ನವದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಮಾಜಿ ಪ್ರಧಾನಿ ಮನಮೋಹನ್ ಸಿಂಗ್: 2017ರ ಸೆ.30ರ ಸಂಗ್ರಹ ಚಿತ್ರ ಪಿಟಿಐ
ನವದೆಹಲಿ: ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರ ನಿಧನವು ದೇಶಕ್ಕೆ ತುಂಬಲಾರದ ನಷ್ಟವನ್ನುಂಟುಮಾಡಿದೆ ಎಂದಿರುವ ಪ್ರಧಾನಿ ನರೇಂದ್ರ ಮೋದಿ, ಜನರ ಸೇವೆ ಮತ್ತು ರಾಷ್ಟ್ರದ ಅಭಿವೃದ್ಧಿ ವಿಚಾರದಲ್ಲಿ ಸಿಂಗ್ ಅವರು ಹೊಂದಿದ್ದ ಬದ್ಧತೆಯನ್ನು ಸದಾ ಗೌರವಿಸಲಾಗುವುದು ಎಂದು ಹೇಳಿದ್ದಾರೆ.
ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ ಸಿಂಗ್ ಅವರು ದೆಹಲಿಯ ಏಮ್ಸ್ ಆಸ್ಪತ್ರೆಯಲ್ಲಿ ಗುರುವಾರ ರಾತ್ರಿ ನಿಧನರಾಗಿದ್ದಾರೆ. ಅವರಿಗೆ 92 ವರ್ಷ ವಯಸ್ಸಾಗಿತ್ತು.
ಸಂತಾಪ ಸೂಚಿಸಿ ವಿಡಿಯೊ ಸಂದೇಶ ಹಂಚಿಕೊಂಡಿರುವ ಮೋದಿ, ಸಿಂಗ್ ಅವರ ಜೀವನದ ಕುರಿತು ಮಾತನಾಡಿದ್ದಾರೆ. 'ದೇಶ ವಿಭಜನೆ ಬಳಿಕ ಸಿಂಗ್ ಕುಟುಂಬವು ಭಾರತಕ್ಕೆ ವಲಸೆ ಬಂದು ನೆಲೆ ಕಂಡುಕೊಂಡಿತು. ನಂತರ ಸಿಂಗ್ ಮಾಡಿದ ಸಾಧನೆಗಳು ಸಾಧಾರಣವಾದವುಗಳಲ್ಲ' ಎಂದು ಅಭಿಪ್ರಾಯಪಟ್ಟಿದ್ದಾರೆ.
'ಸಂಕಷ್ಟಗಳು ಮತ್ತು ಎಲ್ಲ ಅಡತಡೆಗಳನ್ನು ಮೀರಿ ಸಾಧನೆಯ ಶಿಖರ ಏರುವುದು ಹೇಗೆ ಎಂಬುದಕ್ಕೆ ಸಿಂಗ್ ಅವರ ಜೀವನವು ಮುಂದಿನ ತಲೆಮಾರುಗಳಿಗೆ ಪಾಠವಾಗಲಿದೆ' ಎಂದು ಪ್ರತಿಪಾದಿಸಿರುವ ಮೋದಿ, 'ಸಿಂಗ್ ಅವರು ಸಜ್ಜನ, ಜ್ಞಾನಿ, ಅರ್ಥಶಾಸ್ತ್ರಜ್ಞ ಹಾಗೂ ಸುಧಾರಣವಾದಿ ನಾಯಕರಾಗಿ ಸ್ಮರಣೆಯಲ್ಲಿರಲಿದ್ದಾರೆ' ಎಂದಿದ್ದಾರೆ.
ಪ್ರಧಾನಿಯಾಗುವುದಕ್ಕೂ ಮುನ್ನ, ಕೇಂದ್ರದಲ್ಲಿ ಹಲವು ಜವಾಬ್ದಾರಿಗಳನ್ನು ನಿಭಾಯಿಸಿದ್ದ ಸಿಂಗ್, ಸವಾಲಿನ ಸಂದರ್ಭದಲ್ಲಿ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಗವರ್ನರ್ ಆಗಿ ಕರ್ತವ್ಯ ನಿರ್ವಹಿಸಿದ್ದರು. ಪಿ.ವಿ. ನರಸಿಂಹ ರಾವ್ ಸರ್ಕಾರದಲ್ಲಿ ಹಣಕಾಸು ಸಚಿವರಾಗಿ ದೇಶದ ಆರ್ಥಿಕತೆಗೆ ಹೊಸ ದಿಕ್ಕು ತೋರಿದ್ದರು ಎಂಬುದನ್ನು ಮೋದಿ ಉಲ್ಲೇಖಿಸಿದ್ದಾರೆ.
'ಪ್ರಧಾನಿಯಾಗಿ, ದೇಶದ ಅಭಿವೃದ್ಧಿ ಮತ್ತು ಪ್ರಗತಿಗೆ ಸಿಂಗ್ ನೀಡಿದ ಕೊಡುಗೆ ಸದಾ ಸ್ಮರಣೀಯ' ಎಂದಿದ್ದಾರೆ. ಹಾಗೆಯೇ, 'ಸಿಂಗ್ ಅವರ ಬದುಕು ಅವರ ಪ್ರಾಮಾಣಿಕತೆ ಮತ್ತು ಸರಳತೆಯನ್ನು ಪ್ರತಿಫಲಿಸುತ್ತದೆ' ಎಂದು ಶ್ಲಾಘಿಸಿದ್ದಾರೆ.
'ಸಿಂಗ್ ಅವರು ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಲ್ಲಿ ವಿದ್ಯಾಭ್ಯಾಸ ಮಾಡಿ, ಉನ್ನತ ಸ್ಥಾನಗಳಿಗೆ ಏರಿದ್ದರೂ ತಮ್ಮ ಸಾಧಾರಣ ಹಿನ್ನೆಲೆಯ ಮೌಲ್ಯಗಳನ್ನು ಎಂದೂ ಮರೆತಿರಲಿಲ್ಲ' ಎಂದು ಹೇಳಿದ್ದಾರೆ.
'ಮಾನವೀಯತೆ, ಸೌಮ್ಯ ಸ್ವಭಾವ ಹಾಗೂ ಪ್ರಬುದ್ಧತೆಯ ಕಾರಣದಿಂದಾಗಿ ಸಿಂಗ್ ಅವರು ಉತ್ತಮ ಸಂಸದೀಯಪಟುವಾಗಿದ್ದರು. ಗಾಲಿ ಕುರ್ಚಿಯಲ್ಲಿಯೇ ಸಂಸತ್ತಿಗೆ ಬರುವ ಮೂಲಕ ಸಂಸದರಾಗಿ ಕರ್ತವ್ಯ ನಿರ್ವಹಿಸುವ ಬದ್ಧತೆಯನ್ನು ತೋರಿದ್ದರು' ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಸಿಂಗ್ ಅವರು 2004-2014ರ ಅವಧಿಯಲ್ಲಿ ಪ್ರಧಾನಿಯಾಗಿದ್ದರು. ಆ ಅವಧಿಯಲ್ಲಿ ಮೋದಿ, ಗುಜರಾತ್ ಮುಖ್ಯಮಂತ್ರಿಯಾಗಿದ್ದರು. ಆ ಸಂದರ್ಭದಲ್ಲಿ ರಾಷ್ಟ್ರ ಹಾಗೂ ಅಂತರರಾಷ್ಟ್ರೀಯ ಬೆಳವಣಿಗೆಗಳಿಗೆ ಸಂಬಂಧಿಸಿದಂತೆ ಪರಸ್ಪರ ಮಾತುಕತೆ ನಡೆಸಿದ್ದಾಗಿ ಮೋದಿ ಹೇಳಿಕೊಂಡಿದ್ದಾರೆ.
Post a Comment