ಮಂಡ್ಯ: ನಾಳೆಯಿಂದ ಆರಂಭವಾಗಲಿರುವ 3 ದಿನಗಳ 87ನೇ ಅಖೀಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಸಕ್ಕರೆ ನಾಡು ಮಂಡ್ಯ ಸನ್ನದ್ಧವಾಗಿದ್ದು ಎಲ್ಲೆಡೆ ಸಂಭ್ರಮ ಮನೆಮಾಡಿದೆ.
30 ವರ್ಷಗಳ ಬಳಿಕ ಮಂಡ್ಯದಲ್ಲಿ ನಡೆಯುತ್ತಿರುವ ಸಾಹಿತ್ಯಸಮ್ಮೇಳನದಲ್ಲಿ ಇದೇ ಮೊದಲ ಬಾರಿಗೆ 18 ದೇಶಗಳ ಸುಮಾರು 200ಕ್ಕೂ ಹೆಚ್ಚು ವಿದೇಶಿ ಮೂಲದ ಕನ್ನಡಿಗರು ಭಾಗವಹಿಸುತ್ತಿರುವುದು ವಿಶೇಷ.
ನಗರದ ಹೊರವಲಯದಲ್ಲಿರುವ ಶ್ರೀನಿವಾಸಪುರ ಬಳಿ ವೇದಿಕೆ ಸಿದ್ಧಗೊಳಿಸಲಾಗಿದ್ದು 70-80 ಎಕರೆ ಪ್ರದೇಶದಲ್ಲಿ ಪ್ರಧಾನ ವೇದಿಕೆ, 2 ಸಮಾನಾಂತರ ವೇದಿಕೆ, 60 ಎಕರೆ ಪ್ರದೇಶದಲ್ಲಿ ಪಾರ್ಕಿಂಗ್‌ಗೆ ವ್ಯವಸ್ಥೆ ಮಾಡಲಾಗಿದೆ. ಸಾರ್ವಜನಿಕರಿಗೆ ಬಣ್ಣ ಬಣ್ಣದ ಮಂಡ್ಯ ತೋರಿಸುವ ಉದ್ದೇಶದಿಂದ ಸೆಸ್ಕ್ನಿಂದ ನಗರದಲ್ಲಿ ವಿದ್ಯುತ್ ಅಲಂಕಾರ ಮಾಡಲಾಗುತ್ತಿದೆ. ಹಾಗೆಯೇ ಕಾರ್ಯಕ್ರಮದಲ್ಲಿ ನಾಡುನುಡಿಗೆ ಸೇವೆ ಸಲ್ಲಿಸಿದ 170 ಸಾಧಕರನ್ನು ಸನ್ಮಾನಿಸಲಾಗುತ್ತಿದೆ. ಸಾಹಿತ್ಯ ಸಮ್ಮೇಳನದ ಸ್ಮರಣಾರ್ಥ 87 ಪುಸ್ತಕಗಳನ್ನು ಬಿಡುಗಡೆ ಮಾಡಲಾಗುತ್ತದೆ ಎಂದು ಸಮ್ಮೇಳನದ ಸ್ವಾಗತ ಸಮಿತಿ ಅಧ್ಯಕ್ಷ ಎನ್. ಚಲುವರಾಯಸ್ವಾಮಿ ಮಾಹಿತಿ ನೀಡಿದ್ದಾರೆ.
ಇಂದು ಸರ್ವಾಧ್ಯಕ್ಷರ ಆಗಮನ
ಸಮ್ಮೇಳನಾಧ್ಯಕ್ಷರಾದ ಗೊ.ರು.ಚನ್ನಬಸಪ್ಪ ಅವರು ಗುರುವಾರ ಸಂಜೆ ಮಂಡ್ಯಕ್ಕೆ ಆಗಮಿಸಲಿದ್ದಾರೆ. ಡಿ. 20ರ ಶುಕ್ರವಾರ ಬೆಳಗ್ಗೆ 6ಕ್ಕೆ ಧ್ವಜಾರೋಹಣ ನೆರವೇರಲಿದ್ದು, 7 ಗಂಟೆಗೆ ಸಮ್ಮೇಳನಾಧ್ಯಕ್ಷರ ಮೆರವಣಿಗೆ ಆರಂಭವಾಗಲಿದೆ.
ಮೆರವಣಿಗೆಯಲ್ಲಿ ಹಗಲುವೇಷ, ಮಹಿಳಾ ವೀರಗಾಸೆ, ಗೊರವರ ಕುಣಿತ, ಕಂಸಾಳೆ, ಕರಗ, ಕೋಲಾಟ ಒಳಗೊಂಡಂತೆ ಪೂರ್ಣಕುಂಭ ಹೊತ್ತ 300 ಮಹಿಳೆಯರು ಹಾಗೂ 50ಕ್ಕೂ ಹೆಚ್ಚು ಕಲಾತಂಡಗಳು ಮೆರವಣಿಗೆಯಲ್ಲಿ ಪಾಲ್ಗೊಳ್ಳಲಿವೆ. ಮೆರವಣಿಗೆಗೆ ಮೈಸೂರು ರಾಜವಂಶಸ್ಥೆ ಪ್ರಮೋದಾ ದೇವಿ ಒಡೆಯರ್ ಚಾಲನೆ ನೀಡಲಿದ್ದಾರೆ.
ಶಬ್ದಕೋಶ ಕರ್ತೃ ಕಿಟಲ್ ವಂಶಸ್ಥರು ಭಾಗಿ
ಸಮ್ಮೇಳನಕ್ಕೆ ಇದೇ ಮೊದಲ ಬಾರಿಗೆ 18 ದೇಶಗಳ ಸುಮಾರು 200ಕ್ಕೂ ಹೆಚ್ಚು ವಿದೇಶಿ ಮೂಲದ ಕನ್ನಡಿಗರು ಭಾಗವಹಿಸುತ್ತಿರುವುದು ವಿಶೇಷ. ಅಮೆರಿಕ, ಯುರೋಪ್, ಗಲ್ಫ್, ಏಷ್ಯಾ ಪೆಸಿಫಿಕ್, ಆಸ್ಟ್ರೇಲಿಯಾ, ಉಕ್ರೇನ್, ರಷ್ಯಾ ಸೇರಿದಂತೆ ನಾನಾ ದೇಶಗಳ ವಿದೇಶಿ ಕನ್ನಡಿಗರು ಆಗಮಿಸುತ್ತಿದ್ದಾರೆ. ಪುತಿನ ಅವರ ಪುತ್ರಿ ಅಲಮೇಲು, ಕನ್ನಡ ಸಾಹಿತ್ಯ ಪರಿಷತ್ತಿನ ಸ್ಥಾಪಕರಲ್ಲೊಬ್ಬರಾದ ಕರ್ಪೂರ ಶ್ರೀನಿವಾಸ ರಾವ್ ಅವರ ಮೊಮ್ಮಗಳು ನಿರ್ಮಲಾ ಕರ್ಪೂರ, ಕನ್ನಡದ ಮೊಟ್ಟ ಮೊದಲ ಶಬ್ದಕೋಶದ ಕರ್ತೃ ಫರ್ಡಿನೆಂಡ್ ಕಿಟಲ್ ಅವರ ವಂಶಸ್ಥರು ಬರುತ್ತಿರುವುದು ವಿಶೇಷ. ಈ ವೇಳೆ ವಿದೇಶಿ ನೆಲದಲ್ಲಿ ಕನ್ನಡಕ್ಕಾಗಿ ಶ್ರಮಿಸಿದ 21 ವಿದೇಶಿ ಕನ್ನಡಿಗರನ್ನು ಸಮ್ಮಾನಿಸಲಾಗುತ್ತಿದೆ.
Post a Comment