ಸೈಬರ್ ವಂಚನೆಗೆ ಯಾರೇ ಒಳಗಾದರೂ ಕೂಡಲೇ 1039 ಗೆ ದೂರು ನೀಡಿದರೆ ಆ ಕರೆ ಎಲ್ಲಿಂದ ಬಂತು, ಯಾರು ಮಾಡಿದ್ದಾರೆ ಎಂಬುದನ್ನು ಪರಿಶೀಲಿಸಿ, ಸೈಬರ್ ವಂಚನೆಯಿಂದ ನಿಮನ್ನು ರಕ್ಷಿಸಬಹುದು ಎಂದು ನಗರ ಪೊಲೀಸ್ ಆಯುಕ್ತ ದಯಾನಂದ ಅವರು ಸಲಹೆ ನೀಡಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಡಿಜಿಟಲ್ ಅರೆಸ್ಟ್, ಹೋಂ ಅರೆಸ್ಟ್ ಎಂದು ಯಾರೇ ಕರೆ ಮಾಡಿದರೆ ತಕ್ಷಣ ಆ ಕರೆಯನ್ನು ಸ್ಥಗಿತಗೊಳಿಸಿ ಸ್ಥಳೀಯ ಪೊಲೀಸರಿಗಾಗಲೀ, ಸೈಬರ್ ಪೊಲೀಸರಿಗಾಗಲೀ ತಿಳಿಸಬೇಕು. ನೀವು ಒಂದು ವೇಳೆ ಅಂತಹ ಕರೆಯನ್ನು ಸ್ವೀಕರಿಸಿ ವಂಚಕರ ಅಕೌಂಟ್ ಹಣ ಏನಾದರೂ ಹಾಕಿದ್ದರೆ ಕೂಡಲೇ 1039 ಗೆ ಕರೆ ನೀಡಿ ಮಾಹಿತಿ ನೀಡಿದರೆ ಆ ಖಾತೆಯನ್ನು ಸ್ಥಗಿತಗೊಳಿಸಲಾಗುತ್ತದೆ ಎಂದರು.
ಸೈಬರ್ ಕ್ರೈಂನ್ನು ವರದಿ ಮಾಡುವ ಏಕೈಕ ರಾಷ್ಟ್ರೀಯ ಸಹಾಯವಾಣಿ ಸಂಖ್ಯೆ : 1930 ಆಗಿರುತ್ತದೆ. ಸಾರ್ವಜನಿಕರು ಯಾವುದೇ ಸೈಬರ್ ಕ್ರೈಂ ವರದಿಗಾಗಿ ಇದೇ ನಂಬರನ್ನು ಸಂಪರ್ಕಿಸಲು ಆಯುಕ್ತರು ಮನವಿ ಮಾಡಿದ್ದಾರೆ.
ಯಾವುದೇ ಪೋಲಿಸ್ ಆಗಲಿ, ಸಿಬಿಐ, ಸಿಐಡಿ, ಇಡಿ ಅಧಿಕಾರಿಗಳು ನಿಮಗೆ ದೂರವಾಣಿ ಕರೆ ಮಾಡಿ ಡಿಜಿಟಲ್ ಅರೆಸ್ಟ್ ಮಾಡಿದ್ದೇವೆಂದು ಹೇಳುವುದಿಲ್ಲ ಎಂದು ಈಗಾಗಲೇ ಹಲವು ಬಾರಿ ಸ್ಪಷ್ಟಪಡಿಸಿದ್ದರೂ ಪ್ರಜ್ಞಾವಂತರೇ ಸೈಬರ್ ಜಾಲಕ್ಕೆ ಬಿದ್ದು ಕೋಟ್ಯಂತರ ರೂ. ಹಣ ಕಳೆದುಕೊಳ್ಳುತ್ತಿದ್ದಾರೆ. ಈ ಬಗ್ಗೆ ಸಾರ್ವಜನಿಕರು ಜಾಗೃತರಾಗಬೇಕು ಎಂದು ತಿಳಿಸಿದರು.
ಯಾವುದೇ ಅಪರಿಚಿತ ವ್ಯಕ್ತಿ ಕರೆ ಮಾಡಿ ನಿಮ ಖಾಸಗಿ ಮಾಹಿತಿಯನ್ನು ಕೇಳಿದರೆ ಹಂಚಿಕೊಳ್ಳಬೇಡಿ, ಮೋಸದ ಜಾಲಕ್ಕೆ ಬೀಳಿಸಿಕೊಳ್ಳಲು ಯತ್ನಿಸಿದಾಗ ತಕ್ಷಣ ನೀವು ಆ ಬಗ್ಗೆ ಎಚ್ಚೆತ್ತುಕೊಂಡು ಸ್ಥಳೀಯ ಪೊಲೀಸರಿಗೆ ತಿಳಿಸಬೇಕು. ಸೈಬರ್ ವಂಚಕರ ಜಾಲಕ್ಕೆ ಒಳಗಾಗಬೇಡಿ ಎಂದು ಸಲಹೆ ನೀಡಿದರು.
ಒಂದು ವೇಳೆ ನಿಮ ವಿರುದ್ಧ ದೂರು ಇದ್ದರೆ ನಿಮಗೆ ಪೊಲೀಸರು ನೋಟೀಸ್ ಕೊಟ್ಟು, ಠಾಣೆಗೆ ಕರೆಸಿಕೊಂಡು, ವಿಚಾರಣೆ ಮಾಡುತ್ತೇವೆಯೇ ಹೊರತು ಡಿಜಿಟಲ್ ಅರೆಸ್ಟ್, ಹೋಂ ಅರೆಸ್ಟ್ ಅಂತಹ ಕಾನೂನು ನಮಲ್ಲಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.
ನಗರದಲ್ಲಿ ಒಟ್ಟು 9 ಸೈಬರ್ ಠಾಣೆಗಳಿವೆ. ಈ ಠಾಣೆಗಾಗಲೀ ಅಥವಾ ಸ್ಥಳೀಯ ಪೊಲೀಸ್ ಠಾಣೆಗಾಗಲಿ ಸೈಬರ್ ವಂಚನೆ ಬಗ್ಗೆ ನೀವು ತಕ್ಷಣ ತಿಳಿಸಿದರೆ ತನಿಖೆಗೆ ಸಹಕಾರವಾಗುತ್ತದೆ. ವೈಯಕ್ತಿಕ ಬ್ಯಾಂಕ್ ವಿವರಗಳನ್ನು ಯಾರಿಗೂ ಶೇರ್ ಮಾಡಬೇಡಿ ಎಂದು ಆಯುಕ್ತರು ಸಲಹೆ ಮಾಡಿದ್ದಾರೆ.
Post a Comment