ಕೋಮು ಗಲಭೆ: ಉತ್ತರ ಪ್ರದೇಶದಲ್ಲಿ 1978ರಿಂದಲೂ ಬಾಗಿಲು ಮುಚ್ಚಿದ್ದ ದೇವಸ್ಥಾನ
ಉತ್ತರ ಪ್ರದೇಶದ ಸಂಭಲ್ ಜಿಲ್ಲೆಯ ಕಗ್ಗು ಸರಯ್ ಎಂಬ ಪ್ರದೇಶದಲ್ಲಿ 46 ವರ್ಷದ ಬಳಿಕ ಬಾಗಿಲು ತೆರೆದ ದೇವಸ್ಥಾನದೊಳಗೆ ಕಂಡ ಆಂಜನೇಯ ಮೂರ್ತಿ ಹಾಗೂ ಶಿವಲಿಂಗ
ಸಂಭಲ್ (ಉತ್ತರ ಪ್ರದೇಶ): ಸಂಭಲ್ ಪಟ್ಟಣದಲ್ಲಿ ಕೊಮುಗಲಭೆ ಹಿನ್ನೆಲೆಯಲ್ಲಿ 1978ರಿಂದಲೂ ಮುಚ್ಚಿದ್ದ ದೇವಸ್ಥಾನದ ಬೀಗವನ್ನು ಜಿಲ್ಲಾಡಳಿತ ಶುಕ್ರವಾರ ತೆರೆಯಿತು.
ಶಾಹಿ ಜಾಮಾ ಮಸೀದಿಯಿಂದ ಸ್ವಲ್ಪವೇ ದೂರದ ಅಂತರದಲ್ಲಿರುವ ಈ ದೇವಸ್ಥಾನವು ಒತ್ತುವರಿ ತೆರವು ಕಾರ್ಯಾಚರಣೆ ವೇಳೆ ನಮ್ಮ ಗಮನಕ್ಕೆ ಬಂತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದು ಭಸ್ಮ ಶಂಕರ ದೇವಸ್ಥಾನವಾಗಿದ್ದು, ಇಲ್ಲಿ ಹನುಮಂತನ ಮೂರ್ತಿ ಹಾಗೂ ಶಿವಲಿಂಗ ಇವೆ. 1978ರಲ್ಲಿ ನಡೆದ ಕೋಮುಗಲಭೆ ವೇಳೆ ಈ ದೇವಸ್ಥಾನಕ್ಕೆ ಬೀಗ ಹಾಕಲಾಗಿತ್ತು. ಅಲ್ಲದೇ, ಇಲ್ಲಿನ ಹಿಂದೂಗಳನ್ನು ಬೇರೆಡೆಗೆ ಸ್ಥಳಾಂತರಿಸಲಾಗಿತ್ತು ಎಂದು ಸ್ಥಳೀಯರು ತಿಳಿಸಿದ್ದಾರೆ.
'ಈ ಪ್ರದೇಶವನ್ನು ಪರಿಶೀಲಿಸುತ್ತಿದ್ದಾಗ ಇಲ್ಲಿ ದೇವಸ್ಥಾನವಿರುವುದು ನಮ್ಮ ಗಮನಕ್ಕೆ ಬಂತು. ತಕ್ಷಣ ನಾನು ಜಿಲ್ಲಾಡಳಿತದ ಗಮನಕ್ಕೆ ತಂದೆ' ಎಂದು ಈ ಪ್ರದೇಶದಲ್ಲಿ ವಿದ್ಯುತ್ ಕಳವು ವಿರುದ್ಧ ಕಾರ್ಯಾಚರಣೆಯ ನೇತೃತ್ವ ವಹಿಸಿದ್ದ ವಂದನಾ ಮಿಶ್ರಾ ತಿಳಿಸಿದ್ದಾರೆ.
ದೇವಸ್ಥಾನದ ಬಳಿ ಬಾವಿಯೂ ಇದ್ದು, ಅದನ್ನೂ ತೆರೆಯಲು ಅಧಿಕಾರಿಗಳು ಯೋಜನೆ ಹಾಕಿಕೊಂಡಿದ್ದಾರೆ.
*1978ರಲ್ಲಿ ಕೋಮುಗಲಭೆ ಬಳಿಕ ನಮ್ಮ ಸಮುದಾಯದವರನ್ನು ಇಲ್ಲಿಂದ ಬಲವಂತವಾಗಿ ಸ್ಥಳಾಂತರಿಸಲಾಗಿತ್ತು. ಇದು ನಮ್ಮ ಕುಲದೇವರ ದೇವಸ್ಥಾನವಾಗಿದ್ದು, ಅಂದಿನಿಂದ ಬೀಗಹಾಕಲಾಗಿತ್ತು' ಎಂದು 82 ವರ್ಷದ ವಿಷ್ಣು ಶಂಕರ್ ರಸ್ತೋಗಿ ಎಂಬುವವರು ತಿಳಿಸಿದ್ದಾರೆ.
ಇಲ್ಲಿನ ಶಾಹಿ ಜಾಮಾ ಮಸೀದಿಯ ಸಮೀಕ್ಷೆಗೆ ಕೋರ್ಟ್ ಆದೇಶ ನೀಡಿದ ಬಳಿಕ ನ.24ರಂದು ನಡೆದ ಗಲಭೆಯಲ್ಲಿ ನಾಲ್ವರು ಮೃತಪಟ್ಟಿದ್ದರು. ಅದಾದ ಕೆಲವು ವಾರಗಳ ನಂತರ ಜಿಲ್ಲಾಡಳಿತವು ಈ ಮಸೀದಿಯ ಸುತ್ತಲಿನ ಪ್ರದೇಶದಲ್ಲಿ ಒತ್ತುವರಿ ತೆರವು ಹಾಗೂ ವಿದ್ಯುತ್ ಕಳವು ವಿರುದ್ಧ ಕಾರ್ಯಾಚರಣೆ ಕೈಗೊಂಡಿತ್ತು.
Post a Comment