ಬೈಂದೂರು: ಶಿವಮೊಗ್ಗ ಮತ್ತು ಉಡುಪಿ ಜಿಲ್ಲೆಗಳಲ್ಲಿ ಪ್ರಧಾನ ಮಂತ್ರಿ ಮತ್ಸ್ಯ ಸಂಪದ ಯೋಜನೆ ಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಹಾಗೂ ಈ ಪ್ರದೇಶಗಳಲ್ಲಿ ಮೀನುಗಾರಿಕೆ ಕ್ಷೇತ್ರವನ್ನು ಅಭಿವೃದ್ಧಿಪಡಿಸಲು ಸುಸ್ಥಿರ ಮೀನುಗಾರಿಕೆ ಅಭಿವೃದ್ಧಿ ಮತ್ತು ಉತ್ಪಾದಕತೆ ಹಾಗೂ ಮೂಲಸೌಕರ್ಯವನ್ನು ಸುಧಾರಿಸುವ ಮೂಲಕ ರೈತರ ಆದಾಯವನ್ನು ದ್ವಿಗುಣಗೊಳಿಸುವ ಕುರಿತಂತೆ ಕೇಂದ್ರದ ಮೀನುಗಾರಿಕೆ, ಪಶು ವೈದ್ಯಕೀಯ ಮತ್ತು ಹೈನುಗಾರಿಕೆ ಸಚಿವರಿಗೆ ಚಳಿಗಾಲದ ಅಧಿವೇಶನದಲ್ಲಿ ಶಿವಮೊಗ್ಗ ಸಂಸದ ಬಿ.ವೈ ರಾಘವೇಂದ್ರ ಅವರು ಪ್ರಸ್ತಾಪಿಸಿದ್ದಾರೆ.
ಅದಕ್ಕೆ ಸಂಬಂಧಿಸಿದಂತೆ ಮಾನ್ಯ ಸಚಿವಾಲಯ ನೀಡಿರುವ ಉತ್ತರದಲ್ಲಿ ಒಟ್ಟಾರೆಯಾಗಿ ಕರ್ನಾಟಕ್ಕೆ 2020-21 ರಿಂದ 2024-25 ನೇ ಸಾಲಿನವರೆಗೆ ಒಟ್ಟು ರೂ 1056.34 ಕೋಟಿ ಅನುದಾನವನ್ನು ಒದಗಿಸಿದ್ದು, ಅದರಲ್ಲಿ ಶಿವಮೊಗ್ಗ ಜಿಲ್ಲೆಯಲ್ಲಿ ಇದುವರೆಗೂ ಹೊಸ ಮೀನು ಕೃಷಿ ಕೊಳ ನಿರ್ಮಾಣ, ಮೀನುಮರಿ ಪಾಲನಾ ಕೇಂದ್ರಗಳ ನಿರ್ಮಾಣ, ಅಲಂಕಾರಿಕ ಮೀನು ಮಾರಾಟ ಮಳಿಗೆ, ಅಲಂಕಾರಿಕ ಮೀನು ಉತ್ಪಾದನಾ ಪಾಲನಾ ಘಟಕ ಹಾಗೂ ಇನ್ಸುಲೇಟೆಡ್ ವಾಹನ ಮತ್ತು ದ್ವಿಚಕ್ರ ವಾಹನ ಖರೀದಿಗಳಿಗಾಗಿ ಒಟ್ಟು ರೂ 1.79 ಕೋಟಿ ಸಹಾಯಧನ ನೀಡಿ ಮೀನುಗಾರರ ತಲಾ ಆದಾಯ ದ್ವಿಗುಣಗೊಳಿಸಲಾಗಿದೆ. ಇದರಿಂದಾಗಿ ಜಿಲ್ಲೆಯಲ್ಲಿ ಒಟ್ಟು 142 ಜನ ಮೀನುಗಾರರಿಗೆ ಅನುಕೂಲವಾಗಿದೆ.
ಅದೇ ರೀತಿ ಉಡುಪಿ ಜಿಲ್ಲೆಯಲ್ಲಿಯೂ ಸಹ ಯೋಜನೆಯಡಿ ಇದುವರೆಗೂ ರೂ 17.43 ಕೋಟಿ ಸಹಾಯಧನ ವಿನಿಯೋಗಿಸಿದ್ದು, ಮೀನು ಕೃಷಿಕೊಳ, ಸುಧಾರಿತ ಮೀನು ಉತ್ಪಾದನಾ ಘಟಕ ಶೀಥಲೀಕರಣ, ಮಂಡುಗಡ್ಡೆ ಕಾರ್ಖಾನೆ ನಿರ್ಮಾಣಕ್ಕಾಗಿ, ಮಂಜುಗಡ್ಡೆ ಘಟಕಗಳ ಆಧುನೀಕರಣಕ್ಕಾಗಿ ಸಹಾಯ, ಮೃದ್ವಂಗಿಗಳ/ಕಪ್ಪೆ ಚಿಪ್ಪು ಸಾಕಾಣಿಕೆಗಾಗಿ ಸಹಾಯ, ಮೀನು ಮಾರಾಟ ಮತ್ತು ಸಾಗಾಟಕ್ಕಾಗಿ ತ್ರಿಚಕ್ರ ಹಾಗೂ ಇನ್ಸುಲೇಟೆಡ್ ವಾಹನಗಳ ಖರೀದಿಗಾಗಿ ಸಹಾಯಧನ ಈ ರೀತಿಯುಳ್ಳ ವಿವಿಧ ಯೋಜನೆಗಳಿಗಾಗಿ ಇದುವರೆಗೂ ಉಡುಪಿ ಜಿಲ್ಲೆಯಲ್ಲಿ 28,616 ಜನ ಫಲಾನುಭವಿಗಳಿದ್ದು, ಈ ಯೋಜನೆಯ ಸದುಪಯೋಗಪಡಿಸಿಕೊಂಡಿದ್ದು ಒಟ್ಟಾರೆ ಮೀನುಗಾರಿಕೆ ಅಭಿವೃದ್ಧಿಗಾಗಿ ಅತ್ಯಮೂಲ್ಯ ಕಾಣಿಕೆಯಾಗಿದೆ.
ಅಲ್ಲದೇ ಮುಂದಿನ ದಿನಗಳಲ್ಲಿಯೂ ಸಹ ರಾಜ್ಯ ಮತ್ತು ಕೇಂದ್ರ ಯೋಜನೆಗಳಿಂದ ಜಿಲ್ಲೆಯ ಮತ್ತು ರಾಜ್ಯದ ಮೀನುಗಾರರ ಶ್ರೇಯೋಭಿವೃದ್ಧಿಗಾಗಿ ಮತ್ತು ಮೀನುಗಾರಿಕೆಯಡಿ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಶ್ರಮಿಸುವುದಾಗಿ ಸಂಸದ ಬಿ.ವೈ ರಾಘವೆಂದ್ರ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Post a Comment