ನವದೆಹಲಿ: ಭಾರತದ 14ನೇ ಪ್ರಧಾನ ಮಂತ್ರಿಯಾಗಿದ್ದ ಡಾ. ಮನಮೋಹನ್ ಸಿಂಗ್ (Manmohan Singh) ದೇಶ ಕಂಡ ಅಪ್ರತಿಮ ಅರ್ಥಶಾಸ್ತ್ರಜ್ಞರಾಗಿದ್ದರು. ಎರಡು ಬಾರಿ ಪ್ರಧಾನಿಯಾಗಿ ದೇಶವನ್ನು ಯಶಸ್ವಿಯಾಗಿ ಮುನ್ನಡೆಸಿದ ಖ್ಯಾತಿ ಹೊಂದಿರುವ ಮನಮೋಹನ್ ಸಿಂಗ್ ಅವರ ನಿಧನಕ್ಕೆ ರಾಜಕೀಯ, ಸಿನಿಮಾ, ಕ್ರೀಡೆ ಸೇರಿದಂತೆ ಅನೇಕ ಕ್ಷೇತ್ರದ ಗಣ್ಯರು ಕಂಬನಿ ಮಿಡಿದಿದ್ದಾರೆ.
ಮಾಜಿ ಪ್ರಧಾನಿ ಮನಮೋಹನ್ ಸಿಂಗ್ (Manmohan Singh) ಅವರ ಅಂತ್ಯಸಂಸ್ಕಾರವು ಸೇನಾ ಗೌರವಗಳೊಂದಿಗೆ ನವದೆಹಲಿಯ ನಿಗಮಬೋಧ ಘಾಟ್‌ನಲ್ಲಿ ನಡೆಯಲಿದ್ದು, ಈಗಾಗಲೇ ತಯಾರಿ ಆರಂಭಿಸಲಾಗಿದೆ. ಮನಮೋಹನ್ ಸಿಂಗ್ ಅವರ ಪಾರ್ಥೀವ ಶರೀರ ತೆರಳಲಿರುವ ರಸ್ತೆಗಳಲ್ಲಿ ಪೊಲೀಸರು ಈಗಾಗಲೇ ಬಿಗಿ ಬಂದೋಬಸ್ತ್ ಮಾಡಿದ್ದು, ಯಾವುದೇ ಅಹಿತಕರ ಘಟನೆ ಸಂಭವಿಸದಂತೆ ಮುನ್ನೆಚ್ಚರಿಕೆಯನ್ನು ವಹಿಸಲಾಗಿದೆ.
ಇನ್ನು ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರ ಸ್ಮಾರಕಕ್ಕೆ ಜಾಗ ನೀಡುವಂತೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹಸಚಿವರಿಗೆ ರಾಜ್ಯಸಭೆ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಪತ್ರ ಬರೆದಿದ್ದರು. ಈ ಸಂಬಂಧ ಸಭೆ ನಡೆಸಿದ್ದ ಗೃಹ ಸಚಿವಾಲಯವು ಸ್ಮಾರಕಕ್ಕೆ ಜಾಗ ಮಂಜೂರು ಮಾಡುವುದಾಗಿ ತಿಳಿಸಿದ್ದು, ಮಲ್ಲಿಕಾರ್ಜುನ ಖರ್ಗೆ ಹಾಗೂ ಮನಮೋಹನ್ ಸಿಂಗ್ ಅವರ ಕುಟುಂಬಸ್ಥರಿಗೆ ಮಾಹಿತಿ ನೀಡಿದೆ. ಸ್ಮಾರಕ ನಿರ್ಮಾಣ ಸಂಬಂಧ ಟ್ರಸ್ಟ್ ರಚಿಸಬೇಕಾಗಿದ್ದು, ಜಾಗವನ್ನು ಗುರುತಿಸಬೇಕಿದೆ. ಶೀಘ್ರದಲ್ಲೇ ಈ ಕಾರ್ಯವನ್ನು ಕೈಗೆತ್ತಿಕೊಳ್ಳುವುದಾಗಿ ಗೃಹ ಇಲಾಖೆಯೂ ತಿಳಿಸಿದೆ.
ದೀರ್ಘಕಾಲದಿಂದ ಅನಾರೋಗ್ಯಕ್ಕೀಡಾಗಿದ್ದ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರು ಡಿಸೆಂಬರ್ 26ರ ರಾತ್ರಿ 9:51ಕ್ಕೆ ದೆಹಲಿಯ ಏಮ್ಸ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು. ಮನಮೋಹನ್ ಸಿಂಗ್ ಅವರು ಪತ್ನಿ ಗುರುಶರಣ್ ಕೌರ್ ಮತ್ತು ಮೂವರು ಪುತ್ರಿಯರನ್ನು ಅಗಲಿದ್ದಾರೆ.
Post a Comment