ಬಿಜೆಪಿ ರಾಜ್ಯ ಕೋರ್ ಕಮಿಟಿ ಸಭೆಯಲ್ಲಿ ಯತ್ನಾಳ್ ವಿಚಾರ ಸೇರಿ ಹಲವು ವಿಷಯಗಳನ್ನು ಪ್ರಸ್ತಾಪಿಸಿರುವುದಾಗಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಪ್ರತಿಪಕ್ಷ ನಾಯಕ ಆರ್.ಅಶೋಕ್ ಮತ್ತು ಮಾಜಿ ಸಿಎಂ ಡಿ.ವಿ.ಸದಾನಂದ ಗೌಡ ಹೇಳಿದ್ದಾರೆ.
ಬೆಂಗಳೂರು: ಪಕ್ಷದ ರಾಜ್ಯಾಧ್ಯಕ್ಷರನ್ನಾಗಿ ನನ್ನನ್ನು ರಾಷ್ಟ್ರೀಯ ಅಧ್ಯಕ್ಷರು ಘೋಷಣೆ ಮಾಡಿದ್ದಾರೆ. ಮುಂದಿನ ದಿನಗಳಲ್ಲಿ ಬಿಜೆಪಿ ಸ್ವಂತ ಶಕ್ತಿಯಿಂದ ಅಧಿಕಾರಕ್ಕೆ ಬರಬೇಕು. ಹೊಂದಾಣಿಕೆ ರಾಜಕೀಯಕ್ಕೂ ಇತಿಶ್ರೀ ಹಾಡಬೇಕಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದ್ದಾರೆ.
ಮಲ್ಲೇಶ್ವರದಲ್ಲಿರುವ ಬಿಜೆಪಿ ಕಾರ್ಯಾಲಯದಲ್ಲಿ ಇಂದು ನಡೆದ ಬಿಜೆಪಿ ರಾಜ್ಯ ಕೋರ್ ಕಮಿಟಿ ಸಭೆಯ ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಅವರು ಮಾತನಾಡಿದರು.
ಹಿರಿಯ ನಾಯಕ ಬಸನಗೌಡ ಪಾಟೀಲ್ ಯತ್ನಾಳ್ ಅವರಿಗೆ ನೋಟಿಸ್ ಕೊಟ್ಟಾಗಿದೆ. ಕೇಂದ್ರದ ವರಿಷ್ಠರು ಇದನ್ನು ಗಮನಿಸುತ್ತಾರೆ. ಶಿಸ್ತು ಕ್ರಮ ಕೈಗೊಳ್ಳಬೇಕಾ ಅಥವಾ ಸುಮ್ಮನಿರಬೇಕಾ ಎಂಬುದರ ಕುರಿತು ವರಿಷ್ಠರು ತೀರ್ಮಾನ ಮಾಡ್ತಾರೆ ಎಂದರು.
ಕೇಂದ್ರದ ನಾಯಕರು ಬೆಂಗಳೂರಿಗೆ ಬಂದು ಸರಣಿ ಸಭೆಗಳನ್ನು ಮಾಡಿದ್ದಾರೆ. ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ತರುಣ್ ಚುಗ್, ಕರ್ನಾಟಕದ ಸಹ ಉಸ್ತುವಾರಿ ಸುಧಾಕರ ರೆಡ್ಡಿ, ಕರ್ನಾಟಕದ ಚುನಾವಣಾ ವೀಕ್ಷಕ ಮತ್ತು ಕೇಂದ್ರದ ಮಾಜಿ ಸಚಿವ ರಾಧಾಕೃಷ್ಣನ್ ಅವರು ಸತತ ನಾಲ್ಕು ಗಂಟೆಗಳ ಕಾಲ ಸಭೆ ನಡೆಸಿದರು. ಪಕ್ಷದ ಸಕ್ರಿಯ ಸದಸ್ಯತ್ವ ಅಭಿಯಾನ ಮುಂದುವರೆಸುವ ಬಗ್ಗೆ ಚರ್ಚೆ ಆಗಿದೆ. ಭೂ ಸಮಿತಿ, ಮಂಡಲ ಸಮಿತಿ ಬಗ್ಗೆ ಚರ್ಚೆ ಆಗಿದೆ. ಕೋರ್ ಕಮಿಟಿಯಲ್ಲಿ ಕೆಲವು ಸಲಹೆಗಳನ್ನು ನಮ್ಮ ನಾಯಕರು ನೀಡಿದ್ದಾರೆ. ಸಂಘಟನೆಯನ್ನು ಬಲಪಡಿಸುವ ಸಲುವಾಗಿ ಸಲಹೆ ನೀಡಿದ್ದಾರೆ. ನಾವೆಲ್ಲ ಜಿಲ್ಲಾಧ್ಯಕ್ಷರು, ಪದಾಧಿಕಾರಿಗಳು ಸಂಘಟನೆ ಬಲಪಡಿಸುವ ಕೆಲಸ ಮಾಡುತ್ತೇವೆ ಎಂದು ಅವರು ತಿಳಿಸಿದರು.
ಯತ್ನಾಳ್ ಉಚ್ಚಾಟನೆಗೆ ಆಗ್ರಹಿಸುತ್ತಿರುವ ವಿಚಾರಕ್ಕೆ ಪ್ರತಿಕ್ರಿಯಿಸಿದ ವಿಜಯೇಂದ್ರ, ಸಂಘಟನಾ ಪರ್ವ ಇಡೀ ದೇಶದಲ್ಲಿ ನಡೆಯುತ್ತಿದೆ. ಅದಕ್ಕೆ ಸೀಮಿತವಾಗಿ ಈ ಸಭೆ ನಡೆದಿದೆ. ಜಿಲ್ಲಾಧ್ಯಕ್ಷರುಗಳು ಯಾವುದೇ ಮನವಿಯನ್ನು ನಮ್ಮ ರಾಷ್ಟ್ರೀಯ ನಾಯಕರಿಗೆ ಕೊಟ್ಟಿಲ್ಲ. ಯಾರೂ ಭಯಪಡುವ ಅವಶ್ಯಕತೆ ಇಲ್ಲ ಎಂದರು.
ದೆಹಲಿಯಲ್ಲಿ ಶಾಸಕ ಬಿ.ಪಿ.ಹರೀಶ್ ವಾಗ್ದಾಳಿ ವಿಚಾರದ ಬಗ್ಗೆ ಕೇಳಿದ ಪ್ರಶ್ನೆಗೆ ಟಾಂಗ್ ಕೊಟ್ಟ ವಿಜಯೇಂದ್ರ, ಹರೀಶ್ ಹೆಸರಿನ ಮುಂದೇನಿದೆ?. ಅವರ ಹೆಸರಿನ ಮುಂದೆ ಬಿಪಿ ಇದೆ. ಹಾಗಾಗಿ, ಅವರು ಸಹನೆ ಕಳೆದುಕೊಳ್ಳುತ್ತಿದ್ದಾರೆ. ಅವರೂ ಕೂಡ ಎರಡನೇ ಬಾರಿ ಗೆದ್ದಿರುವ ಶಾಸಕರಾಗಿದ್ದಾರೆ. ಅವರು ತಾಳ್ಮೆಯಿಂದ ಇರಬೇಕು. ನೋಟಿಸ್ ಎಲ್ಲವೂ ಹೈಕಮಾಂಡ್ ನಾಯಕರ ಮುಂದಿದೆ ಎಂದು ಹೇಳಿದರು.
ಪ್ರತಿಪಕ್ಷದ ನಾಯಕ ಆರ್.ಅಶೋಕ್ ಮಾತನಾಡಿ, ಜನರ ನಡುವೆ ಬೆಂಕಿ ಹಚ್ಚುವುದು, ಒಡಕು ತರುವುದೇ ಕಾಂಗ್ರೆಸ್‌ನ ಬ್ರ್ಯಾಂಡ್ ಎಂದು ಕಿಡಿಕಾರಿದರು. ದೇಶವನ್ನು ಚೂರು ಮಾಡಿ ಮಿನಿ ಪಾಕಿಸ್ತಾನ ನಿರ್ಮಿಸುವುದು ಕಾಂಗ್ರೆಸ್‌ನ ಉದ್ದೇಶ. ಅದಕ್ಕಾಗಿ ಮಠ-ಮಂದಿರಗಳ, ರೈತರ ಜಮೀನು ಲೂಟಿ ಮಾಡಲಾಗುತ್ತಿದೆ. ಜನರ ನಡುವೆ ಬೆಂಕಿ ಹಚ್ಚುವ ಹಾಗೂ ಒಡಕು ಮೂಡಿಸುವ ಕೆಲಸವನ್ನು ಬ್ರಿಟಿಷರಿಂದ ಕಾಂಗ್ರೆಸ್ಸಿಗರು ಉಡುಗೊರೆಯಾಗಿ ಪಡೆದಿದ್ದಾರೆ. ಇಂತಹ ಕೆಲಸ ಮಾಡುವುದೇ ಅವರ ಬ್ರ್ಯಾಂಡ್ ಎಂದು ಟೀಕಿಸಿದರು.
ಬಿಜೆಪಿ ಕಚೇರಿಯಲ್ಲಿ ನಾಲ್ಕು ಗಂಟೆಗೂ ದೀರ್ಘ ಅವಧಿಯ ಸಭೆ ನಡೆದಿದೆ. ರಾಷ್ಟ್ರೀಯ ಮಟ್ಟದಲ್ಲಿ ಬಿಜೆಪಿ ಉತ್ತಮವಾದ ಸದಸ್ಯತ್ವ ಅಭಿಯಾನ ಮಾಡಿದೆ. ಕಾಂಗ್ರೆಸ್‌ನಲ್ಲಿ ಆಂತರಿಕ ಪ್ರಜಾಪ್ರಭುತ್ವ ಇಲ್ಲ. ಆದರೆ, ಬಿಜೆಪಿಯಲ್ಲಿ ಸ್ಥಳೀಯ ಮಟ್ಟದಲ್ಲಿ ಚುನಾವಣೆ ನಡೆಯಲಿದೆ. ಈ ವಿಷಯಗಳ ಕುರಿತು ಸಭೆಯಲ್ಲಿ ಚರ್ಚೆ ಮಾಡಲಾಗಿದೆ. ಕಾಂಗ್ರೆಸ್ ಸರ್ಕಾರದ ಭ್ರಷ್ಟಾಚಾರದಿಂದ ಜನರು ಬೇಸತ್ತು ಬಿಜೆಪಿಗೆ ಸದಸ್ಯರಾಗಿ ಬಂದಿದ್ದಾರೆ. ಒಟ್ಟು 74 ಲಕ್ಷ ಹೊಸ ಸದಸ್ಯರು ಪಕ್ಷಕ್ಕೆ ಬಂದಿದ್ದಾರೆ. ಮಹಾರಾಷ್ಟ್ರ ಚುನಾವಣೆಯಲ್ಲಿ ಗೆಲುವು ಸಾಧಿಸಲು ಸದಸ್ಯತ್ವ ಅಭಿಯಾನ ಪ್ರಮುಖ ಕಾರಣವಾಗಿದೆ. ಇದೇ ರೀತಿ ಮುಂದೆ ಕರ್ನಾಟಕದಲ್ಲಿ ಅಧಿಕಾರಕ್ಕೆ ಬರಲು ಸದಸ್ಯತ್ವ ಅಭಿಯಾನ ನೆರವಾಗಲಿದೆ ಎಂದರು.
ಪಕ್ಷದಲ್ಲಿ ಎಲ್ಲರೂ ಒಗ್ಗಟ್ಟಾಗಿದ್ದಾರೆ. ಪಕ್ಷದ ಆಂತರಿಕ ವಿಚಾರಗಳು ಇನ್ನು ಕೆಲವು ದಿನಗಳಲ್ಲಿ ಸರಿಯಾಗಲಿದೆ. ಏನೇ ಸಮಸ್ಯೆಗಳಿದ್ದರೂ ವರಿಷ್ಠರು ಅದನ್ನು ಸರಿಪಡಿಸಲಿದ್ದಾರೆ. ತಾಳ್ಮೆ ಬೇಕು ಎಂದು ಹೇಳಿದರು.
ಮಾಜಿ ಸಿಎಂ ಡಿ.ವಿ.ಸದಾನಂದಗೌಡ ಮಾತನಾಡಿ, ಇವತ್ತು ಸಂಘಟನೆಗೆ ಸಂಬಂಧ ಸಭೆ ನಡೆದಿದೆ. ಡಿ.7 ರಂದು ಪಕ್ಷದ ಪರಿಸ್ಥಿತಿ ಮತ್ತಿತರ ಸಮಸ್ಯೆಗಳ ಕುರಿತು ಸಭೆ ನಡೆಯಲಿದೆ. ಅಂದು ಕರ್ನಾಟಕ ಉಸ್ತುವಾರಿ ರಾಧಾಮೋಹನ ದಾಸ್ ಅಗರವಾಲ್ ಬರುತ್ತಿದ್ದಾರೆ. ಅವತ್ತಿನ ಸಭೆಯಲ್ಲಿ ಎಲ್ಲವೂ ಚರ್ಚೆ ನಡೆಯಲಿದೆ ಎಂದು ತಿಳಿಸಿದರು.
ಮಾಜಿ ಸಚಿವ ಆರಗ ಜ್ಞಾನೇಂದ್ರ ಮಾತನಾಡಿ, ಸಭೆಯಲ್ಲಿ ಯತ್ನಾಳ್ ವಿರುದ್ಧ ಕ್ರಮದ ಬಗ್ಗೆ ಚರ್ಚೆ ಆಗಿದೆ. ಪಕ್ಷ ಕಟ್ಟಿದ್ದವರು ಯಾರೋ ಕೆಲವರಲ್ಲ, ಪಕ್ಷ ಕಟ್ಟಿದ್ದು ಸಾಗರ ಸಾಗರ ಕಾರ್ಯಕರ್ತರು. ತುರ್ತು ಪರಿಸ್ಥಿತಿಯಲ್ಲಿ ಸೆರೆವಾಸ ಅನುಭವಿಸಿ ಪಕ್ಷ ಕಟ್ಟಿ ಬೆಳೆಸಿದ್ದಾರೆ. ಇಂತಹ ಪಕ್ಷಕ್ಕೆ ಈಗ ಕೆಲವರಿಂದ ಅವಮಾನ ಆಗುತ್ತಿರುವುದು ಸರಿಯಲ್ಲ. ಕೆಲವರ ಮಾತಿನಿಂದ ಪಕ್ಷಕ್ಕೆ ಬಹಳ ಪೆಟ್ಟು ಬಿದ್ದಿದೆ. ಹೀಗಾಗಿ ಅಂತಹವರ ವಿರುದ್ಧ ಕ್ರಮ ಆಗಲೇಬೇಕು ಎಂದು ಹೇಳಿದರು.
ಕೋರ್ ಕಮಿಟಿ ಸಭೆ: ಇದಕ್ಕೂ ಮುನ್ನ ಬಿಜೆಪಿ ಕಚೇರಿಯಲ್ಲಿ ರಾಜ್ಯ ಕೋರ್ ಕಮಿಟಿ ಸಭೆ ನಡೆಯಿತು. ಸಭೆಯಲ್ಲಿ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ತರುಣ್ ಚುಗ್, ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ, ಕೇಂದ್ರ ಸಂಸದೀಯ ಸಮಿತಿ ಸದಸ್ಯ ಮತ್ತು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಕರ್ನಾಟಕದ ಸಹ ಉಸ್ತುವಾರಿ ಸುಧಾಕರ ರೆಡ್ಡಿ, ಕರ್ನಾಟಕದ ಚುನಾವಣಾ ವೀಕ್ಷಕ ಮತ್ತು ಕೇಂದ್ರದ ಮಾಜಿ ಸಚಿವ ರಾಧಾಕೃಷ್ಣನ್, ಆರ್.ಅಶೋಕ್, ನಿಕಟಪೂರ್ವ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ, ಮಾಜಿ ಸಚಿವ ಬಿ.ಶ್ರೀರಾಮುಲು, ಪುದುಚೇರಿ ಉಸ್ತುವಾರಿ ನಿರ್ಮಲ್ ಕುಮಾರ್ ಸುರಾಣ, ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ, ಮಾಜಿ ಡಿಸಿಎಂ ಡಾ.ಅಶ್ವತ್ಥನಾರಾಯಣ್ ಅವರು ಭಾಗವಹಿಸಿದ್ದರು.
Post a Comment