ್ಯವಸ್ಥೆಯಿರುತ್ತದೆ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ..

ಮೊ:9740408488, 

 ಮೊ: 9606174527.

 


ಮೈಸೂರು: ಕೆಆರ್‌ಎಸ್ ರಸ್ತೆಗೆ (KRS Road) ಸಿಎಂ ಸಿದ್ದರಾಮಯ್ಯ (Siddaramaiah) ಹೆಸರು ನಾಮಕರಣ‌ ಮಾಡುವ ವಿಚಾರದಲ್ಲಿ ಮಾಜಿ ಸಂಸದ ಪ್ರತಾಪ್ ಸಿಂಹ (Pratap Simha) ಯೂ ಟರ್ನ್ ಹೊಡೆದಿದ್ದಾರೆ. ದಾಖಲೆಗಳಲ್ಲಿ ಮಹಾರಾಜರ ಕಾಲದಲ್ಲೇ ಪ್ರಿನ್ಸಸ್ ರಸ್ತೆ ಎಂದು ಹೆಸರಿದ್ದರೆ ಬದಲಾವಣೆ ಮಾಡುವುದು ಬೇಡ‌ ಎಂದು ಅವರು ಹೇಳಿದ್ದಾರೆ.



ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಈ ವೇಳೆ, ಕೆಆರ್‌ಎಸ್ ರಸ್ತೆಗೆ ಪ್ರಿನ್ಸಸ್ ಎಂದು ಮಹಾರಾಜರ ಕಾಲದಲ್ಲೇ ಹೆಸರಿತ್ತು ಎನ್ನುವುದಾದರೇ ಬದಲಾವಣೆ ಮಾಡುವುದು ಬೇಡ. ಈ ವಿಚಾರಕ್ಕೆ ನನ್ನ ತಕರಾರಿಲ್ಲ. ಹೆಸರು ಬದಲಾವಣೆ ಮಾಡುವುದು ಬೇಡ‌ ಎಂದು ಸ್ಥಳೀಯ ಶಾಸಕ ಹರೀಶ್ ಗೌಡ ಅವರಿಗೆ ನಾನೇ ಮನವಿ ಮಾಡುತ್ತೇನೆ ಎಂದು ಸ್ಪಷ್ಟಪಡಿಸಿದ್ದಾರೆ.

ಕೆಆರ್‌ಎಸ್ ರಸ್ತೆಗೆ ಅಧಿಕೃತ ಹೆಸರಿಲ್ಲ, ಖಾಲಿ‌ ಇದೆ ಎನ್ನುವ ಕಾರಣಕ್ಕೆ ಸಿದ್ದರಾಮಯ್ಯ ಹೆಸರನ್ನು ಇಡಬಹುದು ಎಂದು ಹೇಳಿದ್ದೆ. ದಯವಿಟ್ಟು ನೋಟಿಫಿಕೇಷನ್ ವಾಪಸ್ ತೆಗೆದುಕೊಳ್ಳಿ. ತಕರಾರು ಸಲ್ಲಿಸುವವರು ದಾಖಲೆಯನ್ನ ಒದಗಿಸಿ. ವಿವಾದವನ್ನು ಇಲ್ಲಿಗೆ ಮುಗಿಸೋಣ. ಮೈಸೂರಿಗೆ ಮಹಾರಾಜರ ಕೊಡುಗೆ ಬಹಳಷ್ಟಿದೆ. ಜನಪ್ರತಿನಿಧಿಗಳ ಕೊಡುಗೆ ಕೂಡ ಇದೆ. ಇಟ್ಟಿರುವ ಹೆಸರನ್ನು ಬದಲಾಯಿಸುವ ದಾಷ್ಟ್ಯ ನಮಗೆ ಬೇಡ‌ ಎಂದಿದ್ದಾರೆ.ಹೊಸ ಬಡಾವಣೆ ಮಾಡಿ ಅಲ್ಲಿಗೆ ಸಿದ್ದರಾಮಯ್ಯ ಅವರ ಹೆಸರಿಟ್ಟರೇ ಅರ್ಥ ಪೂರ್ಣ ಆಗುತ್ತದೆ ಎಂದಿದ್ದಾರೆ.



 ಕೆಪಿಎಸ್​ಸಿ ಪರೀಕ್ಷೆಯಲ್ಲಿ ಮತ್ತೆ ತಪ್ಪುಗಳು ಕಂಡುಬಂದಿದ್ದು, ಮರು ಪರೀಕ್ಷೆ ನಡೆಸುವಂತೆ ಅಭ್ಯರ್ಥಿಯೊಬ್ಬರು ಕಾರ್ಯದರ್ಶಿಗೆ ಪತ್ರ ಬರೆದಿದ್ದಾರೆ.



ಬೆಂಗಳೂರು : ರಾಜ್ಯಾದ್ಯಂತ ಭಾನುವಾರ ನಡೆಸಲಾದ ಕೆಎಎಸ್ ಶ್ರೇಣಿಯ ಗ್ರೂಪ್ ಎ ಹಾಗೂ ಗ್ರೂಪ್ ಬಿ ಹುದ್ದೆಗಳ ಪರೀಕ್ಷಾ ಪ್ರಶ್ನೆ ಪತ್ರಿಕೆಯಲ್ಲಿ ಹಲವು ತಪ್ಪುಗಳು ಕಂಡು ಬಂದಿದ್ದು, ಪ್ರಶ್ನೆಗಳನ್ನು ಇಂಗ್ಲಿಷ್‌ನಿಂದ ಕನ್ನಡಕ್ಕೆ ಅನುವಾದ ಮಾಡುವಲ್ಲಿ ಪ್ರಮಾದವಾಗಿದೆ ಎಂದು ಅಭ್ಯರ್ಥಿಗಳು ಆರೋಪಿಸಿದ್ದಾರೆ.



ಇಂದು ಕರ್ನಾಟಕ ಲೋಕಸೇವಾ ಆಯೋಗದಿಂದ ರಾಜ್ಯದಲ್ಲಿ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಕೆಎಎಸ್ ಗೆಜೆಟೆಡ್ ಪ್ರೊಬೇಷನರಿ ಹುದ್ದೆಗಳನ್ನು ಭರ್ತಿ ಮಾಡಲು ಪರೀಕ್ಷೆಯನ್ನು ನಡೆಸಲಾಗಿತ್ತು. ಆದರೆ, ಕೆಪಿಎಸ್‌ಸಿ ವತಿಯಿಂದ ಸಿದ್ಧಪಡಿಸಲಾದ ಕೆಎಎಸ್ ಪತ್ರಿಕೆಯಲ್ಲಿ ಪ್ರಮಾದಗಳು ಕಂಡುಬಂದಿವೆ ಎಂಬ ಆರೋಪಗಳು ಕೇಳಿ ಬಂದಿವೆ.


ಈಗಾಗಲೇ ಈ ಹಿಂದೆ ನಡೆಸಲಾಗಿದ್ದ ಪರೀಕ್ಷೆಯಲ್ಲಿ ಪ್ರಶ್ನೆ ಪತ್ರಿಕೆಯಲ್ಲಿ ಪ್ರಶ್ನೆಗಳ ಭಾಷಾಂತರದಲ್ಲಿ ತಪ್ಪು, ವಾಸ್ತವಾಂಶಗಳ ತಪ್ಪುಗಳಿಂದ ಕನ್ನಡ ಮಾಧ್ಯಮ ಅಭ್ಯರ್ಥಿಗಳು ಸೇರಿದಂತೆ ಎಲ್ಲಾ ಅಭ್ಯರ್ಥಿಗಳಿಗೆ ಅನ್ಯಾಯವಾಗಿತ್ತು. ಈ ಹಿನ್ನೆಲೆಯಲ್ಲಿ ಮರು ಪರೀಕ್ಷೆಯನ್ನು ರಾಜ್ಯಾದ್ಯಂತ ನಡೆಸಲಾಗಿತ್ತು. ಇದೀಗ 2ನೇ ಬಾರಿಗೆ ನಡೆಸಲಾದ ಮರು ಪರೀಕ್ಷೆಯಲ್ಲಿಯೂ ಮತ್ತೆ ದೋಷಗಳು ಕಂಡುಬಂದಿವೆ.

ಆರೋಪದ ಹಿನ್ನೆಲೆ ಕೆಪಿಎಸ್‌ಸಿ ಕಾರ್ಯದರ್ಶಿಗೆ ಪತ್ರ ಬರೆದು ಮರುಪರೀಕ್ಷೆಯನ್ನು ನಡೆಸುವಂತೆ ಅಭ್ಯರ್ಥಿಗಳು ಮನವಿ ಮಾಡಿದ್ದು, ಪ್ರಶ್ನೆ ಪತ್ರಿಕೆಯಲ್ಲಿ ಉಂಟಾದ ಲೋಪದಿಂದ ಅಭ್ಯರ್ಥಿಗಳಿಗೆ ಅನ್ಯಾಯ ಆಗಿದೆ. ಪರೀಕ್ಷೆ ಬರೆದ ಅಭ್ಯರ್ಥಿಗಳಿಗೆ ನ್ಯಾಯ ಒದಗಿಸಲು ಮತ್ತೊಮ್ಮೆ ಮರು ಪರೀಕ್ಷೆಯನ್ನು ನಡೆಸಬೇಕು ಎಂದು ನಾಗಣ್ಣ ಎನ್ನುವ ಅಭ್ಯರ್ಥಿ ಕರ್ನಾಟಕ ಲೋಕಸೇವಾ ಆಯೋಗದ ಕಾರ್ಯದರ್ಶಿಗೆ ಪತ್ರ ಬರೆದು ಆಗ್ರಹಿಸಿದ್ದಾರೆ.


ಕೆಎಎಸ್ ಪರೀಕ್ಷೆಯ ಪ್ರಶ್ನೆ ಪತ್ರಿಕೆಯಲ್ಲಿ 3 ರಿಂದ 5 ಪ್ರಶ್ನೆಗಳ ಕನ್ನಡ ಅನುವಾದ ಮಾಡುವಲ್ಲಿ ಲೋಪವಾಗಿದೆ. ಈ ಹಿಂದೆ ಆಗಸ್ಟ್ 27ರಂದು ನಡೆದಿದ್ದ ಇದೇ ಪರೀಕ್ಷೆಯಲ್ಲಿ ಕನ್ನಡ ಲೋಪದೋಷವಾಗಿ ಪರೀಕ್ಷೆ ರದ್ದಾಗಿತ್ತು. ಇವತ್ತು ಬೆಳಗ್ಗೆ ಕೆಎಎಸ್ ಪೂರ್ವಭಾವಿ ಮರು ಪರೀಕ್ಷೆ ನಡೆದಿತ್ತು. ಪೇಪರ್ 1 ಸಾಮಾನ್ಯ ಜ್ಞಾನ 1-ಬಿ ಸಿರೀಸ್​ನ ಪ್ರಶ್ನೆ ಪತ್ರಿಕೆಯಲ್ಲಿ ಲೋಪವಾಗಿದೆ.

ಪ್ರಶ್ನೆ 3ರಲ್ಲಿ ತಪ್ಪದ ಪದ ಬಳಕೆ - ಅದು ತಪ್ಪಾದ ಆಗಬೇಕಿತ್ತು. ಪ್ರಶ್ನೆ 45 ರಲ್ಲಿ ವಿಧೇಯತ - ವಿಧೇಯಕ ಆಗಬೇಕಿತ್ತು. ಪ್ರಶ್ನೆ 97ರಲ್ಲಿ ಸ್ವಾಯಿಕ ಪುನರಂ- ಪುನರ್ ಪರಿಶೀಲನೆ ಆಗಬೇಕಿತ್ತು. ಪ್ರಶ್ನೆ 85 ರಲ್ಲಿ ಅಮೆರಿಕಾದ ರಾಷ್ಟ್ರಪತಿಯವರಿಗೆ ಹೋಲಿಸಿದರೆ ಭಾರತದ ರಾಷ್ಟ್ರಪತಿಯವರು ಸಂಸತ್ತಿನಿಂದ ಬಾಕಿ ಇರುವ ಮಸೂದೆಯನ್ನ ಇತ್ಯರ್ಥವಾಗದ ಅನಿರ್ಧಿಷ್ಟ ಕಾಲದವರೆಗೆ ಹಿಡಿದುಕೊಳ್ಳಬಹುದು- ಅನುವಾದ ತಪ್ಪಾಗಿದೆ. ಈ ಪ್ರಶ್ನೆಯಲ್ಲಿ ಅಮೆರಿಕಾದಲ್ಲಿ ರಾಷ್ಟ್ರಪತಿ ಇರದೆ ರಾಷ್ಟ್ರಾಧ್ಯಕ್ಷ ಇರುತ್ತಾರೆ, ಇದು ತಪ್ಪಾಗಿರುವ ಅಂಶವಾಗಿದೆ.

 ಸಿಎಂ ಸಿದ್ದರಾಮಯ್ಯ ರಸ್ತೆ ಸಾರಿಗೆ ನೌಕರರ ಜೊತೆ ಸಭೆ ನಡೆಸುವ ಭರವಸೆ ನೀಡಿದ್ದಾರೆ. ಹೀಗಾಗಿ ಕೆಎಸ್​ಆರ್​ಟಿಸಿ ನೌಕರರ ಜಂಟಿ ಕ್ರಿಯಾ ಸಮಿತಿ ನಡೆಸಲು ಉದ್ದೇಶಿಸಿದ್ದ ಅನಿರ್ದಿಷ್ಟಾವಧಿ ಮುಷ್ಕರದಿಂದ ಹಿಂದೆ ಸರಿಯಲು ತೀರ್ಮಾನಿಸಿದೆ.



ಬೆಂಗಳೂರು: ಜನವರಿ 15ರಂದು ಸಿಎಂ ಸಿದ್ದರಾಮಯ್ಯ ರಸ್ತೆ ಸಾರಿಗೆ ನೌಕರರ ಜೊತೆ ಸಭೆ ನಡೆಸುವ ಭರವಸೆ ನೀಡಿದ್ದು, ಡಿ.31ರಿಂದ ಮಾಡಲು ಉದ್ದೇಶಿಸಿದ್ದ ಅನಿರ್ದಿಷ್ಟಾವಧಿ ಮುಷ್ಕರದಿಂದ ಹಿಂದೆ ಸರಿಯಲು ಕೆಎಸ್​ಆರ್​ಟಿಸಿ ನೌಕರರ ಜಂಟಿ ಕ್ರಿಯಾ ಸಮಿತಿ ನಿರ್ಧರಿಸಿದೆ.


ಭಾನುವಾರ ಗೃಹ ಕಚೇರಿ ಕೃಷ್ಣಾದಲ್ಲಿ ಸಿಎಂ ಸಿದ್ದರಾಮಯ್ಯ ಹಾಗೂ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಸಭೆ ನಡೆಸಿದ ಬೆನ್ನಲ್ಲೇ ಕ್ರಿಯಾ ಸಮಿತಿ ಮುಷ್ಕರದಿಂದ ಹಿಂದೆ ಸರಿಯಲು ತೀರ್ಮಾನಿಸಿದೆ. ಸಭೆಯಲ್ಲಿ ಮಕರ ಸಂಕ್ರಾಂತಿಯಂದು ಸಭೆ ನಡೆಸಿ ರಸ್ತೆ ಸಾರಿಗೆ ನೌಕರರ ಬೇಡಿಕೆ ಈಡೇರಿಸುವ ಭರವಸೆ ನೀಡಲಾಗಿದೆ.



ಈ ಸಂಬಂಧ ಪ್ರತಿಕ್ರಿಯಿಸಿರುವ ಕೆಎಸ್ಆರ್​ಟಿಸಿ ಸಿಬ್ಬಂದಿ ಮತ್ತು ನೌಕರರ ಒಕ್ಕೂಟದ ಅಧ್ಯಕ್ಷ ಅನಂತ ಸುಬ್ಬಾರಾವ್​ "ಮುಷ್ಕರ ವಾಪಾಸ್​ ಪಡೆಯಲು ತೀರ್ಮಾನಿಸಲಾಗಿದೆ. ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಜ.15 ರಂದು ಸಾರಿಗೆ ನೌಕರರ ಒಕ್ಕೂಟದ ಜೊತೆ ಸಭೆ ನಡೆಸುವ ಭರವಸೆ ನೀಡಿದ್ದಾರೆ. ಆ ಸಭೆಯಲ್ಲಿ ಎಲ್ಲ ಬೇಡಿಕೆಗಳ ಬಗ್ಗೆ ಸಿಎಂ ಸಿದ್ದರಾಮಯ್ಯ ಜೊತೆ ಚರ್ಚೆ ನಡೆಸಲಾಗುವುದು. ಹೀಗಾಗಿ ಮುಷ್ಕರ ಕೈಬಿಡುವಂತೆ ಸಚಿವ ರಾಮಲಿಂಗಾ ರೆಡ್ಡಿ ಮನವಿ ಮಾಡಿದ್ದಾರೆ. ಹಾಗಾಗಿ ಡಿ.31 ರಿಂದ ಮಾಡಲು ಉದ್ದೇಶಿಸಿದ್ದ ಮುಷ್ಕರವನ್ನು ಸದ್ಯ ಕೈ ಬಿಡಲು ತೀರ್ಮಾನಿಸಲಾಗಿದೆ" ಎಂದು ತಿಳಿಸಿದರು.

ಬಾಕಿ ವೇತನ ಪಾವತಿ ಹಾಗೂ ವೇತನ ಪರಿಷ್ಕರಣೆ ಸೇರಿ ಹಲವು ಬೇಡಿಕೆಗಳನ್ನು ನೌಕರರ ಕ್ರಿಯಾ ಸಮಿತಿ ಮುಂದಿಟ್ಟಿದೆ.

ಭಾನುವಾರ ನಡೆದ ಸಿಎಂ ನೇತೃತ್ವದ ಸಭೆ ಬಳಿಕ ಮಾತನಾಡಿದ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ, "ನಮ್ಮ‌ ಕಾರ್ಪೊರೇಷನ್​ ಆರ್ಥಿಕ ಪರಿಸ್ಥಿತಿ ಅವರಿಗೂ ಗೊತ್ತಿದೆ. ಹಿಂದೆ ಬಿಜೆಪಿ ಇದ್ದಾಗ 900 ಕೋಟಿ ಸಾಲ ಇಟ್ಟು ಹೋಗಿದ್ದಾರೆ. ಹೊಸ ನೇಮಕಾತಿ, ನೌಕರರ ವೇತನ ಅನೇಕ ಕಾರ್ಯಕ್ರಮ ಎಲ್ಲರಿಗೂ ಗೊತ್ತಿದೆ. ಸಂಘಟನೆಯವರು ನೌಕರರ ಪರವಾಗಿ ಕೆಲಸ ಮಾಡಿದ್ದಾರೆ. ನಾನೂ ಕೂಡ ಸಿಎಂ ಜೊತೆ ಚರ್ಚೆ ಮಾಡಿದ್ದೇನೆ. 220 ಕೋಟಿ ರೂ. ಅನುದಾನ ಬಿಡುಗಡೆಗೆ ಮನವಿ ಮಾಡಿದ್ದೇನೆ".


"ಸಂಪುಟ ಸಭೆಯಲ್ಲಿ ಈ ಪ್ರಸ್ತಾವನೆಯನ್ನು ಇಟ್ಟಿದ್ದೇವೆ. ವೇತನ ಪರಿಷ್ಕರಣೆ ಕೂಡ ಹೇಳಿದ್ದೇವೆ. ನಮ್ಮ ಪಕ್ಷದ ಪ್ರಣಾಳಿಕೆಯಲ್ಲೂ ಸಮಾನ ವೇತನ ಬಗ್ಗೆ ಹೇಳಿದ್ದೇವೆ. ಬಸ್ ನಿಲ್ಲಿಸುತ್ತೇವೆ ಅಂತ ಹೇಳಿದ್ದಾರೆ. ಅದನ್ನ ಮುಂದೂಡಿ ಅಂತ ಮನವಿ ಮಾಡಿದ್ದೇವೆ. ನಾವಂತೂ ರಸ್ತೆ ಸಾರಿಗೆ ನೌಕರರ ಪರವಾಗಿ ಪಾಸಿಟೀವ್ ಆಗಿದ್ದೇವೆ" ಎಂದಿದ್ದಾರೆ.


ಜಮ್ಮು ಕಾಶ್ಮೀರದಲ್ಲಿ ನಡೆದ ಸೇನಾ ವಾಹನ ಅಪಘಾತದಲ್ಲಿ ತೀವ್ರ ಗಾಯಗೊಂಡಿದ್ದ ಆಲೂರು ಸಿದ್ದಾಪುರ ಗ್ರಾಮದ ಸೈನಿಕ 28 ವರ್ಷದ ಪಳಂಗೋಟಿ ದಿವಿನ್  ಕೊನೆ ಉಸಿರು.

 ಶ್ರೀನಗರ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು.ದಿವಿನ್ ತಾಯಿ ಜಯ ಕೂಡ ಆಸ್ಪತ್ರೆ ತಲುಪಿದ್ದರು. ಅಮ್ಮನ ಕರೆಗೆ ದಿವಿನ್ ಹುಬ್ಬು ಹಾರಿಸಿ ಸ್ಪಂದಿಸಿದ್ದರು.

ಆದ್ರೆ ಶ್ವಾಸಕೋಶಕ್ಕೆ ತೀವ್ರ ಹಾನಿ ಆದ ಹಿನ್ನಲೆ ಇಂದು ರಾತ್ರಿ ಧಿವಿನ್ ಕೊನೆಯುಸಿರು ಎಳೆದಿದ್ದಾರೆ.

 ತಂದೆ ತಾಯಿಗೆ ಏಕೈಕ ಮಗನಾಗಿದ್ದ ಧಿವಿನ್ 10 ವರ್ಷದ ಹಿಂದೆ ಸೇನೆಗೆ ಸೇರಿದ್ದರು.

ಇತ್ತೀಚೆಗೆ ನಿಶ್ಚಿತಾರ್ಥ ಕೂಡ ನೆರವೇರಿದ್ದು ಇದೇ ಫೆಬ್ರವರಿಯಲ್ಲಿ ದಿವಿನ್ ವಿವಾಹವಾಗಬೇಕಿತ್ತು.

ಆದ್ರೆ ಸೇನಾ ವಾಹನ ಪ್ರಪಾತಕ್ಕೆ ಬಿದ್ದು ಅದರಲ್ಲಿ ಇದ್ದ 4 ಸೈನಿಕರು ಸ್ಥಳದಲ್ಲಿ ಸಾವನ್ನಪ್ಪಿದ್ದರು. 

ಚಿಂತಾಜನಕ ಸ್ಥಿತಿಯಲ್ಲಿದ್ದ ದಿವಿನ್ ಚಿಕಿತ್ಸೆಗೆ ಸ್ಪಂದಿಸದೆ ಇದೀಗ ಸಾವನ್ನಪ್ಪಿದ್ದಾರೆ .

ಶಾಸಕ ಮಂತರ್ ಗೌಡ ಸಂತಾಪ

ದಿವಿನ್ ಚಿಕಿತ್ಸೆ ಸಂಬಂಧಿತ ಮಡಿಕೇರಿ ಕ್ಷೇತ್ರ ಶಾಸಕ ಡಾ. ಮಂತರ್ ಗೌಡ ಕೂಡ ಸೇನಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡುತ್ತಿದ್ದ ಶಿವಮೊಗ್ಗ ಮೂಲದ ವೈದ್ಯರೊಂದಿಗೆ ಸಂಪರ್ಕದಲ್ಲಿದ್ದು ಮಾಹಿತಿ ಪಡೆಯುತ್ತಿದ್ದರು. ದಿವಿನ್ ನಿದಾನಕ್ಕೆ ಶಾಸಕ ಮಂತರ್ ಗೌಡ ಕಂಬನಿ ಮಿಡಿದಿದ್ದಾರೆ.

 

 ಮಂಗಳೂರು ಕಂಬಳ ಗೆದ್ದವರಾರು? ಇಲ್ಲಿದೆ ಕೂಟದ ಫೈನಲ್ ಫಲಿತಾಂಶ!




ಮಂಗಳೂರು: ಬಂಗ್ರಕೂಳೂರಿನ ಗೋಲ್ಡ್‌ ಪಿಂಚ್‌ ಸಿಟಿಯ ರಾಮ-ಲಕ್ಷ್ಮಣ ಜೋಡು ಕರೆಯಲ್ಲಿ ಡಿ.28 ಹಾಗೂ 29ರ ತನಕ 8ನೇ ವರ್ಷದ “ಮಂಗಳೂರು ಕಂಬಳ’ ಅತ್ಯಂತ ಸಂಭ್ರಮ ಸಡಗರದಿಂದ ನಡೆಯಿತು.

ಎರಡು ದಿನಗಳ ಕಾಲ ದ ನಡೆದ ಮಂಗಳೂರು ಕಂಬಳದ ಫೈನಲ್‌ ಸ್ಪರ್ಧೆ ಯು ಡಿ.29ರಂದು ನಡೆಯಿತು.

ಬಂಗ್ರ ಕೂಳೂರು, ಮಂಗಳೂರು "ರಾಮ - ಲಕ್ಷ್ಮಣ" ಜೋಡುಕರೆ ಕಂಬಳ ಕೂಟದ ಫಲಿತಾಂಶದ ವಿವರ ಈ ಕೆಳಗಿನಂತಿದೆ.



ಕೂಟದಲ್ಲಿ ಭಾಗವಹಿಸಿದ ಕೋಣಗಳ ಸಂಖ್ಯೆ :

ಕನೆಹಲಗೆ: 07 ಜೊತೆ 

ಅಡ್ಡಹಲಗೆ: 08 ಜೊತೆ 

ಹಗ್ಗ ಹಿರಿಯ: 20 ಜೊತೆ 

ನೇಗಿಲು ಹಿರಿಯ: 32 ಜೊತೆ 

ಹಗ್ಗ ಕಿರಿಯ: 23 ಜೊತೆ 

ನೇಗಿಲು ಕಿರಿಯ: 81 ಜೊತೆ 

ಒಟ್ಟು ಕೋಣಗಳ ಸಂಖ್ಯೆ: 171 ಜೊತೆ

•••••••



ಕನೆಹಲಗೆ

 ( ಸಮಾನ ಬಹುಮಾನ )

ಬೊಳ್ಳಂಬಳ್ಳಿ ಶ್ರೀ ರಾಮ ಚೈತ್ರ ಪರಮೇಶ್ವರ ಭಟ್

ಹಲಗೆ ಮುಟ್ಟಿದವರು: ಭಟ್ಕಳ ಪಾಂಡು


ಕಾಂತಾವರ ಬೇಲಾಡಿ ಬಾವ ಅಶೋಕ್ ಶೆಟ್ಟಿ

ಹಲಗೆ ಮುಟ್ಟಿದವರು: ತೆಕ್ಕಟ್ಟೆ ಸುಧೀರ್ ದೇವಾಡಿಗ


ಹಂಕರಜಾಲು ಶ್ರೀನಿವಾಸ ಭಿರ್ಮಣ್ಣ ಶೆಟ್ಟಿ

ಹಲಗೆ ಮುಟ್ಟಿದವರು: ಭಟ್ಕಳ ಪಾಂಡು


ವಾಮಂಜೂರು ತಿರುವೈಲುಗುತ್ತು ಅಭಿಷೇಕ್ ನವೀನ್ಚಂದ್ರ ಆಳ್ವ

ಹಲಗೆ ಮುಟ್ಟಿದವರು: ಬೈಂದೂರು ಭಾಸ್ಕರ ದೇವಾಡಿಗ


ಬೋಳಾರ ತ್ರಿಶಾಲ್ ಕೆ ಪೂಜಾರಿ

ಹಲಗೆ ಮುಟ್ಟಿದವರು: ಮಂದಾರ್ತಿ ಶಿರೂರು ಮುದ್ದುಮನೆ ಭರತ್ ನಾಯ್ಕ್


ಬಾರ್ಕೂರು ಶಾಂತಾರಾಮ ಶೆಟ್ಟಿ

ಹಲಗೆ ಮುಟ್ಟಿದವರು: ಬೈಂದೂರು ಭಾಸ್ಕರ ದೇವಾಡಿಗ


ನಿಡ್ಡೋಡಿ ಕಾನ ರಾಮ ಸುವರ್ಣ

ಹಲಗೆ ಮುಟ್ಟಿದವರು: ಕೊಕ್ಕರ್ಣೆ ವಡಾಪಿ ಸುರೇಶ್ ನಾಯ್ಕ್

••••••••



ಅಡ್ಡ ಹಲಗೆ:


ಪ್ರಥಮ: ನಾರಾವಿ ಯುವರಾಜ್ ಜೈನ್ ಕಂಬಳಾಭಿಮಾನಿ ವಕೀಲರ ವೃಂದ ಮಂಗಳೂರು "ಎ"

ಹಲಗೆ ಮುಟ್ಟಿದವರು: ಭಟ್ಕಳ ಹರೀಶ್


ದ್ವಿತೀಯ: ನಾರಾವಿ ಯುವರಾಜ್ ಜೈನ್ ಕಂಬಳಾಭಿಮಾನಿ ವಕೀಲರ ವೃಂದ ಮಂಗಳೂರು "ಬಿ"

ಹಲಗೆ ಮುಟ್ಟಿದವರು: ಭಟ್ಕಳ ಹರೀಶ್

••••••



ಹಗ್ಗ ಹಿರಿಯ: 


ಪ್ರಥಮ: ನಂದಳಿಕೆ ಶ್ರೀಕಾಂತ್ ಭಟ್ "ಎ" (11.86)

ಓಡಿಸಿದವರು: ಬಂಬ್ರಾಣಬೈಲು ವಂದಿತ್ ಶೆಟ್ಟಿ


ದ್ವಿತೀಯ: ಕೊಳಕೆ ಇರ್ವತ್ತೂರು ಭಾಸ್ಕರ ಎಸ್ ಕೋಟ್ಯಾನ್ "ಬಿ" (12.06)

ಓಡಿಸಿದವರು: ಕಕ್ಕೆಪದವು ಪೆಂರ್ಗಾಲು ಕೃತಿಕ್ ಗೌಡ

•••••••••



ಹಗ್ಗ ಕಿರಿಯ:


ಪ್ರಥಮ: ಮಾಳ ಕಲ್ಲೇರಿ ಭರತ್ ಶರತ್ ಶೆಟ್ಟಿ (11.72)

ಓಡಿಸಿದವರು: ಬಜಗೋಳಿ ಜೋಗಿಬೆಟ್ಟು ನಿಶಾಂತ್ ಶೆಟ್ಟಿ


ದ್ವಿತೀಯ: 80 ಬಡಗ ಬೆಟ್ಟು ಕಲ್ಲಪಾಪು ಶ್ರೀಕ ಸಂದೀಪ್ ಶೆಟ್ಟಿ "ಬಿ" (11.90)

ಓಡಿಸಿದವರು: ಬೈಂದೂರು ವಿಶ್ವನಾಥ ದೇವಾಡಿಗ

••••••••••



ನೇಗಿಲು ಹಿರಿಯ: 


ಪ್ರಥಮ: ಬೋಳದ ಗುತ್ತು ಸತೀಶ್ ಶೆಟ್ಟಿ "ಬಿ" (11.53)

ಓಡಿಸಿದವರು: ಬೈಂದೂರು ವಿಶ್ವನಾಥ ದೇವಾಡಿಗ


ದ್ವಿತೀಯ: ಮಂಗಳೂರು ಬಜಾಲ್ ಶೈಲೇಶ್ ಶೆಟ್ಟಿ (11.59)

ಓಡಿಸಿದವರು: ಕಕ್ಕೆಪದವು ಪೆಂರ್ಗಾಲು ಕೃತಿಕ್ ಗೌಡ

•••••••



ನೇಗಿಲು ಕಿರಿಯ:

ಪ್ರಥಮ: ಎರ್ಮಾಳ್ ಪುಚ್ಚೊಟ್ಟು ಬೀಡು ಬಾಲಚಂದ್ರ ಲೋಕಯ್ಯ ಶೆಟ್ಟಿ "ಎ" (11.80)

ಓಡಿಸಿದವರು: ಪಟ್ಟೆ ಗುರು ಚರಣ್

ದ್ವಿತೀಯ: ಮುನಿಯಾಲು ಉದಯ ಕುಮಾರ್ ಶೆಟ್ಟಿ "ಎ" (12.46)

ಓಡಿಸಿದವರು: ಮಾಸ್ತಿ ಕಟ್ಟೆ ಸ್ವರೂಪ್




 ಸ್ವಕ್ಷೇತ್ರದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಿಗೆ ಹಿನ್ನಡೆ, ಬಿಜೆಪಿ 7 ಕಾಂಗ್ರೆಸ್ 5





ಮಡಪ್ಪಾಡಿ: ಮಡಪ್ಪಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಆಡಳಿತ ಮಂಡಳಿಗೆ ನಡೆದ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು 7 ಸ್ಥಾನಗಳಲ್ಲಿ ಮತ್ತು ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು 5 ಸ್ಥಾನಗಳಲ್ಲಿ ಗೆಲುವು ಸಾಧಿಸಿದ್ದಾರೆ.ಭಾರೀ ಬಿರುಸಿನ ಪೈಪೋಟಿ ಕಂಡು ಬಂದ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಮೇಲುಗೈ ಸಾಧಿಸಿದ್ದಾರೆ. ಸಾಮಾನ್ಯ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಮೇಲುಗೈ ಸಾಧಿಸಿದರೆ, ಮಹಿಳಾ ಮೀಸಲು ಕ್ಷೇತ್ರದಲ್ಲಿ ಎರಡೂ ಪಕ್ಷಗಳ ಬೆಂಬಲಿತ ಅಭ್ಯರ್ಥಿಗಳು ಸಮಬಲ ಸಾಧಿಸಿದರು. ಹಿಂದುಳಿದ ವರ್ಗ ಎ, ಹಿಂದುಳಿದ ವರ್ಗ ಬಿ, ಪ.ಜಾತಿ, ಪ.ಪಂಗಡ ಮೀಸಲು ಕ್ಷೇತ್ರದಲ್ಲಿ ಬಿಜೆಪಿ ಬೆಂಬಲಿತರು ಮೇಲುಗೈ ಸಾಧಿಸಿದ್ದಾರೆ.


ಸಾಮಾನ್ಯ ಕ್ಷೇತ್ರದಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳಾದ ಪಿ.ಸಿ.ಜಯರಾಮ, ಮಿತ್ರದೇವ ಮಡಪ್ಪಾಡಿ, ಸೋಮಶೇಖರ ಕೇವಳ, ಚಂದ್ರಶೇಖರ ಗುಡ್ಡೆ ಗೆಲುವು ಸಾಧಿಸಿದ್ದಾರೆ. ಬಿಜೆಪಿ ಬೆಂಬಲಿತ ಅಭ್ಯರ್ಥಿಗಳಾದ ವಿನಯಕುಮಾರ್ ಮುಳುಗಾಡು ಹಾಗೂ ಕರುಣಾಕರ ಪಾರೆಪ್ಪಾಡಿ ಗೆಲುವು ಸಾಧಿಸಿದರು


ಮಹಿಳಾ ಮೀಸಲು ಕ್ಷೇತ್ರದಿಂದ ಬಿಜೆಪಿಯ ಶಕುಂತಳಾ ಕೇವಳ ಹಾಗೂ ಕಾಂಗ್ರೆಸ್‌ನ ಪ್ರವೀಣ ಯತೀಂದ್ರನಾಥ ಪಾಲ್ತಾಡು ಜಯ ಗಳಿಸಿದ್ದಾರೆ.


ಹಿಂದುಳಿದ ವರ್ಗ ಎ ಸ್ಥಾನದಿಂದ ಬಿಜೆಪಿ ಬೆಂಬಲಿತ ಅಭ್ಯರ್ಥಿ ಶಿವರಾಮ ಆಚಾರಿ ಸಿ.ಎಚ್ ಗಳಿಸಿದ್ದಾರೆ. ಹಿಂದುಳಿದ ವರ್ಗ ಬಿ ಕ್ಷೇತ್ರದಿಂದ ಬಿಜೆಪಿ ಬೆಂಬಲಿತ ಅಭ್ಯರ್ಥಿ ಸಚಿನ್ ಬಳ್ಳಡ್ಕ ಜಯ ಗಳಿಸಿದರು.


ಪರಿಶಿಷ್ಟ ಜಾತಿ ಮೀಸಲು ಕ್ಷೇತ್ರದಿಂದ ಬಿಜೆಪಿ ಬೆಂಬಲಿತ ಅಭ್ಯರ್ಥಿ ಆನಂದ ಶೆಟ್ಟಿಮಜಲು ಹಾಗೂ ಪರಿಶಿಷ್ಟ ಪಂಗಡ ಮೀಸಲು ಸ್ಥಾನದಿಂದ ಪ್ರದೀಪ್‌ ಕುಮಾರ್ ಪಿ.ಬಿ. ಜಯಗಳಿಸಿದ್ದಾರೆ.

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget