ಬೆಂಗಳೂರು: ಪ್ರಸಕ್ತ ಶೈಕ್ಷಣಿಕ ಸಾಲಿನಲ್ಲಿ ಹಮ್ಮಿಕೊಳ್ಳಲಾಗುತ್ತಿರುವ
ಶೈಕ್ಷಣಿಕ ಪ್ರವಾಸವನ್ನು ರದ್ದು ಮಾಡುವಂತೆ, ಪ್ರವಾಸ ಹಮ್ಮಿಕೊಂಡಿದ್ದಲ್ಲಿ ಕೂಡಲೇ ಹಿಂದಿರುಗಿ ಬರುವಂತೆ ಯಾವುದೇ ಸೂಚನೆ, ನಿರ್ದೇಶನ ನೀಡಿಲ್ಲ ಎಂದು ಶಾಲಾ ಶಿಕ್ಷಣ ಇಲಾಖೆ ಸ್ಪಷ್ಟಪಡಿಸಿದೆ.
ಮುರ್ಡೇಶ್ವರಕ್ಕೆ ಪ್ರವಾಸ ತೆರಳಿದ್ದ ವೇಳೆ, ನಾಲ್ವರು ಬಾಲಕಿಯರು ಸಮುದ್ರದಲ್ಲಿ ಮುಳುಗಿ ಮೃತಪಟ್ಟಿದ್ದರು. ಈ ಘಟನೆ ಬಳಿಕ, 2024-25ನೇ ಸಾಲಿನ ಶೈಕ್ಷಣಿಕ ಪ್ರವಾಸ ರದ್ದು ಮಾಡಿರುವ ಬಗ್ಗೆ, ಪ್ರವಾಸ ಕೈಗೊಂಡಿದ್ದಲ್ಲಿ ಹಿಂದಿರುಗಿ ಬರುವಂತೆ ಇಲಾಖೆ ಸೂಚಿಸಿರುವುದಾಗಿ ವಾಟ್ಸ್ಆ್ಯಪ್ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಸಂದೇಶಗಳು ಹರಿದಾಡುತ್ತಿದ್ದವು.
ಇದಕ್ಕೆ ಸ್ಪಷ್ಟನೆ ನೀಡಿರುವ ಇಲಾಖೆ, 'ಈ ರೀತಿ ಯಾವುದೇ ನಿರ್ದೇಶನವನ್ನು ನೀಡಿರುವುದಿಲ್ಲ. ಡಿಸೆಂಬರ್ ಅಂತ್ಯದೊಳಗೆ ಶೈಕ್ಷಣಿಕ ಪ್ರವಾಸವನ್ನು ಪೂರ್ಣಗೊಳಿಸಬೇಕು. ವಿದ್ಯಾರ್ಥಿಗಳ ಸುರಕ್ಷತೆಗೆ ಎಲ್ಲ ಕ್ರಮಗಳನ್ನು ಕೈಗೊಂಡು, ಪ್ರವಾಸ ಕೈಗೊಳ್ಳಬೇಕು' ಎಂದು ತಿಳಿಸಿದೆ.
ಪ್ರವಾಸದ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ಸಂಬಂಧಿಸಿದಂತೆ ಉಂಟಾಗುವ ಅವಘಡಕ್ಕೆ ಶಾಲಾ ಮುಖ್ಯಸ್ಥರು ಮತ್ತು ಪ್ರವಾಸದ ಉಸ್ತುವಾರಿ ವಹಿಸಿದ ಸಿಬ್ಬಂದಿ ಜವಾಬ್ದಾರರಾಗಿರುತ್ತಾರೆ ಎಂದೂ ಹೇಳಿದೆ.
Post a Comment