ಪಾರಾದೀಪ್ (ಒಡಿಶಾ): ಭಾರತದ ಜಲಗಡಿಯಲ್ಲಿ ಮೀನುಗಾರಿಕೆ ಮಾಡುತ್ತಿದ್ದ ಆರೋಪದಡಿ ಬಾಂಗ್ಲಾದ 78 ಮೀನುಗಾರರನ್ನು ಬಂಧಿಸಲಾಗಿದೆ ಎಂದು ಭಾರತದ ನೌಕಾಪಡೆ ತಿಳಿಸಿದೆ.
ಅಕ್ರಮವಾಗಿ ಮೀನುಗಾರಿಗೆ ಮಾಡುತ್ತಿದ್ದ ಮೀನುಗಾರರು ಮತ್ತು ಎರಡು ದೋಣಿಗಳನ್ನು ನೌಕಾಪಡೆಯು ಇಂದು (ಮಂಗಳವಾರ) ವಶಪಡಿಸಿಕೊಂಡಿದೆ.
ಎಫ್‌ವಿ ಲೈಲಾ-2 ಮತ್ತು ಎಫ್‌ವಿ ಮೇಘನಾ-5 ಹಡಗುಗಳು ಅಂತರರಾಷ್ಟ್ರೀಯ ಕಡಲ ಗಡಿ ರೇಖೆ (ಐಎಂಬಿಎಲ್) ಬಳಿ ಭಾರತದ ಜಲಗಡಿಯಲ್ಲಿ ಅಕ್ರಮವಾಗಿ ಮೀನುಗಾರಿಕೆ ನಡೆಸುತ್ತಿರುವುದು ಕಂಡುಬಂದಿದೆ. ಇದರಿಂದಾಗಿ ಅಂತರರಾಷ್ಟ್ರೀಯ ಕಡಲ ಕಾನೂನುಗಳು ಮತ್ತು ದ್ವಿಪಕ್ಷೀಯ ಒಪ್ಪಂದಗಳನ್ನು ಉಲ್ಲಂಘಿಸಿದಂತಾಗಿದೆ ಎಂದು ನೌಕಾಪಡೆ ಅಧಿಕಾರಿಗಳು ಹೇಳಿದ್ದಾರೆ.
ಎಫ್‌ವಿ ಲೈಲಾ-2ರಲ್ಲಿ 41 ಮೀನುಗಾರರು ಇದ್ದರೆ, ಎಫ್‌ವಿ ಮೇಘನಾ-5ರಲ್ಲಿ 37 ಮೀನುಗಾರರು ಇದ್ದರು ಎಂದು ನೌಕಾಪಡೆ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ತಪಾಸಣೆ ನಡೆಸಿದಾಗ ಎರಡು ಹಡಗುಗಳಲ್ಲಿ ಸುಮಾರು 160 ಟನ್ ಮೀನುಗಳು ಪತ್ತೆಯಾಗಿವೆ. ಹೆಚ್ಚಿನ ತನಿಖೆಗಾಗಿ ಹಡಗುಗಳು ಮತ್ತು ಮೀನುಗಾರರನ್ನು ವಶಕ್ಕೆ ಪಡೆಯಲಾಗಿದೆ ಎಂದು ವರದಿಯಾಗಿದೆ.
Post a Comment