ಮಂಗಳೂರು: ತೆಂಗಿನ ಮರ ಕಡಿಯಲು 18 ಸಾವಿರ ಅರ್ಜಿ!

 ರೈತ ಉತ್ಪಾದಕ ಸಂಸ್ಥೆಯಿಂದ ನಿರುಪಯುಕ್ತ ಮರಗಳ ಮೌಲ್ಯವರ್ಧನೆ



ಮಂಗಳೂರು: ಒಣ, ನಿರುಪಯುಕ್ತ ತೆಂಗಿನ ಮರಗಳನ್ನು ಖರೀದಿಸಿ ಮೌಲ್ಯವರ್ಧನೆ ಮಾಡುವ ದಕ್ಷಿಣ ಕನ್ನಡ ತೆಂಗು ರೈತ ಉತ್ಪಾದಕರ ಸಂಸ್ಥೆಗೆ, ಮರ ಕಡಿಯಲು ಬೇಡಿಕೆ ಇಟ್ಟು ರೈತರಿಂದ 18 ಸಾವಿರಕ್ಕೂ ಹೆಚ್ಚು ಅರ್ಜಿ ಸಲ್ಲಿಕೆಯಾಗಿವೆ.

ಆರು ತಿಂಗಳಲ್ಲಿ ಸಂಸ್ಥೆಯು ಸುಮಾರು 2,000 ತೆಂಗಿನ ಮರಗಳನ್ನು ರೈತರಿಂದ ಖರೀದಿಸಿದ್ದು, ಅದರ ತಿರುಳು ಬಳಸಿ ವಿವಿಧ ಉತ್ಪನ್ನಗಳನ್ನು ತಯಾರಿಸಿದೆ. ಪೀಠೋಪಕರಣ, ಆಟಿಕೆ, ಅಡುಗೆಮನೆ ಸಾಮಗ್ರಿ ಮಾರುಕಟ್ಟೆ ಪ್ರವೇಶಿಸಿವೆ.


'ಕಲ್ಪವೃಕ್ಷದ ಜೊತೆ ಜನರಿಗೆ ಭಾವನಾತ್ಮಕ ಸಂಗತಿಗಳು ಬೆಸೆದುಕೊಂಡಿವೆ. ಹೀಗಾಗಿ, ಅನೇಕರು ಒಣಗಿದ ಅಥವಾ ನಿರುಪಯುಕ್ತ ತೆಂಗಿನ ಮರಗಳನ್ನು ತೋಟದಿಂದ ತೆರವುಗೊಳಿಸಲು ಹಿಂದೇಟು ಹಾಕುತ್ತಾರೆ. ಜೊತೆಗೆ, ತೋಟದ ನಡುವಿನಿಂದ ಒಣ ಮರ ತೆರವುಗೊಳಿಸುವುದೂ ಅವರಿಗೆ ಸವಾಲು. ಅಂತಹ ಮರಗಳನ್ನು ನಾವು ಅವರ ಮನೆ ಬಾಗಿಲಿಗೇ ಹೋಗಿ ಖರೀದಿಸುತ್ತಿದ್ದೇವೆ. ಸಂಸ್ಥೆಯು 20 ಸಾವಿರ ಸದಸ್ಯರನ್ನು ಹೊಂದಿದ್ದು, ಅರ್ಜಿ ಸಲ್ಲಿಸಿದವರಲ್ಲಿ ಸದಸ್ಯರೇ ಹೆಚ್ಚಿನವರು' ಎನ್ನುತ್ತಾರೆ ವಿಟ್ಲದಲ್ಲಿ ಕೇಂದ್ರ ಕಚೇರಿ ಹೊಂದಿರುವ ಸಂಸ್ಥೆಯ ಅಧ್ಯಕ್ಷ ಕುಸುಮಾಧರ ಎಸ್‌.ಕೆ.


'ಗುಣಮಟ್ಟ ಆಧರಿಸಿ ಒಂದು ಮರಕ್ಕೆ ಗರಿಷ್ಠ ₹2,000 ದರ ನೀಡಲಾಗುತ್ತದೆ. ಸಿಡಿಲು ಬಡಿದು ಚೆಂಡೆ ಒಣಗಿಸಿದ ಮರಗಳನ್ನು ಸಹ ಖರೀದಿಸಲಾಗುತ್ತದೆ. ಕಾರ್ಮಿಕರ ಅಲಭ್ಯತೆ ಇದ್ದಲ್ಲಿ, ಸಂಸ್ಥೆಯೇ ಈ ಹೊಣೆ ನಿರ್ವಹಿಸುತ್ತದೆ. ಆದರೆ, ಅದರ ವೆಚ್ಚವನ್ನು ಮರದ ಮಾಲೀಕರು ಭರಿಸಬೇಕಾಗುತ್ತದೆ. ಒಂದು ತೆಂಗಿನ ಮರ ಕಡಿದರೆ ಒಂದು ಗಿಡ ನೆಡುವುದನ್ನು ಕಡ್ಡಾಯಗೊಳಿಸಿದ್ದೇವೆ. ಸಿಪಿಸಿಆರ್‌ಐ ಪ್ರಮಾಣೀಕರಿಸಿದ ಸಸಿಯನ್ನು ನಾವು ಉಚಿತವಾಗಿ ಅವರಿಗೆ ಒದಗಿಸುತ್ತೇವೆ' ಎನ್ನುತ್ತಾರೆ ಅವರು.

ಸಂಸ್ಕರಿಸಿದ ಮೇಲೆ ಒಂದು ಮರದಿಂದ ಶೇ 50ರಷ್ಟು ಕಟ್ಟಿಗೆ ಮಾತ್ರ ಬಳಕೆಗೆ ಸಿಗುತ್ತದೆ. ಸಂಗ್ರಹಿಸಿದ ಮರಗಳನ್ನು ದಾಸ್ತಾನು ಮಾಡಲು ಜಾಗದ ಅಭಾವ ಇದ್ದು, ಕಂಪನಿ ಹೊಸ ಘಟಕ ಪ್ರಾರಂಭಿಸಲು ಸಿದ್ಧತೆ ನಡೆಸಿದೆ. ಆ ನಂತರದ ದಿನಗಳಲ್ಲಿ ಅರ್ಜಿ ಸಲ್ಲಿಸಿದ ರೈತರಿಂದ ಹೆಚ್ಚು ಮರ ಖರೀದಿಸಿ, ತಯಾರಿಕೆ ಹೆಚ್ಚಳಕ್ಕೆ ಯೋಚಿಸಲಾಗಿದೆ. ಆನ್‌ಲೈನ್ ಮಾರುಕಟ್ಟೆ ಪ್ರವೇಶಿಸುವ ಯೋಜನೆಯೂ ಇದೆ. ದಕ್ಷಿಣ ಕನ್ನಡ, ಉಡುಪಿ ಭಾಗಗಳ ರೈತರ ಅರ್ಜಿ ಹೆಚ್ಚಿದ್ದು, ಹಾಸನ, ಮೈಸೂರು, ರಾಜ್ಯದ ಬೇರೆ ಜಿಲ್ಲೆಗಳ ಅರ್ಜಿಗಳೂ ಇವೆ. ಪ್ರಸ್ತುತ ಹಂತ ಹಂತವಾಗಿ ಖರೀದಿಸಲಾಗುತ್ತಿದೆ. ಪ್ರೈವುಡ್‌ಗೆ ಪರ್ಯಾಯವಾಗಿ ತೆಂಗಿನ ಮರದ ಕಟ್ಟಿಗೆ ಬಳಸಲು ಪ್ರಯೋಗಗಳು ನಡೆಯತ್ತಿವೆ. ತೆಂಗಿನ ಕಟ್ಟಿಗೆ ಗಟ್ಟಿ ಮುಟ್ಟಾಗಿದ್ದು, ಹಲವು ಭಾಗಗಳಲ್ಲಿ ಮನೆಯ ಜಂತಿಗೆ ಇದರ ಬಳಕೆ ರೂಢಿಯಲ್ಲಿದೆ ಎಂದು ಸಂಸ್ಥೆಯ ಮುಖ್ಯ ಸಲಹೆಗಾರ ಯತೀಶ್ ಕೆ.ಎಸ್. 'ಪ್ರಜಾವಾಣಿ'ಗೆ ಪ್ರತಿಕ್ರಿಯಿಸಿದರು.

Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget