ಬೆಳಗಾವಿ: 'ಮಾಜಿ ಪ್ರಧಾನಿ ಮನಮೋಹನ ಸಿಂಗ್ ಅವರ ಅಗಲಿಕೆ ಹಿನ್ನೆಲೆಯಲ್ಲಿ, ಬೆಳಗಾವಿಯಲ್ಲಿ ಶುಕ್ರವಾರ ನಡೆಯಬೇಕಿದ್ದ 'ಗಾಂಧಿ ಭಾರತ' ಕಾರ್ಯಕ್ರಮವನ್ನು ರದ್ದು ಮಾಡಲಾಗಿದೆ. ಈಗಾಗಲೇ ನಗರಕ್ಕೆ ಬಂದಿರುವ ಎಲ್ಲ ನಾಯಕರು ಬೆಳಿಗ್ಗೆ 10.30ಕ್ಕೆ ಅದೇ ವೇದಿಕೆಯಲ್ಲಿ ಮನಮೋಹನ ಸಿಂಗ್ ಅವರಿಗೆ ಗೌರವ ವಂದನೆ ಸಲ್ಲಿಸುತ್ತೇವೆ' ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದರು.
ನಗರದಲ್ಲಿ ಗುರುವಾರ ರಾತ್ರಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, '1924ರ ಕಾಂಗ್ರೆಸ್ ಅಧಿವೇಶನಕ್ಕೆ ನೂರು ವರ್ಷ ತುಂಬಿದ ಹಿನ್ನೆಲೆಯಲ್ಲಿ ಗುರುವಾರದ ಕಾರ್ಯಕ್ರಮಗಳು ಯಶಸ್ವಿಯಾದವು. ಪಕ್ಷದ ವತಿಯಿಂದ 'ಜೈ ಬಾಪು, ಜೈ ಭೀಮ್, ಜೈ ಸಂವಿಧಾನ' ಎಂಬ ಜನಾಂದೋಲನ ಕಾರ್ಯಕ್ರಮ ಶುಕ್ರವಾರ ಆಯೋಜಿಸಲಾಗಿತ್ತು. ಅದನ್ನು ಸದ್ಯಕ್ಕೆ ಮುಂದೂಡುತ್ತೇವೆ. ಮುಂದಿನ ಕ್ರಮ ಏನು ಮಾಡಬೇಕು ಎಂದು ವರಿಷ್ಠರೊಂದಿಗೆ ಚರ್ಚಿಸಿ ತಿಳಿಸುತ್ತೇನೆ' ಎಂದರು.
'ನಮ್ಮ ನಾಯಕಿ ಸೋನಿಯಾ ಗಾಂಧಿ ಅವರು ಅಧಿಕಾರ ತ್ಯಾಗ ಮಾಡಿ ಮನಮೋಹನ ಸಿಂಗ್ ಅವರನ್ನು ಪ್ರಧಾನಿ ಮಾಡಿದ್ದರು. ನಮಗೆ ಅಧಿಕಾರ ಮುಖ್ಯವಲ್ಲ; ದೇಶದ ಆರ್ಥಿಕ ಸುಧಾರಣೆ ಮುಖ್ಯ ಎಂದು ಹೇಳಿದ್ದರು. ಪ್ರಜಾಪ್ರಭುತ್ವದ ಇತಿಹಾಸದಲ್ಲಿ ಆ ಘಟನೆ ಮೈಲುಗಲ್ಲಾಗಿ ಉಳಿಯಿತು. ಮನಮೋಹನ ಸಿಂಗ್ ಅವರು ನಿರೀಕ್ಷೆಗಿಂತ ಹೆಚ್ಚಾಗಿ, ವೇಗವಾಗಿ ದೇಶವನ್ನು ಅಭಿವೃದ್ಧಿಯತ್ತ ಕೊಂಡೊಯ್ದರು' ಎಂದರು.
'ಮನರೇಗಾ'ದಂಥ ಯೋಜನೆ ಆರಂಭಿಸುವ ಮೂಲಕ ಅವರು ಬಡವರಿಗೆ ಕೆಲಸ ಕೊಟ್ಟು, ಸಬಲರಾಗಿ ಮಾಡಿದರು. ಶಿಕ್ಷಣ ಹಕ್ಕು, ಮಾಹಿತಿ ಹಕ್ಕು ಮುಂತಾದ ಅವರ ನೀತಿಗಳು ದೇಶದ ಗತಿಯನ್ನೇ ಬದಲಿಸಿದವು. ರೈತರ ಸಾಲ ಮನ್ನಾ ಮಾಡುವ ಮೂಲಕ ಅವರೊಬ್ಬ ದೊಡ್ಡ ಆರ್ಥಿಕ ತಜ್ಞ ಎಂಬುದನ್ನು ಜಗತ್ತಿಗೆ ತೋರಿಸಿದ್ದರು. ಇಡೀ ಪ್ರಪಂಚದ ರಾಷ್ಟ್ರಗಳು ಆರ್ಥಿಕವಾಗಿ ಜರ್ಜರಿತವಾದಾಗ ಭಾರತ ಮಾತ್ರ ಪ್ರಬಲವಾಗಿ ನಿಂತಿದ್ದು ಮನಮೋಹನಸಿಂಗ್ ಅವರ ಕೃರ್ತೃತ್ವ ಶಕ್ತಿಯ ಪ್ರತೀಕ' ಎಂದರು.
'ಜವಾಹರಲಾಲ್ ನೆಹರೂ ಅವರ ಹೆಸರಿನಲ್ಲಿ 'ನರ್ಮ್' ಯೋಜನೆ ಆರಂಭಿಸಿ ದೇಶದಲ್ಲಿ ಪ್ರೈವೋವರ್‌ಗಳ ಕಲ್ಪನೆ ಸಾಕಾರ ಮಾಡಿದರು. ಅವರ ಕಾರಣಕ್ಕಾಗಿಯೇ ಇಂದು ಬೆಂಗಳೂರು ಇಷ್ಟೊಂದು ಅಭಿವೃದ್ಧಿ ಆಗಿದೆ. ಕರ್ನಾಟಕದ ಸಮಗ್ರ ಅಭಿವೃದ್ಧಿಗೆ ಅವರ ಕೊಡುಗೆ ಅಪಾರ' ಎಂದೂ ಸ್ಮರಿಸಿದರು.
ಕರ್ತವ್ಯ ಮರೆಯಬೇಡಿ:
'ಗಾಂಧಿ ಭಾರತ' ಕಾರ್ಯಕ್ರಮಕ್ಕೆ ದೇಶದ ನಾನಾ ಕಡೆಯಿಂದ ನಮ್ಮ ನಾಯಕರು ಬಂದಿದ್ದಾರೆ. ಅವರನ್ನು ಯಾರೂ ಮಧ್ಯದಲ್ಲೇ ಕೈ ಬಿಡುವಂತಿಲ್ಲ. ಯಾರ್ಯಾರಿಗೆ ಏನೇನು ಜವಾಬ್ದಾರಿ ವಹಿಸಲಾಗಿದೆಯೋ ಅದೆಲ್ಲವನ್ನೂ ಚಾಚೂತಪ್ಪದೇ ನಿಭಾಯಿಸಬೇಕು. ನಾಯಕರು ಸುರಕ್ಷಿತವಾಗಿ ಅವರ ಊರು ಸೇರುವವರೆಗೂ ನಮ್ಮ ಮುಖಂಡರು ಜವಾಬ್ದಾರಿ ನಿಭಾಯಿಸಬೇಕು' ಎಂದೂ ಡಿ.ಕೆ.ಶಿವಕುಮಾರ್ ಸೂಚಿಸಿದರು.
ಶುಕ್ರವಾರ (ಡಿ.27) ಸಂಜೆ 5ಕ್ಕೆ ಬೆಳಗಾವಿಯಿಂದ ದೆಹಲಿಗೆ ವಿಮಾನವಿದೆ. ಅದನ್ನು ಇನ್ನಷ್ಟು ಬೇಗ ಹಾರಿಸಲು ಅಧಿಕಾರಿಗಳೊಂದಿಗೆ ಮಾತನಾಡುತ್ತೇನೆ. ಯಾರನ್ನು ಕರೆದೊಯ್ಯಲು ಸಾಧ್ಯವೋ ಎಲ್ಲರನ್ನೂ ದೆಹಲಿಗೆ ಕರೆದುಕೊಂಡು ಹೋಗುತ್ತೇವೆ' ಎಂದೂ ಅವರು ವಿವರಿಸಿದರು.
Post a Comment