ನವದೆಹಲಿ: ಕಾಂಗ್ರೆಸ್ ಸಂಸದೆ ಪ್ರಿಯಾಂಕಾ ಗಾಂಧಿ ವಾದ್ರಾ ರಾಹುಲ್ ಗಾಂಧಿಯವರ ರಾಜಕೀಯ ಜೀವನಕ್ಕೆ ದೊಡ್ಡ ಅಪಾಯದ ಸೂಚನೆಯಾಗಿದ್ದಾರೆ ಎಂದು ಲೋಕಸಭೆಯಲ್ಲಿ ಅವರ ಭಾಷಣವನ್ನು ಉಲ್ಲೇಖಿಸಿ ಬಿಜೆಪಿ ಐಟಿ ವಿಭಾಗದ ಮುಖ್ಯಸ್ಥ ಅಮಿತ್ ಮಾಳವೀಯ ಹೇಳಿದ್ದಾರೆ.
ಕೆಳಮನೆಯಲ್ಲಿ 32 ನಿಮಿಷಗಳ ಕಾಲ ಮಾಡಿದ ಭಾಷಣದಲ್ಲಿ ಪ್ರಿಯಾಂಕಾ ಗಾಂಧಿ, ಸಂವಿಧಾನವನ್ನು ಬದಲಾಯಿಸಲು ಬಿಜೆಪಿಯ ಪ್ರಯತ್ನಗಳು, ಅದಾನಿ ಗ್ರೂಪ್‌ನ ಬೆಳೆಯುತ್ತಿರುವ ಏಕಸ್ವಾಮ್ಯ, ಮಹಿಳೆಯರ ಮೇಲಿನ ದೌರ್ಜನ್ಯಗಳು, ಸಂಭಲ್ ಮತ್ತು ಮಣಿಪುರದಲ್ಲಿ ನಡೆದ ಹಿಂಸಾಚಾರದ ಘಟನೆಗಳು, ರಾಷ್ಟ್ರವ್ಯಾಪಿ ಜಾತಿ ಜನಗಣತಿಯ ಬೇಡಿಕೆ ವಿಷಯಗಳನ್ನು ಪ್ರಮುಖವಾಗಿ ಪ್ರಸ್ತಾಪಿಸಿದ್ದರು.
ಪ್ರಿಯಾಂಕಾ ಗಾಂಧಿ ಅವರ ಚೊಚ್ಚಲ ಭಾಷಣವು ರಾಹುಲ್ ಗಾಂಧಿ ಅವರ ರಾಜಕೀಯ ಜೀವನಕ್ಕೇ ಅಪಾಯವನ್ನುಂಟು ಮಾಡುವ ಸೂಚನೆಯಂತಿದೆ. ಬಹುಕಾಲದಿಂದ ಕಾಯುತ್ತಿರುವ ಹುದ್ದೆ ಪಡೆಯಲು ಮಾತ್ರವಲ್ಲ, ಸಾರ್ವಜನಿಕ ಜೀವನದಲ್ಲೂ ರಾಹುಲ್ ಅವರನ್ನು ಹಿಂದಿಕ್ಕುವಂತೆ ಕಾಣಿಸುತ್ತಿದೆ ಎಂದು ಎಕ್ಸ್ ಪೋಸ್ಟ್‌ನಲ್ಲಿ ಅಮಿತ್ ಮಾಳವೀಯ ಹೇಳಿದ್ದಾರೆ.
ಲೋಕಸಭೆಯಲ್ಲಿ ಸಂವಿಧಾನ ಕುರಿತ ಚರ್ಚೆಯಲ್ಲಿ ಭಾಗಿಯಾದ ಸಂಸದೆ, ಬಿಜೆಪಿ ಮತ್ತು ಪ್ರಧಾನಿ ನರೇಂದ್ರ ಮೊದಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ಇದು ಭಾರತದ ಸಂವಿಧಾನವೇ ಹೊರತು ಸಂಘದ ನಿಯಮದ ಪುಸ್ತಕವಲ್ಲ ಎಂಬುದನ್ನು ಮೋದಿ ಅರ್ಥಮಾಡಿಕೊಂಡಿಲ್ಲ ಎಂದು ವಾಗ್ದಾಳಿ ನಡೆಸಿದರು.
ಸಂವಿಧಾನವು ನ್ಯಾಯ, ಏಕತೆ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ರಕ್ಷಣಾತ್ಮಕ ಗುರಾಣಿಯಾಗಿದೆ. ಆದರೆ ಬಿಜೆಪಿ ನೇತೃತ್ವದ ಸರ್ಕಾರ ಕಳೆದ 10 ವರ್ಷಗಳಲ್ಲಿ ಅದನ್ನು ಮುರಿಯಲು ಎಲ್ಲ ಪ್ರಯತ್ನಗಳನ್ನು ಮಾಡಿದೆ ಎಂದು ಅವರು ಟೀಕಿಸಿದರು.
ಪ್ರಿಯಾಂಕಾ ಭಾಷಣದ ಬಗ್ಗೆ ಪ್ರತಿಕ್ರಿಯಿಸಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಅದ್ಭುತ ಭಾಷಣ... ನನ್ನ ಚೊಚ್ಚಲ ಭಾಷಣಕ್ಕಿಂತ ಉತ್ತಮವಾಗಿದೆ ಎಂದು ಹೇಳಿದರು.
ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ವಯನಾಡ್ ಸಂಸದರ ಭಾಷಣವನ್ನು ಅತ್ಯುತ್ತಮ ಎಂದು ಶ್ಲಾಘಿಸಿದರು. ಅವರು ಸರ್ಕಾರದ ಮುಂದೆ ಇಟ್ಟಿರುವ ಎಲ್ಲ ಸಂಗತಿಗಳು... ಅವರ ಕಾರ್ಯವೈಖರಿ ಬಗ್ಗೆ ನಮಗೆ ತುಂಬಾ ಸಂತೋಷವಾಗಿದೆ ಎಂದು ತಿಳಿಸಿದರು.
ಪ್ರಿಯಾಂಕಾ ಮೊದಲ ಬಾರಿಯ ಸಂಸದೆಯಂತೆ ಮಾತನಾಡಲಿಲ್ಲ. ಸರ್ಕಾರದ ಬಗ್ಗೆ ಸರಿಯಾಗಿಯೇ ಪ್ರಶ್ನೆ ಎತ್ತಿದ್ದಾರೆ ಎಂದು ಹಿರಿಯ ನಾಯಕ ಶಶಿ ತರೂರ್ ಕೊಂಡಾಡಿದರು.
Post a Comment