ಲಖನೌ: ಉತ್ತರ ಪ್ರದೇಶದ ಹಲವು ಮಸೀದಿಗಳಿಗೆ ಸಂಬಂಧಿಸಿದಂತೆ ವಿವಾದಗಳು ನ್ಯಾಯಾಲಯದಲ್ಲಿ ವಿಚಾರಣೆ ಹಂತದಲ್ಲಿ ಇರುವಾಗಲೇ, ಫತೇಪುರ ಜಿಲ್ಲೆಯ 180 ವರ್ಷಗಳಷ್ಟು ಹಳೆಯ ಮಸೀದಿಯೊಂದರ ಒಂದು ಭಾಗವನ್ನು ಮಂಗಳವಾರ ಕೆಡವಲಾಗಿದೆ.
ಫತೇಪುರದಿಂದ 125 ಕಿ.ಮೀ. ದೂರದ ಲಲೌಲಿ ಎಂಬ ಪಟ್ಟಣದ ನೂರಿ ಜಾಮಾ ಮಸೀದಿಯ ಹಿಂಬದಿಯ ಒಂದಿಷ್ಟು ಭಾಗವನ್ನು ಮಂಗಳವಾರ ಬುಲ್ಲೋಜರ್‌ಗಳಿಂದ ಕೆಡವಿಹಾಕಲಾಯಿತು. ಪೊಲೀಸರು ಹಾಗೂ ಪ್ರಾದೇಶಿಕ ಸಶಸ್ತ್ರ ದಳದ ಸಿಬ್ಬಂದಿಯ ಸಮ್ಮುಖದಲ್ಲಿ ಈ ಕಾರ್ಯ ನಡೆಯಿತು.
ಸರ್ಕಾರಿ ಜಾಗವನ್ನು ಒತ್ತುವರಿ ಮಾಡಿಕೊಂಡು ಮಸೀದಿಯ ಹಿಂಬದಿಯ ಗೋಡೆಯನ್ನು ನಿರ್ಮಿಸಲಾಗಿತ್ತು. ರಸ್ತೆ ವಿಸ್ತರಣೆ ಕಾಮಗಾರಿ ನಡೆಯುತ್ತಿರುವುದರಿಂದ ಆ ಭಾಗವನ್ನು ಕೆಡವಲಾಗಿದೆ ಎಂದು ಫತೇಪುರದ ಅಧಿಕಾರಿಯೊಬ್ಬರು ತಿಳಿಸಿದರು.
ಮಸೀದಿಯ ಉಸ್ತುವಾರಿ ವಹಿಸಿಕೊಂಡವರಿಗೆ ಇದೇ ವರ್ಷ ಆಗಸ್ಟ್ ಹಾಗೂ ಸೆಪ್ಟೆಂಬರ್‌ನಲ್ಲಿ ಎರಡು ನೋಟಿಸ್‌ಗಳನ್ನು ಕಳುಹಿಸಲಾಗಿತ್ತು. ಒತ್ತುವರಿ ಮಾಡಿಕೊಂಡು ನಿರ್ಮಿಸಿರುವ ಮಸೀದಿಯ ಭಾಗವನ್ನು ಕೆಡವಿಹಾಕುವಂತೆ ಸೂಚಿಸಲಾಗಿತ್ತು. ಆಗ ಒಂದು ತಿಂಗಳ ಕಾಲಾವಕಾಶವನ್ನು ಮಸೀದಿಯ ಉಸ್ತುವಾರಿ ಕೇಳಿಕೊಂಡಿದ್ದರು ಎಂದೂ ಅಧಿಕಾರಿ ಹೇಳಿದರು.
ಕೋರಿದ್ದ ಕಾಲಾವಕಾಶದ ಒಳಗೆ ಮಸೀದಿಯ ಸಮಿತಿಯು ಕಾರ್ಯತತ್ಪರವಾಗದೇ ಇರುವುದರಿಂದ ಅನಿವಾರ್ಯವಾಗಿ ಅದನ್ನು ಒಡೆದುಹಾಕಬೇಕಾಯಿತು ಎಂದರು.
ನೋಟಿಸ್‌ಗಳನ್ನು ಪ್ರಶ್ನಿಸಿ ಮಸೀದಿ ಸಮಿತಿಯು ಅಲಹಾಬಾದ್ ಹೈಕೋರ್ಟ್ ಮೊರೆಹೋಗಿತ್ತು. ಅರ್ಜಿಯ ವಿಚಾರಣೆಗೆ ಹೈಕೋರ್ಟ್ ಡಿಸೆಂಬರ್ 13ರ ದಿನಾಂಕ ನಿಗದಿಪಡಿಸಿದೆ. ಅಷ್ಟರೊಳಗೆ ಮಸೀದಿಯ ಭಾಗವನ್ನು ಕೆಡವಲಾಗಿದೆ.
ಮನವಿಗೆ ಸ್ಪಂದಿಸಲಿಲ್ಲ: ಮಸೀದಿ
ಉಸ್ತುವಾರಿ 'ಮಸೀದಿಯು 180 ವರ್ಷಗಳಷ್ಟು ಹಳೆಯದು. ಅದು ಸಂರಕ್ಷಿತ ಸ್ಮಾರಕಗಳ ಪಟ್ಟಿಗೆ ಸೇರಿದೆ. ಹೈಕೋರ್ಟ್‌ನಲ್ಲಿ ವಿಚಾರಣೆ ಮುಗಿಯುವವರೆಗೆ ಕಾಯುವಂತೆ ನಾವು ವಿನಂತಿಸಿಕೊಂಡೆವು. ಹಿಂದಿನ ಗೋಡೆಗಳನ್ನು ಒಡೆದರೆ ಮಸೀದಿಯ ಇಡೀ ಕಟ್ಟಡಕ್ಕೆ ಹಾನಿಯಾಗಲಿದೆ ಎಂದೂ ಕೇಳಿಕೊಂಡೆವು. ಆದರೆ ನಮ್ಮ ಮನವಿಗೆ ಅಧಿಕಾರಿಗಳು ಸ್ಪಂದಿಸಲಿಲ್ಲ ಎಂದು ಮಸೀದಿಯ ಉಸ್ತುವಾರಿ ಪ್ರತಿಕ್ರಿಯಿಸಿದರು.
Post a Comment