ಮನಮೋಹನ್ ಸಿಂಗ್ ಸ್ಮಾರಕ ಕುರಿತು ಕೇಂದ್ರದ ವಿರುದ್ಧ ಕಾಂಗ್ರೆಸ್ ಟೀಕೆಗೆ, ಹಿರಿಯ ಕಾಂಗ್ರೆಸ್ ನಾಯಕ, ಮಾಜಿ ರಾಷ್ಟ್ರಪತಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರ ಪುತ್ರಿ ಶರ್ಮಿಷ್ಟಾ ಮುಖರ್ಜಿ ತಿರುಗೇಟು ನೀಡಿದ್ದಾರೆ.
ನವದೆಹಲಿ (ಡಿ.29): ಮನಮೋಹನ್ ಸಿಂಗ್ ಸ್ಮಾರಕ ಕುರಿತು ಕೇಂದ್ರದ ವಿರುದ್ಧ ಕಾಂಗ್ರೆಸ್ ಟೀಕೆಗೆ, ಹಿರಿಯ ಕಾಂಗ್ರೆಸ್ ನಾಯಕ, ಮಾಜಿ ರಾಷ್ಟ್ರಪತಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರ ಪುತ್ರಿ ಶರ್ಮಿಷ್ಟಾ ಮುಖರ್ಜಿ ತಿರುಗೇಟು ನೀಡಿದ್ದಾರೆ. ಈ ಬಗ್ಗೆ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ ಶರ್ಮಿಷ್ಟಾ, ‘2020ರಲ್ಲಿ ನಮ್ಮ ತಂದೆ ಮೃತಪಟ್ಟಾಗ ಕಾಂಗ್ರೆಸ್ ಒಂದು ಸಿಡಬ್ಲ್ಯುಸಿ ಸಭೆ ಕರೆದು ಶ್ರದ್ಧಾಂಜಲಿ ಸಹ ಅರ್ಪಿಸಲಿಲ್ಲ.
ಅದನ್ನು ಕೇಳಿದಾಗ ಓರ್ವ ಕಾಂಗ್ರೆಸ್ ನಾಯಕರು ‘ಶ್ರದ್ಧಾಂಜಲಿಯನ್ನು ರಾಷ್ಟ್ರಪತಿಗಳಿಗೆ ಸಲ್ಲಿಸುವುದಿಲ್ಲ’ ಎಂಬ ಉದ್ಧಟ ಹೇಳಿಕೆ ನೀಡಿದ್ದರು. ಬಳಿಕ ನಮ್ಮ ತಂದೆ ಬರೆದ ಡೈರಿ ಓದಿದಾಗ ಮಾಜಿ ರಾಷ್ಟ್ರಪತಿ ಆರ್.ಕೆ.ನಾರಾಯಣ್ ಅವರು ಮೃತಪಟ್ಟಾಗ ನಮ್ಮ ತಂದೆಯೇ ಸಿಡಬ್ಲ್ಯುಸಿ ಸಭೆ ಕರೆದು ಶ್ರದ್ಧಾಂಜಲಿ ನಡೆಸಿದ್ದರು ಎಂಬ ಮಾಹಿತಿ ಲಭ್ಯವಾಗಿತ್ತು ಎಂದು ಮಾಹಿತಿ ಹಂಚಿಕೊಂಡಿದ್ದಾರೆ.
ಪ್ರಣಬ್‌ರನ್ನು ಪ್ರಧಾನಿ ಮಾಡದಿದ್ದುದೇ ಯುಪಿಎ ಸೋಲಿಗೆ ಕಾರಣ: 2012ರಲ್ಲಿ ರಾಷ್ಟ್ರಪತಿ ಆಯ್ಕೆ ನಡೆದಾಗ ಅಂದಿನ ಪ್ರಧಾನಿಯಾಗಿದ್ದ ಡಾ। ಮನಮೋಹನ ಸಿಂಗ್ ಅವರನ್ನು ರಾಷ್ಟ್ರಪತಿಯನ್ನಾಗಿ ಮಾಡಬೇಕಿತ್ತು ಹಾಗೂ ಸಚಿವರಾಗಿದ್ದ ಪ್ರಣಬ್ ಮುಖರ್ಜಿ ಅವರನ್ನು ಪ್ರಧಾನಿ ಹುದ್ದೆಗೆ ಏರಿಸಬೇಕಿತ್ತು. ಹೀಗೆ ಮಾಡಿದ್ದರೆ 2014ರಲ್ಲಿ ಯುಪಿಎ-3 ಸರ್ಕಾರ ಖಂಡಿತ ಅಸ್ತಿತ್ವಕ್ಕೆ ಬರುತ್ತಿತ್ತು ಎಂದು ಹಿರಿಯ ಕಾಂಗ್ರೆಸ್ಸಿಗ ಮಣಿಶಂಕರ ಅಯ್ಯರ್ ಹೇಳಿದ್ದಾರೆ. ಅಯ್ಯರ್ ಅವರು ‘ಎ ಮೇವರಿಕ್ ಇನ್ ಪಾಲಿಟಿಕ್ಸ್’ ಎಂಬ ಪುಸ್ತಕ ಬರೆದಿದ್ದು, ಅದರಲ್ಲಿ ಈ ಅಂಶಗಳಿವೆ, ‘ಒಮ್ಮೆ ಸೋನಿಯಾ ಗಾಂಧಿ ಅವರು ಪ್ರಣಬ್‌ರನ್ನು ಕರೆದು 2012ರಲ್ಲಿ ‘ನೀವು ಪ್ರಧಾನಿ ಆಗಬಹುದು’ ಎಂದು ಸುಳಿವು ನೀಡಿದ್ದರು.
ಈ ಬಗ್ಗೆ ನನ್ನ ಎದುರು ಪ್ರಣಬ್ ಹೇಳಿಕೊಂಡು, ‘ಸೋನಿಯಾ ಆಫರ್ ನನ್ನನ್ನು ಅಚ್ಚರಿಗೊಳಿಸಿದೆ’ ಎಂದಿದ್ದರು. ಆದರೆ ಅಂದುಕೊಂಡಿದ್ದು ಉಲ್ಟಾ ಆಯಿತು. ಪ್ರಣಬ್ ರಾಷ್ಟ್ರಪತಿಯಾಗಿ ಆಯ್ಕೆಯಾದರು. ಸಿಂಗ್ ಪ್ರಧಾನಿಯಾಗಿ ಮುಂದುವರಿದರು. ಇದು ನೀತಿ ಸ್ಥಾಗಿತ್ಯಕ್ಕೆ ಕಾರಣವಾಯಿತು. ಯುಪಿಎ-3 ಸರ್ಕಾರ ರಚನೆಯ ನಿರೀಕ್ಷೆಯನ್ನು ನಾಶಗೊಳಿಸಿತು’ ಎಂದಿದ್ದಾರೆ. ‘ಪ್ರಣಬ್ ಉತ್ಸಾಹಿ ಕೆಲಸಗಾರನಾಗಿದ್ದರು. ಅವರಿಗೆ ಪ್ರಧಾನಿ ಪಟ್ಟ ಕೊಡಬೇಕಿತ್ತು. ಆಡಳಿತದಲ್ಲಿ ಸಾಕಷ್ಟು ಅನುಭವಿ ಆಗಿದ್ದ ಡಾ। ಸಿಂಗ್‌ಗೆ ರಾಷ್ಟ್ರಪತಿ ಹುದ್ದೆ ನೀಡಬೇಕಿತ್ತು’ ಎಂದು ಅಯ್ಯರ್ ಅಭಿಪ್ರಾಯಪಟ್ಟಿದ್ದಾರೆ.
Post a Comment