ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅಂತ್ಯಸಂಸ್ಕಾರ ಬೆನ್ನಲ್ಲೇ ಅವರ ಹೆಸರಿನಲ್ಲಿ ಸ್ಮಾರಕ ನಿರ್ಮಿಸುವ ವಿಚಾರ ವಿವಾದಕ್ಕೀಡಾಗಿದೆ. ಕೇಂದ್ರ ಸರ್ಕಾರ ಸ್ಮಾರಕ ನಿರ್ಮಾಣಕ್ಕೆ ಜಾಗ ಕೊಡುತ್ತೇವೆ ಎಂದಿದ್ದರೂ, ಎಲ್ಲಿ ಎನ್ನುವುದನ್ನು ಸ್ಪಷ್ಟಪಡಿಸಿಲ್ಲ.
ನವದೆಹಲಿ, ಡಿ.28: ಮಾಜಿ ಪ್ರಧಾನಿ ಮನಮೋಹನ್ ಸಿಂಗ್
ಅಂತ್ಯಸಂಸ್ಕಾರ ಬೆನ್ನಲ್ಲೇ ಅವರ ಹೆಸರಿನಲ್ಲಿ ಸ್ಮಾರಕ ನಿರ್ಮಿಸುವ ವಿಚಾರ ವಿವಾದಕ್ಕೀಡಾಗಿದೆ. ಕೇಂದ್ರ ಸರ್ಕಾರ ಸ್ಮಾರಕ ನಿರ್ಮಾಣಕ್ಕೆ ಜಾಗ ಕೊಡುತ್ತೇವೆ ಎಂದಿದ್ದರೂ, ಎಲ್ಲಿ ಎನ್ನುವುದನ್ನು ಸ್ಪಷ್ಟಪಡಿಸಿಲ್ಲ. ಇತ್ತ ಕಾಂಗ್ರೆಸ್ ನಾಯಕರು ಅಂತ್ಯಸಂಸ್ಕಾರ ನಡೆದ ನಿಗಮ್ ಬೋದ್ ಘಾಟ್ ನಲ್ಲೇ ಸ್ಮಾರಕ ನಿರ್ಮಿಸಲು ಜಾಗ ನೀಡಬೇಕೆಂದು ಪಟ್ಟು ಹಿಡಿದಿದೆ. ಈ ವಿಚಾರ ಕಾಂಗ್ರೆಸ್ ಹಾಗೂ ಬಿಜೆಪಿ ನಾಯಕರ ನಡುವೆ ಜಟಾಪಟಿಗೆ ಕಾರಣವಾಗಿದೆ.
ಕೇಂದ್ರ ಸರ್ಕಾರ ಹಾಗೂ ಬಿಜೆಪಿ ನಾಯಕರು ಮನಮೋಹನ್ ಸಿಂಗ್ ಅವರಿಗೆ ಅಪಮಾನ ಮಾಡಿದ್ದಾರೆ ಎಂದು ಕಾಂಗ್ರೆಸ್ ನಾಯಕ ಜೈರಾಂ ರಮೇಶ್ ಆರೋಪಿಸಿದ್ದಾರೆ. ಮನಮೋಹನ್ ಸಿಂಗ್ ಅವರ ಸ್ಮಾರಕ ನಿರ್ಮಾಣಕ್ಕಾಗಿ ಕೇಂದ್ರ ಸರ್ಕಾರ ಮೊದಲೇ ಸ್ಥಳ ನಿಗದಿ ಮಾಡದೆ, ದೇಶದ ಮೊದಲ ಸಿಖ್ ಪ್ರಧಾನಿಗೆ ಬಿಜೆಪಿ ಅವಮಾನ ಮಾಡಿದೆ. ಇದನ್ನು ಜನರು ಅರಿತುಕೊಳ್ಳಬೇಕು ಎಂದು ಕಿಡಿಕಾರಿದ್ದಾರೆ.
ಜೈರಾಮ್ ರಮೇಶ್ ಮಾತಿಗೆ ಬಿಜೆಪಿ ಮಾಜಿ ಪ್ರಧಾನಿ, ದಿವಂಗತ ಪಿವಿ ನರಸಿಂಹ್ ರಾವ್ ಅವರ ವಿಚಾರ ಪ್ರಸ್ತಾಪಿಸಿ ತಿರುಗೇಟು ನೀಡಿದೆ. ಮಾಜಿ ಪ್ರಧಾನಿ ನರಸಿಂಹ ರಾವ್ ಅವರ ಮರಣದ ನಂತರ ಕಾಂಗ್ರೆಸ್ ಹೇಗೆ ನಡೆದುಕೊಂಡಿತ್ತು ಎನ್ನುವುದನ್ನು ಕಾಂಗ್ರೆಸ್ ನೆನಪಿಸಿಕೊಳ್ಳಬೇಕು ಅಂತ ಬಿಜೆಪಿ ಟ್ವಿಟ್ ಮಾಡಿದೆ. ಪ್ರಣಬ್ ಮುಖರ್ಜಿ ಅವರ ಪುತ್ರಿ ಕೂಡ ಮಾಜಿ ರಾಷ್ಟ್ರಪತಿಯಾಗಿದ್ದ ತಮ್ಮ ತಂದೆಯನ್ನು ಕಾಂಗ್ರೆಸ್ ಎಷ್ಟು ಹೀನಾಯವಾಗಿ ನಡೆಸಿಕೊಂಡಿದೆ ಎನ್ನುವುದನ್ನು ಹೇಳಿದ್ದಾರೆ ಎಂದೂ ಬಿಜೆಪಿ ನೆನಪಿಸಿದೆ.
ಅಲ್ಲದೆ, ಪಿವಿ ನರಸಿಂಹ ರಾವ್ ಅವರ ಮೊಮ್ಮಗ ಹಾಗೂ ತೆಲಂಗಾಣ ಬಿಜೆಪಿ ನಾಯಕ ಎನ್‌ವಿ ಸುಭಾಷ್ ಕೂಡ ಕಾಂಗ್ರೆಸ್ ವಿರುದ್ಧ ಕಿಡಿಕಾರಿದ್ದಾರೆ. ಕಾಂಗ್ರೆಸ್ ಪಕ್ಷದ ನಾಯಕರನ್ನು ಗೌರವಿಸುವಲ್ಲಿ ಕಾಂಗ್ರೆಸ್ ಬೂಟಾಟಿಕೆ ಮಾಡಿದೆ. ಭಾರತದ ಆರ್ಥಿಕ ಸುಧಾರಣೆಗಳನ್ನು ಪ್ರಾರಂಭಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಮಾಜಿ ಪ್ರಧಾನಿ ಪಿವಿ ನರಸಿಂಹರಾವ್ ಅವರ ಸ್ಮಾರಕವನ್ನು ದೆಹಲಿಯಲ್ಲಿ ನಿರ್ಮಿಸಲು ಕಾಂಗ್ರೆಸ್ ನಿರಾಕರಿಸಿತ್ತು ಎಂದು ಆರೋಪಿಸಿದ್ದಾರೆ.
ತಮ್ಮ ಜೀವನದುದ್ದಕ್ಕೂ ಕಾಂಗ್ರೆಸ್ ಪಕ್ಷಕ್ಕೆ ನಿಷ್ಠರಾಗಿದ್ದ ನರಸಿಂಹರಾವ್ 2004ರಲ್ಲಿ ನಿಧನರಾದಾಗ ಕಾಂಗ್ರೆಸ್ ಕೆಟ್ಟದಾಗಿ ನಡೆಸಿಕೊಂಡಿತ್ತು ಎಂದು ಸುಭಾಷ್ ಹೇಳಿದ್ದಾರೆ. ಪಿವಿಎನ್ ಅವರಿಗೆ ಮರಣೋತ್ತರವಾಗಿ ಭಾರತ ರತ್ನ ಪ್ರಶಸ್ತಿಯನ್ನು ನೀಡಿ ಗೌರವಿಸಿದ್ದು ಬಿಜೆಪಿ ಎಂದು ಸುಭಾಷ್ ಹೇಳಿದ್ದಾರೆ.
Post a Comment