ಮಂಡ್ಯ: 'ಅಯ್ಯೋ ಇಲ್ಲಿ ನೆಟ್‌ವಕ್ ಸಿಗುತ್ತಿಲ್ಲ'. 87ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನದ ವೇದಿಕೆಗಳು, ಊಟದ ಬಯಲು, ಪುಸ್ತಕ ಮತ್ತು ವಸ್ತು ಪ್ರದರ್ಶನ ಮಳಿಗೆಗಳ ಬಳಿ ಪದೇ-ಪದೇ ಕಿವಿಗೆ ಬೀಳುತ್ತಿದ್ದ ಮಾತು ಇದು.
ಸಮ್ಮೇಳನ ಆಯೋಜಿಸಲಾಗಿದ್ದ ಬಯಲು ಪ್ರದೇಶವು ಮಂಡ್ಯ ನಗರಕ್ಕೆ ಹತ್ತಿರವೇ ಇದ್ದರೂ, ಲಕ್ಷಾಂತರ ಜನ ಸೇರಿದ್ದರಿಂದ ನೆಟ್‌ವರ್ಕ್ ದಟ್ಟಣೆ ಉಂಟಾಗಿತ್ತು. ಕೆಲವು ಕಂಪನಿಗಳ ಇಂಟರ್‌ನೆಟ್ ಸೇವೆ ತೀರಾ ನಿಧಾನಗತಿಗೆ ಇಳಿದಿದ್ದರೆ, ಕೆಲ ಕಂಪನಿಗಳ ಸಿಮ್‌ಗಳ ಮೂಲಕ ಕರೆಯೇ ಹೋಗುತ್ತಿರಲಿಲ್ಲ.
ನೆಟ್‌ವರ್ಕ್ ಇಲ್ಲದೇ ಇದ್ದುದ್ದರಿಂದ ಜನ ಮೊಬೈಲ್ ಒಳಗಿಟ್ಟು ಸುಮ್ಮನೆ ಗೋಷ್ಠಿಗಳಿಗೆ ಕಿವಿಯಾಗಿದ್ದರು. ಪುಸ್ತಕ ಮಳಿಗೆ ಪ್ರದೇಶದಲ್ಲಂತೂ ಇಂಟರ್‌ನೆಟ್ ಸಂಪೂರ್ಣವಾಗಿ ಸ್ಥಗಿತವಾಗಿತ್ತು. ಪುಸ್ತಕ ಖರೀದಿಸಿದವರು ಯುಪಿಐ ಮೂಲಕ ಹಣ ಪಾವತಿಸಲಾಗದೆ ನೆಟ್‌ವರ್ಕ್‌ಗೆ ಶಾಪ ಹಾಕುತ್ತಾ ಪುಸ್ತಕಗಳನ್ನು ಹಿಂತಿರುಗಿಸಿದರು.
ಕೆಲ ಮಳಿಗೆಗಳವರು ಆನ್‌ಲೈನ್ ಸ್ಟ್ರೀಮಿಂಗ್‌ಗೆ ಎಂದು ಪರದೆಗಳನ್ನು ಅಳವಡಿಸಿದ್ದರು. ನೆಟ್‌ವರ್ಕ್ ಇಲ್ಲದೆ ಏನನ್ನೂ ಬಿತ್ತರಿಸಲಾಗದೆ ಕೂತಿದ್ದರು.
'ಏಳನೇ ಶತಮಾನದಿಂದ ಈವರೆಗೆ ಕನ್ನಡ ಲಿಪಿ ಬೆಳೆದುಬಂದ ರೀತಿಯನ್ನು ವಿವರಿಸುವ ಕ್ಲಿಪ್ಪಿಂಗ್‌ಗಳನ್ನು ಪ್ರದರ್ಶಿಸಬೇಕಿತ್ತು. ಆದರೆ ನೆಟ್‌ವರ್ಕ್ ಇಲ್ಲ' ಎಂದು ಬೆಂಗಳೂರಿನ ಮಿಥಿಕ್ ಸೊಸೈಟಿಯ ಮಳಿಗೆ ಸಿಬ್ಬಂದಿ ಅಲವತ್ತುಕೊಂಡರು.
ಮಾಹಿತಿಯನ್ನು ತಾವೇ ವಿವರಿಸುತ್ತಿದ್ದರು.
ಯುಪಿಐ ಸರಿಯಾಗಿ ಕೆಲಸ ಮಾಡದೆ, ಹೊರಗೆ ಮಾರಾಟಕ್ಕೆ ಇಟ್ಟಿದ್ದ ತಿಂಡಿ-ತಿನಿಸುಗಳನ್ನು ಖರೀದಿಸಲಾಗದೆ ಹಲವರು ಪೆಚ್ಚುಮೋರೆಹಾಕಿದ್ದರು. ಬೆಳಿಗ್ಗೆ ಸಾಧಾರಣಮಟ್ಟದಲ್ಲಿದ್ದ ಸಮಸ್ಯೆ, ಮಧ್ಯಾಹ್ನದಲ್ಲಿ ಜನಸಂದಣಿ ಹೆಚ್ಚಾದಂತೆ ಬಿಗಡಾಯಿಸಿತ್ತು. ದ್ವಾರಗಳ ಎದುರು ಇರಿಸಲಾಗಿದ್ದ ಕಲಾಕೃತಿಗಳ ಬಳಿ ಸೆಲ್ಸಿ ತೆಗೆದುಕೊಂಡವರು ಮತ್ತು ವಿಡಿಯೊ ಮಾಡಿಕೊಂಡವರು ಅವುಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಲಾಗದೆ, ನೆಟ್‌ವರ್ಕ್‌ಗೆ ಹಿಡಿಶಾಪ ಹಾಕುತ್ತಿದ್ದರು.
ಊಟದ ಪ್ರದೇಶದಲ್ಲಿ ಪೋಷಕರಿಂದ ಬೇರೆಯಾದ ಮಕ್ಕಳು, ಶಿಕ್ಷಕರಿಂದ ತಪ್ಪಿಸಿಕೊಂಡ ವಿದ್ಯಾರ್ಥಿಗಳು ಮತ್ತು ಪರಸ್ಪರ ದಿಕ್ಕುತಪ್ಪಿದ ಗೆಳೆಯರು ಕರೆ ಮಾಡಲಾಗದೆ ಪರದಾಡಿದರು. ಪೊಲೀಸರ ಬಳಿ ಹೋಗಿ ತಮ್ಮವರನ್ನು ಹುಡುಕಿಕೊಡುವಂತೆ ದುಂಬಾಲು ಬಿದ್ದರು. “ಹೆಚ್ಚು ಜನ ಇರುವುದರಿಂದ ನೆಟ್‌ವರ್ಕ್ ಜಾಮ್ ಆಗಿದೆ. ಫೋನ್‌ಗಳನ್ನು ರಿಸ್ಟಾರ್ಟ್ ಮಾಡಿ, ನಂತರ ಕರೆ ಮಾಡಿ' ಎಂದು ಪೊಲೀಸರು ಹೇಳುತ್ತಿದ್ದರು.
ಸಂಜೆ ವೇಳೆಗೆ ಜನಸಂದಣಿ ಕಡಿಮೆಯಾದಂತೆ, ನೆಟ್‌ವರ್ಕ್ ಸಮಸ್ಯೆಯೂ ಕಡಿಮೆಯಾಯಿತು.
Post a Comment