ಮಹಾರಾಷ್ಟ್ರ ರಾಜ್ಯದಲ್ಲಿ 'ಮಹಾಯತಿ' ಮೈತ್ರಿಕೂಟದ ಹೊಸ ಸರ್ಕಾರ ರಚನೆಯ ಪ್ರಕ್ರಿಯೆ ಆರಂಭವಾಗಿದೆ. ಬಿಜೆಪಿ ನಾಯಕ ದೇವೇಂದ್ರ ಫಡ್ನವೀಸ್ ರಾಜ್ಯದ ನೂತನ ಮುಖ್ಯಮಂತ್ರಿಯಾಗಲಿದ್ದಾರೆ.
ಮುಂಬೈ, ಡಿ 4: ಮಹಾರಾಷ್ಟ್ರ ರಾಜ್ಯದಲ್ಲಿ 'ಮಹಾಯತಿ' ಮೈತ್ರಿಕೂಟದ ಹೊಸ ಸರ್ಕಾರ ರಚನೆಯ ಪ್ರಕ್ರಿಯೆ ಆರಂಭವಾಗಿದೆ. ಬಿಜೆಪಿ ನಾಯಕ ದೇವೇಂದ್ರ ಫಡ್ನವೀಸ್ ರಾಜ್ಯದ ನೂತನ ಮುಖ್ಯಮಂತ್ರಿಯಾಗಲಿದ್ದಾರೆ. ಗುರುವಾರ ಮುಂಬೈನಲ್ಲಿ ಪ್ರಮಾಣ ವಚನ ಸಮಾರಂಭ ನಡೆಯಲಿದ್ದು, ಏಕನಾಥ್ ಶಿಂಧೆ, ಅಜಿತ್ ಪವಾರ್ ಸಹ ಪ್ರಮಾಣ ವಚನವನ್ನು ಸ್ವೀಕಾರ ಮಾಡಲಿದ್ದಾರೆ. ರಾಜ್ಯದಲ್ಲಿ ಸರ್ಕಾರ ರಚಿಸಲು ಬೇಕಾದ ಮ್ಯಾಜಿಕ್ ನಂಬರ್ 145. 'ಮಹಾಯತಿ' ಮೈತ್ರಿಕೂಟ 230 ಶಾಸಕರ ಬಲ ಹೊಂದಿದೆ.
ಬುಧವಾರ ನಡೆದ ಬಿಜೆಪಿಯ ಸಭೆಯಲ್ಲಿ 54 ವರ್ಷದ ದೇವೇಂದ್ರ ಫಡ್ನವೀಸ್ ರಾಜ್ಯದ ನೂತನ ಮುಖ್ಯಮಂತ್ರಿ ಎಂದು ತೀರ್ಮಾನಿಸಲಾಗಿದೆ. ಈ ಮೂಲಕ ನವೆಂಬರ್ 23ರ ಬಳಿಕ ರಾಜ್ಯದ ಮುಖ್ಯಮಂತ್ರಿ ಯಾರು? ಎಂದು ಎದ್ದಿದ್ದ ಪ್ರಶ್ನೆಗೆ ಉತ್ತರ ಸಿಕ್ಕಿದೆ. ಏಕನಾಥ್ ಶಿಂಧೆ, ಅಜಿತ್ ಪವಾರ್ ಉಪ ಮುಖ್ಯಮಂತ್ರಿಯಾಗಲಿದ್ದಾರೆ.
288 ಸದಸ್ಯ ಬಲದ ಮಹಾರಾಷ್ಟ್ರ ವಿಧಾನಸಭೆಗೆ ನವೆಂಬರ್ 20ರಂದು ಮತದಾನ ನಡೆದಿತ್ತು. ಚುನಾವಣೆಯಲ್ಲಿ 'ಮಹಾಯತಿ' ಮೈತ್ರಿಕೂಟ 230 ಸ್ಥಾನಗಳಲ್ಲಿ ಜಯಗಳಿಸುವ ಮೂಲಕ ಸ್ಪಷ್ಟ ಬಹುಮತವನ್ನು ಪಡೆದಿದ್ದು, ಹೊಸ ಸರ್ಕಾರವನ್ನು ರಚನೆ ಮಾಡಲಿದೆ. ಚುನಾವಣೆಯಲ್ಲಿ 132 ಸೀಟುಗಳನ್ನು ಗೆದ್ದಿರುವ ಬಿಜೆಪಿಗೆ ಮುಖ್ಯಮಂತ್ರಿ ಪಟ್ಟ ಸಿಕ್ಕಿದೆ. ಮೈತ್ರಿಕೂಟದಲ್ಲಿರುವ ಶಿವಸೇನೆ (ಏಕನಾಥ್ ಶಿಂಧೆ ಬಣ) 57, ಎನ್‌ಸಿಪಿ (ಅಜಿತ್ ಪವಾರ್ ಬಣ) 41 ಸೀಟುಗಳನ್ನು ಹೊಂದಿವೆ.
ಕೋರ್ ಕಮಿಟಿ ಸಭೆಯಲ್ಲಿ ತೀರ್ಮಾನ: ಬುಧವಾರ ನಡೆದ ಮಹಾರಾಷ್ಟ್ರ ಬಿಜೆಪಿ ಕೋರ್ ಕಮಿಟಿ ಸಭೆಯಲ್ಲಿ ಮುಖ್ಯಮಂತ್ರಿ ಸ್ಥಾನಕ್ಕೆ ದೇವೇಂದ್ರ ಫಡ್ನವೀಸ್ ಹೆಸರು ಅಂತಿಮಗೊಳಿಸಲಾಗಿದೆ. ಕೇಂದ್ರದಿಂದ ವೀಕ್ಷಕರಾಗಿ ಬಂದಿದ್ದ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಮತ್ತು ಗುಜರಾತ್ ಮಾಜಿ ಸಿಎಂ ವಿಜಯ್ ರೂಪಾನಿ ನೇತೃತ್ವದಲ್ಲಿ ಈ ಸಭೆ ನಡೆಯಿತು.
ಶಾಸಕಾಂಗ ಪಕ್ಷದ ಸಭೆಯಲ್ಲಿ ಕೋರ್ ಕಮಿಟಿ ಸಭೆಯ ತೀರ್ಮಾನವನ್ನು ಅಧಿಕೃತವಾಗಿ ಘೋಷಣೆ ಮಾಡಿ ಬಳಿಕ ಮಹಾಯತಿ ಮೈತ್ರಿಕೂಟದ ನಾಯಕರು ರಾಜ್ಯಪಾಲರನ್ನು ಭೇಟಿ ಮಾಡಿ ಹೊಸ ಸರ್ಕಾರ ರಚನೆ ಮಾಡುವ ಹಕ್ಕು ಮಂಡಿಸಲಿದ್ದಾರೆ.
ಮುಂಬೈ ನಗರದ ಆಜಾದ್ ಮೈದಾನದಲ್ಲಿ ಗುರುವಾರ ಸಂಜೆ 5 ಗಂಟೆಗೆ ನೂತನ ಮುಖ್ಯಮಂತ್ರಿಯಾಗಿ ದೇವೇಂದ್ರ ಫಡ್ನವೀಸ್ ಪ್ರಮಾಣ ವಚನ ಸ್ವೀಕಾರ ಮಾಡಲಿದ್ದಾರೆ. ಏಕನಾಥ್ ಶಿಂಧೆ, అజిహా ಪವಾರ್ ಉಪ ಮುಖ್ಯಮಂತ್ರಿಯಾಗುವ ನಿರೀಕ್ಷೆ ಇದ್ದು, ಈ ಕುರಿತು ಅಧಿಕೃತ ಘೋಷಣೆ ಬಾಕಿ ಇದೆ. ದೇವೇಂದ್ರ ಫಡ್ನವೀಸ್ 2024ರ ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯಲ್ಲಿ ನಾಗುರ ನೈಋತ್ಯ ಕ್ಷೇತ್ರದಲ್ಲಿ ಗೆಲ್ಲುವ ಮೂಲಕ 4ನೇ ಬಾರಿಗೆ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಫಡ್ನವೀಸ್ ಕ್ಷೇತ್ರದಲ್ಲಿ 1,29,401 ಮತಗಳನ್ನು ಪಡೆದು 39,710 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ. ಎದುರಾಳಿ, ಕಾಂಗ್ರೆಸ್ ಅಭ್ಯರ್ಥಿ ಪ್ರಫುಲ್ಲ ಗುಡದೆ 89,691 ಮತಗಳನ್ನು ಪಡೆದು ಸೋಲು ಕಂಡಿದ್ದಾರೆ. ದೇವೇಂದ್ರ ಫಡ್ನವೀಸ್ 2014-2019ರ ತನಕ ರಾಜ್ಯದ ಮುಖ್ಯಮಂತ್ರಿಯಾಗಿದ್ದರು. 2022ರಲ್ಲಿ ಮಹಾಯತಿ ಮೈತ್ರಿಕೂಟದ ಸರ್ಕಾರ ರಚನೆಗೊಂಡಾಗ ಅವರು ಉಪ ಮುಖ್ಯಮಂತ್ರಿಯಾಗಿದ್ದರು. ಆಗ ಏಕನಾಥ್ ಶಿಂಧೆ ಮುಖ್ಯಮಂತ್ರಿಯಾಗಲು ಫಡ್ನವೀಸ್ ಅವಕಾಶ ನೀಡಬಾರದಿತ್ತು ಎಂಬ ಮಾತುಗಳು ಈಗಲೂ ಸಹ ನಡೆಯುತ್ತಿವೆ.
Post a Comment