ಶಿರಸಿ: ಹವಾಮಾನಾಧಾರಿತ ಬೆಳೆ ವಿಮೆ ಯೋಜನೆಯಡಿ ಕಳೆದ ಸಾಲಿನಲ್ಲಿ ₹12 ಕೋಟಿಗೂ ಹೆಚ್ಚಿನ ಮೊತ್ತವನ್ನು ಕಂತಿನ ರೂಪದಲ್ಲಿ ವಿಮಾ ಕಂಪನಿಗೆ ತುಂಬಿದ ರೈತರಿಗೆ ಬೆಳೆ ಹಾನಿ ಪರಿಹಾರ ಮಾತ್ರ ಇನ್ನೂ ಜಮಾ ಆಗಿಲ್ಲ. ಇದು ಪ್ರಸಕ್ತ ವರ್ಷದ ಅತಿವೃಷ್ಟಿಯಿಂದ ಕಂಗೆಟ್ಟ ರೈತರ ಆಕ್ರೋಶಕ್ಕೆ ಕಾರಣವಾಗಿದೆ.
2023-24ನೇ ಸಾಲಿನಲ್ಲಿ ಉತ್ತರ ಕನ್ನಡ ಜಿಲ್ಲೆಯಲ್ಲಿ 41,694 ರೈತರು ವಿಮಾ ಕಂತು ತುಂಬಿದ್ದರು. ಇದರಲ್ಲಿ ಅಡಿಕೆ, ಕಾಳುಮೆಣಸು, ಮಾವು ಹಾಗೂ ಶುಂಠಿ ಬೆಳೆಯ 18,896 ಹೆಕ್ಟೇರ್ ಪ್ರದೇಶ ಸೇರಿದೆ. ಪ್ರತಿ ವರ್ಷ ಹೆಕ್ಟೇರ್ ಅಡಿಕೆಗೆ ₹6,400, ಕಾಳುಮೆಣಸಿಗೆ ₹2,350, ಮಾವು ಹಾಗೂ ಶುಂಠಿಗೆ ತಲಾ ₹7,000 ವಿಮಾ ಪ್ರೀಮಿಯಂ ಪಾವತಿಸಿದ್ದರು. ಆದರೆ ನಿಗದಿತ ಸಮಯ ಪೂರ್ಣಗೊಂಡರೂ ಈವರೆಗೆ ಜಿಲ್ಲೆಯ ಯಾವ ರೈತರ ಖಾತೆಗೂ ವಿಮಾ ಮೊತ್ತ ಪಾವತಿಯಾಗಿಲ್ಲ ಎಂಬ ದೂರು ವ್ಯಾಪಕವಾಗಿದೆ.
'ಈ ಬಾರಿಯ ಮಳೆ ಅಡಿಕೆ ಮತ್ತು ಕಾಳುಮೆಣಸಿನ ಬೆಳೆಯ ಬಹುಪಾಲನ್ನು ನುಂಗಿ ಹಾಕಿದೆ. ಜೂನ್ ತಿಂಗಳಿಂದ ಆರಂಭಗೊಂಡ ಮಳೆ ದೀಪಾವಳಿಯವರೆಗೂ ಸುರಿದಿತ್ತು. ಈಗಲೂ ಅಕಾಲಿಕ ಮಳೆ ಸುರಿಯುತ್ತಿದೆ. ಇದರಿಂದಾಗಿ ಎಲ್ಲ ಕಡೆ ಕೊಳೆ ರೋಗ ಆವರಿಸಿ ಶೇ 33ಕ್ಕಿಂತ ಅಧಿಕ ಬೆಳೆಹಾನಿ ಆಗಿದೆ. ಆದರೆ ಇದಕ್ಕೆ ತಾತ್ಕಾಲಿಕ ಚೇತರಿಕೆ ಎಂಬಂತಿದ್ದ ಹವಾಮಾನ ಆಧಾರಿತ ಬೆಳೆ ವಿಮೆ ಪರಿಹಾರ ಮಾತ್ರ ಇನ್ನೂ ಜಮಾ ಆಗಿಲ್ಲ' ಎನ್ನುತ್ತಾರೆ ರೈತ ದೇವೇಂದ್ರ ನಾಯ್ಕ.
'ಯೋಜನೆಯಡಿ ಕಳೆದ ಬಾರಿ ಜಿಲ್ಲೆಗೆ ₹78 ಕೋಟಿ ಬೆಳೆ ವಿಮೆ ಮೊತ್ತ ಜಮಾ ಆಗಿತ್ತು. 2023-24ನೇ ಸಾಲಿನ ಬೆಳೆ ವಿಮೆಯ ಪರಿಹಾರ ಅಕ್ಟೋಬರ್ ಅಥವಾ ನವೆಂಬರ್ ತಿಂಗಳ ಕೊನೆಯ ಒಳಗೇ ಜಮಾ ಆಗಬೇಕಿತ್ತು. ಆದರೆ, ಡಿಸೆಂಬರ್ ತಿಂಗಳು ಅರ್ಧ ಕಳೆದರೂ ರೈತರಿಗೆ ಪರಿಹಾರ ಮಂಜೂರಾಗಿಲ್ಲ. ಪಕ್ಕದ ಶಿವಮೊಗ್ಗ ಜಿಲ್ಲೆಯಲ್ಲಿ ಈಗಾಗಲೇ ರೈತರ ಖಾತೆಗೆ ಹಣ ಜಮಾ ಮಾಡಿದೆ' ಎನ್ನುತ್ತಾರೆ ಅವರು.
'ಹವಾಮಾನ ಆಧಾರಿತ ಬೆಳೆ ವಿಮೆಯಲ್ಲಿ ಮಂಜೂರಾಗುವ ಹಣದ ಮಾಹಿತಿಯನ್ನು ವಿಮಾ ಕಂಪನಿ ತೋಟಗಾರಿಕೆ ಇಲಾಖೆ ಅಥವಾ ಮಧ್ಯವರ್ತಿ ಬ್ಯಾಂಕ್‌ಗೆ ನೀಡುವುದಿಲ್ಲ. ಕಳೆದ ವರ್ಷದ ಹಾನಿಯನ್ನು ತೋಟಗಾರಿಕೆ ಇಲಾಖೆ ಲೆಕ್ಕಾಚಾರ ಹಾಕಿದ್ದರೂ ಈ ಮಾಹಿತಿಗೆ ವಿಮಾ ಕಂಪನಿಯಲ್ಲಿ ಮಹತ್ವ ಇಲ್ಲ. ಕೆಎಸ್‌ಎನ್‌ಎಂಡಿಸಿ ಸೂಚಿಸಿದ ಮಳೆ ಮಾಹಿತಿ, ಹವಾಮಾನ ಮಾಹಿತಿಯೇ ಬೆಳೆ ವಿಮೆ ಮಂಜೂರಿಯ ಮಾನದಂಡವಾಗಿದೆ. ಹೀಗಾಗಿ, ಬೆಳೆ ವಿಮೆ ಮಂಜೂರಾದರೆ, ಆ ಹಣ ರೈತರ ಖಾತೆಗೆ ಜಮಾ ಆದ ಮೇಲೆ ತೋಟಗಾರಿಕೆ ಇಲಾಖೆ, ಡಿಸಿಸಿ ಬ್ಯಾಂಕ್‌ಗೆ ಗೊತ್ತಾಗುತ್ತದೆ. ಆದರೆ ಈ ಬಾರಿ ಇನ್ನೂ ಯಾವುದೇ ಮಾಹಿತಿ ಲಭ್ಯವಾಗಿಲ್ಲ' ಎನ್ನುತ್ತಾರೆ ಕೆಡಿಸಿಸಿ ಬ್ಯಾಂಕ್ ಅಧಿಕಾರಿಗಳು.
Post a Comment