ಬಲೆ ತುಳುನಾಡು ದ ಸಂಸ್ಕೃತಿ ಜಗತ್ತುಗ್ ಮನವರಿಕೆ ಮಲ್ಪುಗ, ಭಲೇ ಭಲೇ ಅಲೆ ಬುಡಿಯೆರ್
ಕಂಬಳ ಎಂದರೇನು..?
ತುಳುನಾಡಿನ ಜನತೆ ಕೃಷಿಯನ್ನೇ ನಂಬಿ ಬದುಕುತ್ತಿದ್ದ ಜನ. ಈಗಲೂ ಸಹ ಇಲ್ಲಿನ ಬಹುತೇಕರ ಮನೆಯ ಮೂಲ ಆದಾಯವೇ ಕೃಷಿ. ಅಂದು ಕೃಷಿ ಚಟುವಟಿಕೆಗಳಿಗೆ ಬಳಸುತ್ತಿದ್ದ ಕೋಣಗಳಿಗೆ ಹಾಗೂ ಬೇಸಾಯದಲ್ಲಿ ಭಾಗಿಯಾಗುತ್ತಿದ್ದ ರೈತರಿಗೆ ಮನರಂಜನೆಯಾಗಬೇಕು ಎಂಬ ಕಾರಣಕ್ಕೆ ಹುಟ್ಟಿಕೊಂಡ ಕ್ರೀಡೆಯೇ ಕಂಬಳ. ತುಳು ಭಾಷೆಯ ಕಂಬುಲ ಕಂಬಳವಾಗಿ ಬದಲಾಗಿದೆ. ಕಂಬುಲ ಎಂದರೆ ಕೆಸರು ಗದ್ದೆ ಎಂದು ಅರ್ಥ. ಕಂಪ +ಪೊಲ ಸೇರಿ ಕೆಂಬುಲ ಎಂಬ ಹೆಸರನ್ನು ಪಡೆದುಕೊಂಡಿತು ಎಂದು ಹೇಳಲಾಗುತ್ತದೆ. ತಗ್ಗು ಪ್ರದೇಶದಲ್ಲಿರುವ ಗದ್ದೆಗೆ ಕಂಪದ ಕಂಡ ಅಂತಾ ತುಳುವಿನಲ್ಲಿ ಕರೆಯುತ್ತಾರೆ. ಕಂಬಳವನ್ನು ಕೆಸರು ಗದ್ದೆಯಲ್ಲಿ ಆಡಿಸೋದ್ರಿಂದ ಈ ಕಾರಣಕ್ಕೂ ಕಂಬಳ ಎಂಬ ಹೆಸರು ಬಂದಿರಬಹುದು ಎಂದು ಹೇಳುವವರಿದ್ದಾರೆ. ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಂಬಳ ಒಂದು ಜಾನಪದ ಕ್ರೀಡೆಯಾಗಿದೆ.
ಕಂಬಳ ಹುಟ್ಟಿಕೊಂಡಿದ್ದೇಗೆ..?
ಈ ಕಂಬಳ ಕ್ರೀಡೆಗೆ ಏನಿಲ್ಲವೆಂದರೂ 900 ವರ್ಷಗಳ ಇತಿಹಾಸವಿದೆ ಎಂದು ಹೇಳಲಾಗುತ್ತದೆ. ಇದಕ್ಕೆ ಪುರಾವೆ ಎಂಬಂತೆ ಕ್ರಿ.ಶ 1421ರಲ್ಲಿ ಬರೆಯಲಾಗಿದ್ದ ಬಾರಕೂರು ಶಾಸನದಲ್ಲಿ ದೇವರು ಸಾವಂತನ ಕಂಬಳ ಗದ್ದೆಯ ಮೇಲೆ ಎಂದು ಬರೆಯಲಾಗಿದೆ. ಇದು ಮಾತ್ರವಲ್ಲ ಕ್ರಿಸ್ತ ಶಕ 1482ರ ಕೊಲ್ಲೂರು ಶಾಸನ ಹಾಗೂ ಕ್ರಿ.ಶ 1676ರ ಸುಬ್ರಹ್ಮಣ್ಯ ಕಲ್ಲುಮಾಣೆ ಶಂಕರದೇವಿ ಬಲ್ಲಾಳ್ತಿ ಶಾಸನದಲ್ಲಿಯೂ ಕಂಬಳದ ಬಗ್ಗೆ ಉಲ್ಲೇಖವಿದೆ.
ತುಳುನಾಡಿನ ಶ್ರೀಮಂತ ಸಂಸ್ಕೃತಿಯ ಭಾಗವಾಗಿರುವ ಕಂಬಳ ಈ ಮಣ್ಣಿನ ಧಾರ್ಮಿಕ ಕಟ್ಟುಕಟ್ಟಳೆಗಳೊಂದಿಗೆ ಗ್ರಾಮೀಣ ಸೊಗಡನ್ನು ಸಾರುವ ಇಲ್ಲಿನ ಜನಜೀವನವನ್ನು ಬಿಂಬಿಸುವ ಕೃಷಿಕ ಮತ್ತು ಜಾನುವಾರುಗಳ ಬದುಕ ನಂಟಿನೊಂದಿಗೆ ಆರಂಭವಾದ ಸಾಂಪ್ರದಾಯಿಕ ಕ್ರೀಡೆಯು ಕಾಲಕ್ರಮೇಣ ಆಧುನಿಕತೆಗೆ ತೆರೆದುಕೊಳ್ಳುವ ಮೂಲಕ ಇನ್ನಷ್ಟು ಜನಪ್ರಿಯವಾಗುತ್ತ ಬಂದಿದೆ.
ಕಂಬಳವನ್ನು ನಿಷೇಧಿಸುವ ಷಡ್ಯಂತ್ರದ ಮೂಲಕ ಇಲ್ಲಿನ ಮಣ್ಣಿನ ಮೂಲ ಸತ್ವಕ್ಕೆ ಕೊಡಲಿ ಏಟು ಕೊಟ್ಟು ನಮ್ಮ ಸಂಸ್ಕೃತಿಗೆ ಧಕ್ಕೆ ತರಲು ಯತ್ನಿಸಿದ ಪೆಟಾ ಸಂಸ್ಥೆಯ ವಿರುದ್ಧ ನಡೆದ ಪ್ರಬಲ ಹೋರಾಟದಲ್ಲಿ ಹುಟ್ಟಿಕೊಂಡ ಕಿಚ್ಚು 'ಮಂಗಳೂರು ಕಂಬಳ'ವು ಕ್ಯಾಪ್ಟನ್ ಬ್ರಿಜೇಶ್ ಚೌಟ ಇವರ ನೇತೃತ್ವದಲ್ಲಿ 8ನೇ ವರ್ಷಕ್ಕೆ ಹೆಜ್ಜೆಯನ್ನಿರಿಸಿದೆ.
ಬಂಗ್ರಕೂಳೂರಿನ ಗೋಲ್ಡ್ ಪಿಂಚ್ ಸಿಟಿಯ ರಾಮ-ಲಕ್ಷ್ಮಣ ಜೋಡು ಕರೆಯಲ್ಲಿ ಡಿ.28 ಹಾಗೂ 29ರಂದು 8ನೇ ವರ್ಷದ “ಮಂಗಳೂರು ಕಂಬಳ’ ಅತ್ಯಂತ ಸಂಭ್ರಮ ಸಡಗರದಿಂದ ನಡೆಯಲಿದೆ ಎಂದು ಕಂಬಳ ಸಮಿತಿ ಅಧ್ಯಕ್ಷರು ಹಾಗೂ ದಕ್ಷಿಣ ಕನ್ನಡ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ತಿಳಿಸಿದ್ದಾರೆ.
ಮಂಗಳೂರಿನಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮಂಗಳೂರು ಕಂಬಳವು ಕಳೆದ 7 ವರ್ಷಗಳಿಂದ ಮಂಗಳೂರಿನ ಗೋಲ್ಡ್ ಪಿಂಚ್ ಸಿಟಿಯಲ್ಲಿ ಎಂಆರ್‌ಜಿ ಗ್ರೂಪ್‌ನ ಚೇರ್ಮನ್ ಪ್ರಕಾಶ್ ಶೆಟ್ಟಿ ಅವರ ಗೌರವಾಧ್ಯಕ್ಷತೆಯಲ್ಲಿ ನಡೆಯುತ್ತಿದೆ.
ಹುತಾತ್ಮ ಯೋಧ, ನಮ್ಮೂರಿನ ಕ್ಯಾಪ್ಟನ್ ಎಂ.ವಿ. ಪ್ರಾಂಜಲ್ ಅವರ ತಂದೆ, ಎಂಆರ್‌ಪಿಎಲ್‌ನ ನಿವೃತ್ತ ಆಡಳಿತ ನಿರ್ದೇಶಕರಾದ ಎಂ.ವೆಂಕಟೇಶ್ ಅವರು ಮಂಗಳೂರು ಕಂಬಳ ಉದ್ಘಾಟಿಸಲಿದ್ದಾರೆ.
ಹಲವು ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಸಂಜೆ 6ಕ್ಕೆ ದಿ|ರತ್ನ ಮಾಧವ ಶೆಟ್ಟಿ ವೇದಿಕೆಯಲ್ಲಿ ಸಭಾ ಕಾರ್ಯಕ್ರಮ ನಡೆಯಲಿದ್ದು, ಎಂಆರ್‌ಜಿ ಗ್ರೂಪ್‌ನ ಸಿಎಂಡಿ ಡಾ|ಕೆ.ಪ್ರಕಾಶ್ ಶೆಟ್ಟಿ ಅಧ್ಯಕ್ಷತೆ ವಹಿಸಲಿದ್ದಾರೆ ಎಂದರು.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕ್ರೂಸ್ ಟೂರಿಸಂ ಅಭಿವೃದ್ದಿಪಡಿಸುವ ಅಗತ್ಯತೆ ಇದ್ದು ಈ ಬಗ್ಗೆ ಉನ್ನತ ಮಟ್ಟದ ಸಭೆ ನಡೆಯುತ್ತಿದೆ. ಕಂಬಳ ಕ್ರೀಡೆಯನ್ನು ಸ್ವದೇಶ್ ದರ್ಶನ್‌ನಲ್ಲಿ ಸೇರ್ಪಡೆ ಮಾಡುವ ಬಗ್ಗೆಯೂ ಚಿಂತನೆ ನಡೆಸಲಾಗುತ್ತಿದೆ. ವಿದೇಶಿಗರನ್ನು ಈ ಕಡೆಗೆ ಆಕರ್ಷಿಸುವ ಪರಿಕಲ್ಪನೆಗೆ ಒತ್ತು ನೀಡಲಾಗುವುದು ಎಂದರು.
ಕಂಬಳ ಸಮಿತಿ ಉಪಾಧ್ಯಕ್ಷ ಈಶ್ವರ್ ಪ್ರಸಾದ್ ಶೆಟ್ಟಿ ಮಾತನಾಡಿ, “ಕಂಬಳದ ಅಂಗವಾಗಿ ಕಲರ್‌ಕೂಟ ಡ್ರಾಯಿಂಗ್ ಸ್ಪರ್ಧೆ ನಡೆಯಲಿದೆ.
10 ವರ್ಷದವರೆಗಿನ ಮಕ್ಕಳು “ರಂಗ್‌ದ ಎಲ್ಯ’, 10ರಿಂದ 15 ವರ್ಷದೊಳಗಿನ ಮಕ್ಕಳು ‘ರಂಗ್‌ದ ಮಲ್ಲ’ ವಿಭಾಗದಲ್ಲಿ ಭಾಗವಹಿಸಬಹುದು. ಇನ್ನು ರಂಗ್ ಕೂಟ ವಿಭಾಗದಲ್ಲಿ ವಯೋಮಿತಿಯ ನಿರ್ಬಂಧ ಇಲ್ಲ. ಫೋಟೊಗ್ರಾಫಿ ಸ್ಪರ್ಧೆ ಹಾಗೂ ರೀಲ್ಸ್ ಸ್ಪರ್ಧೆಗಳು ಕೂಡ ನಡೆಯಲಿವೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಕಂಬಳ ಸಮಿತಿ ಪ್ರಧಾನ ಕಾರ್ಯದರ್ಶಿ ಸುಜಿತ್ ಪ್ರತಾಪ್, ಉಪಾಧ್ಯಕ್ಷ ನಂದನ್ ಮಲ್ಯ, ಪ್ರಮುಖರಾದ ಅಶೋಕ್ ಕೃಷ್ಣಾಪುರ, ಈಶ್ವರ್ ಪ್ರಸಾದ್ ಶೆಟ್ಟಿ, ವಸಂತ್ ಪೂಜಾರಿ, ಪ್ರಕಾಶ್ ಪೂಜಾರಿ ಗರೋಡಿ, ಕಿರಣ್ ಕುಮಾರ್ ಕೋಡಿಕಲ್, ಸಾಕ್ಷತ್ ಶೆಟ್ಟಿ ಮುಂತಾದವರು ಉಪಸ್ಥಿತರಿದ್ದರು.
ಡಿ.29ರಂದು ಕಂಬಳದ ಫೈನಲ್
ಎರಡು ದಿನಗಳ ಮಂಗಳೂರು ಕಂಬಳದಲ್ಲಿ ಫೈನಲ್ ಸ್ಪರ್ಧೆ ಡಿ.29ರಂದು ಬೆಳಗ್ಗೆ ನಡೆಯಲಿದೆ. ಅದು ಕಂಬಳದ ಫಲಿತಾಂಶದಲ್ಲಿ ಹೆಚ್ಚು ಕುತೂಹಲ ಹಾಗೂ ಆಸಕ್ತಿ ಮೂಡಿಸುವ ಕ್ಷಣ. ಕನೆಹಲಗೆ ವಿಭಾಗದಲ್ಲಿ ವಿಜೇತ ಕೋಣಗಳಿಗೆ ಪ್ರಥಮ 2 ಪವನ್, ದ್ವಿತೀಯ 1 ಪವನ್, ಹಗ್ಗ, ನೇಗಿಲು ಪ್ರಥಮ 2 ಪವನ್ ಮತ್ತು 1ಪವನ್, ಅಡ್ಡ ಹಲಗೆ, ಹಗ್ಗ, ನೇಗಿಲು ಕಿರಿಯ ವಿಭಾಗ ಪ್ರಥಮ 1 ಪವನ್, ದ್ವಿತೀಯ ಅರ್ಧಪವನ್ ಬಹುಮಾನ ದೊರೆಯಲಿದೆ ಎಂದು ಕ್ಯಾಪ್ಟನ್ ಬ್ರಿಜೇಶ್ ಚೌಟ ತಿಳಿಸಿದ್ದಾರೆ.
Post a Comment