ಕೋಲ್ಕತ್ತ: ಪ್ರತಿಕೂಲ ಹವಾಮಾನದಿಂದ ಪ್ರಸಕ್ತ ಕ್ಯಾಲೆಂಡರ್ ವರ್ಷದಲ್ಲಿ ದೇಶದ ಚಹಾ ಉತ್ಪಾದನೆಯಲ್ಲಿ 10 ಕೋಟಿ ಕೆ.ಜಿಗೂ ಹೆಚ್ಚು ಕುಸಿತವಾಗಬಹುದು ಎಂದು ಅಂದಾಜು ಮಾಡಲಾಗಿದೆ ಎಂದು ಉದ್ಯಮವು ಸೋಮವಾರ ಹೇಳಿದೆ. ಉತ್ಪಾದನೆಯಲ್ಲಿನ ಇಳಿಕೆಯಿಂದಾಗಿ ಚಹಾ ಬೆಲೆ ಏರಿಕೆಯಾಗುವ ಸಾಧ್ಯತೆ ಇದೆ ಎಂದು ಹೇಳಿದೆ.
2023ರ ಜನವರಿ-ಅಕ್ಟೋಬರ್ ಅವಧಿಯಲ್ಲಿ 117.8 ಕೋಟಿ ಕೆ.ಜಿ ಚಹಾ ಉತ್ಪಾದನೆಯಾಗಿತ್ತು. ಆದರೆ, ಪ್ರಸಕ್ತ ವರ್ಷದ ಇದೇ ಅವಧಿಯಲ್ಲಿ 111.2 ಕೋಟಿ ಕೆ.ಜಿ ಉತ್ಪಾದನೆಯಾಗಿದ್ದು, 6.6 ಕೋಟಿ ಕೆ.ಜಿಯಷ್ಟು ಕಡಿಮೆಯಾಗಿದೆ. ಡಿಸೆಂಬರ್ ಅಂತ್ಯದ ವೇಳೆಗೆ 4.5 ಕೋಟಿ ಕೆ.ಜಿಯಿಂದ 5 ಕೋಟಿ ಕೆ.ಜಿಯಷ್ಟು ಉತ್ಪಾದನೆಯಲ್ಲಿ ಕಡಿಮೆಯಾಗುವ ನಿರೀಕ್ಷೆ ಇದೆ ಎಂದು ಭಾರತೀಯ ಚಹಾ ಮಂಡಳಿ (ಟಿಎಐ) ಅಧ್ಯಕ್ಷ ಹೇಮಂತ್ ಬಂಗೂರ್ ಹೇಳಿದ್ದಾರೆ.
ಕಳೆದ ವರ್ಷ 23.1 ಕೋಟಿ ಕೆ.ಜಿಯಷ್ಟು ಚಹಾ ರಫ್ತಾಗಿತ್ತು. ಅದು ಈ ಬಾರಿ 25 ಕೋಟಿ ಕೆ.ಜಿಗೆ ತಲುಪುವ ಅಂದಾಜಿದೆ ಎಂದು ಹೇಳಿದ್ದಾರೆ.
'ಜಾಗತಿಕ ಬಿಕ್ಕಟ್ಟಿನ ನಡುವೆಯೂ ದೇಶದ ಚಹಾ ರಫ್ತು ಆರೋಗ್ಯಕರವಾಗಿದೆ. ವ್ಯಾಪಾರಿಗಳು ಹೆಚ್ಚಿನ ಚಹಾ ರಫ್ತು ಮಾಡಲು ಮುಂದಾಗಿದ್ದರಿಂದ ಸಾಗಣೆ ಪ್ರಮಾಣ ಹೆಚ್ಚಳವಾಗಿದೆ' ಎಂದು ಭಾರತೀಯ ಚಹಾ ರಫ್ತುದಾರರ ಸಂಘದ ಅಧ್ಯಕ್ಷ ಅಂಶುಮಾನ್ ಕನೋರಿಯಾ ಹೇಳಿದ್ದಾರೆ.
ಇರಾಕ್‌ಗೆ ಚಹಾ ರಟ್ಟಿನಲ್ಲಿ ಏರಿಕೆಯಾಗಿದ್ದು, ರಪ್ತಿನ ಶೇ 20ರಷ್ಟಿದೆ. ಪ್ರಸಕ್ತ ಆರ್ಥಿಕ ವರ್ಷದಲ್ಲಿ ಪಶ್ಚಿಮ ಏಷ್ಯಾದ ದೇಶಗಳಿಗೆ 4ರಿಂದ 5 ಕೋಟಿ ಕೆ.ಜಿ ರಫ್ತು ಮಾಡುವ ನಿರೀಕ್ಷೆಯಲ್ಲಿ ವ್ಯಾಪಾರಿಗಳು ಇದ್ದಾರೆ ಎಂದು ಕನೋರಿಯಾ ಹೇಳಿದ್ದಾರೆ.
ಈ ವರ್ಷದಲ್ಲಿ ಅನೇಕ ಚಹಾ ಬೆಳೆಯುವ ಪ್ರದೇಶಗಳು 35ರಿಂದ 40 ಡಿಗ್ರಿ ಸೆಲ್ಸಿಯಸ್ ತಾಪಮಾನವನ್ನು ಕಂಡಿವೆ. ಮಳೆ ಪ್ರಮಾಣವೂ ಕಡಿಮೆಯಾಗಿದೆ. ಇದು ಸರಾಸರಿ ಶೇ 20ರಷ್ಟು ಚಹಾ ಉತ್ಪಾದನೆಯ ಮೇಲೆ ಪರಿಣಾಮ ಬೀರಿತು ಎಂದು ಟಿಆರ್‌ಎ ಕಾರ್ಯದರ್ಶಿ ಜಾಯ್‌ದೀಪ್ ಫೂಕನ್ ಸುದ್ದಿಸಂಸ್ಥೆ ಪಿಟಿಐಗೆ ತಿಳಿಸಿದ್ದಾರೆ.
ಚಹಾ ಉತ್ಪಾದನೆಯಲ್ಲಿ ಇಳಿಕೆಯಿಂದ ಮುಂಬರುವ ವರ್ಷದಲ್ಲಿ ಚಹಾ ಬೆಲೆ ಏರಿಕೆಯಾಗುವ ಸಾಧ್ಯತೆ ಇದೆ ಎಂದು ಕ್ರೆಡಿಟ್ ರೇಟಿಂಗ್ ಸಂಸ್ಥೆ ಐಸಿಆರ್‌ಎ ತಿಳಿಸಿದೆ.
ಕಾಡುಮನೆ ಟೀ ಎಸ್ಟೇಟ್‌ನಲ್ಲೂ ಕುಸಿತ
ಹಾಸನ: 2 ಸಾವಿರ ಎಕರೆ ಪ್ರದೇಶದಲ್ಲಿರುವ ಜಿಲ್ಲೆಯ ಸಕಲೇಶಪುರ ತಾಲ್ಲೂಕಿನಲ್ಲಿ ಏಕೈಕ ಕಾಡುಮನೆ ಟೀ ಎಸ್ಟೇಟ್‌ನಲ್ಲಿಯೂ ಹವಾಮಾನ ವೈಪರೀತ್ಯದಿಂದ ಚಹಾ ಬೆಳೆಯಲ್ಲಿ ಶೇ 25ರಷ್ಟು ಕುಂಠಿತವಾಗಿದೆ.
'ಏಪ್ರಿಲ್-ಮೇನಲ್ಲಿ ಮಳೆ ಬರಬೇಕಿತ್ತು. ಆದರೆ, ಮಳೆಯ ಕೊರತೆ ಎದುರಾಯಿತು. ಸೆಪ್ಟೆಂಬರ್-ಅಕ್ಟೋಬರ್‌ನಲ್ಲಿ ಮಳೆ ನಿಂತು, ಬಿಸಿಲು ಬೇಕಿತ್ತು. ಆದರೆ, ಈ ವೇಳೆ ನಿರಂತರ ಮಳೆ ಸುರಿಯಿತು. ಹಾಗಾಗಿ ಚಹಾ ಬೆಳೆಯ ಮೇಲೆ ಹವಾಮಾನ ಪರಿಣಾಮ ಬೀರಿದೆ' ಎಂದು ಕಾಡುಮನೆ ಟೀ ಎಸ್ಟೇಟ್‌ನ ಪ್ರಧಾನ ವ್ಯವಸ್ಥಾಪಕ ಕಾರ್ಯಪ್ಪ ತಿಳಿಸಿದರು.
ಈ ಬಾರಿ ಸುರಿದ ಧಾರಾಕಾರ ಮಳೆಯಿಂದ ಕಾಡುಮನೆ ಎಸ್ಟೇಟ್‌ನಲ್ಲಿ ಭೂಕುಸಿತ ಉಂಟಾಗಿತ್ತು. ಅಲ್ಲದೇ ನಿರಂತರ ಮಳೆ ಸುರಿದ ಪರಿಣಾಮ, ಚಹಾದ ಉತ್ಪಾದನೆಯ ಮೇಲೆ ಪರಿಣಾಮ ಬೀರಿದೆ.
Post a Comment