ಮಂಗಳೂರು: ವಿಶ್ವ ಆರೋಗ್ಯ ಸಂಸ್ಥೆಯು ಅಡಿಕೆಯನ್ನು ಕ್ಯಾನ್ಸರ್‌ಕಾರಕ ಎಂದು ವರ್ಗೀಕರಿಸಿದ ಹಿನ್ನೆಲೆಯಲ್ಲಿ ಈಗ ಕೇಂದ್ರ ಸರಕಾರ ಅಡಿಕೆ ಬೆಳೆಗಾರರ ರಕ್ಷಣೆಗೆ ಮುಂದಾಗಿದೆ. ಅಡಿಕೆಯ ವಿಚಾರದಲ್ಲಿ ಉಂಟಾಗಿರುವ ಗೊಂದಲ ನಿವಾರಣೆ, ಮಾಹಿತಿಯ ಕೊರತೆಯ ಪರಿಹಾರ ಹಾಗೂ ಅದು ಆರೋಗ್ಯದ ಮೇಲೆ ಬೀರುವ ಪರಿಣಾಮವನ್ನು ಅರಿತುಕೊಳ್ಳಲು ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ಸಚಿವಾಲಯ ಅಡಿಕೆ ಮತ್ತು ಮಾನವ ಆರೋಗ್ಯ ಎನ್ನುವ ವಿಚಾರದಲ್ಲಿ ಸಾಕ್ಷಿ ಆಧರಿತ ಸಂಶೋಧನೆ ಕೈಗೊಳ್ಳಲಿದೆ. ಕಾಸರಗೋಡಿನ ಸಂಸದ ರಾಜ್ ಮೋಹನ್ ಉಣ್ಣಿತಾನ್ ಅವರು ಲೋಕಸಭೆಯಲ್ಲಿ ಮಂಗಳವಾರ ಕೇಳಿರುವ ಈ ಕುರಿತ ಪ್ರಶ್ನೆಗೆ ಕೇಂದ್ರ ಕೃಷಿ ಸಹಾಯಕ ಸಚಿವ ಭಗೀರಥ್ ಚೌಧರಿ ಅವರು ಲಿಖಿತ ಉತ್ತರ ನೀಡಿದ್ದಾರೆ.
ಈ ಸಂಶೋಧನೆಯನ್ನು ವೈದ್ಯಕೀಯ ಅಧ್ಯಯನದಲ್ಲಿ ತೊಡಗಿರುವ 16 ರಾಷ್ಟ್ರೀಯ ಹಾಗೂ ರಾಜ್ಯ ಮಟ್ಟದ ಸಂಸ್ಥೆಗಳು ಕೈಗೊಳ್ಳಲಿವೆ. ಇದರಲ್ಲಿ ಅಖಿಲ ಭಾರತೀಯ ವೈದ್ಯವಿಜ್ಞಾನ ಸಂಸ್ಥೆ, ವಿಜ್ಞಾನ ಮತ್ತು ಕೈಗಾರಿಕಾ ಸಂಶೋಧನಾ ಸಂಸ್ಥೆ, ಭಾರತೀಯ ವಿಜ್ಞಾನ ಸಂಸ್ಥೆಯೂ ಸೇರಿವೆ ಎಂದು ಉತ್ತರದಲ್ಲಿ ತಿಳಿಸಲಾಗಿದೆ. ಅಡಿಕೆಯನ್ನು ವೀಳ್ಯದೆಲೆ ಜೊತೆಗೆ ಅಥವಾ ಸುವಾಸಿತ ಸುಪಾರಿ ರೂಪದಲ್ಲಿ ತಾಂಬೂಲ ರೂಪದಲ್ಲಿ ಸೇವಿಸಲಾಗುತ್ತದೆ. ಆಯುರ್ವೇದ ಔಷಧಕ್ಕೂ ಬಳಕೆಯಾಗುತ್ತದೆ. ಅದರಲ್ಲಿರುವ ಅಲ್ಕಲಾಯ್ಡ್ ಅಂಶದಿಂದ ಇದು ಸಾಧ್ಯವಾಗಿದೆ. ಅಡಿಕೆ ಕೃಷಿಕರು ಪ್ರಸ್ತುತ ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಟನೆಯಿಂದಾಗಿ ಸವಾಲೆದುರಿಸುತ್ತಿರುವುದು ಕೇಂದ್ರ ಸರಕಾರಕ್ಕೆ ಅರಿವಿದೆ.
ಡಬ್ಲ್ಯೂಎಚ್‌ಒ ವ್ಯಾಖ್ಯಾನಿಸಿರುವ ವರದಿಗಳಿಗೆ ಹಲವು ಮಿತಿಗಳಿವೆ, ತನ್ಮೂಲಕ ಅವುಗಳ ಉಪಸಂಹಾರ ಅಪೂರ್ಣವಾಗಿವೆ, ಅದಕ್ಕಾಗಿ ಸಮಗ್ರ ಅಧ್ಯಯನ ನಡೆಸಲು ತೀರ್ಮಾನಿಸಿರುವುದಾಗಿ ಸಚಿವರು ಉತ್ತರದಲ್ಲಿ ವಿವರಿಸಿದ್ದಾರೆ.
Post a Comment