ನವದೆಹಲಿ: ಜಾತಿ ಹೆಸರಿನಲ್ಲಿ ಚುನಾವಣೆಯಲ್ಲಿ ಗೆದ್ದವರು ತಮ್ಮ ಸಮುದಾಯಕ್ಕೆ ಏನನ್ನೂ ಮಾಡುವುದಿಲ್ಲ, ಬದಲಿಗೆ ಅವರ ಕುಟುಂಬದ ಸದಸ್ಯರನ್ನು ಚುನಾವಣೆಯಲ್ಲಿ ಕಣಕ್ಕಿಳಿಸಲು ಟಿಕೆಟ್ ಕೇಳುತ್ತಾರೆ ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ.
'ಟೈಮ್ಸ್ ನೆಟ್‌ವರ್ಕ್ ಇಂಡಿಯಾ ಎಕನಾಮಿಕ್ ಕಾನ್‌ಪ್ಲೇವ್ 2024' ಕಾರ್ಯಕ್ರಮದಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, 'ನಾವು ಹಿಂದುಳಿದವರು ಎಂಬ ರಾಜಕೀಯ ಹಿತಾಸಕ್ತಿಯು ಈಗಿನ ರಾಜಕೀಯ ಸಮಸ್ಯೆಯಾಗಿದೆ. ಪ್ರತಿಯೊಬ್ಬರೂ ತಾವು ಹಿಂದುಳಿದವರು ಎಂದು ಸಾಬೀತುಪಡಿಸಲು ಬಯಸುತ್ತಾರೆ' ಎಂದು ತಿಳಿಸಿದ್ದಾರೆ.
'ಜನರಿಗೆ ತೋರಿಸಲು ಅಭಿವೃದ್ಧಿ ಕೆಲಸ ಮಾಡದಿರುವವರು ಜಾತಿಯ ಹೆಸರಿನಲ್ಲಿ ಚುನಾವಣೆ ಗೆಲ್ಲಲು ಪ್ರಯತ್ನಿಸುತ್ತಾರೆ. ಯಾರಾದರೂ ಜಾತಿಯ ಹೆಸರಿನಲ್ಲಿ ಚುನಾವಣೆ ಗೆದ್ದ ಬಳಿಕ, ಅವರ ಸಮುದಾಯದ ಶ್ರೇಯೋಭಿವೃದ್ಧಿಗೆ ಶ್ರಮಿಸಿದ್ದಾರಾ? ಅಂತಹ ಒಂದು ಉದಾಹರಣೆ ಇದ್ದರೆ ಹೇಳಿ. ಚುನಾವಣೆಯಲ್ಲಿ ಆಯ್ಕೆಯಾದ ಬಳಿಕ, ಅವರು ತಮ್ಮ ಹೆಂಡತಿ ಮತ್ತು ಮಕ್ಕಳಿಗೆ ಚುನಾವಣೆಗೆ ಸ್ಪರ್ಧಿಸಲು ಟಿಕೆಟ್ ಕೊಡಿಸಲು ಬಯಸುತ್ತಾರೆ ಎಂದು ಗಡ್ಕರಿ ಹೇಳಿದ್ದಾರೆ.
'ರಾಜಕೀಯ ಪಕ್ಷಗಳು ಬಡ ಜನರು, ಯುವಕರು, ರೈತರು, ಮಹಿಳೆಯರ ಕಲ್ಯಾಣಕ್ಕಾಗಿ ಮತ್ತು ದೇಶದ ಆರ್ಥಿಕತೆಯನ್ನು ಬಲಪಡಿಸಲು ಶ್ರಮಿಸಬೇಕು. ರಾಜಕೀಯವು ನನ್ನ ವೃತ್ತಿಯಲ್ಲ. ಇದು ಸಾಮಾಜಿಕ-ಆರ್ಥಿಕ ಸುಧಾರಣೆಯ ಸಾಧನವಾಗಿದೆ. ಸಮಾಜ ಸೇವೆ ಮತ್ತು ಉತ್ತಮ ಕೆಲಸವು ಜನರ ಬೆಂಬಲವನ್ನು ಗಳಿಸಲು ಸಹಾಯ ಮಾಡುತ್ತದೆ ಎಂದು ನಾನು ನಂಬುತ್ತೇನೆ. ನಾನು ಜಾತಿ ರಾಜಕೀಯವನ್ನು ಆಶ್ರಯಿಸದೆ ನನ್ನ ನಂಬಿಕೆಯ ಮೇರೆಗೆ ಹೋಗುತ್ತೇನೆ' ಎಂದು ಅವರು ತಿಳಿಸಿದ್ದಾರೆ.
Post a Comment